ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಫಿ ಕಾಲೇಜು

ಸಾಮಾನ್ಯವಾಗಿ ಶಾಲಾ- ಕಾಲೇಜುಗಳಲ್ಲಿ ಇಕೋ ಕ್ಲಬ್‌ಗಳು ನೆಪಮಾತ್ರಕ್ಕೆ ಇರುತ್ತವೆ. ವರ್ಷಕ್ಕೆ ಒಂದೋ ಎರಡೋ ಕಾರ್ಯಕ್ರಮಗಳನ್ನು ಮಾಡಿ ಕೈತೊಳೆದುಕೊಳ್ಳುತ್ತವೆ.

Rashmi Kasaragodu
Updated On : 23 May 2013, 12:18 pm

ಸಾಮಾನ್ಯವಾಗಿ ಶಾಲಾ- ಕಾಲೇಜುಗಳಲ್ಲಿ ಇಕೋ ಕ್ಲಬ್‌ಗಳು ನೆಪಮಾತ್ರಕ್ಕೆ ಇರುತ್ತವೆ. ವರ್ಷಕ್ಕೆ ಒಂದೋ ಎರಡೋ ಕಾರ್ಯಕ್ರಮಗಳನ್ನು ಮಾಡಿ ಕೈತೊಳೆದುಕೊಳ್ಳುತ್ತವೆ. ಆದರೆ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ 'ಪೀಪಲ್ಸ್ ಪಾರ್ಕ್‌' ಸರ್ಕಾರಿ ಬಾಲಕಿಯರ ಕಾಲೇಜಿನ ಇಕೋ ಕ್ಲಬ್ ತಮ್ಮ ಕಾಲೇಜಿನ ಪರಿಸರವನ್ನು ಹಸಿರುಮಯವಾಗಿಸಿ ಮಾದರಿಯಾಗಿದೆ.
ವಾಯುಪಡೆ ನಿವೃತ್ತ ಅಧಿಕಾರಿ ಹಾಗೂ ಇದೇ ಕಾಲೇಜಿನಿಂದ ನಿವೃತ್ತಿ ಪಡೆದ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮಂಡೇಟಿರ ಎನ್. ಸುಬ್ರಮಣಿ ಇದಕ್ಕೆ ಕಾರಣ. ಪ್ರಾಂಶುಪಾಲ ಅಶೋಕ್ ಪಾಣತ್ತಲೆ, ಎಲ್ಲ ಬೋಧಕ, ಬೋಧಕೇತರ, ವಿದ್ಯಾರ್ಥಿನಿಯರು ಇವರಿಗೆ ಸಾಥ್ ನೀಡಿದ್ದಾರೆ.
ಸರ್ಕಾರಿ ಶಾಲಾ- ಕಾಲೇಜುಗಳ ಆವರಣ ಹೇಗಿರುತ್ತದೆ ಎಂಬುದು ನಿಮಗೆ ಗೊತ್ತಿರುತ್ತದೆ. ಅಕ್ಕಪಕ್ಕದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಖಾಸಗಿ ಟ್ಯಾಕ್ಸಿಗಳ ನಿಲ್ದಾಣ, ವಾಣಿಜ್ಯ ಸಂಕೀರ್ಣಗಳು ಇದ್ದರಂತೂ ಮುಗಿದೇ ಹೋಯ್ತು. ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಶಾಲೆಯ ಅಕ್ಕಪಕ್ಕ ಬಿದ್ದಿರುತ್ತವೆ. ಪೀಪಲ್ಸ್ ಪಾರ್ಕ್ ಕಾಲೇಜಿನಲ್ಲೂ ಅದೇ ಚಿತ್ರಣ ಇತ್ತು. ಆದರೆ, ಸುಬ್ರಮಣಿ ಇದರ ಚಿತ್ರಣವನ್ನೇ ಬದಲಿಸಿದರು.
ಅವರು ಇಕೋ ಕ್ಲಬ್‌ನ ಅಧಿಕಾರಿಯಾಗಿದ್ದಾಗ ತ್ಯಾಜ್ಯ ತೆಗೆಸಿ, ವಿದ್ಯಾರ್ಥಿನಿಯರಿಂದ ಶ್ರಮದಾನ ಮಾಡಿಸಿದರು. ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರನ್ನು ಕರೆಸಿ, ಮೂರು ಸಿಲ್ವರ್ ಓಕ್ ಗಿಡ ಹಾಕಿಸಿ ಚಾಲನೆ ನೀಡಿದರು. ವಿದ್ಯಾರ್ಥಿನಿಯರಿಗೆ ಪರಿಸರ ಸಮತೋಲನ ದ ಪಾಠ ಹೇಳಿದರು. ಈಗ ಅಲ್ಲಿ 150 ಸಿಲ್ವರ್ ಓಕ್, 20 ತೇಗದ ಮರಗಳಿವೆ. 10 ಮಾವಿನ, 2 ಹಲಸಿನ ಮರ, 5 ತೆಂಗಿನ ಮರ ಇವೆ. ಪ್ರಾಂಶುಪಾಲ ಅಶೋಕ ಪಾಣತ್ತಲೆ, ಸುಬ್ರಮಣಿ ಕೂಡ  ಕೊಡಗಿನವರು. ಹೀಗಾಗಿ ಕಾಲೇಜು ಸುತ್ತಮುತ್ತ ಕಾಫಿ ಗಿಡ ಬೆಳೆಸುವ ತೀರ್ಮಾನಕ್ಕೆ ಬಂದರು. ನಂತರ ಕಾಫಿ ಜೊತೆಗೆ ಅಂತರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಬೆಳೆಸಿದರು. ಈಗಾಗಲೇ ಅಲ್ಪ ಪ್ರಮಾಣದಲ್ಲಿ ಮೂರು ಬೆಳೆ ತೆಗೆದಿದ್ದಾರೆ. ಇದಕ್ಕೆಲ್ಲಾ ಕಾಲೇಜಿನಿಂದ 5000 ಕೊಟ್ಟಿದ್ದರೆ ಸುಬ್ರಮಣಿ ಅವರು 40 ಸಾವಿರಕ್ಕೂ ಅಧಿಕ ಹಣ ವೆಚ್ಚ ಮಾಡಿದ್ದಾರೆ. ಕೊಡವ ಸಮಾಜ ಒಂದು ವರ್ಷದ ಮಟ್ಟಿಗೆ ಕಾಲೇಜಿನ ಉದ್ಯಾನವನ್ನು ನಿರ್ವಹಣೆಗಾಗಿ ದತ್ತು ಪಡೆದಿತ್ತು.
ಇದೀಗ ಕಾಲೇಜಿನ ಸುತ್ತಮುತ್ತೆಲ್ಲಾ ಹಸಿರು ನಳನಳಿಸುತ್ತಿದೆ. ಈ ಕಾಲೇಜಿನ ಇಕೋ ಕ್ಲಬ್ ಇದೀಗ ಜಿಲ್ಲೆಯ ಅತ್ಯುತ್ತಮ ಕ್ಲಬ್ ಪ್ರಶಸ್ತಿಗೆ ಪಾತ್ರವಾಗಿದೆ. ಕಿರಿಯ ಕಾಲೇಜಿನಲ್ಲಿ 1200, ಪ್ರೌಢಶಾಲಾ ವಿಭಾಗದಲ್ಲಿ 1000 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಇಲ್ಲಿಗೆ ಬರುವವರಲ್ಲಿ ಆರ್ಥಿಕವಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿನಿಯರೇ ಹೆಚ್ಚು. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಕಾಫಿ ಗಿಡಗಳಿರುವ ಏಕೈಕ ಕಾಲೇಜು ಇದಾಗಿದೆ.

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments