ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಿಳಿವಳಿಕೆಯೇ ಬುಡಮೇಲು!

Rashmi Kasaragodu
Updated On : 22 May 2013, 3:18 am

ಫುಡ್ ಅಲರ್ಜಿಯ ಮಹತ್ವ ವೈದ್ಯ ಲೋಕಕ್ಕೆ ಯಾವತ್ತು ಅರಿವಾಯಿತೊ, ಆವತ್ತಿನಿಂದ ಇದರ ಬಗೆಗಿನ ದೃಷ್ಟಿಕೋನವೂ ಬದಲಾಯಿತು. ವಿಶೇಷತಃ ಪಾಶ್ಚಾತ್ಯರು ಫುಡ್ ಅಲರ್ಜಿ ಕುರಿತು ಇನ್ನಿಲ್ಲದ ಸಂಶೋಧನೆಗೆ ಮುಗಿಬಿದ್ದರು. ಪರಿಣಾಮವಾಗಿ ರಕ್ತ ಮತ್ತು ಚರ್ಮ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಐ್ಜಊ ಇದ್ದರೆ ಮಾತ್ರವೇ ಫುಡ್ ಅಲರ್ಜಿಯಾಗುತ್ತದೆ; ಇದು ಶರೀರದ ರೋಗನಿರೋಧಕ ವ್ಯವಸ್ಥೆ ವಿರುದ್ಧ ಮಾತ್ರವೇ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ನಿಧಾನಕ್ಕೆ ಹುಸಿಯಾಗತೊಡಗಿತು. ಹಾಗೆಯೇ ಪಾರಿಭಾಷಿಕ ಪದವೂ ಬದಲಾಯಿತು. ಪಾಶ್ಚಾತ್ಯರು ಫುಡ್ ಅಲರ್ಜಿಯನ್ನು ಈಗ ಈ ಹೆಸರಿನಿಂದ ಕರೆಯುವುದು ಕಡಿಮೆ; ಅವರ ದೃಷ್ಟಿಯಲ್ಲಿ ಅದು ಫುಡ್ ಇನ್‌ಟಾಲರೆನ್ಸ್ ಅಥವಾ ಹೈಪರ್ ಸೆನ್ಸಿಟಿವಿಟಿ.
ಈಗ ಹುಟ್ಟಿಕೊಂಡಿರುವ ಹೊಸ ಸಿದ್ಧಾಂತ ಎಂದರೆ ಫುಡ್ ಅಲರ್ಜಿಗೆ ಸಂಬಂಧಿಸಿದ ರಾಸಾಯನಿಕ ಪ್ರತಿಕ್ರಿಯೆಗಳು ರಕ್ತ ಮತ್ತು ರೋಗ ನಿರೋಧಕ ವ್ಯವಸ್ಥೆಗಿಂತ ಹೆಚ್ಚಾಗಿ ಪರಿಣಾಮ ಬೀರುವುದು ಕರುಳಿನ ಮೇಲೆ ಎನ್ನುವುದು. ಅದಕ್ಕಿಂತ ಮುಖ್ಯವಾಗಿ ಕಂಡುಕೊಂಡಿರುವ ಸಂಗತಿ ಎಂದರೆ ಶರೀರಕ್ಕೆ ಒಗ್ಗದ ಆಹಾರವನ್ನು ತಿಂದಾಕ್ಷಣವೇ ಅದು ತನ್ನ ರಾಸಾಯನಿಕ ಪ್ರತಿಕ್ರಿಯೆ ತೋರಿಸಲು ಶುರು ಮಾಡುವುದಿಲ್ಲ. ಇದಕ್ಕೆ ಕೆಲ ಗಂಟೆ, ಒಂದೆರಡು ದಿನ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಒಳಗೊಳಗೇ ರಾಸಾಯನಿಕ ಪ್ರತಿಕ್ರಿಯೆಗಳು ನಡೆಯುತ್ತಿದ್ದರೂ ರಕ್ತ ಮತ್ತು ಚರ್ಮದ ಪರೀಕ್ಷೆ ಫಲಿತಾಂಶ ಪಾಸಿಟಿವ್ ಬಂದೇ ಬರುತ್ತದೆ ಎನ್ನಲಾಗದು. ರಾಸಾಯನಿಕ ಪ್ರತಿಕ್ರಿಯೆ ಮಂದಗತಿಯಲ್ಲಿ ನಡೆಯುವುದರಿಂದ ಒಮ್ಮೊಮ್ಮೆ ನೆಗೆಟಿವ್ ಕೂಡ ಬರಬಹುದು. ಅನೇಕ ಸಲ ಅದೇ ಥರದ ಆಹಾರ ಸೇವನೆ ಮಾಡಿದಾಗ ರಾಸಾಯನಿಕ ಪ್ರತಿಕ್ರಿಯೆಗಳು ತೀವ್ರಗೊಂಡು ಬಾಹ್ಯ ಸ್ವರೂಪದಲ್ಲಿ ಪ್ರಕಟವಾಗುತ್ತವೆ.
ಈ ವಿಚಾರಗಳು ವೈದ್ಯಲೋಕಕ್ಕೆ ಯಾವ ರೀತಿ ಹೊಸ ಬೆಳಕು ನೀಡಿವೆ ಎನ್ನುವುದನ್ನು ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಸಾಂಪ್ರದಾಯಿಕ ವಿಧಾನದಂತೆ ಏಕಾಏಕಿ 'ಫುಡ್ ಅಲರ್ಜಿ' ಎನ್ನುವ ತೀರ್ಮಾನಕ್ಕೆ ಬಂದು, ತಪ್ಪು ಪತ್ತೆ ಮಾಡಿ ಚಿಕಿತ್ಸೆ ನೀಡುವ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ ಎನ್ನುವುದು ವೈದ್ಯಕೀಯ ವೃತ್ತಿಯಲ್ಲಿರುವ ಬಹುತೇಕರ ಅಭಿಮತ. ಸೋಮಾರಿತನ, ತಲೆನೋವು, ಮೂಡ್ ಸಮಸ್ಯೆ, ಏಕಾಗ್ರತೆ ಕಳೆದುಕೊಳ್ಳುವುದು, ಸಂಧಿವಾತ, ಕರುಳಿನ ತೊಂದರೆಗಳು ಫುಡ್ ಅಲರ್ಜಿಯಿಂದ ಕಾಣಿಸಿಕೊಳ್ಳುವ ಪ್ರಮುಖ ಆರೋಗ್ಯ ಸಮಸ್ಯೆಗಳು. ಏಕದಳ ಧಾನ್ಯಗಳು, ಗೋಧಿ ಮತ್ತು ಜೋಳ, ಹಾಲಿನ ಉತ್ಪನ್ನಗಳು, ಕೆಫೀನ್, ಯೀಸ್ಟ್, ಸಿಟ್ರಸ್ (ಹುಳಿ) ಅಂಶವಿರುವ ಹಣ್ಣುಗಳು ಹೆಚ್ಚಾಗಿ ಅಲರ್ಜಿ ಉಂಟುಮಾಡುತ್ತವೆ ಎನ್ನುವುದು ಸಂಶೋಧನೆಗಳಿಂದ ಪತ್ತೆಯಾಗಿರುವ ಸಮಾಚಾರ.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement