ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪಶ್ಚಿಮ ಗಾಳಿ

ವಿಚಿತ್ರ ಹೇರ್‌ಸ್ಟೈಲ್. ನೋಡುವವರು ಬೆರಗಾಗುವಂತಹ ಇಂಗ್ಲಿಷ್ ಮಾತು. ಮೈಮೇಲೆ ಯಥೇಚ್ಚವಾಗಿ ಹಾಕಿಕೊಂಡ ಹಚ್ಚೆ.

Rashmi Kasaragodu
Updated On : 23 May 2013, 12:18 pm

ವಿಚಿತ್ರ ಹೇರ್‌ಸ್ಟೈಲ್. ನೋಡುವವರು ಬೆರಗಾಗುವಂತಹ ಇಂಗ್ಲಿಷ್ ಮಾತು. ಮೈಮೇಲೆ ಯಥೇಚ್ಚವಾಗಿ ಹಾಕಿಕೊಂಡ ಹಚ್ಚೆ. ವಿದೇಶಿ ಮೇಕ್‌ನ ವಿವಿಧ ಬೈಕ್‌ಗಳ ಮೇಲೆ ಸವಾರಿ ಮಾಡುವ ಯುವಕರ ದಂಡು. ಇದು ಯಾವುದೋ ವಿದೇಶದ ದೃಶ್ಯವಲ್ಲ. ಗದಗ ತಾಲೂಕಿನ ನಾಗಾವಿ ಎಂಬ ಪುಟ್ಟ ಲಂಬಾಣಿ ತಾಂಡಾದಲ್ಲಿ ಕಂಡುಬರುವ ನೋಟ.
ಬದುಕಿಗೆ ಯಾವುದೇ ಭಾಷೆಯ ಮಿತಿ ಇಲ್ಲ. ವಿಶ್ವವೇ ಒಂದು ಗ್ರಾಮವಿದ್ದಂತೆ ಎಂದು ಹೇಳುವುದನ್ನು ಕೇಳಿದ್ದೀರಿ. ಗದಗದಿಂದ ಅಲ್ಪ ಅಂತರದಲ್ಲಿರುವ ನಾಗಾವಿ ಲಂಬಾಣಿ ತಾಂಡಾ ಇದಕ್ಕೆ ಸಾಕ್ಷಿ. ಇಲ್ಲಿನ ಪ್ರತಿ ಮನೆಯ ಯುವಕರು ಬಹುತೇಕ ಅನಕ್ಷರಸ್ಥರೇ ಇದ್ದಾರೆ. ಆದರೆ, ಅನಕ್ಷರಸ್ಥ ತಾಂಡಾದಲ್ಲಿ ಜಗತ್ತಿನ ವಿವಿಧ ಭಾಷೆ ಮಾತನಾಡುವ ಜನರು ಸಿಗುತ್ತಾರೆ.
ನಾಗಾವಿ ತಾಂಡಾದಲ್ಲಿ 1400ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರೂ ಈ ಹಿಂದಿನಿಂದ ಮಾಡಿಕೊಂಡು ಬಂದಿರುವ ಕಾರ್ಯವೆಂದರೆ ಬೇರೆಯವರ ಹೊಲದಲ್ಲಿ ಕೂಲಿ ಕೆಲಸ. ಲಂಬಾಣಿ ಕುಲಕಸಬು. ತಾಂಡಾದಲ್ಲಿ ಸದ್ಯ ಶೇ. 42ರಷ್ಟು ಜನ ಅನಕ್ಷರಸ್ಥರು. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಓದು ಬರಹ ಬಾರದವರು. ಆದರೆ, ಅವರು ಯಾವುದೇ ವಿಶ್ವವಿದ್ಯಾಲಯದ ಪದವಿ ಪಡೆದ ವಿದ್ಯಾರ್ಥಿಗಿಂತ ಉತ್ತಮವಾಗಿಯೇ ಇಂಗ್ಲಿಷ್ ಮಾತನಾಡುತ್ತಾರೆ!

ಹಲವು ಭಾಷೆ ಬಲ್ಲರು
ಇಂಗ್ಲಿಷ್ ಒಂದೇ ಅಲ್ಲ. ಪರ್ಸಿಯನ್, ಇಟಲಿ, ರಷ್ಯಾ, ಪೋರ್ಚುಗಲ್ ಹಾಗೂ ದೇಶೀಯ ಭಾಷೆಗಳಾದ ಹಿಂದಿ, ಕೊಂಕಣಿ, ಮರಾಠಿ ಹೀಗೆ ಹತ್ತಾರು ಭಾಷೆಗಳನ್ನು ಮಾತನಾಡುತ್ತಾರೆ. ತಾಂಡಾದಲ್ಲಿರುವ ಕೆಲವು ಹಿರಿಯ ಅನಕ್ಷರಸ್ಥ ಮಹಿಳೆಯರು ಸಹಿತ ತಮ್ಮ ಮಕ್ಕಳೊಂದಿಗೆ ಇಂಗ್ಲಿಷ್‌ನಲ್ಲಿಯೇ ಮಾತನಾಡುವುದು.

ವಿಚಿತ್ರ ಫ್ಯಾಶನ್
ತಾಂಡಾದ ಯುವಕರು ವಿಚಿತ್ರ ರೀತಿಯ ಫ್ಯಾಶನ್ ರೂಢಿಸಿಕೊಂಡಿದ್ದಾರೆ. ಅದರಲ್ಲಿ ವಿದೇಶಿ ಸಂಸ್ಕೃತಿ ಎದ್ದು ಕಾಣುತ್ತದೆ. ವಿಚಿತ್ರ ರೀತಿಯ ಹೇರ್‌ಸ್ಟೈಲ್‌ಗಳು, ಮೈಮೇಲೆ ವಿಶಿಷ್ಟ ಟ್ಯಾಟೂಗಳು, ಕೈ, ಕಾಲು, ಹುಬ್ಬು, ನಾಲಿಗೆಗಳಲ್ಲಿ ಚುಚ್ಚಿಕೊಂಡ ರಿಂಗ್‌ಗಳು. ವಿದೇಶಿ ಮೇಕ್‌ನ ದ್ವಿಚಕ್ರ ವಾಹನಗಳು, ಮೊಬೈಲ್ ಪೋನ್‌ಗಳನ್ನು ಬಳಸುತ್ತಾರೆ.

ಇದಕ್ಕೆಕಾರಣವೇನು ?
ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಯುವಕರು. ಹಿರಿಯರು ದೂರದ ಗೋವಾ ಮತ್ತು ಕೇರಳ ರಾಜ್ಯದಲ್ಲಿ ಲಂಬಾಣಿ ಸಾಂಪ್ರದಾಯಿಕ ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರ ಮಾಡುತ್ತಾರೆ. ಮತ್ತೆ ಕೆಲವರು ಹಚ್ಚೆ ಹಾಕುವುದು ಸೇರಿದಂತೆ ವಿದೇಶೀಯರೊಂದಿಗೆ ವರ್ಷದ 8 ತಿಂಗಳು ಕಳೆಯುತ್ತಾರೆ. ವಿದೇಶಿಗರೊಂದಿಗೆ ವ್ಯಾಪಾರ ವಹಿವಾಟು ನಡೆಸಿ ಅವರ ಭಾಷೆಯನ್ನು ಕಲಿತು, ಅವರ ನಡೆನುಡಿಗಳನ್ನು ರೂಢಿಸಿಕೊಂಡಿದ್ದಾರೆ.

ದೇಶ ವಿದೇಶಗಳಲ್ಲಿ ಬೀಗರು
ಅಕ್ಷರ ಜ್ಞಾನವನ್ನೇ ಹೊಂದಿರದ ಯುವಕರು ವ್ಯಾಪಾರಕ್ಕೆಂದು ಗೋವಾಕ್ಕೆ ತೆರಳಿ, ವಿದೇಶಿಗರೊಂದಿಗೆ ಕೇವಲ ಭಾಷೆ ಕಲಿಯುವುದಲ್ಲ, ಅವರೊಂದಿಗೆ ನೆಂಟಸ್ತಿಕೆಯನ್ನೂ ಬೆಳೆಸಿದ್ದಾರೆ. ಈ ತಾಂಡಾದ ಇಬ್ಬರು ಯುವಕರು ವಿದೇಶಿ ಯುವತಿಯರನ್ನು ಮುದುವೆಯಾಗಿ ಹೊರದೇಶದಲ್ಲಿ ನೆಲೆಸಿದ್ದಾರೆ. ಹೇಮಪ್ಪ ಗುಡಿಮನಿ, ಇಂಗ್ಲೆಂಡ್‌ನ ಕೇಮಲ್ ಅವರೊಂದಿಗೆ ಲಂಬಾಣಿ ಸಂಪ್ರದಾಯದಂತೆ ವಿವಾಹವಾಗಿ ಅಲ್ಲಿ ನೆಲೆಸಿದ್ದಾರೆ. ಮಾರುತಿ ಚವ್ಹಾಣ 10 ವರ್ಷ ಹಿಂದೆಯೇ ಇಟಲಿ ಯುವತಿಯೊಂದಿಗೆ ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾನೆ. ಇನ್ನೂ ನಾಲ್ಕೈದು ಯುವಕರು ವಿವಿಧ ದೇಶಗಳ ಯುವತಿಯರನ್ನು ವಿವಾಹವಾಗಲಿದ್ದಾರೆ. ಲಂಬಾಣಿ ಸಂಸ್ಕೃತಿಗೆ ಮಾರು ಹೋಗಿರುವ ಹಲವಾರು ಯುವತಿಯರು ನಾಗಾವಿ ತಾಂಡಾಕ್ಕೂ ಬಂದು ಕೆಲವಾರು ದಿನ ಇಲ್ಲಿಯೇ ವಾಸವಿದ್ದು ಹೋಗಿದ್ದಾರೆ. ನಾಗಾವಿ ತಾಂಡಾ ದೇಶ ವಿದೇಶಗಳಲ್ಲಿ ಬೀಗರನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ.

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments