ಅಧಿಕಾರ ಯಾರದ್ದು?
ನಿಮ್ಮ ದೇಹದ ಮೇಲೆ ನಿಜವಾದ ಅಧಿಕಾರ ಯಾರಿಗಿದೆ? 'ಇದೇನ್ರಿ ಹೀಗೆ ಕೇಳುತ್ತೀರಿ? ನಮ್ಮ ದೇಹದ ಮೇಲೆ ನಮಗಲ್ಲದೆ ಬೇರ್ಯಾರಿಗೆ ಅಧಿಕಾರವಿರೋದಕ್ಕೆ ಸಾಧ್ಯ' ಎಂದು ಆಶ್ಚರ್ಯದಿಂದ ನೀವು ಮರು ಪ್ರಶ್ನಿಸಬಹುದು. ಆದರೆ ಒಂದು ಕ್ಷಣ ಯೋಚಿಸಿ ನೋಡಿ. ಬಾಲ್ಯದಲ್ಲಿ ನಮ್ಮ ದೇಹದ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಆಗ ನಮ್ಮ ತಾಯಿ ಅಥವಾ ತಂದೆಯೇ ನಮ್ಮನ್ನು ಮೀಯಿಸಿ ಶುಚಿಯಾಗಿಟ್ಟು, ತಿಂಡಿ ತಿನ್ನಿಸಿ ಆರೋಗ್ಯ ಕಾಪಾಡಿಕೊಂಡು ಬರುತ್ತಾರೆ. ತುಸು ದೊಡ್ಡವನಾದ ಮೇಲೆ ದೇಹದಲ್ಲಿ ಹಾರ್ಮೋನ್ಗಳ ಸಂಚಲನ ಶುರುವಾಗುತ್ತದೆ. ಹರೆಯ ಬಂದ ಮೇಲಂತೂ ಸರಿಯೇ ಸರಿ. ಆಟ, ಕೂಟ, ಬೇಟಗಳು ದೇಹವನ್ನು, ಮನಸ್ಸನ್ನು ಆಳಲು ಶುರು ಮಾಡುತ್ತವೆ. ಅನೇಕ ಬಾರಿ ಊಟ, ತಿಂಡಿ, ನಿದ್ರೆಗಳನ್ನೂ ತೊರೆದು ನಮ್ಮ ಆಕರ್ಷಣೆಯ ವಸ್ತು ವಿಷಯಗಳ ಬೆನ್ನು ಹತ್ತಿ ಹೋಗುತ್ತದೆ ದೇಹ. ಅಂದರೆ ಆಕರ್ಷಣೆಗಳೇ ನಮ್ಮ ದೇಹವನ್ನು ಆಳುತ್ತವೆಂದಾಯಿತು. ತುಸು ಪ್ರಾಯ ಕಳೆದ ಮೇಲೆ ದಿನಚರಿ ಬೋರಾಗತೊಡಗುತ್ತದೆ. ಬಿಪಿ, ಡಯಾಬಿಟಿಸ್ ಎಂಬಂತೆ ಒಂದೊಂದೇ ರೋಗಗಳು ಬೆನ್ನು ಹತ್ತುತ್ತವೆ. ದೇಹ ನಮ್ಮದಾದರೂ ಅದು ಕೇಳುವ ಸಿಹಿ ತಿನ್ನಲಾಗೊಲ್ಲ, ಪೇಯ ಕುಡಿಯಲಾಗೊಲ್ಲ. ಕುಡಿತದಂಥ ಹವ್ಯಾಸಗಳು ಬೆನ್ನು ಹತ್ತುತ್ತವೆ. ಒಂದು ಗುಟುಕು ಎಂದು ಆರಂಭಿಸಿದ್ದು ಬಾಟಲಿಗಳವರೆಗೆ ಒಯ್ಯುತ್ತದೆ. ಮದ್ಯ ದೇಹವನ್ನು ಆಳಲು ಆರಂಭಿಸುತ್ತದೆ. ಅಷ್ಟರಲ್ಲಾಗಲೇ ವೃದ್ಧಾಪ್ಯ ಕಾಲಿಟ್ಟಿದೆ. ಮುದಿತನ ಮತ್ತು ರೋಗಗಳು ದೇಹವನ್ನು ಆಳುತ್ತವೆ. ಹೀಗಿರುವಾಗ ನಿಜಕ್ಕೂ ನಮ್ಮ ದೇಹದ ಮೇಲೆ ನಮಗೆ ಅಧಿಕಾರ ಇದೆಯಾ? ಇದೆ. ಆದರೆ ಅದನ್ನು ನಾವು ಪ್ರಕೃತಿಯ ಕೃಪೆಯಿಂದ ಪಡೆದಿದ್ದೇವೆ ಎಂಬ ಎಚ್ಚರ ಸದಾ ಇರಬೇಕು. ಪ್ರಕೃತಿಯ ಸಮತೋಲನವನ್ನು ದೇಹ ದಾಟಿದ ಕೂಡಲೇ ಅದರ ಮೇಲಿದ್ದ ನಮ್ಮ ಅಧಿಕಾರ ಕುಸಿಯತೊಡಗುತ್ತದೆ. ಅಧಿಕಾರ ಹಾಗೂ ಕರ್ತವ್ಯಗಳು ಜತೆಗೇ ಬರುತ್ತವೆ ಎಂಬುದು ಸಂವಿಧಾನದ ಪ್ರಾಥಮಿಕ ಪಾಠ. ದೇಹದ ವಿಷಯದಲ್ಲೂ ಇದು ನಿಜ. ನಮ್ಮನ್ನು ನಾವು ಆಳಿಕೊಳ್ಳಲು ಬಲ್ಲವನೇ ನಿಜವಾದ ಯಶಸ್ಸಿನ ಪಾಲುದಾರನಾಗಿರುತ್ತಾನೆ. ನಮ್ಮ ಮನಸ್ಸು ಯಾವತ್ತೂ ನಮ್ಮ ಹಿಡಿತದಲ್ಲಿರುವುದೇ ಇಲ್ಲ. ಅದು ನಮ್ಮ ಮಾತು ಕೇಳುವಂತೆ ಮಾಡುವುದೇ ನಿಜಕ್ಕೂ ಸಾಹಸ. ಅಂಥ ಸಾಹಸವನ್ನು ಸವಾಲಾಗಿ ಸ್ವೀಕರಿಸಬೇಕು. ಅದು ನಮಗೆ ಹೇಗೆ ಬೇಕೋ ಹಾಗೆ ಕೇಳಬೇಕು. ಬಾಲ ಮುದುಡಿದ ನಾಯಿಯಂತೆ, ಅತ್ಯಂತ ವಿನಯವಂತ ನೌಕರನಂತೆ ಅದು ನಮ್ಮ ಆದೇಶವನ್ನು ಪಾಲಿಸಬೇಕು. ಬದಲಾಗಿ ಬಹುತೇಕರ ಮನಸ್ಸು ಅವರನ್ನೇ ಆಳುತ್ತವೆ. ಆಗಲೇ ನಾವು ಸೋಲನ್ನು ಒಪ್ಪಿಕೊಳ್ಳುವುದು. ಮನಸ್ಸನ್ನು ಗೆದ್ದರೆ ದೇಹವನ್ನು ತನ್ನಿಂದ ತಾನೇ ಗೆಲ್ಲಲಾಗುತ್ತದೆ ಎಂಬ ಗುಟ್ಟು ಅರಿಯಿರಿ.
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.