ಅಲರ್ಜಿಗೆ ರಕ್ತವಲ್ಲ, ಕರುಳು ಕಾರಣ
ಡಾ. ಜಾನ್ ಓ. ಹಂಟರ್. ಕೇಂಬ್ರಿಡ್ಜ್ನ ಗ್ಯಾಸ್ಟ್ರೊಎಂಟೆರೊಲಾಜಿಸ್ಟ್. ಆಹಾರ ತಜ್ಞ ಕೂಡ. ಫುಡ್ ಅಲರ್ಜಿಗೆ ಸಂಬಂಧಿಸಿದಂತೆ ವೈದ್ಯಲೋಕದಲ್ಲಿ ಇವರದು ದೊಡ್ಡ ಹೆಸರು. ಅದಕ್ಕೆ ಕಾರಣ ಈ ವಿಷಯದಲ್ಲಿ ಅವರ ಆಸಕ್ತಿ ಮತ್ತು ಕೈಗೊಂಡ ಸಂಶೋಧನೆಗಳು. ಅಲರ್ಜಿ ಉಂಟುಮಾಡುವ ಆಹಾರಗಳು ಯಾವವು ಎನ್ನುವುದನ್ನು ಪತ್ತೆ ಮಾಡಿ, ಅವುಗಳ ಸೇವನೆ ಕಡಿಮೆ ಮಾಡಿದರೆ ದೀರ್ಘಕಾಲದಿಂದ ಕಾಡುತ್ತಿದ್ದ ಕಾಯಿಲೆಗಳನ್ನೂ ಹಂತಹಂತವಾಗಿ ವಾಸಿ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟವರೇ ಇವರು. ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಜತೆಗೆ ಸಂಧಿವಾತದಂಥ ತೊಂದರೆಗಳನ್ನೂ ಹೋಗಲಾಡಿಸಬಹುದು ಎನ್ನುವುದು ಅವರ ಸಂಶೋಧನೆಯ ಫಲ.
'ಫುಡ್ ಅಲರ್ಜಿಯಿಂದ ಬಳಲುತ್ತಿದ್ದ ಕೆಲವರನ್ನು ಪತ್ತೆ ಮಾಡಿ ಅವರ ಆಹಾರದ ಕುರಿತು ನಿಗಾ ವಹಿಸಿದೆವು. ಕೆಲವು ತಿನಿಸುಗಳನ್ನು ನಿರ್ಬಂಧಿಸಿದೆವು. ಅಚ್ಚರಿ ಎಂಬ ರೀತಿಯಲ್ಲಿ ಮೈಗ್ರೇನ್, ಕರುಳಿನ ಸಮಸ್ಯೆಗಳು, ಇಸುಬು, ಸಂಧಿವಾತ ಮೊದಲಾದ ತೊಂದರೆಗಳು ಬಹಳ ಬೇಗ ನಿಯಂತ್ರಣಕ್ಕೆ ಬಂದವು. ವಿಶೇಷತಃ ಏಕದಳ ಧಾನ್ಯಗಳು ಬಹಳಷ್ಟು ಜನರಲ್ಲಿ ತೊಂದರೆಗೆ ಕಾರಣವಾಗಿದ್ದವು. ಅದರಲ್ಲೂ ಗೋಧಿ ಶೇ 60ರಷ್ಟು ಸಮಸ್ಯೆಗಳ ಮೂಲ. ನಂತರದ ಸ್ಥಾನ ಹಾಲಿನ ಉತ್ಪನ್ನಗಳು, ಕೆಫೀನ್, ಯೀಸ್ಟ್ ಮತ್ತು ಸಿಟ್ರಸ್ ಜಾತಿಯ ಹಣ್ಣುಗಳದ್ದು' ಎಂದು ವಿವರಿಸುತ್ತಾರೆ ಡಾ.ಜಾನ್. ನಿರುಪದ್ರವಿ ಎಂದರೆ ಜೇನುತುಪ್ಪ. ಭೂಲೋಕದ ಅಮೃತ ಎಂದೇ ಹೇಳಬಹುದಾದ ಮಧುಪರ್ಕ, ತೀರಾ ನಗಣ್ಯ ಎನ್ನುವಷ್ಟು ಅಂದರೆ ಶೇ 2ರಷ್ಟು ಜನರಲ್ಲಿ ಮಾತ್ರ ಅಲರ್ಜಿ ಉಂಟುಮಾಡಬಲ್ಲದು.
ಹಂಟರ್ ಕಂಡುಕೊಂಡ ಮತ್ತೊಂದು ಕೌತುಕದ ಸಂಗತಿ ಎಂದರೆ ಅಲರ್ಜಿ ಉಂಟುಮಾಡುವ ಪದಾರ್ಥಗಳುನೇರವಾಗಿ ರಕ್ತವನ್ನು ಸೇರಿದಾಗ ವ್ಯತಿರಿಕ್ತ ರಾಸಾಯನಿಕ ಪ್ರತಿಕ್ರಿಯೆಗಳು ಅಷ್ಟಾಗಿ ಆಗುವುದಿಲ್ಲ ಎನ್ನುವುದು. ಅದರ ಅರ್ಥ ಫುಡ್ ಅಲರ್ಜಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ರಕ್ತ ಕಾರಣವಲ್ಲ. ಬದಲಾಗಿ ಇವು ಕರುಳಿನಲ್ಲಿಯೇ ನಡೆಯುತ್ತವೆ ಎನ್ನುವುದು. ಬ್ಯಾಕ್ಟೀರಿಯಾಗಳು ಕರುಳಿನಲ್ಲಿ ರೋಗಕ್ಕೆ ಕಾರಣವಾಗುವ ವಿಷಕಾರಿಗಳನ್ನು ಸ್ರವಿಸುತ್ತವೆ, ಅದರಿಂದಾಗಿ ಮತ್ತಷ್ಟು ರಾಸಾಯನಿಕ ಪ್ರತಿಕ್ರಿಯೆಗಳು ನಡೆದು ಅಲರ್ಜಿ ಉಂಟಾಗುತ್ತದೆ ಎನ್ನುವ ತೀರ್ಮಾನಕ್ಕೆ ಅವರು ಬಂದರು. ಸಾಕಷ್ಟು ಪ್ರಕರಣಗಳಲ್ಲಿ ಈ ಸಂಗತಿಯನ್ನು ಗಮನಿಸಿ, ದಾಖಲಾತಿ ಮಾಡಿಕೊಂಡ ಬಳಿಕ ಡಾ.ಜಾನ್ ತಾವು ಕಂಡುಕೊಂಡ ಸತ್ಯವನ್ನು ಬಹಿರಂಗಗೊಳಿಸಿದರು. ಇಂಥ ಪ್ರತಿಕ್ರಿಯೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ವ್ಯಕ್ತಿಯ ಚಯಾಪಚಯ ಸಾಮರ್ಥ್ಯ, ಕರುಳಿನ ಭಾಗದಲ್ಲಿನ ಸಂವೇದನಾ ಸೂಕ್ಷ್ಮತೆ, ಆಹಾರ ಸಮತೋಲನಗಳನ್ನು ಆಧರಿಸಿ ಫುಡ್ ಅಲರ್ಜಿಯ ತೀವ್ರತೆ ನಿರ್ಧಾರವಾಗುತ್ತದೆ ಎನ್ನುವುದು ಅವರ ವಾದ. <
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)