ಯಾಕೆ ನಿಶ್ಯಬ್ದ?
ಮೊನ್ನೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರದೇ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅವರು 'ಬೈಟು ಕಾಫಿ'ಯ 'ನಿಶ್ಯಬ್ದ' ಅಂಕಣದ ಬಗ್ಗೆ ಪ್ರಸ್ತಾಪಿಸಿ, ಇಲಾಖೆಯ ಬಹುತೇಕರು ಅಂಕಣ ಓದುತ್ತಿದ್ದಾರೆಂದೂ ಅಂಕಣ ಉತ್ತಮವಾಗಿ ಮೂಡಿಬರುತ್ತಿರುವುದಾಗಿಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಒಂದು ಪ್ರಶ್ನೆ ಮುಂದಿಟ್ಟರು. ಇದು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಅಂಕಣವಾಗಿದ್ದರೂ 'ನಿಶ್ಯಬ್ದ' ಎಂದಿಡಲು ಕಾರಣವೇನು ಎಂಬುದು ಅವರ ಪ್ರಶ್ನೆ.
'ನಿಶ್ಯಬ್ದ' ಆರಂಭವಾದ ದಿನದಿಂದ ಇಂದಿನ ತನಕ ಈ ಅಂಕಣದ ಹೆಸರಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು ಕೇವಲ ಅಂದು ಭೇಟಿಯಾದ ಪೊಲೀಸ್ ಅಧಿಕಾರಿ ಮಾತ್ರ ಅಲ್ಲ, ಈ ಬಗ್ಗೆ ಹಲವು ಓದುಗರು ಆಕ್ಷೇಪ, ಅನುಮಾನಗಳನ್ನು ವ್ಯಕ್ತಪಡಿಸಿ ಈಮೇಲ್ ಮಾಡಿದ್ದಾರೆ, ಪತ್ರ ಬರೆದಿದ್ದಾರೆ, ಫೋನ್ ಕರೆ ಮಾಡಿದ್ದಾರೆ. ಹಾಗೆ ಮಾಡಿದವರೆಲ್ಲರಿಗೂ ಹೆಸರಿನ ಹಿಂದಿರುವ ಗೂಡಾರ್ಥವನ್ನು ವಿವರಿಸಲಾಗಿದೆ.
ಒಂದು ಕೊಲೆ, ದರೋಡೆ ಅಥವಾ ಇನ್ನ್ಯಾವುದೇ ಅಪರಾಧ ಪ್ರಕರಣವಾದರೂ ಇಡೀ ಸಮಾಜ ಅತ್ತ ತಿರುಗಿ ನೋಡುವಷ್ಟು ದೊಡ್ಡ ಮಟ್ಟದಲ್ಲಿ ಸದ್ದಾಗುತ್ತದೆ. ಅದು ಮಲ್ಲೇಶ್ವರಂ ಬಾಂಬ್ ಸ್ಫೋಟವಾಗಬಹುದು, ಮಂಗಳೂರು ಪಬ್ ದಾಳಿಯಾಗಬಹುದು... ಮಾಧ್ಯಮದಿಂದ ಹಿಡಿದು ಸಾಮಾನ್ಯ ಮನುಷ್ಯನವರೆಗೆ ದೊಡ್ಡ ಶಬ್ದವಾಗುತ್ತದೆ, ಸುದ್ದಿಯಾಗುತ್ತದೆ.
ಆದರೆ ನಂತರ? ಉದಾಹರಣೆಗೆ ಮಲ್ಲೇಶ್ವರಂ ಬಾಂಬ್ ಸ್ಫೋಟವನ್ನೇ ತೆಗೆದುಕೊಳ್ಳಿ, ಬಾಂಬ್ ಸಿಡಿದ ಕೆಲವೇ ಕೆಲವು ಗಂಟೆಗಳಲ್ಲಿ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಆ ಬಗ್ಗೆ ಮಾಧ್ಯಮಕ್ಕೂ ಮಾಹಿತಿ ನೀಡಿರಲಿಲ್ಲ. ಬಾಂಬ್ ಇರಿಸಿದ್ದ ಬೈಕ್ನ ಮಾಲೀಕರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂಬ ವಾಸನೆ ಪಳಗಿದ ಕ್ರೈಂ ವರದಿಗಾರರಿಗೆ ತಿಳಿದರೂ ಅದನ್ನು ದೃಢಪಡಿಸಲು ಪೊಲೀಸ್ ಅಧಿಕಾರಿಗಳು ಸಿದ್ಧರಿರಲಿಲ್ಲ. ಜತೆಗೆ, ಎರಡು ದಿನಗಳ ನಂತರ ಮತ್ತಿಬ್ಬರನ್ನು ಬಂಧಿಸಿದ ನಂತರವೇ ಪೊಲೀಸರು ಶಂಕಿತರ ಬಂಧನದ ಸುದ್ದಿ ಮಾಧ್ಯಮಕ್ಕೆ ನೀಡಿದ್ದು.
ಅಂದರೆ ಘಟನೆ ನಡೆದ ನಂತರ ಪ್ರಕರಣದ ತನಿಖೆ ಯಾವ ಹಾದಿಯಲ್ಲಿ ಸಾಗುತ್ತಿದೆ? ಪ್ರಕರಣಕ್ಕೆ ಸಂಬಂಧಿಸಿ ಯಾರನ್ನಾದರೂ ವಶಕ್ಕೆ ಪಡೆದಿದ್ದಾರಾ? ಘಟನೆಗೆ ಸಂಬಂಧಪಟ್ಟಂತೆ ಪೊಲೀಸರಿಗೆ ಏನಾದರೂ ಮಾಹಿತಿ ಸಿಕ್ಕಿದೆಯಾ ಎಂಬಂಥ ಪ್ರಶ್ನೆಗಳು ಎಲ್ಲರಲ್ಲೂ ಇರುತ್ತವೆ. ಆದರೆ ಉತ್ತರ ದೊರೆಯುವುದು ಮಾಧ್ಯಮದಿಂದ ಮಾತ್ರ. ಅದೂ ಪೊಲೀಸರು ಅಧಿಕೃತವಾಗಿ ಮಾಧ್ಯಮಕ್ಕೆ ಹೇಳಿದರೆ ಮಾತ್ರ. ಒಂದೊಂದು ಬಾರಿ, ಪಳಗಿದ ಕ್ರೈಂ ಪತ್ರಕರ್ತರು 'ಉನ್ನತ ಮೂಲಗಳಿಂದ ತಿಳಿದು ಬಂದಿದೆ', 'ಮೂಲಗಳು ದೃಢಪಡಿಸಿವೆ' ಎಂಬಂಥ ಸುದ್ದಿಗಳು ಪ್ರಕಟಿಸುತ್ತಾರಾದರೂ ಅವಕ್ಕೆ ಎಷ್ಟು ಮಹತ್ವ ನೀಡಬೇಕು ಎಂಬ ಗೊಂದಲದಲ್ಲಿ ಓದುಗರು ಪರದಾಡಬೇಕಾಗುತ್ತದೆ.
ಅಂದರೆ ಒಂದು ಅಪರಾಧ ಪ್ರಕರಣ ಸದ್ದು ಮಾಡುತ್ತದೆ ಅದರ ನಂತರದ ತನಿಖೆ ಎಲ್ಲ ನಿಶ್ಯಬ್ದವಾಗಿಯೇ ನಡೆಯುತ್ತದೆ ಎಂಬುದು ಗಮನಾರ್ಹ. ಹಾಗಾಗಿಯೇ ನಮ್ಮ ಈ ಅಂಕಣಕ್ಕೆ 'ನಿಶ್ಯಬ್ದ' ಎಂಬ ಹೆಸರಿಡಲಾಗಿದೆ.
ಘಟನೆ ನಡೆಯುವ ಬಗ್ಗೆ ಅಂದರೆ ದೊಡ್ಡ ಸದ್ದಿನ ಬಗ್ಗೆ ಸುದ್ದಿ ಮಾಡಲು ಪ್ರತಿ ಮಾಧ್ಯಮದಲ್ಲೂ ಅನೇಕ ಕಾರ್ಯಕ್ರಮಗಳಿವೆ. ಘಟನೆ ನಡೆದ ಕೆಲವೇ ಕ್ಷಣಗಳಿಂದ ಹಿಡಿದು ಅದು ಜನ ಮರೆಯುವ ವರೆಗೆ ಬಿಡದೆ ಪ್ರಕರಣದ ಬಗ್ಗೆ ಸುದ್ದಿ ಬಿತ್ತರಿಸುತ್ತವೆ. ಆದರೆ ನಂತರ ಪೊಲೀಸರು ಕೈಗೊಳ್ಳುವ ತನಿಖೆಯ ಬಗ್ಗೆ ಯಾವುದೇ ಮಾಧ್ಯಮ ಸುದ್ದಿ ಬಿತ್ತರಿಸುವುದಿಲ್ಲ. ಬದಲಿಗೆ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದಾಗಲೋ ಅಥವಾ ಘಟನೆಯನ್ನು ಬೇಧಿಸಿದಾಗಲೋ ಒಂದು ಬಾರಿ ಸುದ್ದಿ ಬಿತ್ತರಿಸಿ ಮಾಧ್ಯಮಗಳು ಸುಮ್ಮನಾಗುತ್ತವೆ.
ಆದರೆ ಪೊಲೀಸರು ಪ್ರಕರಣ ಬೇಧಿಸಲು ಏನೆಲ್ಲಾ ಶ್ರಮಪಟ್ಟರು, ಆರೋಪಿಗಳ ಸುಳಿವು ದೊರೆತಿದ್ದಾರೂ ಹೇಗೆ, ಯಾವ ಸುಳಿವಿನ ಮೇಲೆ ಪ್ರಕರಣ ಬೇಧಿಸಿದರು ಎಂಬಿತ್ಯಾದಿ ಮಾಹಿತಿ ಓದುಗರಿಗೆ ಲಭಿಸುವುದು ತೀರಾ ಕಡಿಮೆ. ಹಾಗಾಗಿಯೇ 'ಬೈಟುಕಾಫಿ'ಯಲ್ಲಿ 'ನಿಶ್ಯಬ್ದ' ಅಂಕಣವನ್ನು ಆರಂಭಿಸಲಾಗಿದೆ.
ಘಟನೆಯ ನಂತರ ನಡೆಯುವ ತನಿಖೆ ಯಾವ ರೀತಿಯಲ್ಲಿ ಸಾಗಿತು, ಆರೋಪಿಗಳಿಂದ ಪೊಲೀಸರು ಯಾವ ರೀತಿ ನಿಜ ಹೊರತೆಗೆದರು, ನಂತರ ಯಾವ ಯಾವ ಕಲಂಗಳಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು, ವಿಚಾರಣೆ ನಡೆಸಿದ ನ್ಯಾಯಾಲಯ ಯಾವ ಆಧಾರದ ಮೇಲೆ ಆರೋಪಿಗಳಿಗೆ ಶಿಕ್ಷೆ ವಿಧಿಸಿತು ಅಥವಾ ನಿರಪರಾಧಿಗಳೆಂದು ಬಿಡುಗಡೆ ಮಾಡಿತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ 'ನಿಶ್ಯಬ್ದ' ಅಂಕಣ ಆರಂಭವಾಗಿದೆ ಎಂಬುದನ್ನು ಮೊದಲು ಓದುಗರಿಗೆ ಮನದಟ್ಟು ಮಾಡುವ ಉದ್ದೇಶದಿಂದಲೇ ಇಂದು ಇಷ್ಟೆಲ್ಲಾ ಹೇಳಬೇಕಾಯಿತು.
ಘಟನೆ ನಡೆದಾಗ ದೊಡ್ಡ ಸದ್ದಾದರೂ ನಂತರದ ತನಿಖೆ ನಿಶ್ಯಬ್ದವಾಗಿ ನಡೆಯುವುದರಿಂದ ಮತ್ತು ಘಟನೆ ನಂತರದ ವಿಚಾರಗಳನ್ನು ತಿಳಿಸುವುದೇ ಅಂಕಣದ ಮುಖ್ಯ ಉದ್ದೇಶ.
ಈವರೆಗೆ ಹೇಳಿದ್ದು ಪೊಲೀಸ್ ಇಲಾಖೆಯ ಕಷ್ಟ ಮತ್ತು ಅಂಕಣದ ಹೆಸರಿನ ಸಮರ್ಥನೆಯಾಯಿತು.
ಅಂಕಣಕ್ಕೆ ಈ ಹೆಸರಿಡಲು ಮತ್ತೊಂದು ಕಾರಣವೂ ಉಂಟು. ನಾವು ಅಂಕಣದಲ್ಲಿ ಹೇಳುತ್ತಿರುವ ವಿಚಾರಗಳು ಯಾವುದೂ ಸದ್ದು ಮಾಡಿದ ಸಂಗತಿಗಳಲ್ಲ ಎಂಬುದು ಗಮನಿಸಬೇಕಾದ ವಿಷಯ. ಏಕೆಂದರೆ ಬೆಳಗಾವಿಯ ಸಂಜಯ್ ರಾಯ್ಕರ್ ಪ್ರಕರಣದಲ್ಲಿ ತಪ್ಪೇ ಮಾಡದೆ ಶಿಕ್ಷೆ ಅನುಭವಿಸಿದ ಆತನ ಅಣ್ಣ ಸಂತೋಷ್, ಅಕ್ರಮ ಸಂಬಂಧದ ಕಳಂಕ ಹೊತ್ತು ಕಮರಿದ ಸಂತೋಷನ ಹೆಂಡತಿಯ ನರಕಯಾತನೆ ಮುಂತಾದ ವಿಚಾರಗಳು ಸದ್ದು ಮಾಡುವಂಥವಲ್ಲ. ಅದೇ ರೀತಿ ತುರುವೇಕೆರೆಯ ಪ್ರತಿಭಾ ಪ್ರಕರಣದಲ್ಲಿ ಮಗುವನ್ನು ದತ್ತುಗೆ ನೀಡಿದ ಕಾರಣ ಆಕೆಯ ಬಾಳು ಜೀವನ ಪೂರ್ತಿ ಅಂಧಕಾರದಲ್ಲಿ ಮುಳುಗಿತು. ನ್ಯಾಯಾಲಯ ಆದೇಶಿಸಿದ ಡಿಎನ್ಎ ಪರೀಕ್ಷೆಗೆ ಮಗುವಿನ ರಕ್ತ ದೊರೆತಿದ್ದರೆ ಅದು ದೊಡ್ಡ ಸದ್ದಾಗುತ್ತಿತ್ತೇನೋ ಆದರೆ ಹಾಗಾಗಲಿಲ್ಲ. ಆದ್ದರಿಂದ ಇದು ಎಲ್ಲಿಯೂ ಸದ್ದು ಮಾಡಿದ ವಿಚಾರವಲ್ಲ. ಬೆಂಗಳೂರಿನ ಜಯನಗರದ ಜಿಪುಣ ಅಣ್ಣ ತಂಗಿಯರ ಸಾವು ಅವರು ಕೂಡಿಟ್ಟ ಸಂಪತ್ತು ಇಂದಿಗೂ ಠಾಣೆಯಲ್ಲಿ ಕೊಳೆಯುತ್ತಿರುವುದು ಇಂದಿಗೂ ಸದ್ದು ಮಾಡಿದ ವಿಚಾರವಲ್ಲ. ನಿಶ್ಯಬ್ದವಾಗಿ ಎಲ್ಲಿಯೋ ಕಡತಗಳಲ್ಲಿ ಅಡಗಿ ಕುಳಿತಿರುವ ವಿಚಾರಗಳನ್ನು ಹೆಕ್ಕಿ ಹೊರತೆಗೆದು ಓದುಗರ ಮುಂದಿಡುವ ಒಂದು ಪ್ರಯತ್ನವೇ 'ನಿಶ್ಯಬ್ದ' ಅಂಕಣದ ಮುಖ್ಯ ಗುರಿಯಾಗಿದ್ದು ಅದನ್ನು ಸದ್ದಿಲ್ಲದೆ ನಡೆಸುತ್ತಿದೆ ಎಂಬ ತೃಪ್ತಿ ನಮ್ಮ ತಂಡಕ್ಕಿದೆ. ಈ ವಿಚಾರ ನಮಗೆ ಮತ್ತು ನಾವು ತಿಳಿಸಿದ ವ್ಯಕ್ತಿಗಳಿಗೆ ಮಾತ್ರ ತಿಳಿದಿದೆ. ಆದರೆ ಎಲ್ಲಾ ಓದುಗರಿಗೂ ಇದು ತಿಳಿಯಬೇಕು. ಇಲ್ಲವಾದರೆ ಇಂದು ಅವರಿಗಾದ ಗೊಂದಲವೇ ಮುಂದೆ ನಿಮಗೂ ಆಗಬಹುದು ಎಂಬ ಉದ್ದೇಶದಿಂದ ಇಂದು ಅದೇ ವಿಚಾರವನ್ನು ವಿವರವಾಗಿ ಹೇಳಲಾಗಿದೆ. ಈಗ ಹೇಳಿ ಅಂಕಣಕ್ಕೆ ನಿಶ್ಯಬ್ದ ಹೆಸರು ಸೂಕ್ತ ಎಂಬುದನ್ನು ನೀವೂ ಓಪ್ಪುತ್ತೀರಿ ಅಲ್ಲವೇ? ಅಂದ ಹಾಗೆ ಅಕ್ಷರ ರೂಪದಲ್ಲಿ ಮೂಡಿ ಬರುತ್ತಿದ್ದ 'ನಿಶ್ಯಬ್ದ' ಅಂಕಣದ ಕತೆಗಳು ಇನ್ನು ಮುಂದೆ ಸುವರ್ಣ ಸುದ್ದಿವಾಹಿನಿಯಲ್ಲಿ ದೃಶ್ಯರೂಪದಲ್ಲಿ ಮೂಡಿಬರಲಿವೆ. ಕತೆಗೆ ಸಂಬಂಧಪಟ್ಟವರು ಕ್ಯಾಮೆರಾ ಮುಂದೆ ಮಾತನಾಡಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲಿದ್ದಾರೆ. ಜೊತೆಗೆ ಯಾವುದೇ ಪ್ರಕರಣಕ್ಕೆ ಸಂಬಂಧಪಟ್ಟ ತನಿಖಾಧಿಕಾರಿ ತನಿಖೆಯ ಕುರಿತು ಅರ್ಧಗಂಟೆ ವಿವರಿಸಲಿದ್ದಾರೆ. ಕಾರ್ಯಕ್ರಮ ಪ್ರತಿ ಶನಿವಾರ ರಾತ್ರಿ 10ಕ್ಕೆ ಮೂಡಿಬರಲಿದ್ದು, ಇಂದಿನಿಂದ ಕಾರ್ಯಕ್ರಮ ಆರಂಭವಾಗಲಿದೆ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.