ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಂದದ್ದನ್ನು ಬಾಚಿಕೊಳ್ಳಿ

Vishwanath S
Updated On : 26 May 2013, 3:00 am

ಯಾವತ್ತೂ ನಮಗೆ ಹಾಗೆಯೇ ಅನ್ನಿಸುವುದು. ಹತ್ತು ಪೈಸೆ ತೆಗೆದುಕೊಂಡು ಏನು ಮಾಡುವುದು? ಇದರಿಂದ ಏನನ್ನು ಸಾಧಿಸಲಾಗುತ್ತದೆ? ನನಗೀಗ ನನ್ನ ಕಷ್ಟಗಳ ಪರಿಹಾರಕ್ಕೆ ಏನಿಲ್ಲವೆಂದರೂ ಹತ್ತು ಸಾವಿರ ರುಪಾಯಿಯಾದರೂ ಬೇಕಿತ್ತು.... ಅಂತೆಯೇ- ಒಂದು ಪುಟ್ಟ ಸಸಿ ನೆಡುವಾಗ ಇದೊಂದು ಸಸಿಯಿಂದ ಏನಾದೀತು ಮಹಾ? ಅದೇ ರೀತಿ- ಆಫ್ಟರಾಲ್ ಹೋಟೆಲ್‌ನಲ್ಲಿ ಸರ್ವರ್ ಕೆಲಸ ಸಿಕ್ಕರೆ ಏನು ಸಾಧಿಸಲಾಗುತ್ತದೆ? ನನ್ನ ಘನತೆ, ವಿದ್ಯಾರ್ಹತೆಗೆ ಅದು ಯಾವ ರೀತಿಯಲ್ಲೂ ಸರಿ ಹೊಂದುವುದಿಲ್ಲ. ...ಇಂಥವು ಇಷ್ಟಕ್ಕೇ ನಿಲ್ಲುವುದಿಲ್ಲ. ಜೀವನದಲ್ಲಿ ಇಂಥ ಸಣ್ಣಸಣ್ಣ ಸಂಗತಿಗಳನ್ನು ನಾವು ಯಾವತ್ತೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅದು ನಮಗೆ ಮಹತ್ವದ್ದು ಅಂತ ಅನ್ನಿಸುವುದೇ ಇಲ್ಲ. ಅದು ನಮ್ಮ ಅಹಮಿಕೆಯೂ ಇರಬಹುದು. ಅದರ ಬಗೆಗಿನ ಅನಾದರವೂ ಇದ್ದಿರಬಹುದು. ಪ್ರತಿಷ್ಠೆ, ಘನತೆ, ಮರ್ಯಾದೆ ಹೀಗೇ ಏನೇನೋ ಕಾರಣಗಳಿಗಾಗಿ  ಸಣ್ಣಪುಟ್ಟ ಅವಕಾಶಗಳನ್ನು ತೆಗಳುತ್ತಾ, ಕಾಲಲ್ಲಿ ಒದೆ ಯುತ್ತಾ ಸಾಗುತ್ತಿರುತ್ತೇವೆ. ಇದಕ್ಕೆ ಕಾರಣ ಬದುಕಿನ ಬಗೆಗೆ ನಮ್ಮ  ನಿರೀಕ್ಷೆಗಳು. ಪ್ರತಿಯೊಬ್ಬರಲ್ಲಿ ತಾವು ಬೆಳೆಯಬೇಕು, ಮೇಲೇರಬೇಕು, ಯಶಸ್ಸಿನ ಶಿಖರವನ್ನು ಬಲುಬೇಗ ತಲುಪಬೇಕು ಎಂಬ ಆಸೆ ಬೆಟ್ಟದಷ್ಟು. ದುರಂತವೆಂದರೆ ಅದಕ್ಕೆ ತಕ್ಕ ಪ್ರಯತ್ನ ಮಾಡುವುದೇ ಇಲ್ಲ. ನಮ್ಮ ಆಸೆಗೆ ತಕ್ಕ ಫಲ ಸಿಗಲಿಲ್ಲವೆಂದರೆ ಯಾವತ್ತಿಗೂ ನಮ್ಮ ಪ್ರಯತ್ನದಲ್ಲಿನ ವೈಫಲ್ಯವೆಂದು ಭಾವಿಸುವುದೇ ಇಲ್ಲ. ಬದಲಾಗಿ ನನಗೆ ಅವಕಾಶವೇ ಇಲ್ಲ. ಈ ಸಮಾಜವೇ ಇಷ್ಟು, ಅರ್ಹರನ್ನು ಗುರುತಿಸುವುದೇ ಇಲ್ಲ ಎಂಬಿತ್ಯಾದಿ ಹಳಹಳಿಯಲ್ಲಿ ಹಲುಬುತ್ತಾ ಇರುತ್ತೇವೆ. ನಿಜ ಏನೆಂದರೆ ನಮ್ಮೆದುರು ಅವಕಾಶಗಳು ಸಾಲುಸಾಲಾಗಿ ಸಾಗಿ ಹೋಗುತ್ತಲೇ ಇರುತ್ತವೆ. ಅದ್ಯಾವುದನ್ನೂ ಕಣ್ಣೆತ್ತಿಯೂ ನೋಡುವುದೇ ಇಲ್ಲ. ಅವಕಾಶಗಳೆಂದರೆ ನಮ್ಮ ದೃಷ್ಟಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ಇರಬೇಕು. ಹೀಗಾಗಿ ಹತ್ತು ಪೈಸೆ ನಮಗೆ ಅತಿ ಸಣ್ಣ ಮೊತ್ತ ಎಂದೆನಿಸುತ್ತದೆ. ಒಂದು ಪುಟ್ಟ ಸಸಿ ನಿಷ್ಪ್ರಯೋಜಕ ಅನಿಸುತ್ತದೆ. ಹೋಟೆಲ್ ಸರ್ವರ್ ಹುದ್ದೆ ತೀರಾ ನಿಕೃಷ್ಟವಾಗಿ ಕಾಣುತ್ತದೆ.  ಇಂಥ ಪುಟ್ಟ ಪುಟ್ಟ ಅವಕಾಶಗಳೇ ನಮ್ಮ ಪ್ರಯತ್ನದೊಂದಿಗೆ ಬೃಹತ್ ಫಲವನ್ನು ನೀಡುತ್ತವೆ ಎಂಬುದನ್ನು ಅರಿಯುವುದೇ ಇಲ್ಲ. ಸರ್ವರ್ ಮಾತ್ರವೇ ಹೋಟೆಲ್‌ನ ಎಲ್ಲ ಅಂಶಗಳನ್ನೂ ಸೂಕ್ಷ್ಮವಾಗಿ ಅರಿತು ಮುಂದೆ ಸಮರ್ಥ ಹೋಟೆಲಿಯರ್ ಆಗಬಲ್ಲವನಾಗುತ್ತಾನೆ ಎಂಬ ಪರಿಜ್ಞಾನವನ್ನು ನಾವು ಮೂಡಿಸಿಕೊಳ್ಳುವುದೇ ಇಲ್ಲ. ಪ್ರಯತ್ನದ ಬೀಜವೇ ಮುಂದೆ ಯಶಸ್ಸಿನ ಫಲವನ್ನು ಕೊಡುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಜೀವನದಲ್ಲಿ ಯಾವುದನ್ನೂ ಲಘುವಾಗಿ ಪರಿಗಣಿಸುವುದನ್ನು ತಕ್ಷಣಕ್ಕೆ ನಿಲ್ಲಿಸಿ. ಬಂದದ್ದೆಲ್ಲವನ್ನೂ ಬಾಚಿಕೊಂಡು ಮುನ್ನುಗ್ಗಿ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement