ಬಾಲ್ಯದ ತುಂಟತನವೇ ಭವಿಷ್ಯದ ಧೀರತನ
ಬಾಲಕ ನರೇಂದ್ರನಲ್ಲಿ ಎರಡು ವಿಶೇಷ ಸ್ವಭಾವಗಳಿದ್ದವು. ಒಂದು ತುಂಟತನ, ಚಟುವಟಿಕೆ. ಇನ್ನೊಂದು ಕರುಣೆ. ಅವನ ಕರುಣೆಯ ಸ್ವಭಾವವೆನ್ನುವುದು ಬೆಳೆಯುತ್ತ ಬೆಳೆಯುತ್ತ ಪರಹಿತ, ಸಮಾಜಹಿತ, ರಾಷ್ಟ್ರಹಿತ ಕೊನೆಗೆ ಲೋಕಹಿತ ಸಾಧಿಸಲು ಕಾರಣವಾದರೆ, ಅವನ ತುಂಟತನದ ಸ್ವಭಾವವೆನ್ನುವುದು ಪ್ರಬಲ ಕ್ರಿಯಾತ್ಮಕ ಸಾಹಸವಾಗಿ ಪರಿಣಮಿಸಿ ಬೃಹತ್ಕಾರ್ಯಗಳನ್ನು ಸಾಧಿಸಲು ಕಾರಣವಾಯಿತು. ನರೇಂದ್ರ ಬಾಲ್ಯದಿಂದಲೂ ಧೀರತೆಯ ಮೂರ್ತಿ ಎನ್ನುವುದು ಈ ಘಟನೆಯಿಂದ ತಿಳಿಯುತ್ತದೆ.
ನರೇಂದ್ರನ ಮನೆಯ ಪಕ್ಕದ ಕಾಂಪೌಂಡಿನಲ್ಲಿ ಸಂಪಿಗೆ ಮರವಿತ್ತು. ಈ ಮರವೆಂದರೆ ನರೇಂದ್ರನಿಗೆ ತುಂಬಾ ಇಷ್ಟ. ಸ್ನೇಹಿತರೆಲ್ಲ ಸೇರಿ ಸಂಪಿಗೆ ಮರದ ಮೇಲೆ ಮರಕೋತಿ ಆಡುತ್ತಿದ್ದರು. ಆ ಮನೆಯಲ್ಲೊಬ್ಬ ತಾತಯ್ಯ ಇದ್ದರು. ಮಕ್ಕಳನ್ನು ಓಡಿಸಲು 'ಆ ಮರದಲ್ಲಿ ಬ್ರಹ್ಮರಾಕ್ಷಸ ಇದೆ. ನಿಮ್ಮ ಕತ್ತನ್ನು ಹಿಸುಕಿ ಹಾಕಿಬಿಡುತ್ತೆ' ಅಂತ ಹೆದರಿಸಿದ. ಉಳಿದ ಮಕ್ಕಳು ಇದನ್ನು ಕೇಳಿ ಹೆದರಿ ಅಲ್ಲಿಂದ ಓಟಕಿತ್ತರು. ಆದರೆ ನರೇಂದ್ರ ಮಾತ್ರ ಇದನ್ನು ನಂಬಲಿಲ್ಲ. 'ಬ್ರಹ್ಮರಾಕ್ಷಸ ಇದ್ದಿದ್ದರೆ ನಮ್ಮ ಕತ್ತು ಹಿಸುಕಿ ಎಷ್ಟೋ ದಿನಗಳಾಗಬೇಕಿತ್ತು. ಎಷ್ಟೋ ದಿನಗಳಿಂದ ಈ ಮರದ ಮೇಲೆ ನಾವು ಆಟವಾಡುತ್ತಿಲ್ಲವೇ?' ಎಂದು ಸ್ನೇಹಿತರಿಗೆ ಧೈರ್ಯ ಹೇಳಿದ.
'ಒಂದು ವಿಷಯವನ್ನು ಯಾವುದೋ ಒಂದು ಪುಸ್ತಕದಲ್ಲಿ ಬರೆದಿದೆ, ಇಲ್ಲವೇ ಯಾವನೋ ಒಬ್ಬ ವ್ಯಕ್ತಿ ಹಾಗೆಂದು ಹೇಳಿದ ಎಂಬಷ್ಟೇ ಕಾರಣಕ್ಕಾಗಿ ನಂಬಬೇಡಿ. ಅದರ ನಿಜತ್ವವನ್ನು ನೀವೇ ಕಂಡುಕೊಳ್ಳಿ, ಸತ್ಯ ಸಾಕ್ಷಾತ್ಕಾರವೆಂದರೆ ಅದೇ'.
-ಆನಂದ ಎಸ್.ಎನ್.