ಮನೆ ಶಿಫ್ಟಿಂಗ್!
ಅದು ಮೊಬೈಲ್ ಮನೆ. ನಿನ್ನೆ ಒಂದು ಏರಿಯಾದಲ್ಲಿದ್ದರೆ, ಮರುದಿನ ನಾಪತ್ತೆ! ಇನ್ನೊಂದು ಏರಿಯಾದಲ್ಲಿ ಚಲಿಸುತ್ತಿರುತ್ತದೆ!
ಅರೆ, ಮನೆ ಚಲಿಸುತ್ತದೆಯೇ!? ಹೌದು, ಚೀನಾದಲ್ಲೊಂದು ಓಡಾಡುವ ಮನೆಯುಂಟು. ಲಿಯು ಲಿಂಗ್ಚಾವೋ ಎಂಬವನ ಮನೆ. ವಿಳಾಸವೇ ಇಲ್ಲದ ವಿಶ್ವದ ಏಕೈಕ ಮನೆ. ದೇಶದ ನೂರಮೂವತ್ತೈದು ಕೋಟಿ ಜನಸಂಖ್ಯೆ ಮಧ್ಯೆ ಲಿಯು ಒಬ್ಬ ಅಲೆಮಾರಿ. ಆದರೂ, ಸ್ವಂತ ಸೂರಿಲ್ಲ ಎಂಬ ಬೇಜಾರನ್ನು ಡಿಫರೆಂಟಾಗಿ ಹೊಡೆದೋಡಿಸಿದ್ದಾನೆ. ಬೀದಿಯಲ್ಲಿ ಬಿದ್ದ ಪ್ಲಾಸ್ಟಿಕ್ ಪದಾರ್ಥಗಳನ್ನು ಹೆಕ್ಕಿ, ಕಾಡಲ್ಲಿ ಮೂರ್ನಾಲ್ಕು ಬಿದಿರಿನ ಗಳ ತಂದು ಮನೆ ಕಟ್ಟಿದ್ದಾನೆ. ಪ್ಲಾಸ್ಟಿಕ್ ಕವರಿನ ಚಾವಣಿ ಎಂಥ ಟೆರೇಸ್ ಮನೆಗೂ ಗಟ್ಟಿಯಿದೆ. ಒಟ್ಟಾರೆ ಮನೆಯ ತೂಕ ಕೇವಲ 60 ಕಿಲೋಗ್ರಾಂ! ಒಂದೇ ಸ್ಥಳದಲ್ಲಿದ್ದರೆ ಸರ್ಕಾರ ಟ್ಯಾಕ್ಸ್ ಜಡಿಯುತ್ತದೆ. ತಿನ್ನಲು ನೆಟ್ಟಗೆ ಬ್ರೆಡ್ಡಿಲ್ಲ, ಇನ್ನು ಟ್ಯಾಕ್ಸಾ? ಹೀಗಾಗಿ, ಲಿಯು ತಾನು ಹೋದಲ್ಲೆಲ್ಲ ಈ ಮನೆಯನ್ನು ಹೊತ್ತೊಯ್ಯುತ್ತಾನೆ. ಐದು ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿರುವ ಲಿಯು, ಭರ್ಜರಿ ಗಾಳಿ- ಮಳೆಯನ್ನೂ ಎದುರಿಸಿದ್ದಾನೆ. ಈ ಮನೆ 270 ಮೈಲಿ ಕ್ರಮಿಸಿದೆ. ಲಿಯು ಬದುಕಿರುವ ತನಕವೂ ಚಲಿಸುತ್ತಲೇ ಇರುತ್ತದೆ!
-ಮಿಲೀ