ಸ್ವಯಂಪ್ರಕಾಶ
ವಾಹನ ನಡುದಾರಿಯಲ್ಲಿ ಕೆಟ್ಟು ನಿಂತರೆ? ಬೆಂಗಳೂರಿನಲ್ಲಿ ಕರೆದಾಗ ಮೆಕ್ಯಾನಿಕ್ ಕಳಿಸಿಕೊಡುವ ಏಜೆನ್ಸಿಗಳಿವೆ. ಆದರೆ ಶಿಗ್ಗಾಂವಿಯಂತಹ ಪುಟ್ಟ ಪಟ್ಟಣದಲ್ಲಿ? ಚಿಂತೆ ಬೇಡ. ಈ ವ್ಯಕ್ತಿಯ ಮೊಬೈಲ್ಗೆ ಕರೆ ಮಾಡಿದರೆ ಸಾಕು, ಬಂದು, ದುರಸ್ತಿ ಮಾಡಿ ಕೊಡುತ್ತಾರೆ.
ಈ ಆಪದ್ಬಾಂಧವನ ಹೆಸರು ಪ್ರಕಾಶ ವಾಲ್ಮೀಕಿ. ಹೆದ್ದಾರಿಯಲ್ಲಿ ವಾಹನಗಳ ಟೈರ್ ಬರ್ಸ್ಟ್ ಆದರೆ, ಪಂಕ್ಚರ್ ಆದರೆ ತಕ್ಷಣ ಬಂದು ರಿಪೇರಿ ಮಾಡುವ ಸಮಾಜ ಸೇವೆಯಲ್ಲಿ ತೊಡಗಿದ್ದಾನೆ ಈ ಯುವಕ.
ಹೆದ್ದಾರಿ ಮಧ್ಯೆ, ಹಳ್ಳಿ ರಸ್ತೆಗಳಲ್ಲಿ ಹಾಗೂ ರಾತ್ರಿ ವೇಳೆ ಪಂಕ್ಚರ್ ಅಂಗಡಿ ಹುಡುಕುತ್ತಾ ಹೋಗಲು ಸಾಧ್ಯವೆ? ಇಂಥ ಸ್ಥಿತಿಯಲ್ಲಿ ಒಂದೇ ಒಂದು ಕರೆಗೆ ಸ್ಪಂದಿಸುವ ಮಾನವೀಯ ಮನಸ್ಸು ಶಿಗ್ಗಾಂವಿ ಪಟ್ಟಣದಲ್ಲಿದೆ.
ಓದಿದ್ದು ಮೆಟ್ರಿಕ್
ಶಿಗ್ಗಾಂವಿ ತಾಲೂಕು ಗಂಜಿಗಟ್ಟಿ ಗ್ರಾಮದ ನಿಂಗಪ್ಪ ಓಲೇಕಾರ ಅವರ ಪುತ್ರ ಪ್ರಕಾಶ ಓದಿದ್ದು ಮೆಟ್ರಿಕ್. ಪ್ರಕಾಶ್ನ ತಂದೆ ಗ್ರಾಮಸೇವಕನಾಗಿ ಓಲೇಕಾರಕಿ ಕೆಲಸ ಮಾಡುತ್ತಿದ್ದಾರೆ. ಪ್ರಕಾಶ್ ನಿರುದ್ಯೋಗ ಸಮಸ್ಯೆ ಬಗ್ಗೆ ದೂರುತ್ತ ಕುಳಿತುಕೊಳ್ಳದೆ ಈ ಸೇವೆಯಲ್ಲಿ ತೊಡಗಿದ್ದಾರೆ.
ನಾವು ಮೂವರು ಅಣ್ಣ-ತಮ್ಮಂದಿರು. ನಮ್ಮ ಮಾವ ನಾಗರಾಜ ವಾಲ್ಮೀಕಿ ಅಂಗಡಿ ನಡೆಸುತ್ತಿದ್ದು, ಅವರೇ ನಮಗೆ ಮಾರ್ಗದರ್ಶಕರು. ಒಬ್ಬ ಸಹೋದರ ಕೃಷಿ, ಇನ್ನೊಬ್ಬ ಮೆಟ್ರಿಕ್. ನಾನು ನಿತ್ಯ ರು. 500ರಿಂದ 700 ದುಡಿಯುತ್ತೇನೆ. ರಿಕ್ಷಾ ಇಂಧನದ ಖರ್ಚು ತೆಗೆದು ಸ್ವಲ್ಪ ದುಡ್ಡು ಉಳಿಯುತ್ತದೆ. ಎಲ್ಲಿಯೂ ಸಾಲ ಮಾಡಿಲ್ಲಾರಿ. ಯಾರಾದ್ರೂ ಅರ್ಜೆಂಟಾಗಿ ಕರೆ ಮಾಡಿದ್ರೆ, ರಾತ್ರಿ ವೇಳೆ ಹೋಗಿ ವಾಹನ ರಿಪೇರಿ ಮಾಡಿ ಬರುತ್ತೇವೆ. ಒಂದು ಟಂಟಂ ವಾಹನ. ಅದರಲ್ಲಿ ಪಂಚರ್ ತಿದ್ದುವ ಸಲಕರಣೆ, ಗಾಳಿ ಹೊಡೆಯುವ ಯಂತ್ರ ಇಟ್ಟುಕೊಳ್ಳುತ್ತೇವೆ. ಮನೆಯಿಂದಲೇ ಬುತ್ತಿ ಡಬ್ಬಾ ಕಟ್ಟಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಪ್ರಕಾಶ್. ಕೆಲಸವಿಲ್ಲದೆ ಅಡ್ಡಾಡುತ್ತ ವೇಳೆ ವ್ಯಯಿಸುವ ಯುವಕರಿಗೆ ಪ್ರಕಾಶ್ ಮಾದರಿಯಲ್ವೆ? ಶಿಗ್ಗಾಂವಿ ಆಸುಪಾಸಿನಲ್ಲಿ ನಿಮ್ಮ ವಾಹನ ಕೆಟ್ಟು ನಿಂತರೆ ಕರೆ ಮಾಡಿ: ಪ್ರಕಾಶ ವಾಲ್ಮೀಕಿ: 9663010981, ನಾಗರಾಜ ವಾಲ್ಮೀಕಿ: 9945413719.
-ಬಿ.ಎಸ್. ಹಿರೇಮಠ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.