ಹ್ಯಾಂಡ್ಲರ್‌ಗಳಿಗೆ ಪೀಕಲಾಟ
ನಾಯಿ ಬಾಲ... ಎಂಬ ಗಾದೆ ಮಾತಿದೆ. ಅದಕ್ಕೆ ನಿಮ್ಮ ಮನೆಯ ಶ್ವಾನವೂ ಹೊರತಲ್ಲ.
ಆದರೆ, ಪೊಲೀಸ್ ಶ್ವಾನಗಳು ಹಾಗೆ ಇರುವುದಿಲ್ಲ. ಅವುಗಳು ಪೊಲೀಸರಂತೆ ಶಿಸ್ತಿನ ಸಿಪಾಯಿಗಳಾಗಿರುತ್ತವೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಸಾಕಷ್ಟು ಬಾರಿ ಈ ಶ್ವಾನಗಳು ಹ್ಯಾಂಡ್ಲರ್‌ಗಳಿಗೆ ಪೀಕಲಾಟ ತಂದಿಟ್ಟಿವೆ.
ಅದಕ್ಕೆ ಕಾರಣ ಇಷ್ಟೇ, ಪೊಲೀಸ್ ಶ್ವಾನದಳ ವಿಭಾಗದಲ್ಲಿ ಕೇವಲ ಗಂಡು ಶ್ವಾನಗಳು ಮಾತ್ರ ಕರ್ತವ್ಯ ನಿರ್ವಹಿಸುವುದಿಲ್ಲ. ಬದಲಾಗಿ ಹೆಣ್ಣು ಶ್ವಾನಗಳು ಇರುತ್ತವೆ. ಇದು ಪೊಲೀಸರಿಗೆ ಒಂದು ರೀತಿಯ ಸಂಕಷ್ಟ ಎನ್ನಬಹುದು.
ವಿಜ್ಞಾನವೇ ಹೇಳುವಂತೆ ಅನ್‌ಲೈಕ್ ಪೋಲ್ಸ್ ಅಟ್ರಾಕ್ಟ್ ಎಂಬ ಸಿದ್ಧಾಂತ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪೊಲೀಸರು ಒಮ್ಮೆ ಆದೇಶ ಕೊಟ್ಟರೆ ಮುಗಿಯಿತು, ಅಲ್ಲಿ ಕರ್ತವ್ಯ ನಿರ್ವಹಿಸುವ ಶ್ವಾನಗಳು ತಮ್ಮ ಹ್ಯಾಂಡ್ಲರ್ ಆದೇಶ ಪಾಲಿಸಬೇಕು.
ಆದರೆ, ಇಲ್ಲಿ ಕೆಲವು ಗಂಡು ಶ್ವಾನಗಳಿಗೆ ಎಷ್ಟೇ ತರಬೇತಿ ನೀಡಿದರೂ ಪ್ರಯೋಜನವಿಲ್ಲ. ಹೆಣ್ಣು ಶ್ವಾನ ಕಂಡ ಕೂಡಲೇ ಬಾಲ ಅಲ್ಲಾಡಿಸುತ್ತಾ ಹೋಗುತ್ತವೆ. ಸಾಕಷ್ಟು ಬಾರಿ ಹೇಳಿದ ಮಾತನ್ನೇ ಕೇಳುವುದಿಲ್ಲ. ಎಲ್ಲಾ ದಿನಗಳಲ್ಲೂ ಈ ರೀತಿಯ ವರ್ತನೆ ಇರುವುದಿಲ್ಲ. ಡಿಸೆಂಬರ್, ಜನವರಿ, ಫೆಬ್ರವರಿ, ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಶ್ವಾನಗಳ ವರ್ತನೆ ಕೊಂಚ ಭಿನ್ನವಾಗಿರುತ್ತದೆ.
ಇದು ಶ್ವಾನದಳದ ಕೇಂದ್ರದ ಒಳಭಾಗದಲ್ಲಿ ಆಗಿದ್ದರೆ ತೊಂದರೆಯಿಲ್ಲ. ಕರ್ತವ್ಯಕ್ಕೆ ಹೋಗುವಾಗಲೂ ಕೆಲವೊಮ್ಮೆ ತಮ್ಮ ಬಾಲ ಬಿಚ್ಚುತ್ತವೆ ಇದರಿಂದ ಹ್ಯಾಂಡ್ಲರ್‌ಗಳಿಗೆ ಕಷ್ಟವಾಗುತ್ತದೆ. ಆದರೆ, ಹೆಣ್ಣು ಶ್ವಾನಗಳು ಹಾಗಲ್ಲ. ಹ್ಯಾಂಡ್ಲರ್ ಮಾತನ್ನು ತಪ್ಪದೆ ಪಾಲಿಸುತ್ತವೆ. ಶಿಸ್ತಿನ ವಿಚಾರದಲ್ಲೂ ಪಕ್ಕಾ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
-ಶಾಂತ ತಮ್ಮಯ್ಯ