ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮನಸೌತೆ

Lingaraj Badiger
Updated On : 29 May 2013, 12:27 pm

ಬಾಯಾರಿಕೆಯಾಯ್ತೆ? ಸೌತೆಕಾಯಿ ತಿನ್ನಿ. ಹಸಿವಾಯ್ತೆ? ಸೌತೆಕಾಯಿ ತಿನ್ನಿ. ಊಟಕ್ಕೆ ಸ್ಟಾರ್ಟರ್ ಬೇಕೆ? ಸೌತೆಕಾಯಿ ತಿನ್ನಿ. ಕಣ್ಣಿನ ಕಪ್ಪು ವರ್ತುಲವೆ? ಸೌತೆಕಾಯಿ ಹೆಚ್ಚಿ ಮಡಗಿ.
ಸೌತೇಕಾಯಿ ಎಂಬ ಜನಪ್ರಿಯ ತರಕಾರಿ, ಬೇಸಿಗೆಯಲ್ಲಂತೂ ಎಲ್ಲರಿಗೂ ಬೇಕೇ ಬೇಕು. ಇದರಲ್ಲಿ ನೀರಿನಂಶ ಶೇಕಡಾ 96.3ರಷ್ಟಿರುತ್ತದೆ. ಇದು ಕಡು ಬಡವರ ದಾಹ ಹಿಂಗಿಸುವ ತರಕಾರಿಯೂ ಹೌದು; ಎಲ್ಲರಿಗೂ ಬೇಕಾದ ಔಷಧಿಯ ಗುಣಗಳ ಭಂಡಾರವೂ ಹೌದು.
ದೇಹವನ್ನು ಬಿಸುಪಿನಿಂದ ತಣ್ಣಗಾಗಿಸುವ ಗುಣ ಇದಕ್ಕಿದೆ. ಉಷ್ಣ ಪ್ರಕೃತಿಯವರಿಗೆ ಇದರ ಸೇವನೆ ಉತ್ತಮ. ಇದರ ಬೀಜಗಳು ಶೈತ್ಯ ಮತ್ತು ಮೂತ್ರವರ್ಧಕ ಗುಣ ಹೊಂದಿವೆ. ಮೂತ್ರ ವಿಸರ್ಜನಾ ಅಂಗವ್ಯೂಹದ ಆರೋಗ್ಯ ಸಮಸ್ಯೆಗಳಿಗೆ ಸೌತೇಕಾಯಿ ಉತ್ತಮ ಔಷಧ. ಡಯಲರ್ಸ್‌ಗೆ ಇದು ಪ್ರಕೃತಿ ನೀಡಿದ ದೇಣಿಗೆ. ಏಕೆಂದರೆ 100 ಗ್ರಾಂ ಸೌತೇಕಾಯಿಯನ್ನು ನೀವು ತಿಂದರೆ ಕೇವಲ 13 ಕೆಲೊರಿ ಪ್ರಮಾಣದ ಆಹಾರ ಸೇವಿಸಿದಂತೆ. ಹಸಿದಾಗ ಇದು ಹಸಿವು ಇಂಗಿಸುವುದರ ಜೊತೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಕೋಸಂಬರಿ ಮತ್ತು ಇತರೆ ಸೈಡ್‌ಡಿಶ್‌ಗಳಲ್ಲಿ ಇದನ್ನು ಬಳಸದಿದ್ದರೆ ಆ ತಿನಿಸುಗಳೇ ರುಚಿಸುವುದಿಲ್ಲ.

ಪೌಷ್ಟಿಕಾಂಶ ಮೌಲ್ಯ
ಬೇರೆ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚಿನ ಖನಿಜಗಳಿವೆ. ಪ್ರತ್ಯಾಮ್ಲೀಯ ಖನಿಜಗಳು ಶೇಕಡಾ 64.05ರಷ್ಟಿದ್ದರೆ ಆಮ್ಲೀಯ ಖನಿಜಗಳು ಶೇಕಡಾ 35.95ರಷ್ಟಿರುತ್ತವೆ. ಹಾಗಾಗಿ ರಕ್ತದಲ್ಲಿ ಇದು ಪ್ರತ್ಯಾಮ್ಲೀಯತೆಯನ್ನುಂಟುಮಾಡುತ್ತಿರುತ್ತದೆ.
ಸೌತೇಕಾಯಿಯನ್ನು ಹಸಿಯಾಗಿ, ಸಿಪ್ಪೆ ತೆಗೆಯದೆ, ಬೀಜಸಹಿತ, ಉಪ್ಪು ಹಾಕದೆ ತಿಂದರೆ ಅಗತ್ಯ ಖನಿಜಗಳು ನಮ್ಮ ದೇಹಕ್ಕೆ ಲಭ್ಯವಾದಂತೆಯೇ. ಸಿಪ್ಪೆ ಸಹಿತ ತಿನ್ನುವುದು ಮಲಬದ್ಧತೆ ನಿವಾರಣೆಗೆ ಸಹಕಾರಿ. ಹೋಳು ಮಾಡಿಯೋ ಬಿಲ್ಲೆ ಮಾಡಿಯೋ ಸ್ವಾದಕ್ಕೋಸ್ಕರ ಅತ್ಯಲ್ಪ ಪ್ರಮಾಣದಲ್ಲಿ ಉಪ್ಪು ಹಾಗೂ ಮೆಣಸಿನ ಪುಡಿ ಸವರಿ ಬಳಸಬಹುದು. ಇವುಗಳ ಮೇಲೆ ನಿಂಬೆಹಣ್ಣಿನ ರಸ ಸಿಂಪಡಿಸಬಹುದು. ಇದನ್ನು ಸ್ವಾಭಾವಿಕ ಸ್ಥಿತಿಯಲ್ಲಿಯೇ ಬಳಸಿದರೆ ಇದರಲ್ಲಿರುವ ಇರೆಸ್ಪಿನ್ ಎಂಬ ಎನ್‌ಜೈಮ್ ಪರಂಗಿ ಹಣ್ಣಿನಂತೆ ಆಹಾರದಲ್ಲಿನ ಪ್ರೊಟೀನ್ ಅಂಶವನ್ನು ಚೆನ್ನಾಗಿ ಜೀರ್ಣಗೊಳಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ಏನೋ ಪ್ರೊಟೀನ್ ಅಂಶ ಜಾಸ್ತಿಯಿರುವ ಮಾಂಸದಡುಗೆಯಲ್ಲಿ ಸೌತೇಕಾಯಿಯನ್ನು ವಿವಿಧ ರೂಪದಲ್ಲಿ ಸೇರಿಸುತ್ತಿರುತ್ತಾರೆ.
ಅತಿ ಆಮ್ಲೀಯತೆ, ಗ್ಯಾಸ್ಟ್ರಿಕ್ ಮತ್ತು ಡಯೋಡನಾಲ್ ಅಲ್ಸರ್ ರೋಗಗಳಿಗೆ ಚಿಕಿತ್ಸೆ ನೀಡಲು ಸೌತೇಕಾಯಿ ರಸ ಒಳ್ಳೆಯದು. ಸಂಧಿವಾತ, ಗೌಟ್ ರೋಗ (ಮುಖ್ಯವಾಗಿ ಕಾಲಿನ ಹೆಬ್ಬೆಟ್ಟು ಊದಿ, ಕೀಲುಗಳಲ್ಲಿ ಸೀಮೆ ಸುಣ್ಣದಂಥ ಉಂಡೆಗಳು ರೂಪುಗೊಂಡು ಥಟ್ಟನೆ ಕೆರಳುವ ರೋಗ) ಮುಂತಾದ ಕೀಲೂತದ ಸ್ಥಿತಿಗಳಲ್ಲಿ ಸೌತೇಕಾಯಿ, ಕ್ಯಾರೆಟ್ ಮತ್ತು ಆಜ್ಮೋದ (ಗುಡ್ಡೇಸೋಂಪು) ರಸಗಳ ಮಿಶ್ರಣವನ್ನು ಬಳಸಿದರೆ ಅನುಕೂಲಕರ ಪರಿಣಾಮ ಉಂಟಾಗುತ್ತದೆ.

ಸೌಂದರ್ಯ ಸಹಾಯಕ
ಇದೊಂದು ಅತ್ಯುತ್ತಮ ಸೌಂದರ್ಯ ಸಹಾಯಕ ತರಕಾರಿಯೂ ಹೌದು. ತಾಜಾ ಸೌತೇಕಾಯಿಯ ರಸವನ್ನು ಹಾಗೇ ಅಥವಾ ತಾಜಾ ಮಜ್ಜಿಗೆಯೊಡನೆ ಬೆರೆಸಿ ಚರ್ಮವನ್ನು ಬ್ಲೀಚ್ ಮಾಡಲು ಬಳಸಲಾಗುತ್ತಿದೆ. ಅಂತೆಯೇ ತುರಿದ ಸೌತೇಕಾಯಿಯನ್ನು ಮುಖದ ಮೇಲಿನ ಮೊಡವೆ, ಬ್ಲಾಕ್ ಹೆಡ್ಸ್, ಸುಕ್ಕು ಗೆರೆಗಳು ಮತ್ತು ಶುಷ್ಕ ಚರ್ಮ ವಾಸಿಮಾಡಲು ಬಳಸಲಾಗುತ್ತದೆ. ಇದರಲ್ಲಿನ ಸಿಲಿಕಾನ್ ಮತ್ತು ಗಂಧಕದ ಅಂಶಗಳು ಕೂದಲು ಬೆಳೆಯುವುದನ್ನು ವೃದ್ಧಿಸುತ್ತವೆ. ಅದರಲ್ಲೂ ಪಾಲಕ್ ರಸದೊಡನೆ ಬೆರೆಸಿ ಬಳಸಿದರೆ ಇದು ಹೆಚ್ಚು ಕ್ರಿಯಾಶೀಲ. ಒಡೆದ ಕೈಗಳು, ಕೆರಳಿಕೆಗಳು ಮತ್ತು ಒರಟು ಚರ್ಮಗಳಿಗೆ ಸೌತೇಕಾಯಿ ಜೆಲ್ಲಿಯನ್ನು ಬಳಸಲಾಗುತ್ತದೆ. ಬಳಲಿದ ಕಣ್ಣುಗಳಿಗೆ ನೆಮ್ಮದಿ ನೀಡಲು, ಕಣ್ಣು ಸುತ್ತಲಿನ ಕಪ್ಪು ಕಲೆ ನಿವಾರಿಸಲು ಸೌತೇಕಾಯಿ ಬಿಲ್ಲೆಗಳನ್ನು ಮುಚ್ಚಿದ ಕಣ್ಣಿನ ಮೇಲೆ ಇರಿಸಿಕೊಂಡು ಮಲಗುವ ಮಹಿಳೆಯರನ್ನು ನೀವು ನೋಡೇ ಇರುತ್ತೀರಿ. ಅನೇಕ ಸೌಂದರ್ಯ ಪ್ರಸಾಧನ ವಸ್ತುಗಳ ಮೇಲೆ ಸೌತೇಕಾಯಿಯ ಚಿತ್ರ ಇರುವುದನ್ನೂ ಕಂಡಿರುತ್ತೀರಿ.

-ಎಸ್.ವಿಶ್ವನಾಥ್ ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments