'ಸವಾಲಿನ ಪರೀಕ್ಷೆ'ಗೆ ಸಿದ್ಧರಾಗಿ!
ಫುಡ್ ಅಲರ್ಜಿಗೆ ಕಾರಣ ಮತ್ತು ಅದು ಉಂಟುಮಾಡಬಹುದಾದ ಆರೋಗ್ಯ ತೊಂದರೆಗಳ ಬಗ್ಗೆ ವಿವರವಾಗಿ ತಿಳಿದುಕೊಂಡಿದ್ದಾಯ್ತು. ಆದರೆ ಯಾವ ಆಹಾರ ನಮಗೆ ಒಗ್ಗುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ? ತೊಂದರೆ ಉಂಟುಮಾಡುವ ಆಹಾರ ವರ್ಜಿಸಿದರೆ ಆರೋಗ್ಯವನ್ನು ಇನ್ನಷ್ಟು ಚೆನ್ನಾಗಿಟ್ಟುಕೊಳ್ಳಬಹುದಲ್ಲವೆ? ಇದು ಕೆಲವರ ಪ್ರಶ್ನೆ. ನಮ್ಮ ದೇಹಪ್ರಕೃತಿಗೆ ಆಗಿಬರದ ಆಹಾರಗಳನ್ನು ಪತ್ತೆ ಮಾಡುವುದು ಕಷ್ಟವೇನಲ್ಲ. ಆದರೆ ಏಕಾಏಕಿ ಕಂಡುಹಿಡಿಯುವುದೂ ಸಾಧ್ಯವಿಲ್ಲ. ಇದಕ್ಕೆ ಕನಿಷ್ಠ ಮೂರ್ನಾಲ್ಕು ವಾರದವರೆಗಾದರೂ ಕಾಯುವ ತಾಳ್ಮೆ ಬೇಕು.
ಮೊದಲು ನಿಮಗೆ ಸಂದೇಹ ಇರುವ ಆಹಾರಗಳ ಪಟ್ಟಿ ಮಾಡಿಕೊಳ್ಳಿ. ಉದಾಹರಣೆಗೆ, ಗೋಧಿ, ಗೋಧಿ ಹಿಟ್ಟು ಮತ್ತು ಅವನ್ನು ಬಳಸಿ ಸಿದ್ಧಪಡಿಸಿದ ಬ್ರೆಡ್ ಇತ್ಯಾದಿಗಳು, ಹಾಲಿನ ಉತ್ಪನ್ನಗಳು, ಜೋಳ... ನೆನಪಿರಲಿ. ಸಂಸ್ಕರಿತ ಆಹಾರಗಳಲ್ಲಿ ಇವುಗಳ ಬಳಕೆ ಹೆಚ್ಚು ಮತ್ತು ಅವುಗಳಿಂದಲೇ ತೊಂದರೆಯಾಗುವ ಸಾಧ್ಯತೆಯೂ ಅಧಿಕ. ಒಂದು ವಾರ ಅವುಗಳಿಂದ ದೂರವಿರಿ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಸ್ಥಿತಿಗತಿಯನ್ನು ನಿಯಮಿತವಾಗಿ ದಾಖಲಿಸಿಟ್ಟುಕೊಳ್ಳಿ. ನಿಮಗೆ ತಲೆನೋವು ಹೆಚ್ಚು ಬರುತ್ತಿದ್ದರೆ, ಸಂಧಿವಾತವಿದ್ದರೆ, ಪದೇಪದೆ ಅತಿಸಾರಕ್ಕೆ ತುತ್ತಾಗುತ್ತಿದ್ದರೆ ಅಥವಾ ಆಗಾಗ ಕಾಣಿಸಿಕೊಳ್ಳುವ ಆರೋಗ್ಯ ತೊಂದರೆಗಳಿದ್ದರೆ ಅವನ್ನು ಪಟ್ಟಿ ಮಾಡಿಟ್ಟುಕೊಳ್ಳಿ. ಸಂಶಯಾಸ್ಪದ ಆಹಾರಗಳನ್ನು ವರ್ಜಿಸಿದಾಗ ಈ ತೊಂದರೆಗಳು ಕಾಣಿಸಿಕೊಂಡಿದ್ದವೆ? ಕಾಣಿಸಿಕೊಂಡಿದ್ದರೂ ಅದರ ತೀವ್ರತೆ ಹಿಂದಿಗಿಂತ ಕಡಿಮೆ ಇತ್ತೇ ಇಲ್ಲವೇ ದಾಖಲಿಸಿಕೊಳ್ಳಿ. ಈಗ ನಿಮಗೆ ಒಂದು ಹಂತದಲ್ಲಿ ಯಾವ ಆಹಾರಗಳು ಒಗ್ಗುವುದಿಲ್ಲ ಎನ್ನುವುದರ ಚಿತ್ರಣ ಸಿಗುತ್ತದೆ.
ಇಷ್ಟಕ್ಕೇ ಮುಗಿಯುವುದಿಲ್ಲ ಸ್ವಯಂ ಪರೀಕ್ಷೆ. ಮುಂದಿನ ಹಂತ 'ಸವಾಲಿನ ಪರೀಕ್ಷೆ'. ಹೌದು. ತೊಂದರೆ ಉಂಟುಮಾಡುವ ಆಹಾರಕ್ಕೇ ಸವಾಲೆಸೆಯುವ ಪರೀಕ್ಷೆ. ಹಿಂದಿನ ವಾರ ಕೆಲವು ಪದಾರ್ಥಗಳನ್ನು ವರ್ಜಿಸಿದ್ದಿರಲ್ಲ. ಅವುಗಳಲ್ಲಿ ಒಂದೊಂದನ್ನೂ ವಿಪರೀತ ತಿನ್ನಿ. ದಿನಕ್ಕೆ ಎರಡೆರಡು ಸಲ ತಿಂದರೂ ಪರವಾಗಿಲ್ಲ. ಎರಡರಿಂದ ಮೂರು ದಿನಗಳವರೆಗೆ ಏನೂ ಅನ್ನಿಸುವುದಿಲ್ಲ. ತೊಂದರೆಯ ಲಕ್ಷಣಗಳು ಮರುಕಳಿಸುವುದು ಆ ಬಳಿಕವೇ. ಈಗ ಏನನ್ನು ತಿಂದಾಗ ತೊಂದರೆ ಮತ್ತೆ ಕಾಣಿಸಿಕೊಂಡಿದೆ ಎನ್ನುವುದನ್ನೂ ಬರೆದಿಟ್ಟುಕೊಳ್ಳಿ. ನಿಶ್ಚಿವಾಗಿಯೂ ನಿಮಗೆ ಅಲರ್ಜಿ ಯಾವ ಆಹಾರದಿಂದ ಉಂಟಾಗುತ್ತಿದೆ ಎನ್ನುವುದನ್ನು ಕಂಡುಕೊಳ್ಳಬಹುದು.
ಫುಡ್ ಅಲರ್ಜಿಯಾಗಿದೆ ಎನ್ನುವ ಸಂದೇಹ ಬಂದಾಗ, 'ಸವಾಲಿನ ಪರೀಕ್ಷೆ' ವೇಳೆ ತೀವ್ರ ಸ್ವರೂಪದ ಸಮಸ್ಯೆಯಾದರೆ ವೈದ್ಯರನ್ನು ಕಾಣಲು ಮರೆಯಬೇಡಿ. ಆದರೆ ಶಾಶ್ವತವಾಗಿ ಫುಡ್ ಅಲರ್ಜಿಯಿಂದ ದೂರವಿರಬೇಕು ಅಂತಾದರೆ ಅಲರ್ಜಿಗೆ ಕಾರಣವಾಗುವ ಆಹಾರವನ್ನು ನೀವೇ ಪತ್ತೆ ಮಾಡಿಕೊಂಡು ಅವುಗಳಿಂದ ದೂರವಿರುವುದೇ ಉತ್ತಮ ಉಪಾಯ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com