ಕಕಲಾತಿ
ವಿಧವೆ ರಂಗಮ್ಮ ಬೇರೆ ಮನೆಗಳಲ್ಲಿ ಕೆಲಸ ಮಾಡಿ ತನ್ನ ಒಬ್ಬನೇ ಮಗ ಕೃಷ್ಣನನ್ನು ವಿದ್ಯಾವಂತನನ್ನಾಗಿ ಮಾಡಿದಳು. ಕೃಷ್ಣನಾದರೋ ಚೆನ್ನಾಗಿ ಓದಿ ದೊಡ್ಡ ನೌಕರಿ ಮಾಡಿ ಸಂಸಾರಸ್ಥನಾದನು.
ರಂಗಮ್ಮ ಈಗ ಮುದುಕಿಯಾಗಿದ್ದಳು. ಆದರೂ ಪ್ರತಿ ದಿನ ಬೇಗನೇ ಎದ್ದು ಮನೆಗೆಲಸ ಮಾಡುತ್ತಿದ್ದಳು. ಅಂದು ಕೃಷ್ಣ ತನ್ನ ಗೆಳೆಯ ಗೋಪಿಗೆ ಮುಂಜಾನೆ ಏಳು ಗಂಟೆಗೇ ಬರಲು ಹೇಳಿದ್ದ. ಡಿಸೆಂಬರ್ ತಿಂಗಳ ಚಳಿ. ಕೃಷ್ಣ ತನ್ನ ಮೈಮೇಲೆ ಒಂದು ಶಾಲು ಹಾಕಿಕೊಂಡು ಸೋಫಾ ಮೇಲೆ ಗೆಳೆಯನ ದಾರಿ ಕಾಯುತ್ತಾ ಮಲಗಿದ್ದ. ಅಲ್ಲಿಯೇ ಸಣ್ಣ ನಿದ್ದೆ ಹತ್ತಿತು. ಆ ವೇಳೆಗೆ ಅಲ್ಲಿಗೆ ಬಂದ ರಂಗಮ್ಮ ಚಳಿಯಲ್ಲಿ ಮಗ ಮಲಗಿರುವುದನ್ನು ನೋಡಿದಳು. ತನ್ನ ಮೈಮೇಲಿನ ದುಪ್ಪಟಿ ತೆಗೆದು ಮಗನಿಗೆ ಹೊದಿಸಿ ಮನೆಗೆಲಸದಲ್ಲಿ ತಲ್ಲೀನಳಾದಳು. ಸ್ವಲ್ಪ ಹೊತ್ತಿನಲ್ಲೇ ಕೃಷ್ಣನ ಗೆಳೆಯ ಗೋಪಿ ಬಂದ. ಸ್ನೇಹಿತ ದುಪ್ಪಟಿ ಹೊದ್ದು ಮಲಗಿರುವುದನ್ನು ನೋಡಿ, 'ಇದೇನಿದು, ನೀನು ಹೊದ್ದುಕೊಂಡಿರುವುದು?' ಎಂದ. ಆಗ ಕೃಷ್ಣನಿಗೆ ತನ್ನ ಮೈಮೇಲೆ ದುಪ್ಪಟಿ ಇರುವುದರ ಅರಿವಾಯಿತು. ಕೃಷ್ಣ ಗೋಪಿಗೆ ಹೇಳಿದ 'ನಾನು ಮೊದಲು ಹೊದ್ದುಕೊಂಡದ್ದು ಶಕಲಾತಿ (ಶಾಲು), ಮೇಲಿನದು ಕಕಲಾತಿ (ತಾಯಿಯ ಅಂತಃಕರಣ)' ಎಂದು ಹೇಳಿದ. ಬಾಗಿಲ ಮರೆಯಲ್ಲಿ ನಿಂತಿದ್ದ ತಾಯಿಗೆ ಮಗನ ಬಗ್ಗೆ ಅಭಿಮಾನ ಮೂಡಿತು.
-ರುಕ್ಮಿಣಿ ಕೃ. ದೇಶಪಾಂಡೆ, ಗೋಕಾಕ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.