ಹಠ ಛಲವಾಗಿ ಬದಲಾಗಲಿ
ಇರಲೇಬೇಕು ಅಂಥದ್ದೊಂದು ಹಠ. ಅದಿಲ್ಲದಿದ್ದರೆ ಜೀವನದಲ್ಲಿ ಯಾವುದನ್ನೂ ಸಾಧಿಸಲಾಗುವುದಿಲ್ಲ. ಯಾರು ಹೇಳಿದರು ಹಠ ಒಳ್ಳೆಯದಲ್ಲ ಎಂದು? ಅದರಲ್ಲೂ, ಹೆಣ್ಣು ಮಕ್ಕಳಿಗೆ ಹಠ ಒಳ್ಳೆಯದಲ್ಲವೇ ಅಲ್ಲ. ಅದರಿಂದ ಅವರು ಜೀವನದಲ್ಲಿ ಸಾಕಷ್ಟು ನಷ್ಟ, ನೋವನ್ನು ಅನುಭವಿಸಬೇಕಾಗುತ್ತದೆ ಎಂಬ ಮಾತು ದಿನ ಬೆಳಗಾದರೆ ಕೇಳಿ ಬರುತ್ತಲೇ ಇರುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರಂತೂ ಹೆತ್ತವರಿಂದ ಇದು ನಿತ್ಯಪಾಠ. ಸೋಜಿಗವೆನಿಸುವುದು ಸ್ವಭಾವಕ್ಕೆ, ಅದರಿಂದಾಗುವ ಪರಿಣಾಮಕ್ಕೆ ಲಿಂಗಭೇದವೆಲ್ಲಿಯದು? ಅಸಲಿಗೆ ಇಂಥದಕ್ಕೆ ಭೇದವೆನ್ನುವುದೇ ಇರುವುದಿಲ್ಲ. ವಾಸ್ತವ ಏನೆಂದರೆ ಮಾಡಿದ ಹಠವನ್ನು ಸಾಧಿಸಿಕೊಳ್ಳುವ ಸಾಮರ್ಥ್ಯ ಬಹುತೇಕರಲ್ಲಿ ಇರುವುದಿಲ್ಲ. ಹೀಗಾಗಿ ಅದು ಸೂಕ್ತ ಪರಿಣಾಮವನ್ನು ಬೀರುವಲ್ಲಿ ವಿಫಲವಾಗುತ್ತದೆ. ಇಂಥದ್ದನ್ನೇ ಸಾರ್ವತ್ರಿಕಗೊಳಿಸಿ ಹಠ ಒಳ್ಳೆಯದಲ್ಲ, ಅದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಬಿಡುತ್ತಾರೆ. ಅದನ್ನೇ ಎಲ್ಲರಿಗೂ ಎಲ್ಲ ಸಂದರ್ಭದಲ್ಲಿಯೂ ಅನ್ವಯಗೊಳಿಸಲಾಗುವುದಿಲ್ಲ ಎಂಬುದು ಗಮನಾರ್ಹ. ಹೀಗೆ ಮಕ್ಕಳಲ್ಲಿರುವ ಹಠವನ್ನು ಹತ್ತಿಕ್ಕುವುದರಿಂದ ಅವರ ಬೆಳವಣಿಗೆಯ ವೇಗವನ್ನೂ ನಾವೇ ಸ್ವತಃ ನಿಯಂತ್ರಿಸಿದಂತಾಗುತ್ತದೆ. ಮಾತ್ರವಲ್ಲ, ಅವರು ಪ್ರತಿ ಸಂದರ್ಭದಲ್ಲೂ ಹಿಂಜರಿಯಲು ಆರಂಭಿಸುತ್ತಾರೆ. ಹಠಮಾರಿ ಸ್ವಭಾವ ಮಕ್ಕಳಿಗೆ ಜನ್ಮಜಾತವಾಗಿ ಬಂದಿರುತ್ತದೆ. ಆ ಕಾರಣಕ್ಕಾಗಿಯೇ ಮಕ್ಕಳು ರಚ್ಚೆ ಹಿಡಿದುಕುಳಿತುಕೊಳ್ಳುವುದು. ಅದು ಸಹಜ. ಇಂಥ ಸಂದರ್ಭಗಳಲ್ಲೆಲ್ಲ ನಮ್ಮಲ್ಲಿ ತಾಳ್ಮೆಯ ಕೊರತೆ ಇರುತ್ತದೆ. ಜತೆಗೆ ನಾವು ದೊಡ್ಡವರು, ಮಕ್ಕಳು, ನಾವು ಹೇಳಿದಂತೆಯೇ ಕೇಳಬೇಕು ಎಂಬ ಪ್ರತಿಷ್ಠೆ ಮತ್ತು ಅಹಮಿಕೆ ನಮ್ಮೊಳಗೆ ಜಾಗೃತವಾಗಿರುವುದರಿಂದ ಮಕ್ಕಳ ಅಂಥ ಸ್ವಭಾವವನ್ನು ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ಮಕ್ಕಳ ಪ್ರತಿಯೊಂದು ನಡೆಯನ್ನೂ ತಪ್ಪು ಎಂದು ಬಿಂಬಿಸಲು ಪ್ರಯತ್ನಿಸುವುದೇ ಈ ಕಾರಣಕ್ಕೆ. ನಿಜವಾಗಿ ನಾವು ಮಾಡಬೇಕಾದುದೆಂದರೆ ಅವರಲ್ಲಿನ ಸರಿ ಮತ್ತು ತಪ್ಪು ಕಾರಣಗಳಿಗಾಗಿನ ಹಠವನ್ನು ವಿಂಗಡಿಸಿ ತೋರಿಸಬೇಕು. ಹಠವನ್ನು, ಅದರ ಸಂದರ್ಭವನ್ನು ಪ್ರತ್ಯೇಕಿಸುವ ಜಾಣ್ಮೆ ನಮ್ಮದಾಗಬೇಕಿದೆ. ಒಳ್ಳೆಯ ಹಾದಿಯಲ್ಲಿ, ಸಾರ್ಥಕ ಉದ್ದೇಶಕ್ಕೆ ಹಠ ಸಾಗುವಂತೆ ನೋಡಿಕೊಳ್ಳಬೇಕಾದುದು ಅಗತ್ಯ. ಒಂದೊಮ್ಮೆ ಹಠ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದರೆ ಅದನ್ನು ಹತ್ತಿಕ್ಕುವ ಬದಲಿಗೆ ನಿರ್ಲಕ್ಷಿಸಿ. ಏನೂ ಆಗಿಯೇ ಇಲ್ಲವೆಂಬಂತೆ, ನಮ್ಮ ಗಮನಕ್ಕೆ ಬಂದೇ ಇಲ್ಲವೆಂಬಂತೆ ಸುಮ್ಮನಿದ್ದುಬಿಡಿ. ಆಗ ತಪ್ಪಿನ ಅರಿವು ತನ್ನಿಂದ ತಾನೇ ಆಗುತ್ತದೆ. ಉತ್ತಮ ಹಠ ಗೆಲ್ಲುತ್ತದೆ. ಅದು ಛಲವಾಗಿ ಪರಿವರ್ತನೆಯಾಗುತ್ತದೆ.
- ಸಹನೆ