ಆಕಾಶದೀಪವೂ ನೀನೆ!
ಆಕಾಶದೀಪವನ್ನು ಕಂಡಾಕ್ಷಣ ಕಣ್ಣಿಗೊಂದು ಹಿತಾನುಭವ. 'ಆಕಾಶದೀಪವು ನೀನೇ...ನಿನ್ನ ಕಂಡಾಗ ಸಂತೋಷವೇನೆ...' ಎಂಬ ಗುನುಗು. ದೀಪಾವಳಿ ಮತ್ತು ಕಾರ್ತಿಕ ಮಾಸವೆಂದರೆ ಎಲ್ಲೆಂದರಲ್ಲಿ ಝಗಮಗಿಸುವ ದೀಪಗಳದ್ದೇ ಭರಾಟೆ. ಮನೆ ಮನೆಯಲ್ಲೂ ಬೆಳಗುವ ಚೆಂದ ಚೆಂದದ ಗೂಡುದೀಪ ಅಥವಾ ಆಕಾಶದೀಪವೂ ಸಡಗರವನ್ನು ಇಮ್ಮಡಿಗೊಳಿಸುತ್ತದೆ.
ಹಿಂದೆ ಯಮದೀಪವಾಗಿತ್ತು!
ಆಕಾಶದೀಪಗಳ ಕುರಿತು ನಮ್ಮ ಪುರಾಣಗಳಲ್ಲೂ ಉಲ್ಲೇಖವಿದೆ. ಈಗಿನ ಆಕಾಶದೀಪ ಹಿಂದೆ ಯಮದೀಪ ಎಂದೇ ಕರೆಯಲ್ಪಡುತ್ತಿತ್ತು. ಇದಕ್ಕೂ ಕಾರಣವಿದೆ, ಪಿತೃಪಕ್ಷಕ್ಕೆಂದು ಭೂಲೋಕಕ್ಕೆ ಪಿತೃರು ಬಂದಿರುತ್ತಾರೆ. ಆಶ್ವೀಜ ಬಹುಳ ತ್ರಯೋದಶಿಯಂದು ಅವರು ಪುನಃ ಸ್ವರ್ಗಲೋಕಕ್ಕೆ ಮರಳುತ್ತಾರೆ. ಅವರನ್ನು ಕಳುಹಿಸಲು ಆಕಾಶ ಮಾರ್ಗದ ದಾರಿ ತೋರಿಸುವ ಉದ್ದೇಶದಿಂದ ಎತ್ತರದ ಕಂಬಗಳಲ್ಲಿ ದೀಪ ಇಡುವ ಪದ್ಧತಿ ಇತ್ತು. ಅದೇ ಮುಂದೆ ಆಕಾಶದೀಪವೆಂಬ ಹೆಸರು ಪಡೆಯಿತು. ಕರಾವಳಿಯ ಜಿಲ್ಲೆಗಳಲ್ಲಂತೂ ಪ್ರತಿವರ್ಷ ಗೂಡುದೀಪ ಸ್ಪರ್ಧೆಯೇ ಏರ್ಪಡುತ್ತದೆ. ಉಳ್ಳಾಲದ ತೊಕ್ಕೊಟ್ಟು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಉಡುಪಿ ಹೀಗೆ ವಿವಿಧೆಡೆ ಸ್ಪರ್ಧೆ ನಡೆಸಲಾಗುತ್ತಿದೆ.
ಹೇಗೆ ರಚನೆ?
ಆಕಾಶದೀಪವನ್ನು ಸಾಮಾನ್ಯವಾಗಿ ದಪ್ಪ ಬಣ್ಣದ ಕಾಗದ, ಬಟ್ಟೆ, ರಟ್ಟು, ಥರ್ಮಾಕೋಲ್‌ನಲ್ಲಿ ಮಾಡುವುದು ರೂಢಿ. ಸ್ಪರ್ಧೆಗಾಗಿ ರಚಿಸುವವರು ಇದಕ್ಕೆಂದೇ ವಾರಗಟ್ಟಲೆ ಶ್ರಮ ವಹಿಸಿ, ಬೇರೆ ಬೇರೆ ಪರಿಕರ ಬಳಸುವುದಿದೆ. ಮಂಗಳೂರು ಕೋಡಿಕಲ್‌ನ ಹೇಮಂತ್ ಪೂಜಾರಿ ಹಲವು ವರ್ಷಗಳಿಂದ ಬೇರೆ ಬೇರೆ ತರದ ಗೂಡುದೀಪ ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ, ಹಲವು ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಕಳೆದ 7-8 ವರ್ಷಗಳಿಂದ ಹೇಮಂತ್ ಗೂಡುದೀಪ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಕುದ್ರೋಳಿ, ತೊಕ್ಕೊಟ್ಟು, ಕಿನ್ನಿಗೋಳಿ, ಉಡುಪಿ, ಪೊಳಲಿ, ಉರ್ವಸ್ಟೋರ್, ಬಜಾಲ್ ಮೊದಲಾದೆಡೆ ಗೆದ್ದಿದ್ದಾರೆ.
ಚಿಕ್ಕಚಿಕ್ಕ ಅಲಂಕಾರಿಕ ಗಂಟೆ, ರಸ್ತೆ ಡಾಮರೀಕರಣಕ್ಕೆ ಬಳಸುವ ಸಣ್ಣ ಸಣ್ಣ ಜೆಲ್ಲಿಕಲ್ಲು, ಶೇಂಗಾ, ಕಡಲೆ ಮೊದಲಾದ ವಸ್ತು ಬಳಸಿ ಗೂಡುದೀಪ ಮಾಡುತ್ತಾರೆ. 2010ರಲ್ಲಿ ಸೋಡಾ ಗೋಲಿ ಬಳಸಿ ಗೂಡುದೀಪ ರಚಿಸಿದ್ದರು. ಸುಮಾರು 5800 ಗೋಲಿಯನ್ನು ನೆಲಕ್ಕೆ ಉಜ್ಜಿ ಅದಕ್ಕೆ ಫೆವಿಬಾಂಡ್ ಬಳಸಿ ಆಕರ್ಷಕ ಗೂಡುದೀಪ ನಿರ್ಮಿಸಿದ್ದರು. ಮುಂಬೈನಿಂದ 6000 ಗೋಲಿ ತರಿಸಿ 4 ತಿಂಗಳು ಶ್ರಮಿಸಿದ್ದರು. 8 ಸಾವಿರ ವೆಚ್ಚ ತಗಲಿತ್ತು. ಅದಕ್ಕೆ ಬಂಗಾರದ ಪದಕ, ರಾಜ್ಯಮಟ್ಟದಲ್ಲಿ ಬಹುಮಾನ ಬಾಚಿಕೊಂಡಿದ್ದರು. ಕಳೆದ ವರ್ಷ ಚಿಕ್ಕಚಿಕ್ಕ ಅಲಂಕಾರಿಕ ಗಂಟೆಗಳಿಂದ ಗೂಡುದೀಪ ನಿರ್ಮಿಸಿದ್ದರು. ಈ ವರ್ಷ ಸುಮಾರು 1 ಲಕ್ಷ ಮಣಿ ತರಿಸಿ 14 ದಿನ ನಿರಂತರ ಶ್ರಮ ವಹಿಸಿ, ಮಣಿದೀಪ ನಿರ್ಮಿಸಿದ್ದಾರೆ.
- ರಾಘವೇಂದ್ರ ಅಗ್ನಿಹೋತ್ರಿ