ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದಾಸನಮನ

'ಶ್ರೀ ಹರಿಕಥಾಮೃತ ಸಿಂಧು' ಶತಮಾನದ ಮಹತ್ವಪೂರ್ಣ ಗ್ರಂಥಗಳಲ್ಲಿ ಒಂದು ಎನ್ನುತ್ತದೆ ಸಾರಸ್ವತ ಲೋಕ...

Lingaraj Badiger
Updated On : 1 Nov 2013, 4:32 am

ಮುಖದಲ್ಲಿ ಅದೇ ತೇಜಸ್ಸು. ಮನಸ್ಸಿನಲ್ಲಿ ಬತ್ತದ ಹುಮ್ಮಸ್ಸು. ಶಾರೀರ ಚೆನ್ನಾಗಿದ್ದರೂ ಶರೀರದ್ದೇ ಸಮಸ್ಯೆ. ಜಾಸ್ತಿ ಹೊತ್ತು ಕೂರಲಾಗುತ್ತಿಲ್ಲ. ಆಯಾಸ ಕಾಡುತ್ತದೆ. ಆದರೂ ಕೀರ್ತನೆಗೆ ತೊಡಗಿದರು ಎಂದರೆ ತಾರುಣ್ಯದ ಗತ್ತು. ಜನ ಅವರನ್ನು ಸಂತ ಎನ್ನುತ್ತಿದ್ದರು; 'ನಡೆದಾಡುವ ವಿಶ್ವವಿದ್ಯಾಲಯ' ಎಂದು ಹೇಳುತ್ತಿದ್ದರು. 'ಕೀರ್ತನಾಗ್ರೇಸರ', 'ಕೀರ್ತನಾಚಾರ್ಯ', 'ಹರಿಭಕ್ತ ಪರಾಯಣ', 'ಹರಿದಾಸ ಕುಲಭೂಷಣ' ಎಂಬ ಬಿರುದುಗಳೂ ಇದ್ದವು. ಅವರು ಅವೆಲ್ಲವೂ ಹೌದು ಮತ್ತು ಅವೆಲ್ಲವೂ ಅವರ ವ್ಯಕ್ತಿತ್ವದ ಭಾಗಗಳೇ. ಹರಿಕಥೆಗಾಗಿ ಬದುಕನ್ನೇ ಸಮರ್ಪಿಸಿಕೊಂಡ ಮಹಾನುಭಾವ.

ಸಂತ ಭದ್ರಗಿರಿ ಅಚ್ಯುತದಾಸರು ಇಹಲೋಕದ ವ್ಯಾಪಾರ ಮುಗಿಸುವ ಕೆಲವೇ ದಿನಗಳ ಮುಂಚೆ. ಬೆಂಗಳೂರು ರಾಜಾಜಿನಗರದ ಪುಟ್ಟ ಮನೆಯಲ್ಲಿ ಪಟಪಟನೆ ಮಾತನಾಡುತ್ತಿದ್ದರೆ 'ಇವರಿಗೆ 83 ವರ್ಷವಾ' ಎಂದು ಕೇಳಿಕೊಂಡದ್ದು ಸುಳ್ಳಲ್ಲ. ಎರಡು ಗಂಟೆಯ ಮಾತುಕತೆಯ ನಡುನಡುವೆ ತುಸು ವಿಶ್ರಾಂತಿ. ಆಗಾಗ ಅಗಲಿದ ತಮ್ಮ ಭದ್ರಗಿರಿ ಕೇಶವದಾಸರ ನೆನಪು. ಒಂದಷ್ಟು ವಿಷಾದ, ಮತ್ತೊಂದಷ್ಟು ಕನಸುಗಳ ಹರವು. ಈ ಹೊತ್ತಿನ ಕೆಲವು ಕೀರ್ಥನೆಕಾರರಿಂದ ಹರಿಕಥೆಗೆ ಅವಮಾನವಾಗುತ್ತಿದೆ ಎನ್ನುವ ನೋವು.

'ಶ್ರೀ ಹರಿಕಥಾಮೃತ ಸಿಂಧು' ಶತಮಾನದ ಮಹತ್ವಪೂರ್ಣ ಗ್ರಂಥಗಳಲ್ಲಿ ಒಂದು ಎನ್ನುತ್ತದೆ ಸಾರಸ್ವತ ಲೋಕ. ಕೀರ್ತನಾಭ್ಯಾಸಿಗಳಿಗೆ ಅತ್ಯಂತ ಉಪಯುಕ್ತ ಕೃತಿ. ಹರಿಕಥಾ ಪೂರ್ವರಂಗ, ಗೀತಾರ್ಥ ಚಿಂತನೆ, ಲಿಪಿಬದ್ಧ ಹರಿಕಥಾರೂಪಗಳನ್ನು ಒಳಗೊಂಡ ಗ್ರಂಥ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ. ಇದನ್ನು ರಚಿಸಿದವರು ಅಚ್ಯುತದಾಸರು. '600 ಪುಟಗಳ ಐದನೇ ಸಂಪುಟವನ್ನು ಆದಷ್ಟು ಶೀಘ್ರ ಪ್ರಕಟಿಸಬೇಕು. ಅದಕ್ಕೆ ಇನ್ನೊಂದಷ್ಟು ಕೆಲಸಗಳು ಉಳಿದಿವೆ. ಆದರೆ ವಯೋಸಹಜ ದಣಿವಿನಿಂದ ಅದರಲ್ಲಿ ಪೂರ್ತಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ' ಎಂದು ಮುಗ್ಧವಾದ ನಗು ನಕ್ಕರು ದಾಸರು.
ಕಾಶಿಮಠಾಧೀಶ ಸುಧೀಂದ್ರತೀರ್ಥರು ಅನುಗ್ರಹಿಸಿದ 'ಮೂಲನಾರಾಯಣ' ಅಂಕಿತದಲ್ಲಿ ದಾಸರು ಕನ್ನಡ, ಕೊಂಕಣಿ, ತುಳು, ಮರಾಠಿಯಲ್ಲಿ ರಚಿಸಿದ ಕೀರ್ತನೆಗಳು ಸಾವಿರಾರು. ಅವರ ಕೀರ್ತನೆಗಳ ಕ್ಯಾಸೆಟ್‌ಗಳು ಇಲ್ಲದ ಮನೆಗಳೇ ಇಲ್ಲ ಎಂದರೆ ಕ್ಲೀಶೆಯಲ್ಲ. ಕೇಶವದಾಸರ ಕನಸಿನ ಸಾಕಾರವಾದ ನೆಲಮಂಗಲದ ವಿಶ್ವಶಾಂತಿ ಆಶ್ರಮದ ಚಟುವಟಿಕೆಗಳಲ್ಲೂ ಮುಂದು. ತಮ್ಮ ಮನೆಯನ್ನೇ ಗುರುಕುಲವಾಗಿಸಿ ನೂರಾರು ಕೀರ್ತನೆಕಾರರನ್ನು ಸೃಷ್ಟಿಸಿದವರು ಅಚ್ಯುತದಾಸರು. ಹರಿಕಥೆಗೆ 'ಕಥಾಕಾಲಕ್ಷೇಪ' ಎನ್ನುವ ಹೆಸರನ್ನು ಕೊಟ್ಟು, ಹಳ್ಳಿಹಳ್ಳಿಗೆ ತೆರಳಿ, ಎಷ್ಟೋ ಸಲ ಪುಕ್ಕಟೆಯಾಗಿ ಕೀರ್ತನೆ ಮಾಡಿ, ಹಳ್ಳಿಹಾಡು ಮತ್ತು ಯಕ್ಷಗಾನದ ಶೈಲಿಯನ್ನೂ ಸೇರಿಸಿಕೊಂಡು, 'ಅಚ್ಯುತದಾಸರ ಶೈಲಿ'ಯನ್ನು ರೂಪಿಸಿ, ದಾಸ ಪರಂಪರೆಯನ್ನು ಹೊಸ ಎತ್ತರಕ್ಕೆ ಒಯ್ದವರು ಅವರು.  'ಇವತ್ತಿನ ಎಷ್ಟೋ ಕೀರ್ತನೆಕಾರರನ್ನು ಕಂಡರೆ ಮರುಕವಾಗುತ್ತದೆ. ನಾಟಕ ಕಂಪನಿ ಲಾಸ್ ಆದರೆ ಹೊಸ ಕೀರ್ತನೆಕಾರರು ಹುಟ್ಟುತ್ತಾರೆ. ಸಿನಿಮಾ ಹಾಡುಗಳನ್ನು ಹೇಳಿಕೊಂಡು ಕೀರ್ತನೆ ಮಾಡುತ್ತಾರೆ. ಪುರಾಣಗಳನ್ನೇ ತಿರುಚುತ್ತಾರೆ. ಜನ ಕೇಳುತ್ತಾರೆ ಎಂದು ಯಾವ್ಯಾವುದೋ ಹಾಡಿ ಹೇಳಿ ರಂಜಿಸುವುದು ಕೀರ್ತನೆ ಅಲ್ಲ' ಎನ್ನುತ್ತ ಮತ್ತೆ ನಕ್ಕರು. ಆ ನಗುವಿನಲ್ಲಿ ಸಂಕಟದ ಛಾಯೆ.

'ಹರಿಕಥೆಗೆ ಸಂಬಂಧಿಸಿದ ಕೆಲಸಗಳು, ಹೊಸಬರಿಗೆ ತರಬೇತಿ ಮೊದಲಾದವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಉದ್ದೇಶದಿಂದ 'ದಾಸಾಶ್ರಮ'ದ ಯೋಜನೆ ರೂಪಿಸಿದ್ದೆವು. ಕೇಶವ ಇದ್ದಾಗಲೇ ಸರ್ಕಾರ ಜಾಗವನ್ನೂ ಕೊಟ್ಟಿತ್ತು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕಟ್ಟಡವನ್ನೂ ಕಟ್ಟಿಸಿಕೊಟ್ಟರು. ಆದರೆ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ತೊಡಗಿಕೊಂಡಿರುವ ಕೆಲವರು ಜಾಗದ ಮೇಲೆ ಕಣ್ಣು ಹಾಕಿದರು. ರಾಜಕಾರಣಕ್ಕೆ ಬೇಸತ್ತು ಅದನ್ನು ನಿಲ್ಲಿಸಿಬಿಟ್ಟೆವು' ಎನ್ನುವಾಗ ಆ ಗಡಸು ಕಂಠ ಸಣ್ಣಗೆ ಕಂಪಿಸುತ್ತಿತ್ತು.
'ಇಂದು ವಿಕಾರ ಉಂಟು ಉಂಟುಮಾಡುವ ಕಲೆಗಳು ಬರುತ್ತಿವೆಯೇ ವಿನಾ ವಿಕಾಸ ಉಂಟು ಮಾಡುವ ಕಲೆಗಳು ಬರುತ್ತಿಲ್ಲ. ಆದರೂ ಹರಿಕಥೆಯಂಥ ಕಲೆಗಳಿಗೆ ಅಳಿವಿಲ್ಲ...' ಎನ್ನುತ್ತಿರುವಾಗ ಉದ್ಯಮಿಯೊಬ್ಬರಿಂದ ದೂರವಾಣಿ ಕರೆ, 'ನಮ್ಮ ಮನೆಗೆ ಬಂದು ಒಂದು ಗಂಟೆಯಾದರೂ ಕೀರ್ತನೆ ನಡೆಸಿಕೊಡಿ' ಎನ್ನುವ ಮನವಿ. ಮುಂದೆ ಕೆಲವೇ ದಿನಗಳಲ್ಲಿ ಕಾಲಪುರುಷನಿಂದಲೂ ಕರೆ. ಅದಕ್ಕೂ ಓಗೊಟ್ಟರು ದಾಸರು.

ಅಚ್ಯುತ ದಾಸರು ಎಂದರೆ...
ಉಡುಪಿ ತಾಲ್ಲೂಕಿನ ಭದ್ರಗಿರಿಯಲ್ಲಿ 1930ರ ಮಾಘ ಬಹುಳ ತದಿಗೆಯಂದು ಜನನ. ಕೊಂಕಣಿ ಕುಟುಂಬ. ಪಡುಬಿದ್ರೆಯ ವಾಮನ ಭಟ್ಟರ ಮಗಳು ಶ್ರೀಮತಿ ಜತೆ ಮದುವೆ. ನಾಲ್ಕು ಗಂಡು, ಮೂವರು ಹೆಣ್ಣು ಮಕ್ಕಳು. ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ಶಿಕ್ಷಕಿ ನಾಗವೇಣಿಯಮ್ಮ ಅವರು ಹರಿಕಥೆ ಮಾಡುವುದನ್ನು ಕಲಿಸಿದರು. ಮುಂದೆ ಶಂಕರನಾರಾಯಣ ಸಾಮಗರ ಸಾಂಗತ್ಯ. ಅವರು ಹೋದಲ್ಲೆಲ್ಲ ಹೋಗುವುದು, ಅವರ ಸೇವೆ ಮಾಡುವುದು, ಹರಿಕಥೆ ಮಾಡುವುದು. ಹರಿಕಥೆಯನ್ನು ಮೂಲೆಮೂಲೆಗೂ ತಲುಪಿಸಲು ಕರೆಯದಿದ್ದರೂ ಹಳ್ಳಿಗಳಿಗೆ ಹೋಗುವುದು. ಕೀರ್ತನೆ ಮಾಡುವುದು. ಕರೆಯಲು ಬಂದವರಿಗೂ ಹೇಳುತ್ತಿದ್ದುದು ಅಷ್ಟೆ, 'ನಿಮಗೆ ಶಕ್ತಿ ಇದ್ದರೆ ಏನಾದರೂ ಕೊಡಿ. ಕಾರ್ಯಕ್ರಮ ಏರ್ಪಡಿಸುತ್ತೀರಲ್ಲ, ಅಷ್ಟೇ ಸಾಕು' ಎನ್ನುತ್ತಿದ್ದರು. ಸಾವಿರಾರು ಕೀರ್ತನೆಗಳು, 20ಕ್ಕೂ ಅಧಿಕ ಕೃತಿಗಳ ರಚನೆ. ರಾಜ್ಯದ ಬಹುತೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನ. 'ಎಚ್.ನರಸಿಂಹಯ್ಯ ತಮ್ಮ ಊರಿಗೆ ಕರೆದೊಯ್ದು ಹೊಲದಲ್ಲಿ ಕೀರ್ತನೆ ಮಾಡಿಸಿದ್ದರು. ಬೆಂಗಳೂರಿನಲ್ಲಿ ಎಲ್ಲೇ ನನ್ನ ಹರಿಕಥೆ ಇದ್ದರೂ ತಪ್ಪದೇ ಬರುತ್ತಿದ್ದರು. ಅದೇ ನನಗೆ ದೊಡ್ಡ ಗೌರವ' ಎಂದು ಕೊನೆಯ ಸಂದರ್ಶನದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು ಅಚ್ಯುತದಾಸರು.

ಕೀರ್ತನೆಕಾರ ಎಂದರೆ...
ಕೀರ್ತನೆಕಾರ ಪರಿಶುದ್ಧ ಹೃದಯಿ ಆಗಿರಬೇಕು. ಹಣ ಗಳಿಕೆಯೇ ಆತನ ಉದ್ದೇಶ ಆಗಬಾರದು.
ಪರನಿಂದೆ ಮಾಡಬಾರದು. ನಾವು ಹೇಳುವುದು ತಪ್ಪು ಮಾಡಿದವನನ್ನು ತಿದ್ದುವಂತಿರಬೇಕೇ ವಿನಾ ಕೆರಳಿಸಬಾರದು.
ಒಂದು ಗಂಟೆ ಪ್ರವಚನ ಆಲಿಸಿದ ಬಳಿಕ ಜನ 'ಎಂಥಾ ಪಂಡಿತರು. ಆದರೆ ಏನು ಹೇಳಿದರು ಎನ್ನುವುದು ಗೊತ್ತಾಗಲಿಲ್ಲ' ಎನ್ನುತ್ತಾರೆ. ಹರಿಕಥೆ ಹಾಗಲ್ಲ. ಹರಿಕಥೆ ಮೂಲತಃ ಅನಕ್ಷರಸ್ಥರಿಗಾಗಿ ಬಂದದ್ದು. ಅವರಿಗೆ ಶಾಸ್ತ್ರಜ್ಞಾನ, ಹಿಂದೂ ಧರ್ಮ ಎನ್ನುವ ಜೀವನ ಪದ್ಧತಿಯನ್ನು ಹಾಡು, ನಟನೆ, ಕಥೆ ಮೂಲಕ ತಿಳಿಸಿಕೊಡುವುದೇ ಹರಿಕಥೆ.
ಕೀರ್ತನೆಕಾರನಿಗೆ ಸಂಗೀತಜ್ಞಾನ, ಭಾಷಾ ಪಾಂಡಿತ್ಯ, ಶಬ್ದ ಪಾಂಡಿತ್ಯ, ಸ್ಮರಣಶಕ್ತಿ, ಪ್ರಸಂಗವನ್ನು ಹಿಗ್ಗಿಸುವ-ಕುಗ್ಗಿಸುವ ಕಲೆ ಗೊತ್ತಿರಬೇಕು.
ಲೋಕಶಿಕ್ಷಣ ನೀಡುವ ಹೊಣೆ ಕೀರ್ತನೆಕಾರರದ್ದು. ಶಿಕ್ಷಣ ಎಂದರೆ ಹಣ ಸಂಗ್ರಹಿಸಿದ, ಉಂಡ, ಬೆಳೆದ ಅಲ್ಲ. ಸಮಾಜಕ್ಕೆ, ಬದುಕಿಗೆ ಬೇಕಾದ ಲೌಕಿಕ ಶಿಕ್ಷಣವನ್ನು ದಾಸರು ಹರಿಕಥೆಗಳ ಮೂಲಕ ನೀಡಬೇಕು.

ದಾಸೋಕ್ತಿ
ಸಂಪತ್ತು ಎಂದರೆ ದ್ರವ್ಯ. ಅದು ಹರಿಯುತ್ತಿರಬೇಕು. ದುಡ್ಡು, ಬ್ಲಡ್ಡು ಎರಡೂ ಸರ್ಕ್ಯುಲೇಟ್ ಆಗುತ್ತಿರಬೇಕು. ಇಲ್ಲದಿದ್ದರೆ ಪಾರ್ಶ್ವವಾಯು ಆಗುತ್ತದೆ.
ದಾನವೇ ಭೂಷಣ. ಅದಕ್ಕೆ ಜಾತೀಯತೆ, ಸಂಪ್ರದಾಯ ಅಡ್ಡ ಬರಬಾರದು. ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ.

ಚತುರ್ವರ್ಣ ಇರುವುದು ನಮ್ಮ ದೇಹದಲ್ಲಿ. ಪರಮಾತ್ಮನ ಪಾದದಿಂದ ಶೂದ್ರ ಹುಟ್ಟಿದ. ನಾವು ಭಗವಂತನ ಪಾದಪೂಜೆ ಮಾಡುತ್ತೇವೆ, ಆತನ ಪಾದದಿಂದ ಜನ್ಮ ತಳೆದವರನ್ನು ಮುಟ್ಟಿಸಿಕೊಳ್ಳದೇ ದೂರ ಇಡುತ್ತೇವೆ. ಅದು ಸರಿಯಾದದ್ದಲ್ಲ. ಅವರೂ ನಮ್ಮ ಹಾಗೆಯೇ ಮನುಷ್ಯರು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮಡಿ, ಮೈಲಿಗೆ ಎಂದು ಮಾಡಿದ್ದರ ಉದ್ದೇಶ ದೇವರ ಬಳಿ ಪಾವಿತ್ರ್ಯ ಇರಬೇಕು ಎಂದೇ ವಿನಾ ಯಾರನ್ನೂ ದೂರ ಇಡುವುದು ಅಲ್ಲ.

- ರಾಜೇಶ ಮುಂಡಿಗೇಸರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments