ಎನ್ಆರ್ಐ ಆಸ್ತಿಕತೆ
ಡಾಲರ್ ಮುಂದೆ ಕುಸಿಯುತ್ತಿರುವ ರುಪಾಯಿ ವಿನಿಮಯ ದರದ ಲಾಭ ಪಡೆಯಲೆತ್ನಿಸುತ್ತಿರುವ ಅನಿವಾಸಿ ಭಾರತೀಯ...
ಡಾಲರ್ ಮುಂದೆ ಕುಸಿಯುತ್ತಿರುವ ರುಪಾಯಿ ವಿನಿಮಯ ದರದ ಲಾಭ ಪಡೆಯಲೆತ್ನಿಸುತ್ತಿರುವ ಅನಿವಾಸಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಲು ರಿಯಲ್ ಎಸ್ಟೇಟ್ಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬಗಳ ಸಂಭ್ರಮ ಇದಕ್ಕೆ ಪೂರಕ ವಾತಾವರಣ ಸೃಷ್ಟಿಸಿವೆ. ಹಬ್ಬಗಳ ಆಫರ್ಗಳಿಗೆ ಮರುಳಾಗದೆ ಎನ್ಆರ್ಐ ಹೂಡಿಕೆದಾರರು ವಿವೇಚನಾಪೂರ್ಣ ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸಲಹಾ ಲೇಖನ.
ಎನ್ಆರ್ಐಗಳು ಮತ್ತು ಪಂಗನಾಮ
ಇತ್ತೀಚಿಗೆ ಒಮನ್ ದೇಶದಲ್ಲಿರುವ ಕರಾವಳಿ ಭಾಗದ ಅನಿವಾಸಿ ಭಾರತೀಯರಿಗೆ ಉಡುಪಿ ಮೂಲದ ಮಹಿಳಾ ಉದ್ಯಮಿಯೊಬ್ಬರು ಹಾಕಿರುವ ಕೋಟ್ಯಂತರ ರುಪಾಯಿ ಪಂಗನಾಮ ಪ್ರಕರಣವಿನ್ನೂ ಜೀವಂತವಾಗಿರುವಾಗ ಕಳೆದ ವರ್ಷ ಕತಾರ್ ಮೂಲದ ಹೂಡಿಕೆದಾರರಿಗೆ ಮಂಗಳೂರಿನ ಬಿಲ್ಡರ್ ಒಬ್ಬರು ಕನಸಿನ ಮನೆ ನಿರ್ಮಾಣ ಯೋಜನೆಯ ನೆಪದಲ್ಲಿ ಅಸ್ಥಿಪಂಜರ ಕಟ್ಟಡ ನಿರ್ಮಿಸಿ ಎಸಗಿರುವ ಮೋಸದ ನೆನಪಾಗುತ್ತದೆ. ಹಾಗಾಗಿ ಮನೆ ನಿವೇಶನ, ಸ್ಥಿರಾಸ್ತಿ ಮತ್ತು ವಿಶೇಷವಾಗಿ ಫ್ಲಾಟ್ಗಳನ್ನು ಖರೀದಿಸುವಾಗ ಜ್ಯೋತಿಷ್ಯರು, ಬ್ರೋಕರ್ಗಳು, ವಾಸ್ತುತಜ್ಞರು ಹಾಗೂ ಸಂಖ್ಯಾಶಾಸ್ತ್ರಜ್ಞರುಗಳಿಂದ ತಜ್ಞ ಸಲಹೆ (?) ಪಡೆಯುವ ಬದಲು ವಕೀಲರು, ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ಎಂಜಿನಿಯರ್ಗಳಿಂದ ವೃತ್ತಿಪರ ಸಲಹೆ ಪಡೆಯುವುದು ಇಂದಿನ ತುರ್ತು ಅಗತ್ಯ. ವರ್ಣಮಯ ಬ್ರೋಶರ್ಗಳಿಂದ ಆಕರ್ಷಿತರಾಗದೆ ಹೂಡಿಕೆ ಮಾಡುವ ಮುನ್ನ ಭೂದಾಖಲೆಗಳ ಸಿಂಧುತ್ವವನ್ನು ವಕೀಲರಿಂದ, ಕಟ್ಟಡದ ವಿನ್ಯಾಸ, ಸುರಕ್ಷತೆ ಮತ್ತು ಅಕ್ರಮ ಅಥವಾ ಉಲ್ಲಂಘನೆಗಳ ಕುರಿತು ಎಂಜಿನಿಯರ್ಗಳಿಂದ ಹಾಗೂ ಹಣ ಪಾವತಿ ತೆರಿಗೆ ಇತ್ಯಾದಿ ಅಂಶಗಳ ಕುರಿತು ಚಾರ್ಟರ್ಡ್ ಅಕೌಂಟೆಂಟ್ಗಳಿಂದ ಸಲಹೆ ಪಡೆಯುವ ಪದ್ಧತಿ ಜಾರಿಗೆ ಬರಬೇಕು.
ಕಾನೂನು ಸಲಹೆ ಮಾತ್ರ ಸಾಲದು
ಬಹುಮಹಡಿ ಕಟ್ಟಡಗಳಲ್ಲಿ ಫ್ಲಾಟ್, ವಾಣಿಜ್ಯ ಕಚೇರಿ ಖರೀದಿಸುವಾಗ ವಕೀಲರಿಂದ ಕಾನೂನು ಸಲಹೆ (ಲೀಗಲ್ ಒಪೀನಿಯನ್) ಪಡೆಯುವ ಪದ್ಧತಿ ಈಗ ಚಾಲ್ತಿಯಲ್ಲಿದೆ. ಆದರೆ ಕೇವಲ ಲೀಗಲ್ ಒಪೀನಿಯನ್ ಮಾತ್ರ ಪರಿಶೀಲಿಸಿದರೆ ಸಾಲದು. ಸಾಮಾನ್ಯವಾಗಿ ಬಿಲ್ಡರ್ಗಳ ಪರ ಮಾರ್ಕೆಟಿಂಗ್ ಮಾಡುವ ಏಜೆನ್ಸಿಗಳು ರಾಷ್ಟ್ರೀಕೃತ ಬ್ಯಾಂಕ್ಗಳ ನೋಂದಾಯಿತ ವಕೀಲರು ಭೂಮಿಯ ಹಕ್ಕಿನ ಕುರಿತು ನೀಡಿದ ಲೀಗಲ್ ಒಪೀನಿಯನ್ ನೀಡಿ ಗ್ರಾಹಕನೊಂದಿಗೆ ವ್ಯವಹಾರ ಕುದುರಿಸುತ್ತಾರೆ. (ಇದೊಂದು ರೀತಿಯ ಮಾರ್ಕೆಟಿಂಗ್ ತಂತ್ರವಾಗಿರುವುದು ವಿಪರ್ಯಾಸ). ಬಹುಮಹಡಿ ಕಟ್ಟಡದಲ್ಲಿನ ಖರೀದಿಯ ಪ್ರಶ್ನೆ ಬಂದಾಗ ವಕೀಲರ ಲೀಗಲ್ ಒಪೀನಿಯನ್ನೊಂದಿಗೆ ಎಂಜಿನಿಯರ್ಗಳ ಸಲಹೆ ಅತ್ಯಮೂಲ್ಯವಾದುದು.
ಖರೀದಿಯಲ್ಲಿ ಎಂಜಿನಿಯರ್ಗಳ ಪಾತ್ರ
ಕಟ್ಟಡವು ಅಕ್ರಮವೋ ಅಥವಾ ಸಕ್ರಮವೋ ಎಂಬ ಅಂಶದ ಬಗ್ಗೆ ಮತ್ತು ಕಟ್ಟಡದ ಸುರಕ್ಷತೆ ಹಾಗೂ ನಿರ್ಮಾಣ ವಿನ್ಯಾಸ, ನಿರ್ಮಾಣದ ವಿಧಾನ ಹಾಗೂ ಸಾಮಗ್ರಿಗಳ ಗುಣಮಟ್ಟದತ್ತ ಗಮನ ಹರಿಸುವುದು ಕೂಡ ಮುಖ್ಯ. ಈ ಅಂಶಗಳತ್ತ ತಜ್ಞ ಎಂಜಿನಿಯರ್ಗಳಿಂದ ಮಾತ್ರ ಬೆಳಕು ಚೆಲ್ಲಲು ಸಾಧ್ಯ.
ಇತ್ತೀಚಿಗೆ ನನ್ನ ಕಕ್ಷಿದಾರರೊಬ್ಬರು ಮಂಗಳೂರು ನಗರದ ಹೃದಯ ಭಾಗದಲ್ಲಿ ನಿರ್ಮಿಸಿದ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಖರೀದಿಸಿದ ಫ್ಲಾಟ್ನ ದಾಖಲೆಗಳನ್ನು ಪರಿಶೀಲಿಸುವಂತೆ ಕೋರಿದಾಗ ಹೇಗೆ ಸ್ಥಳೀಯ ಹೂಡಿಕೆದಾರರು ಸಹ ಮೋಸ ಹೋಗಬಲ್ಲರು ಎಂಬ ಅಂಶ ಬೆಳಕಿಗೆ ಬಂತು. ಒಟ್ಟು ನಾಲ್ಕು ಮಹಡಿಗಳ ಕಟ್ಟಡ. ನನ್ನ ಕಕ್ಷಿದಾರರು ಖರೀದಿಸಿದ ಫ್ಲಾಟ್ ಮೂರನೆ ಮಹಡಿಯಲ್ಲಿದೆ. ಮೂರನೇ ಮಹಡಿವರೆಗೆ ಮಾತ್ರ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿತ್ತು. ನಾಲ್ಕನೇ ಮಹಡಿ ಅನಧಿಕೃತ ನಿರ್ಮಾಣ. ಹಾಗಾಗಿ ಇಡೀ ಕಟ್ಟಡಕ್ಕೆ ಮಂಗಳೂರು ಮಹಾನಗರ ಪಾಲಿಕೆಯು ಕಟ್ಟಡ ಪೂರ್ಣಗೊಂಡ ಬಗ್ಗೆ ಪ್ರಮಾಣಪತ್ರ ಹಾಗೂ ವಾಸಯೋಗ್ಯವೆಂಬ ಕುರಿತು ವಾಸ ಪ್ರಮಾಣಪತ್ರ ನೀಡಿರಲಿಲ್ಲ. ಆದರೆ ಖಾತಾ ವರ್ಗಾವಣೆಯಾಗಿದೆ. ಡೋರ್ ನಂಬರ್ ಸಹ ನೀಡಲಾಗಿದೆ. ವಿದ್ಯುತ್ ಸಂಪರ್ಕವೂ ಲಭ್ಯವಿದೆ. ಮನೆ ತೆರಿಗೆ ಪಾವತಿಯ ರಶೀದಿಯಿದೆ. ಕಟ್ಟಡಕ್ಕೆ ಬ್ಯಾಂಕ್ನಿಂದ ನಿರ್ಮಾಣ ಹಂತದಲ್ಲಿ ಸಾಲ ಸೌಲಭ್ಯ ಸಹ ನೀಡಲಾಗಿತ್ತು. ವಕೀಲರ ಕಾನೂನು ಸಲಹೆಯೂ ಕಡತದಲ್ಲಿತ್ತು. ಬಿಲ್ಡರ್ ಒಂದು ಹೆಚ್ಚುವರಿ ಮಹಡಿಯನ್ನು ಅನಧಿಕೃತವಾಗಿ ನಿರ್ಮಿಸಿದ್ದರಿಂದ ಇಡೀ ಕಟ್ಟಡವೇ ಅಕ್ರಮವೆನಿಸಿ ಪರಿತಪಿಸುವಂತಾಗಿದೆ. (ನನ್ನ ಕಕ್ಷಿದಾರರು ನಿರ್ಮಾಣ ಹಂತದಲ್ಲಿ ಫ್ಲಾಟ್ ಖರೀದಿಸಿದ್ದರಿಂದ ಈ ಅಕ್ರಮ ನಿರ್ಮಾಣದ ಸೂಕ್ಷ್ಮ ವಿಚಾರ ಆತನ ಗಮನಕ್ಕೆ ಬಂದಿರಲಿಲ್ಲ).
ಹಾಗಾಗಿ ನಿರ್ಮಾಣ ಹಂತದಲ್ಲಿರುವ ಅಪೂರ್ಣ ಕಟ್ಟಡದಲ್ಲಿ ಫ್ಲಾಟ್ ಖರೀದಿಸುವಾಗಲೂ ಎಚ್ಚರಿಕೆಯಿಂದಿರಬೇಕು. ಪೂರ್ಣಗೊಂಡ ಕಟ್ಟಡ ಖರೀದಿಸುವಾಗಲೂ ಸಹ ವಕೀಲರ ಕಾನೂನು ಸಲಹೆಯೊಂದಿಗೆ ಎಂಜಿನಿಯರ್ಗಳ ತಾಂತ್ರಿಕ ಸಲಹೆ ಪಡೆಯುವುದೂ ಸೂಕ್ತ.
ಕಟ್ಟಡವೊಂದಕ್ಕೆ ಕಾನೂನಿನನ್ವಯ ಸಂಬಂಧಿತ ಪ್ರಾಧಿಕಾರದಿಂದ ಪರವಾನಗಿ ಪಡೆಯಲಾಗಿದೆಯೇ? ಹಾಗೆ ಪಡೆದ ಪರವಾನಗಿ ವಲಯ ನಿಯಮಗಳನ್ವಯ ಮತ್ತು ಕಟ್ಟಡ ನಿರ್ಮಾಣ ಉಪವಿಧಿಗಳಿಗೆ ಅನುಸಾರವಾಗಿದೆಯೆ? ಪರವಾನಗಿ ಮತ್ತು ಅನುಮೋದಿತ ನಕ್ಷೆಯನ್ವಯವೇ ಕಟ್ಟಡ ನಿರ್ಮಾಣ ಮಾಡಲಾಗಿದೆಯೇ? ನಿರ್ಮಾಣ ಹಂತದಲ್ಲಿ ಪರವಾನಗಿಯನ್ನು ಪರಿಷ್ಕರಿಸಲಾಗಿದೆಯೇ? ಕಟ್ಟಡ ನಿರ್ಮಾಣ ವೇಳೆ ಕಾನೂನು ಉಲ್ಲಂಘನೆಗಳೇನಾದರೂ ನಡೆದಿವೆಯೆ? ಕಟ್ಟಡವು ಅಕ್ರಮ ಕಟ್ಟಡಗಳ ಪಟ್ಟಿಯಲ್ಲಿದೆಯೆ? ಖರೀದಿಸುವ ಫ್ಲಾಟ್ನ ಕಾರ್ಪೆಟ್, ಬಿಲ್ಡ್ ಅಪ್ ಹಾಗೂ ಸೂಪರ್ ಬಿಲ್ಡ್ ಅಪ್, ಕಾಮನ್ ಏರಿಯಾ ಮತ್ತು ಪಾರ್ಕಿಂಗ್ ಏರಿಯಾ ಮತ್ತಿತರ ವಿವರಗಳು ಡೀಡ್ ಆಫ್ ಡಿಕ್ಲರೇಷನ್ಗೆ ಅನುಗುಣವಾಗಿದೆಯೇ? ಇದರಲ್ಲಿ ಯಾವುದಾದರೂ ಮರೆಮಾಚುವ ಅಂಶಗಳು ಒಳಗೊಂಡಿವೆಯೇ? ಕಟ್ಟಡ ನಿರ್ಮಾಣಗೊಂಡ ಭೂಮಿಯ ಮೇಲಿನ ಅವಿಭಜಿತ ಹಕ್ಕಿನ ಶೇಕಡಾವಾರು ಪ್ರಮಾಣ ಸರಿಯಾಗಿದೆಯೇ? ಕಟ್ಟಡದ ಸುಭದ್ರತೆಗೆ ರಚನಾ ವಿನ್ಯಾಸವನ್ನು ತಜ್ಞರಿಂದ ಮಾಡಿಸಲಾಗಿದೆಯೆ? ಕಟ್ಟಡದ ವಿದ್ಯುತ್, ಪ್ಲಂಬಿಂಗ್ ಮತ್ತು ಅಗ್ನಿಶಾಮಕ ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆಯೇ? ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ? ಕಟ್ಟಡ ನಿರ್ಮಾಣಕ್ಕೆ ಬಳಸಿದ ಸಾಮಗ್ರಿಗಳ ಗುಣಮಟ್ಟ ಹಾಗೂ ಸ್ಟೀಲ್ ಮತ್ತು ಸಿಮೆಂಟ್ ಬಳಕೆಯ ಪ್ರಯೋಗಾಲಯ ವರದಿಗಳನ್ನು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ ಅನ್ವಯ ನಡೆಸಲಾಗಿದೆಯೆ?
ಹೀಗೆ ಮೇಲಿನ ಮತ್ತು ಇನ್ನಿತರ ಹಲವಾರು ತಾಂತ್ರಿಕ ವಿಚಾರಗಳ ಕುರಿತು ತಜ್ಞ ಎಂಜಿನಿಯರ್ಗಳು ನೀಡುವ ಸಲಹೆಗಿಂತ ಮಿಗಿಲಾದ ಅಭಿಪ್ರಾಯ ನೀಡಲು ವಾಸ್ತುತಜ್ಞರು ಹಾಗೂ ಬೋಗಸ್ ಬ್ರೋಕರ್ಗಳಿಂದ ಸಾಧ್ಯವೇ? ಹಾಗಾಗಿ, ಈ ನಿಟ್ಟಿನಲ್ಲಿ ಎಂಜಿನಿಯರ್ಗಳ ಸಲಹೆ ಪಡೆಯುವುದು ಇಂದಿನ ಅಗತ್ಯ ಮಾತ್ರವಲ್ಲ, ಅನಿವಾರ್ಯ ಕೂಡ.
ಚಾರ್ಟರ್ಡ್ ಅಕೌಂಟೆಂಟ್ಗಳ ಸಲಹೆ
ಹೆಚ್ಚಿನ ಅನಿವಾಸಿ ಭಾರತೀಯ ಹೂಡಿಕೆದಾರರು ಬ್ಯಾಂಕ್ ಸಾಲ ಪಡೆಯದೇ ಸ್ವಂತ ಹಣದಲ್ಲಿ ಸ್ಥಿರಾಸ್ತಿ ಖರೀದಿಸುತ್ತಾರೆ. ಆದರೆ ಮಾರಾಟ ಮೌಲ್ಯವನ್ನು ಪಾವತಿಸುವಾಗ ನಗದು ರೂಪದಲ್ಲಿ ನೀಡಿದ ಕುರಿತು (ನೋಂದಣಿ ವೇಳೆ ಮಾರುಕಟ್ಟೆ ಮೌಲ್ಯಕ್ಕೆ ಸೀಮಿತಗೊಳಿಸಿ ಮಾರಾಟ ಮೌಲ್ಯ ತೋರಿಸುವುದು ಸಾಮಾನ್ಯವೆನಿಸಿದೆ) ಸೂಕ್ತ ರಶೀದಿ/ದಾಖಲಾತಿಗಳಿರುವುದಿಲ್ಲ. 50 ಲಕ್ಷಕ್ಕಿಂತಲೂ ಹೆಚ್ಚಿನ ದರ ಪಾವತಿಸುವಾಗ ಟಿಡಿಎಸ್ ಪಾವತಿ ಪ್ರಕ್ರಿಯೆ, ಹಣವನ್ನು ಯಾವ ಮೂಲದಿಂದ ಮತ್ತು ಯಾವ ಬ್ಯಾಂಕ್ ಖಾತೆಯಿಂದ ಪಾವತಿಸಲಾಗುತ್ತಿದೆ (ಅನಿವಾಸಿ ಖಾತೆ ಅಥವಾ ಭಾರತೀಯ ಬ್ಯಾಂಕ್ ಖಾತೆ) ಎಂಬಿತ್ಯಾದಿ ಅಂಶಗಳ ಕುರಿತು ಮುಂಚಿತವಾಗಿ ಚಾರ್ಟರ್ಡ್ ಅಕೌಂಟೆಂಟ್ಗಳ ಸಲಹೆ ಪಡೆಯುವುದು ಒಳ್ಳೆಯದು. ಅಲ್ಲದೆ, ಇದು ತೆರಿಗೆ ಸಮಸ್ಯೆಗಳ ದೃಷ್ಟಿಯಿಂದ ಸೂಕ್ತವಲ್ಲದೇ, ಫ್ಲಾಟ್ ದರದಲ್ಲಿ ವ್ಯಾಟ್, ಸೇವಾ ತೆರಿಗೆ ದರವನ್ನು ಸರಿಯಾದ ಪ್ರಮಾಣದಲ್ಲಿ ನಮೂದಿಸಲಾಗಿದೆಯೇ ಎಂಬ ಅಂಶದತ್ತ ಸಹ ಸಿ.ಎ.ಗಳು ತಜ್ಞ ಸಲಹೆ ನೀಡಬಲ್ಲರು.
ಕಿರಿಕಿರಿ ಹಾಗೂ ಅನಗತ್ಯ ವೆಚ್ಚ
ಒಂದು ಫ್ಲಾಟ್ ಖರೀದಿಸಲು ವಕೀಲರು, ಎಂಜಿನಿಯರ್ಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳ ಹಿಂದೆ ಸುತ್ತಾಡಿ ವಿವಿಧ ಆಯಾಮಗಳ ಕುರಿತು ವಿಶ್ಲೇಷಣಾತ್ಮಕ ಸಲಹೆ ಪಡೆಯುವುದು ಕಿರಿಕಿರಿ ಕೆಲಸ ಮತ್ತು ಅನಗತ್ಯ ವೆಚ್ಚದ ಹಾದಿಯೆಂಬುದು ಕೆಲ ಹೂಡಿಕೆದಾರರ ದೂರು. ಏನೂ ಕೆಲಸ ಮಾಡದ ಬೊಗಳೆ ಬ್ರೋಕರ್ಗಳಿಗೆ ಹಿಂದೆ ಮುಂದೆ ನೋಡದೆ ಶೇ.1ರಿಂದ 2ರಷ್ಟು ಕಮೀಷನ್ ನೀಡುವ ಹೂಡಿಕೆದಾರರು, ವೃತ್ತಿ ತಜ್ಞರಿಗೆ 5ರಿಂದ 10 ಸಾವಿರ ಫೀಸು ನೀಡುವುದು ಹೆಚ್ಚೇ? ಹಾಗೆಯೇ, ಖರೀದಿಸಿದ ನಂತರ ಅನುಭವಿಸುವ ಕಷ್ಟ-ನಷ್ಟಗಳ ಪರಿಹಾರಕ್ಕೆ 5ರಿಂದ 10 ವರ್ಷಗಳ ಕಾಲ ನ್ಯಾಯಾಲಯಗಳ ಬಾಗಿಲ ಬಳಿ ಕಾಯುವುದಕ್ಕಿಂತ 5ರಿಂದ 10 ದಿನಗಳ ಕಾಲ ವಿಷಯ ಪರಿಣಿತರಿಂದ ವೃತ್ತಿಪರ ತಜ್ಞ ಸಲಹೆ ಪಡೆಯುವುದೇ ಶ್ರೇಷ್ಠವಲ್ಲವೇ?ಆಯ್ಕೆ ಜಾಗ್ರತೆ ಗ್ರಾಹಕನದ್ದು.
- ವಿವೇಕಾನಂದ ಪನಿಯಾಲ, ವಕೀಲರು