ಟೇಬಲ್ ಪರ್ವತದ ತಪ್ಪಲು ಬರಹಗಾರರ ಮೇಜು!
'ಒ.ಆರ್.ಟ್ಯಾಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಗತ...
'ಒ.ಆರ್.ಟ್ಯಾಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಗತ'
ಜೋಹಾನೆಸ್ಬರ್ಗ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಈ ಸೂಚನಾ ಫಲಕ ಕಂಡು ಪುಳಕವಾಯಿತು. ಒಲಿವರ್ ರೆಜಿನಾಲ್ಡ್ ಟ್ಯಾಂಬೋ ಹೆಸರನ್ನು ನೀವು ಕೇಳಿರಬಹುದು. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾಗೆ ಬಲಗೈಯಂತಿದ್ದ ಟ್ಯಾಂಬೋ, ವಿದೇಶಗಳಲ್ಲಿ ಈ ಹೋರಾಟಕ್ಕೆ ಬೆಂಬಲ ಸಿಗುವಂತೆ ಜಾಗೃತಿ ಮೂಡಿಸಿದ ಧೀಮಂತ ನಾಯಕ. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಅಧ್ಯಕ್ಷನೂ ಆಗಿದ್ದ ಟ್ಯಾಂಬೋನನ್ನು ಬಿಳಿಯರು ಕೆಲಕಾಲ ದೇಶದಿಂದ ಹೊರಗೆ ಹಾಕಿದ್ದರು. ಲಂಡನ್ನಲ್ಲಿ ಕೆಲಕಾಲ ತಲೆ ಮರೆಸಿಕೊಂಡಿದ್ದ. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲೆ ವಿಧಿಸಿದ್ದ ನಿಷೇಧವನ್ನು ವಾಪಸ್ ಪಡೆದ ಬಳಿಕ ಟ್ಯಾಂಬೋ ಸ್ವದೇಶಕ್ಕೆ ಮರಳಿ ಬಂದಿದ್ದ. ಜಾಂಬಿಯಾ, ಲಂಡನ್, ಹಾಲೆಂಡ್, ಜರ್ಮನಿ, ರಷ್ಯಾದಲ್ಲಿ ತಂಗಿದ್ದ ಟ್ಯಾಂಬೋ, ಆ ರಾಷ್ಟ್ರಗಳಿಂದಲೇ ವರ್ಣಭೇದ ನೀತಿಯ ವಿರುದ್ಧ ಗೆರಿಲ್ಲಾ ಸಂಘರ್ಷಕ್ಕೆ ಜನಾಭಿಪ್ರಾಯ ಮೂಡಿಸಿದ್ದಷ್ಟೇ ಅಲ್ಲ, ಹಣವನ್ನೂ ಸಂಗ್ರಹಿಸುತ್ತಿದ್ದ.
ಆಪ್ರಿಕಾದಲ್ಲಿನ ಬಿಳಿಯರ ಆಡಳಿತದ ದಮನಕಾರಿ ಕ್ರಮಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಂದೋಲನಕ್ಕೆ ಹೋರಾಟದ ಸ್ವರೂಪವನ್ನು ಕೊಟ್ಟವ. ನೆಲ್ಸನ್ ಮಂಡೇಲ ಆತ್ಮಕತೆ- long walk to freedom ಕೃತಿಯನ್ನು ಓದಿದರೆ ಟ್ಯಾಂಬೋ ಎಂಥ ಧೀಮಂತ ವ್ಯಕ್ತಿಯಾಗಿದ್ದ ಎಂಬುದು ಗೊತ್ತಾಗುತ್ತದೆ. ಈ ಮಹಾಪುರುಷನ ಹೆಸರನ್ನು ವಿಮಾನ ನಿಲ್ದಾಣಕ್ಕಿಟ್ಟುದು ಅರ್ಥಪೂರ್ಣವಾಗಿತ್ತು. ಮಂಡೇಲಾ ನಂತರದ ಸಾಲಿನಲ್ಲಿ ನಿಲ್ಲುವ ನಾಯಕ ಟ್ಯಾಂಬೋನ ಪ್ರತಿಮೆ ನೋಡಿದಾಗ, ಕಾಲೇಜು ದಿನಗಳಲ್ಲಿ ಓದಿದ ಅವನ ಹೋರಾಟದ ಕತೆಗಳೆಲ್ಲ ನೆನಪಿಗೆ ಬಂದವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವನ ಹೆಸರಿಟ್ಟುದನ್ನು ಬಿಟ್ಟರೆ, ರಸ್ತೆಗಾಗಲಿ, ಸಂಸ್ಥೆಗಾಗಲಿ ಅವನ ಹೆಸರಿಟ್ಟದ್ದನ್ನು ನೋಡಲಿಲ್ಲ. ಮಂಡೇಲಾ ಎಂಬ ಮಹಾ ಪ್ರಭಾವಳಿಯಲ್ಲಿ ಟ್ಯಾಂಬೋ ಮಸುಕಾಗಿ ಹೋದ ಎಂದೆನಿಸಿತು.
ಜೋಹಾನೆಸ್ಬರ್ಗ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಕೇಪ್ಟೌನ್ ವಿಮಾನ ಹಿಡಿಯಲು ಹೆಚ್ಚು ಸಮಯವಿರಲಿಲ್ಲ. ಒಂಬತ್ತು ಗಂಟೆ ಪ್ರಯಾಣ ಮಾಡಿ ಪುನಃ ಎರಡು ಗಂಟೆ ಪ್ರಯಾಣಕ್ಕೆ ಸಿದ್ಧರಾಗಿದ್ದೆವು. ಮುಂಬೈನಿಂದ ಮಧ್ಯರಾತ್ರಿ ಅಥವಾ ಬೆಳಗಿನ ಜಾವ ಎರಡೂ ಕಾಲು ಗಂಟೆಗೆ ನಮ್ಮ ಪ್ರಯಾಣ ಆರಂಭವಾಗಿದ್ದರೂ ನಿಜವಾಗಿ ಅದು ಶುರುವಾಗಿದ್ದು ಹಿಂದಿನ ದಿನದ ಮಧ್ಯಾಹ್ನ ಎರಡು ಗಂಟೆಗೆ. ಕಾರಣ ಮನೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ವಿಮಾನವನ್ನೇರಿ ಮುಂಬೈ ತಲುಪಿ, ಅಲ್ಲಿ ಮೂರು ತಾಸು ಕಳೆದು, ವಿಮಾನ ನಿಲ್ದಾಣಕ್ಕೆ ಮೂರು ಗಂಟೆ ಮೊದಲೇ ಹೋಗಿ, ಅಲ್ಲಿ ಎರಡು ತಾಸು ತೂಕಡಿಸಿ, ರಾತ್ರಿಯನ್ನೆಲ್ಲ ವ್ಯರ್ಥವಾಗಿ ಕಳೆಯದೇ ದೆವ್ವಗಳು ಮಲಗುವ ಹೊತ್ತಿಗೆ ವಿಮಾನವೇರುವ ವೇಳೆಗೆ ಹೈರಾಣ.
ಜತೆಯಲ್ಲಿ ಉದಯವಾಣಿ ಸಂಪಾದಕ, ಸ್ನೇಹಿತ ರವಿ ಹೆಗಡೆ ಇದ್ದುದರಿಂದ ಬಚಾವ್. ಇಬ್ಬರು ಪತ್ರಕರ್ತರಿಗೆ ಜಗಿಯಲು ಹಲವಾರು ವಿಷಯಗಳಿರುತ್ತವೆ. ಇಬ್ಬರ ಭಾವನೆಗಳು ಹೊಂದಿಕೊಂಡಂತೆ ಪ್ರತಿ ವಿಷಯವೂ ಮುಕ್ತ, ಮುಕ್ತ, ಮುಕ್ತ! ಅದರಲ್ಲೂ ನಮ್ಮನ್ನು ಹೊಗಳಿಕೊಳ್ಳುವುದು, ಬೇರೆಯವರನ್ನು ಬೈಯುವುದರಲ್ಲಿ (ಆತ್ಮರತಿ, ಪರನಿಂದನೆ) ತಲ್ಲೀನರಾದರೆ ಸಮಯ ಹೋಗಿದ್ದೇ ತಿಳಿಯುವುದಿಲ್ಲ. ಅಷ್ಟೇ ಅಲ್ಲ, ಎಷ್ಟು ಹೊತ್ತು ಬೇಕಾದರೂ ಕಾಯಬಹುದು, waiting is not painful. ನಮ್ಮ ಮಧ್ಯೆ ಸುದ್ದಿಮನೆಯ ಅವೆಷ್ಟೋ ಗುಟ್ಟುಗಳೆಲ್ಲ ರಟ್ಟಾಗಿದ್ದವು!
ಜೋಹಾನೆಸ್ಬರ್ಗ್ನಿಂದ ಕೇಪ್ಟೌನ್ಗೆ ಬಂದಿಳಿದಾಗ ನಮ್ಮನ್ನು ಸ್ವಾಗತಿಸಿದ್ದು ಹಿತಕರವಾದ ತಂಗಾಳಿ. ಮೈತುಂಬಾ ಬೆಚ್ಚನೆಯ ಸ್ವೆಟರ್, ಕೋಟು ಧರಿಸಿದ್ದರೂ ಆ ಚಳಿ ಒಳಗೆ ಜಾಗ ಕೇಳುತ್ತಿತ್ತು. ಕೇಪ್ಟೌನ್ ಇಷ್ಟವಾಗೋದೇ ಅಲ್ಲಿನ ಹವಾಮಾನಕ್ಕೆ. ಒಂಥರಾ ವರ್ಷವಿಡೀ 'ಹನಿಮೂನ್' ವಾತಾವರಣ. ಹಿತವಾದ ಚಳಿ, ಬೆಚ್ಚನೆಯ ತಂಗಾಳಿ. ಎಲ್ಲಿ ನೋಡಿದರಲ್ಲಿ ನೀಲಿ ಸಮುದ್ರ, ಅಲ್ಲಲ್ಲಿ ಗುಡ್ಡ, ಬೆಟ್ಟ, ಹಸಿರು. ಜಗತ್ತಿನ ಏಳು ನೈಸರ್ಗಿಕ ಅಚ್ಚರಿಗಳಲ್ಲೊಂದಾದ ಟೇಬಲ್ ಮೌಂಟನ್ ತಪ್ಪಲಿನಲ್ಲಿ ಮಲಗಿಕೊಂಡಿರುವ ಕೇಪ್ಟೌನ್, ಜಗತ್ತಿನ ಇಪ್ಪತ್ತೈದು ರಮಣೀಯ ನಗರಗಳ ಪೈಕಿ ಒಂದು. ಕೇಪ್ಟೌನ್ನಲ್ಲಿ ಕಡಿಮೆ ನಗರವಿದೆ, ಹೆಚ್ಚು ನಿಸರ್ಗವಿದೆ.
ನಾನು ಉಳಿದುಕೊಂಡ ಗ್ರ್ಯಾಂಡ್ ಡ್ಯಾಡಿ ಹೋಟೆಲ್ನ ರೂಮಿನ ಕಿಟಕಿಯ ಪರದೆ ಸರಿಸಿದರೆ, ಒಂದು ಹಾಸು ಮಂಜು ಆ ಭವ್ಯ, ಮನಮೋಹಕ ಟೇಬಲ್ ಮೌಂಟನ್ಗೇ ಪರದೆ ಕಟ್ಟಿತ್ತು. ಮಂಜಿನ ಪರದೆ ಸರಿದಂತೆಲ್ಲ ಟೇಬಲ್ ಮೌಂಟನ್ನ ವಿರಾಟರೂಪ ಅನಾವರಣಗೊಳ್ಳುತ್ತಾ ಹೋಗುತ್ತಿತ್ತು.
ಇಂಗ್ಲಿಷ್ ಲೇಖಕರಿಗೆ, ಸಾಹಿತಿಗಳಿಗೆ, ಕವಿಗಳಿಗೆ, ಹಾಲಿವುಡ್ ನಟ, ನಟಿಯರಿಗೆ, ಏಕಾಂತ ಬಯಸುವವರಿಗೆ, ಪ್ರವಾಸಿಗರಿಗೆ ಕೇಪ್ಟೌನ್ ಅಂದ್ರೆ ಯಾಕೆ ಇಷ್ಟ ಎಂಬ ಪ್ರಶ್ನೆಗೆ ಉತ್ತರ ನನಗೆ ಆಗಲೇ ಸಿಕ್ಕಿತ್ತು. ನಮ್ಮ ಅಮಿತಾವ್ ಘೋಷ್, ರಾಬಿನ್ ಶರ್ಮ, ದೀಪಕ್ ಛೋಪ್ರ, ಶೋಭಾ ಡೇ ಸೇರಿದಂತೆ ಹಲವಾರು ಲೇಖಕರಿಗೆ ಕೇಪ್ಟೌನ್ ಬರೆಯುವ ಟೇಬಲ್ ಇದ್ದಂತೆ. ಒಂದೆರಡು ತಿಂಗಳು ಇಲ್ಲಿಯೇ ಉಳಿದು ಪುಸ್ತಕದ ಬರವಣಿಗೆ ಕೆಲಸ ಮುಗಿಸಿ ಹೋಗುತ್ತಾರೆ. 'ನಾನು ಕೆಲಸ ಹಾಗೂ ರಜಾ ಕಾಲವನ್ನು ಏಕಕಾಲಕ್ಕೆ ಅನುಭವಿಸುವುದು ಕೇಪ್ಟೌನ್ನಲ್ಲಿ' ಎಂದು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಕೆಲವು ಬೆಸ್ಟ್ಸೆಲ್ಲರ್ಗಳನ್ನು ಕೊಟ್ಟ ರಾಬಿನ್ ಶರ್ಮ ಬರೆದುಕೊಂಡಿದ್ದಾನೆ. ಶಾರುಖ್ ಖಾನ್, ಅಭಿಷೇಕ್ ಬಚ್ಚನ್ಗೂ ಇದು ಪ್ರಿಯವಾದ ತಾಣವಂತೆ.
ಇವರ ಇಷ್ಟ-ಅನಿಷ್ಟಗಳೇನೇ ಇರಲಿ, ಕೇಪ್ಟೌನ್ ಎಂಥವರಿಗಾದರೂ ಖುಷಿಯಾಗುವ ತಾಣ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಒಂದು ದಶಕದಲ್ಲಿ ಯುರೋಪಿನಿಂದ ಬಂದವರು ಸುಮ್ಮನೆ ಹೋಗಿಲ್ಲ. ಇಲ್ಲೊಂದು ಮನೆಯನ್ನೋ, ಅಪಾರ್ಟ್ಮೆಂಟನ್ನೋ ಖರೀದಿಸಿಯೇ ಹೋಗಿದ್ದಾರೆ. ಲಂಡನ್, ಇಟಲಿ, ಪ್ಯಾರಿಸ್ನ ಶ್ರೀಮಂತರಿಗೆ ಕೇಪ್ಟೌನ್ ಎರಡನೆಯ ಮನೆಯಿದ್ದಂತೆ. ಹಾಗೆ ಅಂದು ಕೊಂಡವರೆಲ್ಲ ಇಲ್ಲೊಂದು 'ವಿಂಟರ್ಹೌಸ್' (ಚಳಿಗಾಲದ ಮನೆ) ಖರೀದಿಸಿದ್ದಾರೆ. ಯುರೋಪಿನಲ್ಲಿ ವಿಪರೀತ ಚಳಿಗಾಲವಿದ್ದಾಗ ಕೇಪ್ಟೌನ್ನಲ್ಲಿ ಹಿತವಾದ ಬೇಸಿಗೆ ಕಾಲವಿರುವುದರಿಂದ ಅವರೆಲ್ಲ ಎರಡು-ಮೂರು ತಿಂಗಳು ಇಲ್ಲಿ ಬಂದು ನೆಲೆಸುತ್ತಾರೆ. ಲಂಡನ್, ಫ್ರಾಂಕ್ಫರ್ಟ್ನಿಂದ ನೇರವಾದ ವಿಮಾನಗಳಿವೆ. ಅಲ್ಲದೇ ಟೈಮ್ ವ್ಯತ್ಯಾಸ ಬರೀ ಒಂದು, ಒಂದೂವರೆ ಗಂಟೆ ಅಷ್ಟೆ. ಹೀಗಾಗಿ ಕೇಪ್ಟೌನ್ ಯುರೋಪಿನ ನಗರದ ಛಾಯೆಯನ್ನು ತನಗರಿವಿಲ್ಲದಂತೆ ಪಡೆದುಕೊಂಡಿದೆ. ಈ ಕಾರಣದಿಂದ ರಿಯಲ್ ಎಸ್ಟೇಟ್ ವ್ಯವಹಾರ ಜೋರು. ಸಮುದ್ರಕ್ಕೆ ಮುಖ ಮಾಡಿದ ಪುಟ್ಟ ಮನೆಗಳಿಗೆ ಕೋಟಿಗಟ್ಟಲೆ ಬೆಲೆ. ಅಷ್ಟಾಗಿಯೂ ಅಲ್ಲಿ ಮನೆ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡಬೇಕು. ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಹಣ ಕೊಡಲು ತಯಾರಿದ್ದರೂ ಕನಿಷ್ಠ ಎರಡು ವರ್ಷ ಕಾಯಬೇಕು. 'ಕೇಪ್ಟೌನ್ನಲ್ಲಿ ಮನೆ ಮಾರಾಟಕ್ಕಿದೆ' ಎಂಬ ಜಾಹೀರಾತನ್ನು ಕೇಪ್ಟೌನ್ನ ಪತ್ರಿಕೆಗಳಲ್ಲಿ ಕೊಡುವುದಕ್ಕಿಂತ ಲಂಡನ್ನ ಪತ್ರಿಕೆಗಳಲ್ಲಿ ಬಿಡುಗಡೆ ಮಾಡಿದರೆ ಹೇಳಿದ ರೇಟಿಗೆ ಬೇಗನೇ ಖರೀದಿಸುವ ಗಿರಾಕಿ ಸಿಗುತ್ತಾನೆ.
ಈ ಎಲ್ಲ ಕಾರಣಗಳಿಂದಾಗಿ ಈ ನಗರದ ಬದುಕು ದುಬಾರಿ. ಒಳ್ಳೆಯ ಹೋಟೆಲ್ ರೂಮಿಗೆ ದಿನಕ್ಕೆ ಕನಿಷ್ಠ ಹನ್ನೆರಡರಿಂದ ಹದಿನೈದು ಸಾವಿರ ರುಪಾಯಿ ತೆರಬೇಕು. ಒಂದು ದಿನಕ್ಕೆ ಏನಿಲ್ಲವೆಂದರೂ 18-20 ಸಾವಿರ ರುಪಾಯಿ ಬೇಕು. ಆದರೂ ಮೊದಲೇ ಕಾಯ್ದಿರಿಸದಿದ್ದರೆ ರೂಮು ಸಿಗುವುದಿಲ್ಲ.
'ಇಲ್ಲಿ ನೀರಸ ಕ್ಷಣ ಎಂಬುದಿಲ್ಲ' ಎಂಬ ಮಾತು ಎಷ್ಟು ಕ್ಲೀಷೆಯಾಗಿದೆ ಅಂದರೆ ಇದನ್ನು ಎಲ್ಲ ದೇಶಗಳಲ್ಲಿ, ಎಲ್ಲ ಊರುಗಳಲ್ಲಿ ಸಹ ಕೇಳಬಹುದು. ಬೆಂಗಳೂರಿನ ಕಲಾಸಿಪಾಳ್ಯಕ್ಕೋ, ರಸೆಲ್ ಮಾರ್ಕೆಟ್ಗೋ, ಹುಬ್ಬಳ್ಳಿಯ ದುರ್ಗದ ಬೈಲಿಗೋ ಅನ್ವಯಿಸಿ ಹೇಳಬಹುದು. ಈ ಮಾತಿನ ಜೊತೆಗೆ ಕೇಪ್ಟೌನ್ಗೆ ಸಲ್ಲುವ ಮಾತೊಂದಿದೆ. ಅದೇನೆಂದರೆ, 'ಕೇಪ್ಟೌನ್ಗೆ ಬಂದಾಗ ನಿಮಗೆ ನಿಮ್ಮ ಮನೆ, ಊರಿನ ನೆನಪಾಗುವುದಿಲ್ಲ'. ನಾವು ಈ ಊರಿನಲ್ಲಿ ಉಳಿದಿದ್ದೇ ಐದು ದಿನವೋ, ಆ ಐದು ದಿನ ಬೇಗನೇ ಸರಿದು ಹೋಯಿತು ಎಂಬ ಕಾರಣವೋ ಗೊತ್ತಿಲ್ಲ, ನನಗಂತೂ ಮನೆ, ಊರು, ಗೆಳತಿಯರು, ಟ್ವಿಟ್ಟರ್, ಫೇಸ್ಬುಕ್, ಮೊಬೈಲು, ಕಂಪ್ಯೂಟರ್, ಆಫೀಸು... ಯಾವುದೂ ನೆನಪಾಗಲಿಲ್ಲ. (ಅವರಿಬ್ಬರೂ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಪದೇ ಪದೆ ಅಂದುಕೊಂಡಿದ್ದರಿಂದ ಹೆಂಡತಿ, ಮಗ ನೆನಪಾಗಿದ್ದು, ಅವರನ್ನು ನೆನಪು ಮಾಡಿಕೊಟ್ಟಿದ್ದು ಮಾತ್ರ ಕೇಪ್ಟೌನ್.)
ತಿರುಗುವುದೇ ಮುಖ್ಯ ಕಸುಬಾಗಿದ್ದ ನಮಗೆ ಈ ಊರು ಮಾವನ ಮನೆಗೆ ಹೋದ ಕ್ಷಣಗಳನ್ನು ನೆನಪಿಸುತ್ತಿತ್ತು. ಬೇರೆ ನಗರಗಳಲ್ಲಿ ಕಾಣಸಿಗದ ಒಂದು ರೀತಿಯ homely ವಾತಾವರಣ ಕೇಪ್ಟೌನ್ನ ಪರಿಸರದಲ್ಲಿ ಹರಡಿರುವುದು ನಿಜ. ಅದಕ್ಕೆ ಕಾರಣ ಅಲ್ಲಿನ ಜನ, ನಿಸರ್ಗ ಹಾಗೂ ಹವಾಮಾನ. ನಗರದ ಕೇಂದ್ರ ಭಾಗಕ್ಕೆ ಹೊಂದಿಕೊಂಡಂತೆ ವಸತಿ ಬಡಾವಣೆ. ಊರಿಗೊಂದೇ ಉದ್ದದ ಲಾಂಗ್ಸ್ಟ್ರೀಟ್ ಎಂಬ ರಸ್ತೆ. ಇದರ ಸುತ್ತಮುತ್ತ ಪ್ರಮುಖ ಶಾಪಿಂಗ್ ಮಾಲ್, ವಾಣಿಜ್ಯ ಸಂಕೀರ್ಣಗಳು. ಐದಾರು ಗಗನಚುಂಬಿ ಕಟ್ಟಡಗಳನ್ನು ಬಿಟ್ಟರೆ, ಹೆಚ್ಚುಕಮ್ಮಿ ಇಡೀ ನಗರ ಸಪಾಟ. ಈ ಊರಿನಲ್ಲಿ ನಿಜವಾಗಿಯೂ ಗಗನಚುಂಬಿ ಅಂದ್ರೆ ಅದು ಟೇಬಲ್ ಮೌಂಟನ್. ಅಲ್ಲೂ ನಿಸರ್ಗದ್ದೇ ಮೇಲುಗೈ!
ಈ ಊರಿನ ಬಗ್ಗೆ ಒಂದು ವರ್ಣನೆ ಹೀಗಿದೆ-'ಆರ್ಚಿ ರಿಚರ್ಡ್ಸನ್ ಎಂಬುವ ಕೇಪ್ಟೌನ್ನಲ್ಲಿದ್ದ. ಆತ ಕ್ರಿಕೆಟ್, ಫುಟ್ಬಾಲ್, ಟೆನಿಸ್ ಆಡಿದ. ಹೇರಳ ಸಂಪಾದಿಸಿದ. ಮನೆ ಖರೀದಿಸಿದ. ಮೂರ್ನಾಲ್ಕು ಕಾರುಗಳನ್ನು ಮನೆ ಮುಂದೆ ನಿಲ್ಲಿಸಿದ. ಅದೇನಾಯಿತೋ ಏನೋ ಆರ್ಚಿ ಮುಟ್ಟಿದ್ದೆಲ್ಲವೂ ಮಣ್ಣಾಯಿತು. ಮೈತುಂಬಾ ಸಾಲ ಮಾಡಿಕೊಂಡ. ಕೊನೆಗೆ ಮನೆಯೊಂದೇ ಉಳಿಯಿತು. ಈ ಸಮಾಧಾನದಲ್ಲಿ ಆರ್ಚಿ ಹೇಳಿದನಂತೆ- 'ಕಳೆದಿದ್ದನ್ನೆಲ್ಲ ಗಳಿಸುವೆ ಎಂಬ ಆಸೆಯಿದೆ. ಕಾರಣ ನನ್ನೊಂದಿಗೆ ಕೇಪ್ಟೌನ್ ಇದೆ. ನಾನು ಎಂದೂ ಒಂಟಿಯಲ್ಲ. ನಾನೆಂದೂ ಸೋಲುವುದಿಲ್ಲ. ಕಾರಣ ನನ್ನಲ್ಲಿ ನೆಮ್ಮದಿಯಿದೆ. ಅದನ್ನು ನನಗೆ ಕೇಪ್ಟೌನ್ ಕೊಟ್ಟಿದೆ.'
ಒಂದು ಊರಿಗೆ ಇಂಥ ಗುಣ ಇರುವುದು ಸಹಜ. ಕೇಪ್ಟೌನ್ ಕೂಡ ಅಷ್ಟೇ ಸಹಜ.
(ಪ್ರದಕ್ಷಿಣೆ ಮುಂದುವರಿಯುವುದು)
- ವಿಶ್ವೇಶ್ವರ ಭಟ್