ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅನುಭವ ಧಾರೆ ಎರೆಯಲಿ!

Vishwanath S
Updated On : 5 Nov 2013, 7:03 am

ಕ್ರಿಕೆಟ್ ಜಗತ್ತಿನ ದೇವರೆಂದೇ ಖ್ಯಾತಿ ಸಚಿನ್ ಕ್ರೀಡಾಂಗಣಕ್ಕೆ ಇಳಿದರೆ ಅಲ್ಲಿ ಯಾವುದಾದರೊಂದು ಹೊಸ ದಾಖಲೆಯಾಗುತ್ತಿತ್ತು. ಚೆನ್ನಾಗಿ ಆಡಿದರೂ, ಆಡದಿದ್ದರೂ, ಔಟಾದರೂ, ಸೆಂಚುರಿ ಹೊಡೆದರೂ, ಸೆಂಚುರಿ ತಪ್ಪಿಸಿಕೊಂಡರೂ ದಾಖಲೆ! ಒಟ್ಟಿನಲ್ಲಿ ಅವರು ದಾಖಲೆಗಳ ವೀರ. ಸಚಿನ್ ಹುಟ್ಟಿದ್ದೇ ದಾಖಲೆಗಳನ್ನು ನಿರ್ಮಿಸುವುದಕ್ಕೆ ಎನ್ನುವ ರೀತಿಯಲ್ಲಿ ಆಡುವ ಸಚಿನ್‌ಗೆ ಸಾಟಿ ಯಾರೂ ಇಲ್ಲ. ಇಂಥ ಸಚಿನ್ ವಿದಾಯ ಹೇಳುವ ನಿರ್ಧಾರ ತೆಗೆದುಕೊಂಡಾಗ ಮನಸ್ಸಿಗೆ ಆದ ಅಘಾತ ಅಷ್ಟಿಷ್ಟಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಲು ಅವರ ನಿರ್ಧಾರ ಸ್ವೀಕಾರಾರ್ಹ. ಆದರೆ ನಿವೃತ್ತಿಯ ನಂತರವೂ ಅವರ ಅನುಭವವನ್ನು ಹೊಸ ಆಟಗಾರರಿಗೆ ಧಾರೆ ಎರೆಯಲಿ.
- ತುಳಜಪ್ಪ ಬುಧೇರ, ಗುಲ್ಬರ್ಗ

ಇನ್ನಷ್ಟು ಸಚಿನ್‌ಗಳು ಬರಲಿ!
ಆಡು ಮುಟ್ಟದ ಸೊಪ್ಪಿಲ್ಲ, ಸಚಿನ್ ತಲುಪದ ದಾಖಲೆ ಇಲ್ಲ. ಸಚಿನ್ ಒಬ್ಬ ಸವ್ಯಸಾಚಿ. ಸಚಿನ್ ಬ್ಯಾಟ್ ಹಿಡಿದು ಅಬ್ಬರಿಸಲಾರಂಭಿಸಿದರೆ ವೀಕ್ಷಕರು ಮೈಮನ ಮರೆತು ಆಟ ನೋಡುವುದರಲ್ಲಿ ತಲ್ಲೀನರಾಗುತ್ತಾರೆ. ಆಕಸ್ಮಾತಾಗಿ ಅವರು ಪ್ರಾರಂಭದಲ್ಲಿಯೇ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ತುಳಿದರೆ, ಟಿ.ವಿ. ಆರಿಸಿ ಎದ್ದು ಹೋಗುವ ಅಭಿಮಾನಿಗಳೆಷ್ಟೋ! ಅದ್ಭುತ ಆಟ ಪ್ರದರ್ಶಿಸಿ ಲಿಟಲ್ ಸ್ಟಾರ್, ಮಾಸ್ಟರ್ ಬ್ಲಾಸ್ಟರ್ ಪದವಿಗಳನ್ನು ಪಡೆದದ್ದು ಕ್ರಿಕೆಟ್ ಇತಿಹಾಸದಲ್ಲೇ ಅಪರೂಪ. ಸಚಿನ್ ಅವರದ್ದು  ಮಿಸ್ಟರ್ ಕ್ಲೀನ್ ವ್ಯಕ್ತಿತ್ವ. ಇವರ ನಿವೃತ್ತಿಯಿಂದ ಕ್ರಿಕೆಟ್ ರಂಗ ಬಡವಾಗದೇ ಇನ್ನಷ್ಟು ಸಚಿನ್‌ಗಳನ್ನು ಸೃಷ್ಟಿಸಲಿ.
- ಮಹಾಂತೇಶ ಜಿ. ಹಿರೇಮಠ, ಬೈಲವಾಡ

ಧ್ರುವತಾರೆ
ಹದಿನಾರರ ಹರೆಯದಲ್ಲಿ ಕ್ರೀಡಾಲೋಕಕ್ಕೆ ಧುಮುಕಿ ವಿಶ್ವದ ಕ್ರೀಡಾಪ್ರೇಮಿಗಳ ಮನಗೆದ್ದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಇವರ ಸಾಧನೆಗೆ ಸಹನೆಯೇ ಶಕ್ತಿ. ಈತ ವೈಯಕ್ತಿಕವಾಗಿಯೂ ಸೌಜನ್ಯ, ಸಹಭಾಗಿತ್ವ, ಸೃಜನಶೀಲ ನಡವಳಿಕೆಗಳನ್ನು ಮೈದುಂಬಿಕೊಂಡವರು. ಸತತ ಪರಿಶ್ರಮದಿಂದ ಯಶಸ್ಸು ಕಂಡು ಧ್ರುವತಾರೆಯಾಗಿ ಮಿನುಗುತ್ತಿದ್ದಾರೆ. ಸಚಿನ್ ದೇಶ ಸೇವೆಯೇ ಈಶ ಸೇವೆಯೆಂದು ತಿಳಿದು ಹಲವಾರು ಪ್ರಶಸ್ತಿಗಳನ್ನು ಗೆದ್ದು ತಂದು ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಂದು ನಿವೃತ್ತಿ ಪಡೆದು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿ ವೈಯಕ್ತಿಕ ಜೀವನದತ್ತ ಮುಖಮಾಡಿದ್ದಾರೆ. ಅವರ ಮುಂದಿನ ಜೀವನವೂ ಉತ್ತಮವಾಗಲಿ.
- ಪ್ರದೀಪ ಬಿ, ಕೆ.ಆರ್.ಪೇಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement