ಕ್ರಿಕೆಟ್ ಜಗತ್ತಿಗೆ ಹೊಸ ಬಾಷ್ಯ!
ನಮ್ಮ ದೇಶದಲ್ಲಿ ಕ್ರಿಕೆಟ್ ಮಾಂತ್ರಿಕ, ದೇವರು ಎಂದು ಪ್ರಸಿದ್ಧಿ ಪಡೆದವರು. ಈದೀಗ ತನ್ನ ವೃತ್ತಿಗೆ ವಿದಾಯ ಹೇಳಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಆಟಗಾರರೂ ಇದ್ದರು ಎನ್ನುವ ಹೊಸ ಬಾಷ್ಯ ಬರೆದ ಶ್ರೇಯಸ್ಸು ಸಚಿನ್ಗೆ ಸಲ್ಲುತ್ತದೆ. ಪ್ರತಿಯೊಂದು ಭಾರಿಯೂ ಕುತೂಹಲ ಮೂಡಿಸುವ ಅವರ ಆಟ ನೋಡುಗನನ್ನು ಹುಚ್ಚು ಹಿಡಿಸುವಂತೆ ಮಾಡುತ್ತದೆ. ಅದೆಷ್ಟೋ ದೇಶದ ಆಟಗಾರರು ಇವರ ಆಟಕ್ಕೆ ಮನಸೋತು ಹೋಗಿದ್ದಾರೆ. ಇವರ ಆಟದ ಮೋಡಿಗೆ ಅಭಿಮಾನಿಯಾಗದ ವ್ಯಕ್ತಿಯೇ ಇಲ್ಲಾ ಎಂದರೂ ತಪ್ಪಾಗದು. ಮಹಾರಾಷ್ಟ್ರ ಮಣ್ಣಿನಲ್ಲಿ ಹುಟ್ಟಿ ಹತ್ತನೆಯ ತರಗತಿ ಫೇಲ್ ಆಗಿ ಅದೇ ರಾಜ್ಯದ ಹತ್ತನೆಯ ತರಗತಿಗೆ ಪಠ್ಯವಾಗಿರುವ ಇವರ ಸಾಧನೆ ಅಮೋಘ!
-ಕೆ.ಎಂ.ವಿಶ್ವನಾಥ ಮರತೂರ.
ಅಭಿಮಾನ ಇನ್ನೂ ಹೆಚ್ಚುತ್ತಿತ್ತು!
ಸಚಿನ್ ತೆಂಡೂಲ್ಕರ್ ಅವರು ಈಗಲಾದರೂ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಸುಮಾರು 25 ವರ್ಷಗಳ ಆಟ ಆಡಿದ್ದಾರೆಅದು ಸಾಕಲ್ಲವೆ? ಮುಂಚೆಯೇ ಸಚಿನ್ ಹೊಸ ಆಟಗಾರರಿಗೆ ಅವಕಾಶ ಮಾಡಿಕೊಟ್ಟು ತಮ್ಮ ದೊಡ್ಡತನ ತೋರಿಸಬೇಕಿತ್ತು. ಮಾಧ್ಯಮಗಳ ಮೂಲಕ ಜನ 'ನೀನು ಆಡಿದ್ದು ಸಾಕು' ಎನ್ನುವಷ್ಟರಲ್ಲಿ ಜಾಗ ತೆರವುಗೊಳಿಸಿದ್ದಿರೆ ಇನ್ನೂ ಗೌರವ ಹೆಚ್ಚುತ್ತಿತ್ತು. ಆದರೂ ಇವರ ಮೇಲಿನ ಅಭಿಮಾನವಂತೂ ಕರಗುವುದಿಲ್ಲ. ಇವರ ಸಾಧನೆಗಳನ್ನು ಬಹುಶಃ ಯಾರೂ ಮುರಿಯಲಾರರು. ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಸಚಿನ್ಗೆ ಧನ್ಯವಾದಗಳು. ನೋವಿನಿಂದ ಗುಡ್ಬೈ!
-ಪತಂಗಿ ಹೇಮಲತ ಮುರಳಿ, ಬೆಂಗಳೂರು
ಮರೆಯದ ಮಾಣಿಕ್ಯ!
'ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು' ಎಂಬ ಮಾತಿಗೆ ಅತ್ಯುತ್ತಮ ಉದಾಹರಣೆ ಸಚಿನ್. ಅವರ ನಿವೃತ್ತಿಯಿಂದ ಭಾರತೀಯ ಕ್ರಿಕೆಟ್ನ ಬೆನ್ನೆಲುಬು ಮುರಿದುಬಿದ್ದಂತಾಗಿದೆ. 24 ವರ್ಷಗಳ ಸುದೀರ್ಘ ಆಟದ ಮೂಲಕ ವಿಶ್ವವನ್ನೆ ತನ್ನತ್ತ ನೋಡುವಂತೆ ಮಾಡಿದ ಅದ್ಭುತ ಗಾರುಡಿಗ. ದಾಖಲೆಗಾಗಿ ಎಂದೂ ಆಡಿದವರಲ್ಲ. ಆದರೆ ಅವರು ಆಡಿದ್ದೆಲ್ಲಾ ದಾಖಲೆಯೇ. ಈ ಸುದೀರ್ಘ ಪಯಾಣದಲ್ಲಿ ಸಚಿನ್ ಅನುಭವಿಸಿದ ಯಾತನೆಗಳು ಎಷ್ಟೋ, ಅವುಗಳನ್ನು ಮೌನವಾಗಿಯೇ ಸಹಿಸಿಕೊಂಡು ತಮ್ಮ ಬ್ಯಾಟ್ ಮೂಲಕವೇ ಅವುಗಳಿಗೆ ಉತ್ತರ ನೀಡಿದರು. ಕೆಲವೇ ಪದಗಳಲ್ಲಿ ಅವರ ಸಾಧನೆಯನ್ನು ವರ್ಣಿಸಲು ಶಬ್ದಗಳೇ ಇಲ್ಲ, ಕ್ಷಮೆ ಇರಲಿ.
-ಎಲ್.ವಿ. ಕುಮಾರಸ್ವಾಮಿ, ಹಿರಿಯೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com