ಕ್ರಿಷ್ನಾವತಾರ
ಬಾಲ್ಯದಲ್ಲಿ ಸೋಪಿನಲ್ಲಿ ಗಣಪನನ್ನು ಮಾಡುತ್ತಾ, ಕಂಡ ಕಂಡಿದ್ದನ್ನು ಚಿತ್ರ ಬಿಡಿಸುತ್ತಿದ್ದ ದಾವಣಗೆರೆಯ ಯುವಕ ಇಂದು...
ಬಾಲ್ಯದಲ್ಲಿ ಸೋಪಿನಲ್ಲಿ ಗಣಪನನ್ನು ಮಾಡುತ್ತಾ, ಕಂಡ ಕಂಡಿದ್ದನ್ನು ಚಿತ್ರ ಬಿಡಿಸುತ್ತಿದ್ದ ದಾವಣಗೆರೆಯ ಯುವಕ ಇಂದು ದೇಶವೇ ತಲೆದೂಗುವಂತಹ ಅದ್ಭುತ ಮೇಕಪ್ ಕಲಾವಿದನಾಗಿ ಹೊರಹೊಮ್ಮಿದ್ದಾನೆ. ಹೃತಿಕ್ ರೋಷನ್ರ ಬಹು ನಿರೀಕ್ಷಿತ ಕ್ರಿಷ್- 3 ಚಿತ್ರದಲ್ಲೂ ತಮ್ಮ ಕೈ ಚಳಕ ಮೆರೆದಿದ್ದಾರೆ.
ದಾವಣಗೆರೆ ಬ್ಯಾಂಕ್ ಉದ್ಯೋಗಿ ನಾಮದೇವ ಪಿಸೆ, ಶಶಿಕಲಾ ದಂಪತಿ ಪುತ್ರ ನಹುಷ ಪಿಸೆ ತಮ್ಮ ಮೇಕಪ್ ಕಲೆಯ ಮೂಲಕ ಬಾಲಿವುಡ್ನ್ನೇ ಪರವಶವಾಗುವಂತೆ ಮಾಡುತ್ತಿದ್ದಾರೆ. ತಾಯಿ ಶಶಿಕಲಾ ಸಹ ಮೇಕಪ್ ಮಾಡುವಲ್ಲಿ ಸಿದ್ಧಹಸ್ತೆ. ಇದು ನಹುಷ್ಗೆ ತಾಯಿಯಿಂದ ಬಂದ ಬಳುವಳಿ.
ಇಲ್ಲಿನ ಲೂರ್ಡ್ಸ್ ಬಾಲಕರ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿ, ಎಆರ್ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ನಹುಷ ನಂತರ ಮೇಕಪ್ ತರಬೇತಿಗಾಗಿ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದಲ್ಲಿ ಮೇಕಪ್ ತರಬೇತಿ ಪಡೆದ ನಂತರ ನಹುಷ ಬಾಲಿವುಡ್ನಲ್ಲಿ ತಮ್ಮ ಕೈಚಳಕ ತೋರಲಾರಂಭಿಸಿದರು. ಹೆಸರಾಂತ ನಟ ನಟಿಯರಿಗೆ ಮೇಕಪ್ ಮಾಡುತ್ತಾ ದಿನದಿನಕ್ಕೂ ಹೆಸರು ಮಾಡುತ್ತಾ ಸಾಗಿದ್ದಾರೆ.
ಆಕ್ಷನ್ ಹೀರೋ ಅಕ್ಷಯ್ ಕುಮಾರ್ಗೆ ಆಕ್ಷನ್ ಪ್ಲೇ ಚಿತ್ರಕ್ಕೆ 2006ರಲ್ಲಿ ಮೇಕಪ್ ಮಾಡಿ ಹೆಸರು ಗಳಿಸಿದ ನಹುಷ 2006ರಲ್ಲಿ ತೆರೆ ಕಂಡ ಹೃತಿಕ್ ರೋಷನ್ರ ಕ್ರಿಷ್ ಚಿತ್ರಕ್ಕೆ ವಿಶೇಷ ಮುಖವಾಡ ತಯಾರಿಸಿದ್ದರು. ಹಾಲಿವುಡ್ನಲ್ಲಷ್ಟೇ ನಡೆಯುತ್ತಿದ್ದ ಹೊಸ ಪ್ರಯೋಗಕ್ಕೆ ಕೈ ಹಾಕಿದ ನಹುಷ ಅಲ್ಲಿಂದ ಹೆಸರು ಮಾಡುತ್ತಾ ಸಾಗಿದರು. 2013ರಲ್ಲಿ ತೆರೆಕಂಡ ಕ್ರಿಷ್- 3 ಚಿತ್ರದಲ್ಲೂ ನಹುಷ್ ಕೈ ಚಳಕ ಅಡಗಿದೆ.
ಖ್ಯಾತ ನಿರ್ದೇಶಕ ಮಣಿರತ್ನಂರ ರಾವಣ್ ಚಿತ್ರದಲ್ಲಿ ಐಶ್ವರ್ಯ ರೈಗೆ, ಸಂಜಯ್ ಲೀಲಾ ಬನ್ಸಾಲಿ ಅವರ ಗುಜಾರಿಷ್ ಚಿತ್ರದಲ್ಲಿ ಹೃತಿಕ್ಗೆ, ಧೂಮ್- 2ನಲ್ಲಿ ಹೃತಿಕ್ಗೆ, ಬನ್ಸಾಲಿ ನಿರ್ಮಿಸಿದ ಬ್ಲಾಕ್ಗೆ, ಫರಾನ್ ಅಕ್ತರ್ರ ಲಕ್ಷ್ಯ ಚಿತ್ರದಲ್ಲಿ ಮತ್ತೆ ಹೃತಿಕ್ಗೆ, ಚಾಂದಿನಿ ಚೌಕ್ ಟು ಚೈನಾ ಚಿತ್ರದಲ್ಲಿ ದೀಪಿಕಾ ಪಡುಕೋಣೆಗೆ, ಸೀ ಯು ಅಟ್ 9, ಲವ್ ಸ್ಟೋರಿ 2050ಕ್ಕೆ ಮೇಕಪ್ ಕೈಚಳಕ ತೋರಿದ್ದಾರೆ.
ನೂರಾರು ಚಿತ್ರಗಳಲ್ಲಿ ಖ್ಯಾತ ನಟ- ನಟಿಯರಿಗೆ ಜೀವಕಳೆ ತುಂಬಿದ ನಹುಷ್, ಹಿಂದಿ, ತಮಿಳು ಚಿತ್ರಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಧನುಷ್, ಅನುಷ್ಕಾಗೂ ಮೇಕಪ್ ಮಾಡಿದ ನಹುಷ್ ತಮ್ಮ ಕಲೆಯನ್ನು ನಿಂತ ನೀರಾಗಲು ಬಿಟ್ಟವರಲ್ಲ. ಹೊಸತನ, ಹೊಸ ಪ್ರಯತ್ನಕ್ಕೆ ಸದಾ ತುಡಿಯುವ ಉತ್ಸಾಹ. ಮೀಸೆ ಮೂಡದ ಹುಡುಗನನ್ನು ಹಣ್ಣು ಹಣ್ಣು ಮುದುಕನಾಗಿ, ಸುಂದರ ಯುವತಿಯನ್ನು ವಯೋವೃದ್ಧೆಯಾಗಿ, ಸಣಕಲು ವ್ಯಕ್ತಿಯನ್ನು ದಷ್ಟಪುಷ್ಟ ಪೈಲ್ವಾನನಾಗಿ, ಅನ್ಯಗ್ರಹ ಜೀವಿಗಳು, ಅಪಘಾತ, ಬಾಂಬ್ ಸ್ಪೋಟದಿಂದ ಜರ್ಝರಿತವಾದ ದೇಹ, ದೇಹದ ವಿವಿಧ ಭಾಗದಿಂದ ಅಂಗಾಂಗಗಳು ಹೊರಬಂದಂತೆ ಭಾಸವಾಗುವಂತೆ ಮೇಕಪ್ ಮಾಡುವುದರಲ್ಲಿ ನಹುಷ ಪ್ರವೀಣ. ಇನ್ನೂ ಬಿಡುಗಡೆಯಾಗದ 'ಹಾರ್ಟ್ಲೆಸ್' ಚಿತ್ರಕ್ಕೆ ವಿಭಿನ್ನವಾದ ಮೇಕಪ್ ಮಾಡಿದ್ದಾರಂತೆ.
ಮುಖ, ದೇಹವನ್ನೇ ಬದಲಾಯಿಸುವ ಕ್ಠ್ಟಿಡಝಿಜಡಡ್ಝ್ಛಿ ಮೇಕಪ್ ಕಲಾವಿದನಾಗಿ ನಹುಷ್ ಸದ್ಯಕ್ಕೆ ಮುಂಬೈನಲ್ಲಿ ನೆಲೆಯೂರಿದ್ದು, ಅಲ್ಲೇ ಮೇಕಪ್ ತರಬೇತಿ ಶಾಲೆ ಆರಂಭಿಸಿದ್ದಾರೆ. ಫ್ಯಾಷನ್, ಬಾಡಿ ಪೇಂಟಿಂಗ್, ವಧು- ವರರ ಮೇಕಪ್, ಹೇರ್ಸ್ಟೈಲ್ ಹೀಗೆ ವಿಭಿನ್ನ ತರಬೇತಿ ನೀಡುತ್ತಿದ್ದಾರೆ. ಭಾರತೀಯರಷ್ಟೇ ಅಲ್ಲ, ವಿದೇಶೀಯರೂ ಅವರ ಬಳಿ ತರಬೇತಿ ಪಡೆಯುತ್ತಾರೆ.
ದಾವಣಗೆರೆಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ನಹುಷರ ತಂದೆ ನಾಮದೇವ ಪಿಸೆ ಹಾಗೂ ಚಿಕ್ಕಪ್ಪ ಪಿ.ಜೆ. ಪಾಂಡುರಂಗ ಇಬ್ಬರೂ ರೂಪಕಲಾ ಬ್ಯೂಟಿಪಾರ್ಲರ್ ನಡೆಸುತ್ತಿದ್ದಾರೆ. ತಮ್ಮ ಮಗ ನಹುಷ್ ಸಾಧನೆಯ ಬಗ್ಗೆ ಹೆತ್ತವರದು ಹರ್ಷ, ಅಭಿಮಾನ. ನಹುಷ್ ಬಗ್ಗೆ ಹೆಚ್ಚಿನ ಮಾಹಿತಿಗೆ: www.nahushpise.com, makeupartistindia.in.
- ನಾಗರಾಜ ಬಡದಾಳ್