ಬೈಟುಕಾಫಿ

ಭರವಸೆಯ ಭೂಶಿರದ ಭಾವ ರೋಮಾಂಚನ

ಒಂದು ನದಿಯ ಹರವು ನೋಡುವುದೇ ಚೆಂದ. ಅದು ಸಮುದ್ರಕ್ಕೆ ಸೇರುವ ನೋಟ...

ಒಂದು ನದಿಯ ಹರವು ನೋಡುವುದೇ ಚೆಂದ. ಅದು ಸಮುದ್ರಕ್ಕೆ ಸೇರುವ ನೋಟ ಇನ್ನೂ ಚೆಂದ. ಇನ್ನು ಒಂದು ಮಹಾಸಾಗರದ ಹರವು ಚೆಂದದಲ್ಲಿ ಚೆಂದ. ಆದರೆ, ಎರಡು ಮಹಾಸಾಗರಗಳು ಒಂದನ್ನೊಂದು ಬಿಗಿದಪ್ಪಿ, ಒಂದರೊಳಗೊಂದು ಲೀನವಾಗಿ 'ಏಕ'ವಾಗುವ ದೃಶ್ಯ ಹೇಗಿದ್ದೀತು?
ಅದ್ಭುತ! ಅತ್ಯದ್ಭುತ!
ಹೀಗೆಂದರೆ ಏನೂ ಹೇಳಿದಂತಾಗಲಿಲ್ಲ. ಅದು ಆಲಸಿಯೊಬ್ಬನ ಸರಳ ವರ್ಣನೆಯಾದೀತು ಅಷ್ಟೆ. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಕನ್ಯಾಕುಮಾರಿಯಲ್ಲಿ ಜೊತೆಯಾಗುವ ದೃಶ್ಯವನ್ನು ಕಂಡು ನಿಬ್ಬೆರಗಾದ ನಾನು, ಅಂದು ಎರಡು ಮಹಾಸಾಗರಗಳ ಅಪ್ಪುಗೆಯನ್ನ ಕಂಡು ಕ್ಷಣಕಾಲ ಮಾತು ಮರೆತವನಂತಾಗಿದ್ದೆ. ಅಂದು ಮಹಾಸಾಗರ ಹಾಗೂ ಅಟ್ಲಾಂಟಿಕ್ ಮಹಾಸಾಗರಗಳೆರಡೂ 'ಬೆಸುಗೆ' ಹಾಕುವ ದೃಶ್ಯವನ್ನು ಇಡಿಯಾಗಿ ಸೆರೆಹಿಡಿಯಲು, ಮನದೊಳಗೆ ತುಂಬಿಕೊಳ್ಳಲು ಕಣ್ಣು, ಮನಸ್ಸುಗಳೆರಡೂ ಸೋಲುತ್ತಿದ್ದವು.
ಕೇಪ್ ಪಾಯಿಂಟ್‌ನಲ್ಲಿ  ನಿಂತರೆ ಸಾಗರ ಹಾಗೂ ಆಕಾಶವೂ ಒಂದೇ ಆಗಿತ್ತು. ಸಾಗರದ ನೀಲಿಯಲ್ಲಿ ಆಕಾಶದ ನೀಲಿಯೂ ಸೇರಿ ಅನಂತತೆಯ ಪರಿಧಿಯನ್ನು ವಿಸ್ತರಿಸಿದಂತೆ ಭಾಸವಾಗುತ್ತಿತ್ತು. ಆ ಮಹಾಸಾಗರ ಎಲ್ಲಿ ಕೊನೆಯಾಗಿ, ಎಲ್ಲಿಂದ ಆಕಾಶ ಆರಂಭವಾಗುತ್ತದೆಂಬ ಆ ಸಣ್ಣಗೆರೆಯ ವ್ಯತ್ಯಾಸವನ್ನು ಗುರುತಿಸಲು ಆಗುತ್ತಿರಲಿಲ್ಲ. ನಾವು ನಿಂತ ಜಾಗದ ಮುಂದೆ ಭೂಪ್ರದೇಶವೇ ಇಲ್ಲ, ಅದು ಆಫ್ರಿಕಾ ಖಂಡದ ತುತ್ತ ತುದಿ ಎಂಬುದನ್ನು ಸಾಕ್ಷಾತ್ ಕಂಡಾಗ ಆದ ರೋಮಾಂಚನ ಅಷ್ಟಿಷ್ಟಲ್ಲ.

ಎರಡು ಮಹಾಸಾಗರಗಳು ಲೀನವಾಗಿ ಕೇಪ್ ಪಾಯಿಂಟ್‌ನ ದಡಕ್ಕೆ ಬಂದು ಅಪ್ಪಳಿಸುತ್ತಿದ್ದವು. ಅದರ ತುಂತುರು ಹನಿಗಳಲ್ಲಿ ಕಾಮನಬಿಲ್ಲುಗಳು ಗರಿಗೆದರಿದ್ದವು. ಕೇಪ್ ಪಾಯಿಂಟ್‌ನ ಎತ್ತರದಲ್ಲಿರುವ ಲೈಟ್ ಹೌಸ್ ತಲುಪಲು ಮೆಟ್ಟಿಲುಗಳನ್ನು ಏರುತ್ತಿದ್ದರೆ ಸುತ್ತಲೂ ವ್ಯಾಪಿಸಿದ ಮಹಾಸಾಗರ ನಮ್ಮ ಮುಂದೆ ಬಟಾಬಯಲಾಗುತ್ತಿತ್ತು.

ಬೆಳಗ್ಗೆ ಕೇಪ್‌ಟೌನ್‌ನಿಂದ ಹಾಟ್ ಬೇ, ಸೈಮನ್ಸ್ ಟೌನ್ ಮೂಲಕ ಕೇಪ್ ಪಾಯಿಂಟ್ ತಲುಪಿದಾಗ ಮಧ್ಯಾಹ್ನದ ಊಟದ ಸಮಯ. ಆದರೆ, ಆ ನಯನಮನೋಹರ ದೃಶ್ಯಗಳನ್ನು ಕಂಡು, ಕಣ್ಣಿನ ಹಸಿವು ಹೊಟ್ಟೆಯ ಹಸಿವನ್ನು ಓಡಿಸಿತ್ತು. ಅಲ್ಲಿ ಕಣ್ಣು, ಮನಸ್ಸು, ಭಾವಗಳಿಗೆ ಬಿಡುವೇ ಇರಲಿಲ್ಲ. ಕಣ್ಣಿನ ರೆಪ್ಪೆಗಿಂತ ವೇಗವಾಗಿ ಕ್ಯಾಮೆರಾ ರೆಪ್ಪೆ ಬಡಿದುಕೊಳ್ಳುತ್ತಿತ್ತು. 'ನಿಸರ್ಗ ಇದಕ್ಕಿಂತ ಹೆಚ್ಚು ನಗ್ನವಾಗಲು ಸಾಧ್ಯವಿಲ್ಲ' ಎಂಬ ಕವಿವಾಣಿ ಅಲ್ಲಿನ ದೃಶ್ಯಚಿತ್ರಕ್ಕೆ ಅಪ್ಪಟ ಅಡಿ ಶೀರ್ಷಿಕೆಯಾಗುತ್ತಿತ್ತು. ಕೇಪ್‌ಟೌನ್‌ನಿಂದ ಎಪ್ಪತ್ತು ಕಿ.ಮೀ. ದೂರದಲ್ಲಿರುವ ಕೇಪ್ ಪಾಯಿಂಟ್ ತನಕ ಬರುವ ದಾರಿಯೇ ಒಂದು ಅನೂಹ್ಯ ದೃಶ್ಯಕಾವ್ಯ!
ಕೇಪ್‌ಪಾಯಿಂಟ್ ಲೈಟ್‌ಹೌಸ್‌ನಿಂದ ಇಳಿದು ಬಂದು ಅಲ್ಲಿನ 'ಟು ಓಶನ್ಸ್‌'  ಎಂಬ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಕುಳಿತುಕೊಂಡರೆ, ಹೊಟ್ಟೆ ತುಂಬಾ ಆ ಸುಂದರ ದೃಶ್ಯಗಳ ಪುಷ್ಕಳ ಭೋಜನ. ಗುಡ್ಡದ ಮೇಲಿಂದ ಮಹಾಸಾಗರಗಳ ಬೆಸುಗೆಗೆ ಸಾಕ್ಷಿಯಾಗಿ, ಅದರ ಮುಂದೆ ಊಟಕ್ಕೆ ಕುಳಿತರೆ ತುತ್ತು ತುತ್ತಿಗೂ ಆ ಮೋಹಕ ದೃಶ್ಯಗಳೇ ಅಡ್ಡಿಯಾಗುತ್ತಿದ್ದವು. ಆ ಎರಡು ಮಹಾಸಾಗರಗಳ ಮಧ್ಯೆ ಬಂಡೆ ಮಲಗಿದಂತೆ ಹಾಗೂ ಮಲಗಿದಷ್ಟು ಜಾಗ ಮಾತ್ರ ಭೂ ಪ್ರದೇಶವಿದ್ದರೆ ಹೇಗೆ ಕಾಣುವುದೋ ಆ ರೀತಿ ಕಂಗೊಳಿಸುತ್ತಿದ್ದ ಆ ಡುಬ್ಬುಗುಡ್ಡದ ಇನ್ನೊಂದು ಪಾರ್ಶ್ವದ ಸೊಂಟವನ್ನು ಬಳಸಿ ಮುನ್ನಡೆದು, ಭೂಪ್ರದೇಶವೆಲ್ಲ ಮುಗಿದು ಸಮುದ್ರದ ಅಂಚನ್ನು ತಲುಪಿದರೆ...

ಅದೇ ಕೇಪ್ ಆಫ್ ಗುಡ್‌ಹೋಪ್!
ಹೈಸ್ಕೂಲಿನಲ್ಲಿ ಭೂಗೋಳದ ಮೇಷ್ಟ್ರು ಇದನ್ನು 'ಗುಡ್‌ಹೋಪ್ ಭೂಶಿರ' ಎಂದು ರಸವತ್ತಾಗಿ ಬಣ್ಣಿಸಿದ  ತಾಣ. ಸುಮಾರು ಮೂವತ್ನಾಲ್ಕು ವರ್ಷಗಳ ಹಿಂದೆ ಮೇಷ್ಟ್ರ ಬಾಯಲ್ಲಿ ಕೇಳಿದ ಗುಡ್ ಹೋಪ್ ಭೂಶಿರ ಇದೇನಾ? ಬಾರ್ತೋಲೊಮಿಯೋ ಡಯಾಸ್, ವಾಸ್ಕೋಡಗಾಮ ಮೆಟ್ಟಿದ ತಾಣ ಇದೇನಾ? ನನ್ನಲ್ಲಿ ನೆನಪಿನ ಭಾವೋತ್ಕರ್ಷದ ಅಲೆಗಳು ಎದ್ದು ಅಪ್ಪಳಿಸುತ್ತಿದ್ದವು. ಕೇಪ್ ಆಫ್ ಗುಡ್‌ಹೋಪ್‌ನಲ್ಲಿ ಐದು ಮೀಟರ್ ಉದ್ದದ ಫಲಕವನ್ನು ಬಿಟ್ಟರೆ ಮತ್ತೇನೂ ಇಲ್ಲ. ಆದರೆ, ಆ ಐತಿಹಾಸಿಕ ತಾಣದ ಮಹತ್ವದ ಮುಂದೆ ಅದರ ಅವಶ್ಯಕತೆಯೂ ಇಲ್ಲ. ತಾಣ ತಲುಪಲು ಕೆಲಕ್ಷಣಗಳಿವೆ ಎನ್ನುವಾಗ ನಿಮ್ಮನ್ನು ಖುದ್ದಾಗಿ ನಿಂತು ಬರಮಾಡಿಕೊಳ್ಳುವ ಒಂದು ಜೀವವಿದ್ದರೆ ಅದು ಉಷ್ಟ್ರ ಪಕ್ಷಿ! ಬೇರೆಲ್ಲೂ ಕಾಣದ ಇವು, ಈ ತಾಣದಲ್ಲಿ ಮಾತ್ರ ಇರುವಂಥ ಋಣ ಅದೇನಿದೆಯೋ ಕಾಣೆ.

ಕೇಪ್ ಆಫ್ ಗುಡ್‌ಹೋಪ್‌ನಲ್ಲಿ ಕಲ್ಲುಬಂಡೆಗಳ ಪಕ್ಕದಲ್ಲಿ ನಿಲ್ಲಿಸಿದ ಫಲಕದಲ್ಲಿ The most South - Western Point of the African Continent (ಆಫ್ರಿಕಾ ಖಂಡದ ನೈರುತ್ಯಕ್ಕಿರುವ ಕಟ್ಟಕಡೆಯ ತುದಿ) ಎಂದು ಬರೆದಿದೆ. ಈ ಫಲಕದ ಹಿಂದೆ ನಿಂತು ಫೋಟೊ ತೆಗೆಸಿಕೊಳ್ಳುವಾಗ ದಕ್ಷಿಣದ ತುತ್ತತುದಿಯ ಭೂ ಪ್ರದೇಶದಲ್ಲಿ ಅದೂ ಅಂಟಾರ್ಟಿಕಾಗೆ ಅತಿ ಹತ್ತಿರದಲ್ಲಿ ನಿಂತಿದ್ದೇನೆಂಬ ರೋಮಾಂಚಕಾರಿ ಅಭಿಮಾನದ ಅನುಭವ ಆಗುತ್ತದೆ.
ಅನೇಕರಿಗೆ ಗುಡ್‌ಹೋಪ್ ಭೂಶಿರವೇ ಆಫ್ರಿಕಾ ಖಂಡದ ಕೊನೆಯ ತುದಿ ಎಂಬ ತಪ್ಪು ಗ್ರಹಿಕೆಯಿದೆ. ಬಹಳ ವರ್ಷಗಳವರೆಗೆ ಇದೇ ಭಾವನೆಯಿತ್ತು. ಕಾರ್ಟೋಗ್ರಫಿ ಅಭಿವೃದ್ಧಿಯಾದ ಬಳಿ ಇದು ನಿಜವಲ್ಲ ಎಂಬುದು ದೃಢಪಟ್ಟಿತು. ಅದಾದ ನಂತರ ಗುಡ್‌ಹೋಪ್ ಭೂಶಿರದಲ್ಲಿ ನಿಲ್ಲಿಸಿದ ಫಲಕದಲ್ಲಿ Southern most point of the African Continent ಎಂಬುದರ ಬದಲು "South - Western point of the ...' ಎಂದು ಮಾರ್ಪಾಟು ಮಾಡಲಾಯಿತು.

ನಿಮ್ಮ ಮಾಹಿತಿಗೆ ಹೇಳಬಹುದಾದರೆ, ಕೇಪ್ ಅಗುಲಸ್ ಆಫ್ರಿಕಾ ಖಂಡದ ಕೊನೆಯ ತುದಿ. ಈ ಭೂ ಪ್ರದೇಶ ಕೇಪ್‌ಟೌನ್‌ನ ಆಗ್ನೇಯ ದಿಕ್ಕಿಗೆ ಸುಮಾರು 155 ಕಿ.ಮೀ. ದೂರದಲ್ಲಿದೆ. ಹಿಂದೂ ಮಹಾಸಾಗರ ಹಾಗೂ ಅಟ್ಲಾಂಟಿಕ್ ಮಹಾಸಾಗರಗಳನ್ನು ಬೇರ್ಪಡಿಸುವ, ಅಂತಾರಾಷ್ಟ್ರೀಯ ಹೈಡ್ರೋಗ್ರಾಫಿಕ್ ಆರ್ಗನೈಸೇಷನ್ ನಿರ್ಧರಿಸಿದ ಅಧಿಕೃತ (ಕಾಲ್ಪನಿಕ) ರೇಖೆ ಕೇಪ್ ಅಗುಲಸ್ ಮೂಲಕ ಹಾದುಹೋಗುವುದರಿಂದ ಇಲ್ಲಿಯೇ ಆ ಎರಡೂ ಮಹಾಸಾಗರಗಳು ಸೇರುತ್ತವೆ. ಆದರೆ, ಇಂದಿಗೂ ಬಹುತೇಕ ಮಂದಿ ಕೇಪ್ ಆಫ್ ಗುಡ್ ಹೋಪ್‌ನಲ್ಲಿಯೇ ಆ ಎರಡೂ ಮಹಾಸಾಗರಗಳು ಸೇರುತ್ತವೆ ಎಂದು ಭಾವಿಸಿದ್ದಾರೆ.
'ಯಾವುದಾದರೂ ಒಂದು ತಾಣಕ್ಕೆ ಅತಿ ರೊಮ್ಯಾಂಟಿಕ್ ಹೆಸರಿದ್ದರೆ ಅದು ಕೇಪ್ ಆಫ್ ಗುಡ್‌ಹೋಪ್‌'  ಎಂದು ಇಂಗ್ಲಿಷ್ ಕವಿ ಹೇಳಿರುವುದು ಸರಿಯಾಗಿಯೇ ಇದೆ.
ಹದಿನೈದನೆ ಶತಮಾನದ ಕೊನೆಯ ಭಾಗದಲ್ಲಿ ಪೋರ್ಚುಗೀಸರು ಭಾರತವನ್ನು ತಲುಪುವ ಸಮುದ್ರ ಮಾರ್ಗದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಭಾರತದಲ್ಲಿನ ಸಾಂಬಾರು ಹಾಗೂ ಮಸಾಲೆ ಪದಾರ್ಥಗಳ ಬಗ್ಗೆ ಅವರು ಆಕರ್ಷಿತರಾಗಿದ್ದರು. 1487ರಲ್ಲಿ ಈ ಕೆಲಸವನ್ನು ಪೋರ್ಚುಗೀಸ್ ನಾವಿಕ ಬಾರ್ತೋಲೊಮಿಯೋ ಡಯಾಸ್‌ಗೆ ಒಪ್ಪಿಸಲಾಯಿತು. ಆತನ ನೌಕಾ ಪಯಣ ಅತ್ಯಂತ ಸಾಹಸದಿಂದ ಕೂಡಿತ್ತು. ಹಲವು ಕಡೆ ಆತ ಬುಡಕಟ್ಟು ಜನರ ಜತೆ ಸೆಣಸಬೇಕಾಯಿತು. ಹಡಗನ್ನು ದಡದಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಅದಕ್ಕೆ ಬೆಂಕಿ ಹಚ್ಚುವ, ಅವನನ್ನು ಸಾಯಿಸುವ ಪ್ರಯತ್ನಗಳೂ ನಡೆದವು. ಅವನ ಹಡಗಿನಲ್ಲಿದ್ದ ಸಹನಾವಿಕರು ಡಯಾಸ್‌ನ ವಿರುದ್ಧ ಕಾರಸ್ಥಾನ ನಡೆಸಿದರು. ಅವನನ್ನು ಮುಗಿಸುವ ಸಂಚನ್ನು ಹೂಡಿದರು. ಒಂದೆರಡು ಸಂದರ್ಭಗಳಲ್ಲಿ ಅವನ ಹಡಗು, ಬಿರುಗಾಳಿಗೆ ಸಿಲುಕಿತು. ಆತ ಹಾಗೂ ಅವನ ಹಡಗು ಬಚಾವ್ ಆಗಿ ಉಳಿದಿದ್ದೇ ಪವಾಡ. ಈ ವೇಳೆ ಡಯಾಸ್‌ಗೆ ಆಸರೆಯಾಗಿ ಸಿಕ್ಕಿದ್ದೇ ಈ ತಾಣ - ಕೇಪ್.

ಸತತ ಪ್ರಯಾಣ, ಪ್ರತಿಕೂಲ ವಾತಾವರಣ ಹಾಗೂ ನಿರಂತರ ಸೆಣಸಿನಿಂದ ನಿತ್ರಾಣನಾಗಿದ್ದ ಡಯಾಸ್ ಮುಂದೆ ಪ್ರಯಾಣ ಬೆಳೆಸಲಿಲ್ಲ. ಕೇಪ್‌ಗೆ ಬರುವ ಹೊತ್ತಿಗೆ ಆತನ ಹಡಗು ಬಿರುಗಾಳಿ ಹೊಡೆತಕ್ಕೆ ಸಿಲುಕಿ ಜಖಂ ಆಗಿತ್ತು. ಹಡಗು ಒಡೆದು ಅದರೊಳಗಿದ್ದವರು ಸಾಗರ ಪಾಲಾಗದಿದ್ದುದೇ ಅಚ್ಚರಿ. ಕೇಪ್ ದಡ ತಲುಪಿದ ಡಯಾಸ್ ತಾನು ತಂಗಿದ್ದ ದಡಕ್ಕೆ 'ಕೇಪ್ ಆಫ್ ಸ್ಟಾರ್ಮ್ಸ್‌' ಎಂದು ಹೆಸರಿಟ್ಟ. ಅಲ್ಲಿಂದ ವಾಪಸ್ಸಾದ ಡಯಾಸ್, ತನ್ನ ಪ್ರಯಾಣದ ರೋಚಕ ಅನುಭವಗಳನ್ನು ಎರಡನೆಯ ಕಿಂಗ್ ಜಾನ್‌ಗೆ ಒಪ್ಪಿಸಿದ. ಡಯಾಸ್‌ನ ವೃತ್ತಾಂತಗಳನ್ನು ಕೇಳಿದ ರಾಜನಿಗೆ ಭಾರತಕ್ಕೆ ಹೋಗುವ ಆಸೆ ಈಡೇರಲಿಲ್ಲವೆಂದು ಬೇಸರವಾಯಿತು. ಆದರೆ, 'ಕೇಪ್ ಸ್ಟಾರ್ಮ್ಸ್‌' ಆ ಆಸೆಯನ್ನು ಜೀವಂತವಾಗಿರಿಸಿತಲ್ಲ ಎಂದು ಸಮಾಧಾನವೂ ಆಯಿತು. ಹೀಗಾಗಿ 'ಕೇಪ್ ಸ್ಟಾರ್ಮ್ಸ್‌' ಎಂಬ ಹೆಸರು ದೂರ ದೃಷ್ಟಿಯದ್ದಲ್ಲವೆಂದು ಅನಿಸಿ, ಮುಂದಿನ ನಾವಿಕರನ್ನು ಹುರಿದುಂಬಿಸಲು ಆ ತಾಣಕ್ಕೆ 'ಕೇಪ್ ಆಫ್ ಗುಡ್‌ಹೋಪ್‌' ಎಂದು ನಾಮಕರಣ ಮಾಡಿದ.

ಇದಾಗಿ ಹತ್ತು ವರ್ಷಗಳ ಬಳಿಕ, 1497ರಲ್ಲಿ ವಾಸ್ಕೋಡಗಾಮ ಲಿಸ್ಬನ್‌ನಿಂದ ಹೊರಟ. ನಾಮ ಬಲದ ಕಾರಣವಿದ್ದಿರಬಹುದು, ವಾಸ್ಕೋಡಗಾಮ ಸಾವಿನ ಮನೆ ಕದ ತಟ್ಟಿ ಸುರಕ್ಷಿತವಾಗಿ ಕೇಪ್ ಆಫ್ ಗುಡ್‌ಹೋಪ್ ತಲುಪಿದ. ಸಮುದ್ರದಲ್ಲಿ ಮೂರು ಕಡೆ ಅವನ ಹಡಗು ಚಂಡಮಾರುತಕ್ಕೆ ಸಿಲುಕಿತು. ಅವನ ಹಡಗು ಜಖಂ ಆಯಿತು. ಈ ತಾಣದಲ್ಲಿ ಉಳಿದು ಸಾವರಿಸಿಕೊಂಡ ಗಾಮ, ಭಾರತದತ್ತ ತನ್ನ ಪಯಣವನ್ನು ಮುಂದುವರಿಸಿದ. ಆತನ ಭಾರತ ಪ್ರಯಾಣಕ್ಕೆ ಆಸರೆಯಾಗಿದ್ದು ಕೇಪ್ ಆಫ್ ಗುಡ್‌ಹೋಪ್! ಹೀಗಾಗಿ ಚಾರಿತ್ರಿಕವಾಗಿಯೂ ಇದಕ್ಕೆ ಮಹತ್ವ.
'ಕೇಪ್ ಆಫ್ ಗುಡ್‌ಹೋಪ್ ಎಂಥ ತಾಣ ಅಂದ್ರೆ ಒಂದೆರಡು ತಾಸಿನಲ್ಲಿ ನೋಡಿ ಹೋಗುವಂಥದ್ದಲ್ಲ. ಕನಿಷ್ಠ ಒಂದು ರಾತ್ರಿಯಾದರೂ ಕಳೆಯಬೇಕು. ಆಗಲೇ ಅಲ್ಲಿನ ತಂಗಾಳಿ, ಬಿರುಗಾಳಿ, ಚಳಿ, ಮಳೆಯನ್ನು ಅನುಭವಿಸಬಹುದು' ಎಂದ ನಮ್ಮ ಗೈಡ್. ಆದರೆ, ನಾವು ಅಲ್ಲಿದ್ದ ನಾಲ್ಕೈದು ತಾಸುಗಳಲ್ಲಿ ಆ ಎಲ್ಲ ಅನುಭವವೂ ಆಗಿದ್ದವು. ಆದರೆ, ಒಂದೆರಡು ದಿನ ಕಳೆದರೆ, ಮುನ್ನೂರಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳ ದರ್ಶನ ಪಡೆಯಬಹುದು.
'ಜೀವಮಾನದ ಅನುಭವ' ಅಂತಾರಲ್ಲ, ಅಂಥ ಒಂದು ಅನುಭವವನ್ನು ಕೇಪ್ ಆಫ್ ಗುಡ್‌ಹೋಪ್ ಕಟ್ಟಿಕೊಡುವುದಂತೂ ನಿಜ.

(ಪ್ರದಕ್ಷಿಣೆ ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!