ಅರೆ ಮನಸ್ಸು ಬೇಡ
ಮನಸ್ಸು ಯಾವತ್ತೂ ಸುಮ್ಮನೆ ಕುಳಿತಿರುವುದಿಲ್ಲ. ನಾವು ಮಲಗಿದರೂ ಅದು ಮಲಗುವುದಿಲ್ಲ. ಏನಾದರೊಂದು ಹೇಳುತ್ತಲೇ ಇರುತ್ತದೆ. ಆದರೆ ಅದನ್ನು ಗ್ರಹಿಸುವ, ಅರ್ಥೈಸಿಕೊಳ್ಳುವ ವ್ಯವಧಾನ ಮತ್ತು ಸಾಮರ್ಥ್ಯ ಎರಡೂ ನಮಗಿರುವುದಿಲ್ಲ. ಸಿಕ್ಸ್ತ್ಸೆನ್ಸ್ ಅಂತ ಕರೆಯುವುದು ಇದನ್ನೇ ಇರಬಹುದೇನೋ. ಸ್ವಲ್ಪ ಅದಕ್ಕೆ ಕಿವಿಗೊಟ್ಟರೆ ಜೀವನದಲ್ಲಿ ಅದೆಷ್ಟೋ ಅವಾಂತರಗಳನ್ನು ತಪ್ಪಿಸಿಕೊಳ್ಳಬಹುದು. ನೀವೇ ನೋಡಿ, ಕೆಲವರು ಮಾತಿಗೆ ಹೇಳುವುದನ್ನು ಕೇಳಿರಬಹುದು- 'ಅಂದ್ಕೊಂಡಿದ್ದೆ ಮಾರಾಯ, ಸ್ವಲ್ಪ ಯಡವಟ್ಟಾಯಿತು. ಹೀಗಾಗಿ ತಪ್ಪಿ ಹೋಯಿತು...' ಇಂಥ ಮಾತಿನ ಹಿಂದೆ ಅವನ ಜಾಗೃತ ಮನಸ್ಸಿನ ಹಾಗೂ ಅವನ ನಿರ್ಲಕ್ಷ್ಯ ಧೋರಣೆಯ ಎರಡೂ ಪರಿಚಯ ನಮಗಾಗುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿನ ಇಚ್ಛಾ ಶಕ್ತಿಯಕೊರತೆ. ದೃಢ ನಿರ್ಧಾರದ ಅಭಾವ. ಮನಸ್ಸು ಜಾಗೃತವಾಗಿದ್ದರಷ್ಟೇ ಸಾಲದು, ನಾವೂ ಅದಕ್ಕೆ ಸ್ಪಂದಿಸುವುದು ಅಗತ್ಯ. ಅಯ್ಯೋ ಬಿಡು, ಮಾಡಿದರಾಯಿತು. ಆದದ್ದಾಗುತ್ತದೆ, ಅದೇನು ಮಹಾ...ಎಂಬಿತ್ಯಾದಿ ನಮ್ಮ ಧೋರಣೆಯಿರುತ್ತದಲ್ಲಾ ಅದೇ ಕೈಕೊಡುವುದು. ಅಂದರೆ ನಮಗೆ ನಾವೇ ಅನ್ಯಾಯವನ್ನು ಮಾಡಿಕೊಂಡಂತೆ. ಇಂಥವರು ಜೀವನದಲ್ಲಿ ಏನನ್ನೂ ಮಾಡುವುದೇ ಇಲ್ಲ. ಒಮ್ಮೆ ತಲೆಯಲ್ಲಿ ಬಂದ ಆಲೋಚನೆಯನ್ನು ಶತಾಯ ಗತಾಯ ಅನುಷ್ಠಾನಗೊಳಿಸಲೇಬೇಕು ಎಂಬ ನಿರ್ಧಾರದಿಂದ ಮುನ್ನುಗ್ಗಿದರೆ ಮಾತ್ರ ಸಾಧನೆ ಆಗುತ್ತದೆ. ಇಲ್ಲದಿದ್ದರೆ ಬರೀ ಕನಸುಗಳಲ್ಲೇ ಜೀವನ ಮುಗಿದು ಹೋಗುತ್ತದೆ. ಇನ್ನು ಅರೆ ಮನಸ್ಸು ಎಂಬುದೂ ಅಪಾಯಕಾರಿಯೇ. ಹಾಗೋ, ಹೀಗೋ..ಎಂದು ಯೋಚಿಸುತ್ತಾ ಕುಳಿತರೂ ಅದರಲ್ಲೇ ಕಾಲಹರಣವಾಗುತ್ತದೆ. ಅಂದರೆ ಒಂದು ನಿರ್ಧಾರಕ್ಕೆ ಬರುವ ಸಾಮರ್ಥ್ಯ ಇಲ್ಲದವರಲ್ಲಿ ಮಾತ್ರ ಹೀಗಾಗುತ್ತದೆ. ಹಾಗೆಂದು ಗೊಂದಲವೇ ಇರಬಾರದಂತಲೂ ಅಲ್ಲ. ಅಂಥ ಸಂದರ್ಭದಲ್ಲಿ ನಾವೇ ಯೋಚಿಸುತ್ತ ಕುಳಿತುಕೊಳ್ಳುವ ಬದಲು ಒಂದಿಬ್ಬರು ಅನುಭವಸ್ಥರೊಂದಿಗೆ ಚರ್ಚಿಸಿದರೆ ಸೂಕ್ತ ಸಲಹೆ ಸಿಗುತ್ತದೆ. ಅಥವಾ ಆ ಚರ್ಚೆಯ ಸಂದರ್ಭದಲ್ಲಿ ನಮಗೇ ಒಂದು ದಾರಿ ತೋಚುವ ಸಾಧ್ಯತೆಯೂ ಇದೆ. ಮೊದಲು ಎದ್ದು ಹೊರಡಿ. ಆಮೇಲೆ ಉಳಿದದ್ದು ತಂತಾನೇ ಆಗುತ್ತದೆ.
- ಸಹನೆ