ಲೈಫ್ @ ಲಿಡೋ
ಪ್ಯಾರಿಸ್ಗೆ ಹೋದವರು ಈ ಜಾಗ ನೋಡಲೇಬೇಕು. ಇದು ಪ್ಯಾರಿಸ್ನ ವಿಶ್ವ ಖ್ಯಾತಿಯ ಲಿಡೋ ಕ್ಯಾಬರೆ...
ಪ್ಯಾರಿಸ್ಗೆ ಹೋದವರು ಈ ಜಾಗ ನೋಡಲೇಬೇಕು. ಇಲ್ಲಿನ ನೈಟ್ ಲೈಫ್ ವಿಶೇಷವಾದದ್ದು. ಈ ಜಾಗ ಮತ್ತು ಜನ ಎಲ್ಲವೂ ಪ್ರವಾಸಿಗರ ಮನಸೂರೆ ಮಾಡುವಂಥದ್ದು. ಇದು ಪ್ಯಾರಿಸ್ನ ವಿಶ್ವ ಖ್ಯಾತಿಯ ಲಿಡೋ ಕ್ಯಾಬರೆ. ಈ ಲಿಡೋ ನೈಟ್ನ ಹಿಂದಿನ ಕಥೆ ಇದು.
ಇಂಥ ಖ್ಯಾತ ಶೋನಲ್ಲಿ ಭಾಗವಹಿಸುವುದು ಮತ್ತು ಅಲ್ಲಿ ಮೈ ತೋರಿಸುವುದು ಎಷ್ಟು ಸವಾಲಿನ ಕೆಲಸ ಎಂಬುದನ್ನು ಈ ಶೋನಲ್ಲಿ ಕುಣಿಯುವವರನ್ನೇ ಕೇಳಿ ತಿಳಿದುಕೊಳ್ಳಬೇಕು. ಈ ವೇದಿಕೆಯಲ್ಲಿ 18 ವರ್ಷಗಳನ್ನು ಕಳೆದಿರುವ ಜೇನ್ ಈ ತಂಡದ ಎಲ್ಲ ರೀತಿಯ ಉಸ್ತುವಾರಿ ವಹಿಸಿದ್ದಾಳೆ. ತಂಡದಲ್ಲಿ ಒಬ್ಬ ಸದಸ್ಯಳಾಗಿದ್ದವಳು ಈಗ ಈ ತಂಡದ ಜವಾಬ್ದಾರಿ ಹೊತ್ತಿರುವುದು ಸಣ್ಣ ವಿಷಯವಲ್ಲ.
ಲಿಡೋ ಕಲಾವಿದರಿಗಿರುವ ದೊಡ್ಡ ಸವಾಲು ಎಂದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು. ಸಂಜೆ 7.30ಕ್ಕೆ ಶೋನ ತಯಾರಿ ಆರಂಭವಾಗುತ್ತದೆ. ಅಲ್ಲಿಂದ 5 ಗಂಟೆಗಳ ಅವಧಿಯವರೆಗೆ ನಡೆಯುವ ಈ ಶೋಗಾಗಿ ಕಲಾವಿದರು ತಮ್ಮ ಉತ್ಸಾಹ, ದೈಹಿಕ ಕ್ಷಮತೆ ಕಾಯ್ದುಕೊಳ್ಳಬೇಕಾಗುತ್ತದೆ.
ಲಿಡೋ ಶೋನ ಬ್ಲೂಬೆಲ್ ಫೀಮೇಲ್ ಆರ್ಟಿಸ್ಟ್ ಆಗಲು ಹುಡುಗಿಯರು ಕನಿಷ್ಠ 173 ಸೆಂ.ಮೀ, ಹುಡುಗರು 180 ಸೆಂ.ಮೀ ಎತ್ತರ ಇರಬೇಕು. ಹುಡುಗಿಯರ ಸೌಂದರ್ಯ ಮತ್ತು ಇಲ್ಲಿನ ಕೆಲಸಕ್ಕೆ ಒಗ್ಗಿಕೊಳ್ಳುವ ಮನಸ್ಥಿತಿಯನ್ನು ಆಧರಿಸಿ ಅವರನ್ನು ಆಯ್ಕೆ ಮಾಡಲಾಗುತ್ತದೆ. ಒಬ್ಬೊಬ್ಬ ಹುಡುಗಿಯದ್ದೂ ಒಂದೊಂಥರ ಸೌಂದರ್ಯ. ಮೇಕಪ್ ಸಹಿತ ಮತ್ತು ಮೇಕಪ್ ರಹಿತ ಟೆಸ್ಟ್ಗಳನ್ನು ಮಾಡಿ ಅವರನ್ನು ಆಯ್ಕೆ ಮಾಡುತ್ತೇವೆ. ಇಲ್ಲಿನ ಪ್ರತಿಯೊಂದು ಶೋ ಕೂಡ ಸವಾಲಿನದ್ದು. ಇದಲ್ಲದೆ ತಂಡದ ಸದಸ್ಯರೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಇರಬೇಕು. ನಮ್ಮದು ವಿಶ್ವಖ್ಯಾತ ಶೋ. ಹಾಗಾಗಿ ಅದರ ಖ್ಯಾತಿಗೆ ಭಂಗ ಬರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎನ್ನುತ್ತಾಳೆ ಜೇನ್.
ಈ ತಂಡದ ಅತಿ ಕಿರಿಯ ಸದಸ್ಯಳಾಗಿರುವ ಜೋನ್ ಥ್ವೈಟ್ ಹೀಗೆ ಹೇಳುತ್ತಾಳೆ 'ನಾನು ಲಿಡೋ ಶೋ ಸೇರಿಕೊಂಡು ಕೇವಲ ನಾಲ್ಕು ವಾರಗಳಾಗಿವೆ. ನಾನು ಇಂಗ್ಲೆಂಡಿನ ಬ್ಯಾಲೆಟ್ ಡ್ಯಾನ್ಸರ್. ಲಿಡೋನಲ್ಲಿ ಬ್ಲೂಬೆಲ್ ಡ್ಯಾನ್ಸರ್ ಆಗಿ ಆಯ್ಕೆಯಾದಾಗ ನಾನು ಪ್ರಪಂಚವನ್ನೇ ಗೆದ್ದಷ್ಟು ಥ್ರಿಲ್ ಆದೆ. 13ನೇ ವಯಸ್ಸಿನಿಂದಲೇ ನಾನು ಡ್ಯಾನ್ಸ್ ಕಲಿತಿದ್ದೇನೆ. ನನ್ನ ಶ್ರಮ ಈಗ ಸಾರ್ಥಕ ಆಗಿದೆ. 2013ರ ಸೆಪ್ಟೆಂಬರ್ 6ರಂದು ನಾನು ಮೊದಲ ಶೋನಲ್ಲಿ ಭಾಗವಹಿಸಿದೆ. ಅದು ನನ್ನ ಜೀವನದಲ್ಲಿ ವಿಶೇಷವಾದ ದಿನ. ನಮ್ಮ ಮನೆಯವರೆಲ್ಲ ಈ ಸಂಭ್ರಮದ ಕ್ಷಣವನ್ನು ಆನಂದಿಸಿದೆವು. ಮೊದಲ ದಿನ ಆರಂಭದ ಹೊತ್ತಿನಲ್ಲಿ ವೇದಿಕೆಯ ಮೇಲಿನಿಂದ ಮೊದಲ ಬಾರಿ ಜನರ ಕಡೆ ನೋಡಿದಾಗ ನರ್ವಸ್ ಆಗಿದ್ದೆ. ಈ ಶೋನಿಂದಾಗಿ ನನ್ನ ದೈನಂದಿನ ಚಟುವಟಿಕೆಗಳಲ್ಲಿ ಕೊಂಚ ಬದಲಾವಣೆಯಾಗಿದೆ. ಆದರೆ ನನಗಿನ್ನೂ ವಯಸ್ಸಿದೆ. ಹಾಗಾಗಿ ಲಿಡೋ ಶೋನೊಂದಿಗೆ ನನ್ನ ಬಾಂಧವ್ಯ ಬಹಳ ಕಾಲ ಇರುತ್ತದೆ ಎಂಬ ನಂಬಿಕೆ ಇದೆ'.
ತಂಡದೊಂದಿಗೆ ಶೋ ಕೊಡುವುದರೊಂದಿಗೆ ತಂಡವನ್ನು ಮ್ಯಾನೇಜ್ ಮಾಡುವ ಕೆಲಸವನ್ನೂ ಮಾಡುವ ಮರೆಲ್ ಇವಾನ್ಸ್ ಇಲ್ಲಿನ ಹುಡುಗಿಯರ ಜೀವನ ಖಂಡಿತಾ ನಾರ್ಮಲ್ ಅಲ್ಲ ಎನ್ನುತ್ತಾಳೆ. ಇಲ್ಲಿ ಸೇರಿಕೊಂಡ ಮೇಲೆ ದೇಹದ ತೂಕ ಒಂದಿಷ್ಟೂ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಹಾಗಾಗಿ ನಾವು ಕಡಿಮೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾಳೆ ಇವಾನ್ಸ್. ನಾನು ಇಲ್ಲಿನ ಇಂಡಿಯನ್ ತಂಡದಲ್ಲಿದ್ದೇನೆ. ನನಗೆ ಇಂಡಿಯನ್ ಮ್ಯೂಸಿಕ್ ತುಂಬಾ ಇಷ್ಟ. ಅದಕ್ಕಾಗಿ ಇಂಡಿಯಾ ಪ್ರವಾಸವನ್ನೂ ಮಾಡಿದ್ದೇನೆ ಎನ್ನುವ ಇವಾನ್ಸ್ಗೆ ಬಾಲಿವುಡ್ ಸಂಗೀತ, ಬಾಲಿವುಡ್ ನಟರು ಮತ್ತು ಬೆಂಗಳೂರು ಎಂದರೆ ಇಷ್ಟವಂತೆ.
ಲಿಡೋ ತಂಡದಲ್ಲಿರುವ ಡೇನ್ ಎರ್ಬ್ಯಾಶರ್ ಎನ್ನುವ ಹುಡುಗ 2004ರಿಂದ ಇಲ್ಲಿದ್ದಾನೆ. ತುಂಬಾ ಹುಮ್ಮಸ್ಸಿನಿಂದ ನನ್ನ ಪರಿಚಿತರ ಸಹಾಯದೊಂದಿಗೆ ಇಲ್ಲಿಗೆ ಬಂದು ಸೇರಿಕೊಂಡೆ. ನನ್ನ ಪ್ರತಿಭೆ ಮತ್ತು ನನ್ನ ಎತ್ತರದಿಂದಾಗಿ ನನಗೆ ಕೆಲಸ ಸಿಗುವುದು ಕಷ್ಟ ಆಗಲಿಲ್ಲ. ಇದುವರೆಗಿನ ನನ್ನ ಕೆಲಸದಲ್ಲಿ ನನಗೆ ತೃಪ್ತಿ ಇದೆ ಎನ್ನುವ ಡೇನ್ ಕೂಡ ಇಂಡಿಯನ್ ಟ್ರೂಪ್ನ ಸದಸ್ಯ.
ಇಲ್ಲಿನ ಮುಖ್ಯ ನರ್ತಕಿಯಾಗಿರುವ ಅಲೀಶಿಯಾ ನನ್ನ ಪ್ರದರ್ಶನದಲ್ಲಿ ನಾನು ಮೇಕಪ್ ಅನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದೇನೆ ಎನ್ನುತ್ತಾಳೆ. 'ನನ್ನ ಕೆಲಸದಲ್ಲಿ ಶ್ರದ್ಧೆಯಿದೆ. ನನ್ನ ಯೋಚನೆಗಳು ಮತ್ತು ನನ್ನ ಕೆಲಸಗಳು ಪರಿಶುದ್ಧವಾಗಿವೆ. ನಾನು ಪರ್ಸನಲ್ ಮತ್ತು ಪ್ರೊಫೆಶನಲ್ ನೀತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ. ಏಕೆಂದರೆ ವೇದಿಕೆಯ ಮೇಲೆ ಬೆತ್ತಲಾಗಲು ಆತ್ಮವಿಶ್ವಾಸ ಇರಬೇಕು' ಎನ್ನುವುದು ಅಲೀಶಿಯಾಳ ಅನುಭವದ ಮಾತುಗಳು.
ಪ್ರತಿಯೊಂದು ಶೋನ ತಯಾರಿಗೆ 45 ನಿಮಿಷಗಳು ಬೇಕಾಗುತ್ತವೆ. ದೇಹವನ್ನು ಫ್ಲೆಕ್ಸಿಬಲ್ ಆಗಿಸಿ, ಮೇಕಪ್ ಮಾಡಿಕೊಳ್ಳಲು ಈ ತಯಾರಿ ಬೇಕು. ನಾನು ಶೋಗೆ ತಯಾರಾದಾಗ ನನ್ನ ದೇಹ ಬಹುತೇಕ ಒಂದು ಪೇಂಟಿಂಗ್ನಂತೆ ಕಾಣಿಸುತ್ತದೆ ಎಂದು ತನ್ನ ಕೆಲಸವನ್ನು ವಿವರಿಸುತ್ತಾಳೆ ಅಲೀಶಿಯಾ. ಲಿಡೋ ತಂಡದಲ್ಲಿ 17 ವರ್ಷ ಕಳೆದಿರುವ ಪ್ಯಾಟ್ರಿಕ್ ರೆನ್ಯಾಕ್ ಶೋಗೆ ಬೇಕಾದ ಉಪಕರಣಗಳನ್ನು
ನಿಭಾಯಿಸುವ ಕೆಲಸ ಮಾಡುತ್ತಾನೆ. ಪ್ಯಾಟ್ರಿಕ್ ಹೇಳುವಂತೆ ಇದೊಂದು ಟೀಮ್ ವರ್ಕ್. ವರ್ಲ್ಡ್ ಕ್ಲಾಸ್ ಶೋನ ಕಲಾವಿದರ ಪ್ರದರ್ಶನ ಮತ್ತು ವಸ್ತುಗಳ ಗುಣಮಟ್ಟ ಎರಡನ್ನೂ ಗಮನಿಸುವುದು ಈತನ ಜವಾಬ್ದಾರಿ. ನನ್ನ ಅಭಿಪ್ರಾಯದಲ್ಲಿ ಈ ಶೋ ಮನುಷ್ಯ ಮತ್ತು ಮಶೀನ್ಗಳ ಅದ್ಭುತ ಮಿಶ್ರಣ. ಕ್ಯಾಬರೆಯನ್ನು ಒಂದು ಕಲೆಯಂತೆ ನೋಡುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿ ತನ್ನ ಮಾತು ಮುಗಿಸುತ್ತಾನೆ ಪ್ಯಾಟ್ರಿಕ್.
- ಮಂಜುನಾಥ್ ಚವ್ಹಾಣ್,
ಸೌಮ್ಯ ಮಂಜುನಾಥ್ ಚವ್ಹಾಣ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.