ವಂಚಕ ಕೃಷ್ಣ
ಇನ್ನೊಬ್ಬರನ್ನು ಬಯ್ಯುವಾಗ ಅದರಲ್ಲಿ ಸ್ವಾರಸ್ಯವಿರಬೇಕು. ಮೋಸ ಮಾಡಿದ ನಲ್ಲನನ್ನು ನಲ್ಲೆ ಬಯ್ಯುವಾಗ? ಅದು ಹೇಗಿರಬೇಕೆಂಬುದನ್ನು ರಾಧೆಯನ್ನು ನೋಡಿ ಕಲಿಯಬೇಕು. ಜಯದೇವನ ಗೀತಗೋವಿಂದದಲ್ಲಿ, ಕೃಷ್ಣನನ್ನು ಕಂಡು ರಾಧೆ ಯಕ್ಕಾಮಕ್ಕಾ ಬೈಯ್ಯುವ ಸನ್ನಿವೇಶವಿದೆ. ಆ ನಿಂದನೆಯಲ್ಲೂ ಸೊಗಸಾದ ಶೃಂಗಾರರಸ ತೊಟ್ಟಿಕ್ಕುತ್ತದೆ.
ಕಜ್ಜಲ ಮಲಿನವಿಲೋಚನ ಚುಂಬನ ವಿರಚಿತ ನೀಲಿಮರೂಪಂ
ದಶನವಸನಮರುಣಂ ತವ ಕೃಷ್ಣ ತನೋತಿ ತನೋರನುರೂಪಂ
ದಶನಪದಂ ಭವದಧರಗತಂ ಮಮ ಜನಯತಿ ಚೇತಸಿ ಖೇದಂ
ಕಥಯತಿ ಕಥಮಧುನಾಪಿ ಮಯಾ ಸಹ ತವ ವಪುರೇತದಭೇದಂ
'ನಾನು ನಿನ್ನ ಹೊರತು ಬೇರ್ಯಾರಿಗೂ ಮೈಯನ್ನು ಕೊಟ್ಟಿಲ್ಲ' ಎನ್ನುತ್ತೀಯಲ್ಲ? ಎಂತಹ ಸುಳ್ಳುಗಾರ ನೀನು! ಕಳೆದ ರಾತ್ರಿ ನೀನು ನಿದ್ದೆಗೆಟ್ಟಿದ್ದೆ ಎಂಬುದನ್ನು ಅನುರಾಗದಿಂದ ಕೆಂಪಾದ, ಆಲಸ್ಯ ತುಂಬಿದ ನಿನ್ನ ಕಣ್ಣುಗಳೇ ಹೇಳುತ್ತಿವೆ. ಯಾರೋ ತರುಣಿಯ ಕಾಡಿಗೆ ಬಳಿದ ಕಣ್ಣುಗಳು ನಿನ್ನ ಮೈಯ ಉದ್ದಾನುದ್ದಕ್ಕೂ ಓಡಾಡಿ ನಿನ್ನ ಮೈಯನ್ನು ಕಪ್ಪು ಮಾಡಿವೆ. ಚುಂಬಿಸಿ ಚುಂಬಿಸಿ ನಿನ್ನ ತುಟಿಗಳು ಕಪ್ಪುಗಟ್ಟಿವೆ. ಆ ತುಟಿಯಲ್ಲಿ ಬೇರ್ಯಾರದೋ ಹಲ್ಲಿನ ಗಾಯ! ಅದನ್ನು ನೋಡುತ್ತಿದ್ದರೆ ನನಗೇ ನೋವಾಗುತ್ತದೆ. ಮರಕತ ಕಲ್ಲಿನ ಮೇಲೆ ಬೆಳ್ಳಿಯ ಅಕ್ಷರಗಳಲ್ಲಿ ಮದನಕದನ ಗೆದ್ದ ಕುರುಹಿನ ಶಾಸನ ಬರೆಸಿದಂತೆ ನಿನ್ನ ದೇಹದಲ್ಲಿ ಉಗುರಿನ ಗುರುತುಗಳು. ಮನ್ಮಥವೃಕ್ಷವು ಚಿಗುರು ಬಿಟ್ಟಂತೆ, ನಿನ್ನ ಎದೆಯಲ್ಲಿ ಇನ್ಯಾರದೋ ಕಾಲಿನಿಂದ ಅಂಟಿದ ರಕ್ತಚಂದನದ ಲೇಪನದ ಗುರುತು!
ಶ್ಯಾಮನ ಮೈಬಣ್ಣ, ರತಿಯ ಗುರುತುಗಳನ್ನು ಚಮತ್ಕಾರದಿಂದ ಬಣ್ಣಿಸುವ ಈ ಪದ್ಯ ಎಷ್ಟು ಸೊಗಸಾಗಿದೆ ಅಲ್ಲವೆ?
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.