ಎರಡು ಮಡಿಲು
ಮಕ್ಕಳಿಲ್ಲದೆ ಬಳಲುತ್ತಿರುವವರು, ಮಕ್ಕಳ ಭಾಗ್ಯ ಕರುಣಿಸು ಎಂದು ದೇವರ ಮೊರೆ ಹೋಗುವವರ ಸಂಖ್ಯೆ ಕಡಿಮೆ ಇಲ್ಲ....
ಮಕ್ಕಳಿಲ್ಲದೆ ಬಳಲುತ್ತಿರುವವರು, ಮಕ್ಕಳ ಭಾಗ್ಯ ಕರುಣಿಸು ಎಂದು ದೇವರ ಮೊರೆ ಹೋಗುವವರ ಸಂಖ್ಯೆ ಕಡಿಮೆ ಇಲ್ಲ. ಇರುವ ಮಕ್ಕಳನ್ನೇ ಸರಿಯಾಗಿ ನೋಡಿಕೊಳ್ಳಲಾರದ, ಮಕ್ಕಳ ಹಕ್ಕಿಗಾಗಿ ಕಿತ್ತಾಡಿ ಗಾಯ ಮಾಡಿಕೊಳ್ಳುವ ಹೆತ್ತವರು ಇನ್ನೊಂದೆಡೆ. ಇದಕ್ಕೆ ಕಾರಣ ವಿಚ್ಛೇದನ.
ವಿಚ್ಛೇದನ ಎಂಬ ಪೋಷಕರ ಆಟ ಮಕ್ಕಳಿಗೆ ಪ್ರಾಣಸಂಕಟವಾಗಿ ಪರಿಣಮಿಸುತ್ತದೆ. ಮಕ್ಕಳು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಅತ್ತ ಸಂಪೂರ್ಣ ತಾಯಿ ಪ್ರೀತಿಯೂ ಇಲ್ಲದೆ, ಇತ್ತ ತಂದೆ ಪ್ರೀತಿಯೂ ಇಲ್ಲದೆ, ಕುಟುಂಬ ಸದಸ್ಯರ ಪ್ರೀತಿಯಿಂದಲೂ ಮಕ್ಕಳು ವಂಚಿತರಾಗುತ್ತಾರೆ. ಅದಕ್ಕೆ ಕಾರಣ, ವಿಚ್ಛೇದನ ಪಡೆಯುತ್ತಿರುವ ಹೆತ್ತವರಲ್ಲಿ ಯಾರಾದರೊಬ್ಬರು ಮಗುವನ್ನು ತಮ್ಮಲ್ಲೇ ಬಲವಂತದಿಂದ ಹಿಡಿದಿರಿಸಿಕೊಳ್ಳುವುದು. ಮಗು ತಾಯಿಯ ವಶದಲ್ಲಿದ್ದರೆ, ತಂದೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲಾಗುತ್ತದೆ. ತಂದೆಯ ಹಿಡಿತದಲ್ಲಿದ್ದರೆ, ತಾಯಿಯ ಬಗ್ಗೆ ದ್ವೇಷ ಮೂಡಿಸಲಾಗುತ್ತದೆ. ಹೀಗಾಗಿ ಮಕ್ಕಳು ತಂದೆ- ತಾಯಿಯರ ತುಂಬಿ ಪ್ರೀತಿಯಿಂದ ವಂಚಿತರಾಗಬೇಕಾಗುತ್ತದೆ.
ಇತ್ತೀಚೆಗೆ ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ 'ಶೇರ್ ಪೇರೆಂಟಿಂಗ್' ಎಂಬ ಮಹತ್ವದ ತೀರ್ಪು ಈ ಸ್ಥಿತಿಯಿಂದ ಮಕ್ಕಳನ್ನು ಪಾರುಮಾಡುವ ಭರವಸೆ ಮೂಡಿಸಿದೆ.
ಏನಿದು ಶೇರ್ ಪೇರೆಂಟಿಂಗ್?
ವಿಚ್ಛೇದನ ಎಂಬುದು ಪತಿ, ಪತ್ನಿ ನಡುವೆ ಮಾತ್ರ ನಡೆಯುವುದು. ಮಗು ಹಾಗೂ ಪೋಷಕರ ನಡುವೆ ನಡೆಯುವುದಲ್ಲ. ಸತಿ, ಪತಿ ವಿಚ್ಛೇದನ ಪಡೆದರೆ ಮಗು ಪೋಷಕರ ಪ್ರೀತಿಯನ್ನು ಕಳೆದುಕೊಳ್ಳುತ್ತದೆ. ಆ ಪ್ರೀತಿಯನ್ನು ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ. ಅದು ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ವಿಚ್ಛೇದನ ಪಡೆದ ನಂತರವೂ ಪೋಷಕರು ಒಂದೇ ನಗರದಲ್ಲಿರಲಿ, ಇಲ್ಲದಿರಲಿ, ಅವರು ಆರ್ಥಿಕವಾಗಿ ಸಬಲವಾಗಿರಲಿ, ಇಲ್ಲದಿರಲಿನ್ಯಾಯಾಲಯದ ಆದೇಶ ಪಡೆದು ಇಬ್ಬರೂ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು. ಇಂತಿಷ್ಟು ದಿನ ಎಂದು ಮಗು ತನ್ನ ತಾಯಿ ಹಾಗೂ ತಂದೆ ಜತೆಯಲ್ಲಿ ಇರುವ ಪದ್ಧತಿ ಇದು. ಎಷ್ಟು ದಿನ ಯಾರ ಜತೆ ಇರಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.
ಕೌಟುಂಬಿಕ ನ್ಯಾಯಾಲಯ
ನ್ಯಾಯಾಲಯದಿಂದ 'ಶೇರ್ ಪೇರೆಂಟಿಂಗ್'ಗೆ ಒಪ್ಪಿಗೆ ದೊರೆತ ನಂತರ ಪೋಷಕರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕೌಟುಂಬಿಕ ನ್ಯಾಯಾಲಯ ಗಮನಿಸುತ್ತಿರುತ್ತದೆ. ಮಗುವಿಗೆ 18 ವರ್ಷ ತುಂಬುವವರೆಗೂ ಇದು ಅನ್ವಯವಾಗುತ್ತದೆ. 16 ವರ್ಷ ತುಂಬುವವರೆಗೂ ಕಡ್ಡಾಯವಾಗಿ 'ಶೇರ್ ಪೇರೆಂಟಿಂಗ್' ಅಗತ್ಯ. ಪೋಷಕರು ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಅವರಿಗೆ ಬುದ್ಧಿ ಹೇಳುವ ಕೆಲಸ ಮಾಡುತ್ತದೆ.
ತಾಯಿಯ ಮಡಿಲಲ್ಲಿ ಮಕ್ಕಳು
'ಶೇರ್ ಪೇರೆಂಟಿಂಗ್' ಬಗ್ಗೆ ನ್ಯಾಯಾಲಯದ ಆದೇಶವಿದ್ದರೂ ಸಹ ಶೇ.90 ತಂದೆಯರು ತಮ್ಮ ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿದ್ದರು. ಈ ಬಗ್ಗೆ ಪೋಷಕರಲ್ಲಿ ಅರಿವಿಲ್ಲದಿರುವುದು ಸಹ ಕಾರಣ. ಮತ್ತೊಂದೆಡೆ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಇತ್ಯರ್ಥವಾಗದ ಕಾರಣ ಮಹಿಳೆಯರು ತಮ್ಮ ಮಗುವನ್ನು ಪತಿಯೊಡನೆ ಕಳುಹಿಸಲು ಒಪ್ಪುತ್ತಿರಲಿಲ್ಲ.
ವಿದೇಶದಲ್ಲಿ ಹೇಗೆ?
ವಿದೇಶಗಳಲ್ಲಿನ ಜನರು 'ಶೇರ್ ಪೇರೆಂಟಿಂಗ್' ಸಂಸ್ಕೃತಿಯನ್ನು ತಾವಾಗಿಯೇ ಅಳವಡಿಸಿಕೊಳ್ಳುತ್ತಾರೆ. ನ್ಯಾಯಾಲಯದ ಆದೇಶ ಬರುವವರೆಗೂ ಕಾಯುವುದಿಲ್ಲ. ಪತಿ ಪತ್ನಿಯರಲ್ಲಿ ಇರುವ ಪರಸ್ಪರ ದ್ವೇಷಕ್ಕೆ ಮಕ್ಕಳನ್ನು ಬಲಿಕೊಡುವುದಿಲ್ಲ. ವಿದೇಶಗಳಲ್ಲಿ 'ಶೇರ್ ಪೇರೆಂಟಿಂಗ್' ಕಡ್ಡಾಯ ಮಾಡಿದ ಮೇಲೆ ವಿಚ್ಛೇದನ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ರಾಜ್ಯದಲ್ಲಿ ನ್ಯಾಯಾಲಯದ ಆದೇಶವಿದ್ದರೂ ಸಾಕಷ್ಟು ಮಂದಿ ಅದನ್ನು ಪಾಲಿಸದೆ ಮಕ್ಕಳನ್ನು ತಮ್ಮ ಹಕ್ಕುಗಳಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ.
ಮಾರ್ಗಸೂಚಿ
* 'ಶೇರ್ ಪೇರೆಂಟಿಂಗ್' ಸಂಸ್ಕೃತಿ ಮೆಟ್ರೋಪಾಲಿಟನ್ ನಗರಗಳಲ್ಲಿ, ಐಟಿ-ಬಿಟಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿದೆ.
* ಮಗು ಒಂದಿರಲಿ, ಒಂದಕ್ಕಿಂತ ಹೆಚ್ಚಿರಲಿ ಈ 'ಶೇರ್ ಪೇರೆಂಟಿಂಗ್' ಎಲ್ಲರಿಗೂ ಅನ್ವಯವಾಗುತ್ತದೆ. ಗಂಡು ಹಾಗೂ ಹೆಣ್ಣು ಮಗು ಎಂಬ ಬೇಧವಿಲ್ಲ.
* 'ಶೇರ್ ಪೇರೆಂಟಿಂಗ್' ಬಗ್ಗೆ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು, ಎಲ್ಲಾ ರಾಜ್ಯಗಳ ನ್ಯಾಯಾಲಯಗಳೂ ಅದನ್ನು ಅನುಸರಿಸುವಂತೆ ಸೂಚಿಸಿದೆ.
* ಪೋಷಕರಿಗಿಂತ ಮಗುವಿನ ಕ್ಷೇಮ ಮುಖ್ಯ. ಹಿಂದೂ ಕಾಯ್ದೆ ಪ್ರಕಾರ ಮಗುವಿಗೆ ಮೊದಲ ಪಾಲಕ ತಂದೆ. ನಂತರ ತಾಯಿ ಆ ಪಟ್ಟಿಗೆ ಸೇರುತ್ತಾಳೆ.
- ಶಾಂತ ತಮ್ಮಯ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.