ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೇಪ್‌ಟೌನ್‌ನ ನಡುವೆ ಮಲೆನಾಡಿನ ಒಂದು ಹಳ್ಳಿ!

'ಇಂದು ಸಾಯಂಕಾಲ ಐದು ಗಂಟೆಗೆ ಬೋ-ಕಾಪ್‌ಗೆ ಹೋಗಬೇಕು. ಅಷ್ಟೊತ್ತಿಗೆ...

Vishwanath S
Updated On : 11 Nov 2013, 11:49 am

'ಇಂದು ಸಾಯಂಕಾಲ ಐದು ಗಂಟೆಗೆ ಬೋ-ಕಾಪ್‌ಗೆ ಹೋಗಬೇಕು. ಅಷ್ಟೊತ್ತಿಗೆ ರೆಡಿಯಾಗಿರಿ' ಎಂದ ನಮ್ಮ ಟೂರ್ ಗೈಡ್ ಅಬ್ದುಲ್. ಬೋ-ಕಾಪ್ ಅಂದ್ರೆ ಏನೆಂದು ತಕ್ಷಣ ಅರ್ಥವಾಗಲಿಲ್ಲ. ಹೇಗಿದ್ದರೂ ಸಾಯಂಕಾಲ ಅಲ್ಲಿಗೆ ಹೋಗುತ್ತೀವಲ್ಲ, ಆಗಲೇ ಕೇಳಿ ತಿಳಿದುಕೊಂಡರಾಯಿತು ಎಂದು ಸುಮ್ಮನಾದೆ. ಆದರೆ, ಮನಸ್ಸು ಕೇಳಲಿಲ್ಲ. ನಮ್ಮ ಪ್ರವಾಸದ ಕಾರ್ಯಕ್ರಮ ಪಟ್ಟಿಯನ್ನು ತೆಗೆದು ನೋಡಿದೆ. visit to Bo-kaap ಎಂದಷ್ಟೇ ಬರೆದಿತ್ತು. ಹೋಟೆಲ್ ಮ್ಯಾನೇಜರ್‌ನನ್ನು ಕರೆದು 'ಬೋ-ಕಾಪ್ ಅಂದ್ರೆ ಏನು' ಎಂದು ಕೇಳಿದೆ. 'ಅದೊಂದು ಪ್ರದೇಶದ ಹೆಸರು, ಕೇಪ್‌ಟೌನ್‌ನಲ್ಲಿ ಬಹಳ ವಿಶಿಷ್ಟ ಪ್ರದೇಶ' ಎಂದಷ್ಟೇ ಹೇಳಿದ. ಆ ಪ್ರದೇಶ ವಿಶಿಷ್ಟವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅದರ ಹೆಸರು ಮಾತ್ರ ಹಾಗೇ ಇದೆ ಎಂದೆನಿಸಿತು.
ಬೋ-ಕಾಪ್‌ಗೆ ಹೋಗಲು ಉತ್ಸುಕರಾಗಿ ಸಿದ್ಧರಾಗಿದ್ದೆವು. ಅಬ್ದುಲ್ ಬಂದು ಆ ಸಾಯಂಕಾಲದ ಕಾರ್ಯಕ್ರಮವನ್ನೆಲ್ಲ ವಿವರಿಸಿದ. ಈ ಅಬ್ದುಲ್ ನನಗೆ ಮೊದಲ ದಿನವೇ ಇಷ್ಟವಾದದ್ದು ಈ ಕಾರಣಕ್ಕೆ. ಏನೇ ಕೇಳಿದರೂ ಆತನಲ್ಲಿ ವಿವರಣೆ, ಮಾಹಿತಿ ಇರುತ್ತಿತ್ತು. ಎಲ್ಲ ವಿವರಗಳನ್ನೂ ಶಾಲಾ ಮಕ್ಕಳಿಗೆ ತಿಳಿಹೇಳುವಂತೆ ಒಪ್ಪಿಸುತ್ತಿದ್ದ. ಇತಿಹಾಸ, ಸಂಸ್ಕೃತಿ, ರಾಜಕೀಯ, ವಿಜ್ಞಾನ, ತಲೆಹರಟೆ... ಹೀಗೆ ಯಾವ ವಿಷಯ ಕೇಳಿದರೂ ಅವನಲ್ಲಿ ಸರಕುಗಳು ಇರುತ್ತಿದ್ದವು. ಒಬ್ಬ ಗೈಡ್ ತನ್ನ ಪ್ರವಾಸಿಗರನ್ನು ಸೆಳೆಯುವುದು ಅವನಲ್ಲಿರುವ ಮಾಹಿತಿ ಹಾಗೂ ಅದನ್ನು ಹೇಳುವ ರೀತಿಯಿಂದ. ಅಬ್ದುಲ್ ಮಾತಾಡಲಾರಂಭಿಸಿದರೆ ನನಗೆ ಕೈತುಂಬಾ ಕೆಲಸ. ಎಲ್ಲವನ್ನೂ ನೋಟ್ ಮಾಡಿಕೊಳ್ಳಬೇಕಾದ ಹಿತವಾದ ಕಷ್ಟ. ಅವನ ಇಂಗ್ಲಿಷ್ ಭಾಷೆಯೂ ಸೊಗಸಾಗಿತ್ತು. ಆತ ಡ್ರೈವ್ ಮಾಡುತ್ತಾ, ರನ್ನಿಂಗ್ ಕಾಮೆಂಟರಿ ಶುರು ಮಾಡಿದ ಅಂದ್ರೆ ನಿದ್ದೆ ಮಾಡಲು ಬಿಡೊಲ್ಲ ಎಂಬುದು ಖಾತ್ರಿ. ಅದಕ್ಕಿಂತ ಮುಖ್ಯವಾಗಿ ಆತನೂ ನಿದ್ದೆ ಮಾಡಲಾರ ಎಂಬುದು ಪಕ್ಕಾ ಆಗುತ್ತಿತ್ತು.
'ಬೋ-ಕಾಪ್‌ನಲ್ಲಿ ಕಾಲ್ನಡಿಗೆಯಲ್ಲಿ ತಿರುಗಾಡಿ, ಆ ಪ್ರದೇಶದ ಪರಿಚಯ ಮಾಡಿಕೊಂಡ ಬಳಿಕ, ನಿಮ್ಮನ್ನು ಅಪರಿಚಿತರೊಬ್ಬರ (ಆ ಊರಿನಲ್ಲಿ ಪರಿಚಯದವರಿರಲು ಹೇಗೆ ಸಾಧ್ಯ) ಮನೆಗೆ ಕರೆದುಕೊಂಡು ಹೋಗುತ್ತೇವೆ. ಅವರ ಮನೆಯಲ್ಲಿ ನೀವು ಅಡುಗೆಮನೆಗೆ ಹೋಗಿ, ತರಕಾರಿ ಕತ್ತರಿಸಿ, ಅವರು ಹೇಳುವ ಕೆಲಸ ಮಾಡಿ, ಅಡುಗೆ ಸಿದ್ಧಪಡಿಸಿ ಕೊನೆಯಲ್ಲಿ ಅವರ ಮನೆಯಲ್ಲಿಯೇ ಒಟ್ಟಾಗಿ ಕುಳಿತು ಊಟ ಮಾಡಿ ಬರುವ ಕಾರ್ಯಕ್ರಮ. ನಿಮಗೆ ಕೇಪ್‌ಟೌನ್‌ನ ಆತಿಥ್ಯದ ಫಸ್ಟ್ ಹ್ಯಾಂಡ್ ಅನುಭವವಾಗಲಿ ಎಂಬುದು ಉದ್ದೇಶ' ಎಂದ ಅಬ್ದುಲ್.
ಅತಿ ಸಂತಸವಾಯಿತು. ಯಾವ ದೇಶಕ್ಕೆ ಹೋದರೂ ಇಂಥ ಅನುಭವ ಸಿಗುವುದಿಲ್ಲ. (ನನಗೆ ನನ್ನ ಮನೆಯಲ್ಲೂ ಈ ಅನುಭವ ಸಿಕ್ಕಿರಲಿಲ್ಲ ಬಿಡಿ) ವಿದೇಶಗಳಲ್ಲಿ ಅಪರಿಚಿತರ ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ. ಇನ್ನು ಅಡುಗೆ ಮನೆಗೆ ಹೋಗುವ, ಅಡುಗೆ ಮಾಡುವ ಮಾತು ದೂರವೇ ಉಳಿಯಿತು. ಈ ದೃಷ್ಟಿಯಿಂದ ಇದೊಂದು ಅಪೂರ್ವ ಅವಕಾಶ ಎಂದೆನಿಸಿತು. ಈ ಸಂತಸದಲ್ಲೇ ಪತ್ನಿಗೆ ಫೋನ್ ಮಾಡಿ ಹೇಳೋಣ ಎಂದುಕೊಂಡೆ. 'ಒಂದು ದಿನ ಅಡುಗೆ ಮನೆಗೆ ಬಂದು ನನಗೆ ಸಹಾಯ ಮಾಡಿದ್ದೀರಾ? ಈಗ ಯಾರದ್ದೋ ಮನೆಗೆ ಹೋಗುತ್ತಿದ್ದೀರಲ್ಲ ಅಡುಗೆ ಮಾಡಲು?' ಎಂದು ಕೇಳಿದರೆ ಏನು ಹೇಳಲಿ ಎಂದು ಮುಂದೊದಗಿ ಬರಲಿರುವ 'ಅಪಾಯದ ಮುನ್ಸೂಚನೆ'  ಅರಿತು ಸುಮ್ಮನಾದೆ.
ಅಂದ ಹಾಗೆ ಬೋ-ಕಾಪ್ ಕೇಪ್‌ಟೌನ್‌ನ ಒಂದು ಸುಂದರ ಪ್ರದೇಶ. ನಗರದ ಹೃದಯ ಭಾಗದಿಂದ ಹತ್ತು ನಿಮಿಷಗಳ ದೂರದಲ್ಲಿರುವ ರೆಸಿಡೆನ್ಷಿಯಲ್ ಬಡಾವಣೆ. ಟೇಬಲ್ ಮೌಂಟನ್‌ನ ತಪ್ಪಲಲ್ಲಿರುವ ಸಿಗ್ನಲ್ ಹಿಲ್‌ನ ಇಳಿಜಾರಿನಲ್ಲಿರುವ ಪ್ರದೇಶ. ಮೂರು ಬೀದಿಗಳಲ್ಲಿ ಹರಡಿರುವ ಸುಮಾರು ಆರುನೂರಾ ಐವತ್ತು ಮನೆಗಳಿರುವ ಈ ಪ್ರದೇಶ ಎಲ್ಲರ ಗಮನ ಸೆಳೆಯುವುದು ಅಲ್ಲಿನ ಮನೆಗಳಿಂದ. ಎಲ್ಲ ಮನೆಗಳ ಬಣ್ಣವೂ ಬೇರೆ ಬೇರೆ. ಎಲ್ಲ ಮನೆಗಳ ಬಣ್ಣವೂ ಕಣ್ಣಿಗೆ ರಾಚುವ ಗಾಢ ಬಣ್ಣವೇ. ಅಂಥ ಬಣ್ಣವನ್ನು ಮನೆಗಳಿಗೆ ಬಳಿದಿದ್ದನ್ನು ಹಿಂದೆಂದೂ ನೀವು ನೋಡಿರುವ ಸಾಧ್ಯತೆ ಕಮ್ಮಿ. ಕೆಲವು ಬಣ್ಣಗಳನ್ನು ನೀವು ಇಷ್ಟಪಡದಿರಬಹುದು, ಆದರೆ, ಅಲ್ಲಿನ ಮನೆಗಳಿಗೆ ಅವುಗಳನ್ನು ಬಳಿದಿರುವುದನ್ನು ನೋಡಿದ ನಂತರ ನಿಧಾನವಾಗಿ ಇಷ್ಟಪಡಲು ಆರಂಭಿಸುತ್ತೀರಿ. ಒಂದು ಸಾಲಿನಲ್ಲಿ ಹದಿನೈದು ಮನೆಗಳಿದ್ದರೆ ಎಲ್ಲವುಗಳ ಬಣ್ಣವೂ ಬೇರೆ ಬೇರೆ. ಎಲ್ಲವೂ ಗಾಢ ಬಣ್ಣಗಳೇ. ಹೊಳೆ ದಂಡೆಯಲ್ಲಿ ಸಿಗುವ ಟೊಮ್ಯಾಟೊ ಹಣ್ಣಿನ ಗಾತ್ರದ ನುಣುಪು ಕಲ್ಲುಗಳನ್ನು ಹಾಸಿದ ರಸ್ತೆ.
ಬೋ-ಕಾಪ್‌ಗೆ ಅಡಿಯಿಟ್ಟರೆ ಸಾಕು, ಬೇರೆಯ ಊರಿಗೆ, ಪರಿಸರಕ್ಕೆ ಬಂದ ಅನುಭವ. ಯಾವ ಮನೆಗಳಿಗೂ ಒಂದಕ್ಕಿಂತ ಹೆಚ್ಚಿನ ಮಹಡಿಗಳಿಲ್ಲ. ಬಹುಪಾಲು ಮನೆಗಳು ನೆಲಮಹಡಿಯೊಂದನ್ನೇ ಹೊಂದಿವೆ. ಯಾವ ಮನೆಯ ಕಿಟಕಿಯ ಬಾಗಿಲುಗಳು ಗೋಡೆಯಿಂದ ಹೊರಚಾಚಿಲ್ಲ. ಒಂದೇ ನಮೂನೆಯ ಬಾಗಿಲುಗಳು, ಕಿಟಕಿಗಳು.
ಬೋ-ಕಾಪ್ ಪ್ರದೇಶದಲ್ಲಿ ಇರುವ ಮನೆಗಳ ಪೈಕಿ ಶೇ.80ರಷ್ಟು ಮುಸ್ಲಿಮರಿಗೆ ಸೇರಿದ್ದು. ಉಳಿದವು ಅನ್ಯಧರ್ಮೀಯರದ್ದು. ಆದರೆ, ಎಲ್ಲರೂ ಒಂದೇ ಮನೆಯ ಸದಸ್ಯರಂತೆ ಸಾಮರಸ್ಯದಿಂದ, ಪ್ರೀತಿಯಿಂದ ಇದ್ದಾರೆ. ಒಬ್ಬರ ಮನೆಯ ಸಂತಸ ಇಡೀ ಬೋ-ಕಾಪ್‌ಗೇ ಸಡಗರ. ಒಬ್ಬರ ನೋವು, ಸಂಕಟ ಇಡೀ ಪ್ರದೇಶಕ್ಕೆ ಸೂತಕ. ಒಂದು ಮನೆಯಲ್ಲಿ ಮದುವೆ ನಿಕ್ಕಿಯಾದರೆ, ಉಳಿದೆಲ್ಲ ಮನೆಯವರು ತಮ್ಮ ಕೈಲಾದ ಸಹಾಯಕ್ಕೆ ಮುಂದಾಗುತ್ತಾರೆ. ಅಲ್ಲಿ ಎಲ್ಲರೂ ಎಲ್ಲರಿಗೂ ಪರಿಚಯ. ನಮ್ಮ ಹಾಗೆ ಅಪರಿಚಿತರಾಗಿ ಕಾಲಿಟ್ಟವರು ಪರಿಚಿತರಾಗಿ, ಸ್ನೇಹಿತರಾಗಿ, ಕೊರಳ ಗೆಳೆಯರಾಗಿ ಹೊರಬಂದಿರುತ್ತೇವೆ. ಥೇಟು ನಮ್ಮ ಹಳ್ಳಿಗಳಲ್ಲಿ ಮಾತ್ರ ಕಾಣಬಹುದಾದ ಇಂಥ ಮೈತ್ರಿ, ಗಾಢ ಸಂಬಂಧ ಕೇಪ್‌ಟೌನ್‌ನ ಆ ಬಡಾವಣೆಯಲ್ಲಿ ಹಾಸು ಹೊಕ್ಕಿರುವುದು ಮಾನವ ಸಂಬಂಧಕ್ಕೆ ಬರೆದ ಹೊಸ ಷರಾ!
ಬೋ-ಕಾಪ್‌ನ ಬೀದಿಗಳಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದ ಲೇಡಿ ಗೈಡ್ ಹೋಗಿ ಬರುವ ದಾರಿಹೋಕರಿಗೆಲ್ಲ ಕೈಬೀಸುತ್ತಿದ್ದಳು. ತನ್ನ ಜಾಕೆಟ್‌ನಲ್ಲಿಟ್ಟುಕೊಂಡ ಚಾಕಲೇಟ್‌ಗಳನ್ನು ಬೀದಿಯಲ್ಲಿ ಆಡುತ್ತಿದ್ದ ಮಕ್ಕಳನ್ನು ಕರೆದು ಕೊಡುತ್ತಿದ್ದಳು. ಈಕೆ ಈ ಬಡಾವಣೆಯಲ್ಲಿ ಜನಪ್ರಿಯ ವ್ಯಕ್ತಿಯಾಗಿರಬೇಕು ಅಂತ ಅಂದುಕೊಂಡೆ. 'ನಾನು ಇಲ್ಲಿಯೇ ವಾಸಿಸುತ್ತೇನೆ. ಹೀಗಾಗಿ ಎಲ್ಲರೂ ಪರಿಚಿತರು, ಎಲ್ಲರೂ ಮಾತಾಡಿಸುತ್ತಾರೆ' ಎಂದಳು. ಇಡೀ ಬಡಾವಣೆಯ ಜನ ಒಂದು ಮನೆಯ ಸದಸ್ಯರಂತೆ ವಾಸಿಸುತ್ತಿರುವುದು ಈ ಆಧುನಿಕ ಬದುಕಿನಲ್ಲಿ ಒಂದು ವಿಸ್ಮಯದಂತೆ ಕಂಡಿತು.
ಬೆಂಗಳೂರಿನಂಥ ನಗರದಲ್ಲಿ ವಾಸಿಸುವ ನಮಗೆ ನಮ್ಮ ನೆರೆಹೊರೆಯವರೇ ಗೊತ್ತಿರುವುದಿಲ್ಲ. ಅಪಾರ್ಟ್‌ಮೆಂಟುಗಳಲ್ಲಿ ಒಂದೇ ಮಹಡಿಗೆ, ಒಂದೇ ಲಿಫ್ಟಿನಲ್ಲಿ ಬಂದರೂ ಪಕ್ಕದವರು ಯಾರೆಂಬುದು ಗೊತ್ತಿರುವುದಿಲ್ಲ. ಹೀಗಿರುವಾಗ ಇಲ್ಲಿ ಊರಿಗೆ ಊರೇ ಪರಿಚಿತರು, ಸ್ನೇಹಿತರು. ಇಂಥ ಅಪರೂಪದ ಮಾನವ ಸಮೀಕರಣ ಆತಿಥ್ಯ, ಬಡಿವಾರಕ್ಕೆ ಹೆಸರಾದ ಮಲೆನಾಡಿನ ಕೆಲವು ಹಳ್ಳಿಗಳಲ್ಲಿ ಅಪ್ಪಿತಪ್ಪಿ ಇನ್ನೂ ಉಳಿದುಕೊಂಡಿದೆ.
ಬೋ-ಕಾಪ್‌ನ ಬೀದಿಗಳಲ್ಲಿ ನಡೆದಾಡುವಾಗ ನನಗೆ ತಟ್ಟನೆ ನೆನಪಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ  ತಾಲೂಕಿನ ಹರೀಶೆ ಎಂಬ ಹಳ್ಳಿ. ತ್ಯಾಗಲಿ ಹಾಗೂ ನಾಣಿಕಟ್ಟಾ ಎಂಬ ಊರಿನ ಸನಿಹವಿರುವ ಈ ಹಳ್ಳಿಯಲ್ಲಿ ನಲವತ್ತು-ಐವತ್ತು ಮನೆಗಳಿರಬಹುದು. ಊರಿನ ಕೊನೆಯ ಮನೆಗೆ ನೀವು ಹೋಗುತ್ತಿದ್ದೀರಿ ಅಂತ ಅಂದುಕೊಂಡರೆ, ಮೊದಲ ಮನೆಯಿಂದಲೇ ನಿಮ್ಮನ್ನು ಮಾತಾಡಿಸಲಾರಂಭಿಸುತ್ತಾರೆ. ನೀವು ಅಪರಿಚಿತರಾದರೂ ಪರವಾಗಿಲ್ಲ. 'ಚೆನ್ನಾಗಿದ್ದೀರಾ? ಈಗ ಬಂದರಾ? ನಮ್ಮ ಮನೆಗೆ ಬನ್ನಿ, ಕಾಫಿ ತಿಂಡಿ ಸೇವಿಸಿ ಹೋಗಬಹುದಲ್ಲ'  ಎಂದು ಹೇಳುವ ಸಂಪ್ರದಾಯ ಈಗಲೂ ಇದೆ. ಒಂದು ಗುಟ್ಟನ್ನು ಸಹ ಜೋಪಾನವಾಗಿ ಯಾರಿಂದಲೂ ಇಟ್ಟುಕೊಳ್ಳಲು ಆಗದಿರುವಂಥ ಊರು ಅದು. ಅಲ್ಲಿನ ಅತಿಥ್ಯ, ಉಪಚಾರದ ಮಾತುಗಳನ್ನು ಕೇಳಿ ನೀವು ಯಾರ ಮನೆಗೆ ಹೋಗಲು ಬಯಸಿದ್ದೀರಿ ಎಂಬುದು ತಿಳಿಯದೇ ತುಸು ಯಡವಟ್ಟು, ಗೊಂದಲವಾದರೆ ಅಚ್ಚರಿಯಿಲ್ಲ. ಒಬ್ಬರ ಮನೆಗೆ ನೆಂಟರಾದರೆ ಊರಿಗೇ ನೆಂಟರಾದಂತೆ. ಅಲ್ಲಿ ನೀವು ಯಾರದೋ ಒಬ್ಬರ ಮನೆಗೆ ಮಾತ್ರ ಹೋಗಿ ಬರಲು ಸಾಧ್ಯವಿಲ್ಲ. ನೀವು ಊರಿನ ಮೊದಲ ಮನೆಯ ಹತ್ತಿರ ಬರುತ್ತಿರುವಂತೆ ಕೊನೆಯ ಮನೆಯಲ್ಲಿ ನಿಮ್ಮ ಆಗಮನದ ಬ್ರೇಕಿಂಗ್ ನ್ಯೂಸ್ ಬಿತ್ತರವಾಗಿರುತ್ತದೆ. ಇನ್ನು ನೀವು ಕೊನೆಯ ಮನೆ ತಲುಪುವ ವೇಳೆಗೆ ಆ ಸುದ್ದಿ ಹಳತಾಗಿರುತ್ತದೆ. ಹರೀಶೆಯಲ್ಲಿ ನಾಲ್ಕು ದಿನ ಉಳಿದುಕೊಂಡರೆ, ಒಂದೇ ಮನೆಯಲ್ಲಿ ಊಟ-ಉಪಚಾರ ಮಾಡಲು ಸಾಧ್ಯವಿಲ್ಲ. ಸುತ್ತಮುತ್ತಲ ಐದಾರು ಮನೆಗಳಲ್ಲೂ ದಾಕ್ಷಿಣ್ಯ, ವರಾತಕ್ಕೆ 'ಬಲಿ' ಯಾಗಬೇಕಾಗುತ್ತದೆ. ಮದುವೆ-ಮುಂಜಿಗೆ ಹರೀಶೆಗೆ ಆಮಂತ್ರಣ ಪತ್ರಿಕೆ ಕೊಡಲು ಹೋದರೆ ಫಡ್ಚಾ! ಒಬ್ಬರ ಮನೆಯಲ್ಲಿ ಕಾಫಿ, ಮತ್ತೊಬ್ಬರ ಮನೆಯಲ್ಲಿ ಕಷಾಯ, ಇನ್ನೊಬ್ಬರ ಮನೆಯಲ್ಲಿ ಚಹ, ಮುಂದಿನ ಮನೆಯಲ್ಲಿ ಮಜ್ಜಿಗೆ... ಹೀಗೆ ಎಲ್ಲರ ಮನೆಯಲ್ಲಿ ಭಿಡೆ ತೀರಿಸುವ ಹೊತ್ತಿಗೆ ನೀವು ಸುಸ್ತೋ ಸುಸ್ತು.
ಈ ಬೋ-ಕಾಪ್ ಕೂಡ ನಮ್ಮ ಹರೀಶೆಯೇ. ಬೋ-ಕಾಪ್, ಕೇಪ್‌ಟೌನ್‌ನಂಥ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ದೊಡ್ಡ ನಗರದಲ್ಲಿ ಹರೀಶೆಯಂಥ ಸೊಗಡು, ಸಂಸ್ಕೃತಿಯನ್ನು ಇಂದಿಗೂ ಕಾಪಾಡಿಕೊಂಡಿದೆ ಅಂದ್ರೆ ಇದರ ಮುಂದೆ ಹರೀಶೆ ಏನೇನೂ ಅಲ್ಲ. ಕಾರಣ ಹಳ್ಳಿಯಲ್ಲಿ ಅದು ಸಹಜವೆನ್ನಬಹುದು. ನಗರಗಳಲ್ಲಿ, ಅದೂ ಈ ಯಾಂತ್ರಿಕ, ಕೃತ್ರಿಮ, ಆಧುನಿಕ, ಇಂಟರ್‌ನೆಟ್ ಯುಗದಲ್ಲಿ ಸಂಬಂಧಗಳನ್ನು ಸದಾ ಜಾರಿಯಲ್ಲಿಟ್ಟುಕೊಂಡಿರುವುದು ಸಣ್ಣ ಮಾತಲ್ಲ. ಬೆಂಗಳೂರಿನಂಥ ಊರಿನಲ್ಲಿ ಕಸವನ್ನು ಸುಲಭವಾಗಿ ಕಲೆಹಾಕಬಹುದು. ನಾಲ್ಕು ಜನರನ್ನು ಸೇರಿಸುವುದು ಕಷ್ಟಕಷ್ಟ. ಅದರಲ್ಲೂ ನೆರೆಯವರೆಂದರೆ ಯಾವತ್ತಿದ್ದರೂ ಹೊರೆಯೇ ಎಂದು ಭಾವಿಸುವ ಮನೋಭಾವವಿದೆ.
ಈ ಹಿನ್ನೆಲೆಯಲ್ಲಿ ಬೋ-ಕಾಪ್ ನನ್ನೊಳಗೆ ಅಚ್ಚರಿಯ ಮೊಟ್ಟೆಗೆ ಕಾವು ಕೊಡುತ್ತಲೇ ಇದೆ.
ಅಂದ ಹಾಗೆ, ಈ ಬೆರಗಿನ ಬಣ್ಣನೆಯ ನಡುವೆ ನಾವು ಮಾಡಿದ ಅಡುಗೆ, ಊಟದ ಬಗ್ಗೆ ಹೇಳುವುದು ಮರೆತೇ ಹೋಯಿತು ನೋಡಿ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement