ನಿರಂತರ ಕತೆ
ಆರಂಭದಲ್ಲಿರುವ ಶೂರತ್ವ ಆಮೇಲೆ ಇಳಿಯುತ್ತದೋ, ಆರಂಭವನ್ನೇ ಸಂಪೂರ್ಣ ಮನಸ್ಸಿನಿಂದ ಮಾಡಿರುವುದಿಲ್ಲವೋ, ಕೆಲಸವಂತೂ ತುದಿ ಮುಟ್ಟುವುದೇ ಇಲ್ಲ. ಇಂಥ ಸನ್ನಿವೇಶಗಳನ್ನು ನಾವು ಸಾಕಷ್ಟು ನೋಡಿರುತ್ತೇವೆ. ಕೆಲವರು ತಮ್ಮ ಮಹತ್ವಾಕಾಂಕ್ಷೆಯ ಕೆಲಸದ ಆರಂಭವನ್ನು ತೀವ್ರತೆಯಿಂದಲೇ ಮಾಡಿರುತ್ತಾರೆ. ಕೆಲಸಗಳು ಸಾಕಷ್ಟು ಶೀಘ್ರಗತಿಯಲ್ಲಿ, ತಾವೆಣಿಸಿದಷ್ಟು ಸುಲಭವಾಗಿ ನೆರವೇರದೆ ಇದ್ದಾಗ ಕಾರ್ಯ ಕುಂಟುತ್ತದೆ. ಬರಬರುತ್ತ ಕೆಲಸದಲ್ಲಿನ ಶ್ರದ್ಧೆ ಕುಸಿಯುತ್ತದೆ. ನೂರು ಶೇಕಡ ಪ್ರಯತ್ನ ಹಾಕಬೇಕಾದ ಜಾಗದಲ್ಲಿ ಐವತ್ತು ಶೇಕಡ ಮಾತ್ರ ಹಾಕುತ್ತಾರೆ. ಫಲಿತಾಂಶ ಹೇಳಬೇಕೆ? ನಿರೀಕ್ಷಿಸಿದ್ದು ಸಿಗುವುದೇ ಇಲ್ಲ.
ಯಾಕೆ ಹೀಗಾಗುತ್ತದೆ? ಗುರಿಯೆಡೆಗೆ ಶ್ರದ್ಧೆಯೇನೋ ಇರುತ್ತದೆ. ಆದರೆ ಪ್ರಯತ್ನದಲ್ಲಿ ನಿರಂತರತೆ ಮಾತ್ರ ಇರುವುದಿಲ್ಲ. ನಿರಂತರತೆ, ಸ್ಥಿರತೆ ಯಾವುದಕ್ಕೇ ಆಗಲಿ ಮುಖ್ಯ. ಭೂಮಿ ನಿಗದಿತ ವೇಗದಲ್ಲಿ ತನ್ನ ಕಕ್ಷೆಯ ಸುತ್ತ ತಿರುಗದಿದ್ದರೆ, ನಿಗದಿತ ವೇಗದಲ್ಲಿ ಹಾಗೂ ನಿಗದಿತ ಪಥದಲ್ಲಿ ಸೂರ್ಯನ ಸುತ್ತ ಸುತ್ತದಿದ್ದರೆ, ದಿನ ರಾತ್ರಿ ವರ್ಷ ಎಂಬ ಪರಿಭೇದಗಳೇ ಇಲ್ಲದೆ ಭೂಮಿಯ ವಾತಾವರಣ ಈಗಿನಂತಿಲ್ಲದೆ ಜೀವಸೃಷ್ಟಿಯೇ ಅಸಾಧ್ಯವಾಗಿರುತ್ತಿತ್ತು. ಕಾಲದ ವಿಂಗಡಣೆಯೂ ಇರುತ್ತಿರಲಿಲ್ಲ. ಈಗಲೂ, ಭೂಮಿ ತನ್ನ ಕಕ್ಷೆಯಿಂದ ಒಂದಿಂಚು ಆಚೀಚೆ ಜರುಗಿದರೂ ಅಲ್ಲೋಲಕಲ್ಲೋಲವೇ ಆಗಿಬಿಡುತ್ತದೆ. ಸಕಲ ಜೀವಜಾಲವೂ ತನ್ನ ಜೀವನಚಕ್ರ, ಆಹಾರಚಕ್ರದಲ್ಲಿ ನಿಗದಿತತೆ, ನಿರಂತರತೆಯನ್ನು ಕಾಪಾಡಿಕೊಂಡಿದೆ. ಆದ್ದರಿಂದಲೇ ಬದುಕುಳಿದಿದೆ.
ಯಶಸ್ಸಿನತ್ತ ಪಯಣವೂ ಹೀಗೆಯೇ. ಅದು ನಿರಂತರ ಪರಿಶ್ರಮವನ್ನು ಬೇಡುತ್ತದೆ. ಅಲ್ಲಿ ಕಲ್ಲುಮುಳ್ಳುಗಳಿವೆ, ಗುಂಡಿಗಟಾರಗಳಿವೆ. ಹಾಗೇ ಹೂವಿನ ಹಾದಿಗಳೂ ಇರಬಹುದು. ಹೂವಿನ ಮೇಲೆ ನಡೆದ ಅನುಭವವೇ ಮುಳ್ಳಿನ ಮೇಲೆ ನಡೆದಾಗಲೂ ಆಗಬೇಕೆಂದು ನಿರೀಕ್ಷಿಸುವುದು ಸಾಧುವಲ್ಲ. ಮನುಷ್ಯ ಪ್ರೌಢನಾಗಲು ಎಲ್ಲ ಬಗೆಯ ಅನುಭವಗಳೂ ಬೇಕು. ಎಲ್ಲದರಿಂದಲೂ ಪಾಠ ಕಲಿತು ಮುಂದಕ್ಕೆ ನಡೆಯುತ್ತಿರಬೇಕು.
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.