ಕಾರಂತರಿಗೆ ವಿಳಾಸ ಇಲ್ಲ!
ಕನ್ನಡ ನಾಡಿಗೆ 3ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಡಾ. ಕೋಟ ಶಿವರಾಮ ಕಾರಂತರು ಹುಟ್ಟಿ ಬೆಳೆದ, ಓಡಾಡಿದ, ಶಿಕ್ಷಣ ಪಡೆದ, ಸಾಹಿತ್ಯದ ಗೀಳು ಹಚ್ಚಿಕೊಂಡ, ಕೊನೆಗೆ ಸಮಾಧಿಗೊಂಡ ಮನೆ ಇಂದಿಲ್ಲ! ಉಡುಪಿ ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ- 66 ನಾಲ್ಕೈದು ವರ್ಷಗಳಿಂದ ಅಗಲಗೊಳ್ಳುತ್ತಲೇ ಇದೆ. ಇದಕ್ಕೆ ಬಲಿಯಾಯಿತು ಕಾರಂತರು ಹುಟ್ಟಿದ 200 ವರ್ಷಗಳಷ್ಟು ಹಳೆಯ ಮನೆ!
ಕುಂದಾಪುರ ತಾಲೂಕಿನ ಕೋಟದಲ್ಲಿದ್ದ ಈ ಮನೆಯಲ್ಲಿ ಕಾರಂತರು ಹುಟ್ಟಿದ್ದು 1902ರಲ್ಲಿ. ಅದು ವಿಶಾಲವಾದ ಕರಾವಳಿ ಶೈಲಿಯ ಮಂಗಳೂರು ಹೆಂಚಿನ ಮನೆ. ತಂದೆ ಶೇಷಪ್ಪಯ್ಯ ಕಾರಂತರು ಕಟ್ಟಿಸಿದ್ದು.
ಕಾರಂತರ ಪ್ರಾಥಮಿಕ- ಮಾಧ್ಯಮಿಕ ಶಿಕ್ಷಣ ಇದೇ ಮನೆಯಲ್ಲಿ ನಡೆದಿದ್ದು. ನಡುವೆ ಕೆಲಕಾಲ ಪುತ್ತೂರಿನ ಬಾಲವನದಲ್ಲಿ ನೆಲೆಸಿದ್ದರು. ಬರವಣಿಗೆಯ ಏಕಾಂತಕ್ಕಾಗಿ ಕೊನೆಯ ದಿನಗಳನ್ನು ಕೋಟ ಸಮೀಪದ ಸಾಲಿಗ್ರಾಮದಲ್ಲಿ ಕಳೆದರು. ನಿಧನರಾದ ಮೇಲೆ ಅಂತ್ಯಸಂಸ್ಕಾರ ಅವರು ಹುಟ್ಟಿ ಬೆಳೆದ ಈ ಮನೆಯ ಹಿತ್ತಲಲ್ಲಿ ನಡೆಯಿತು. ಮೊನ್ನೆ ಮೊನ್ನೆವರೆಗೂ ಮನೆಯನ್ನು ಕಾರಂತರ ಸೋದರಿ ನೋಡಿಕೊಳ್ಳುತ್ತಿದ್ದರು. ಕಾರಂತರು ಕುಳಿತುಕೊಳ್ಳುತ್ತಿದ್ದ ಮರದ ಕುರ್ಚಿ, ತೂಗು ಮಂಚ, ಹಳೇ ಗೋಡೆ ಗಡಿಯಾರ, ಕೆಲ ಕೃಷಿ ಉಪಕರಣಗಳು ಈ ಮನೆಯಲ್ಲಿದ್ದವು. ವರ್ಷದ ಹಿಂದೆ ಗುತ್ತಿಗೆದಾರರ ಭಾರಿ ಗಾತ್ರದ ಬುಲ್ಡೋಜರುಗಳು ಈ ಮನೆಯನ್ನು ಕುಟ್ಟಿ ಪುಡಿಮಾಡಿ ನೆಲಸಮ ಮಾಡಿಬಿಟ್ಟಿತ್ತು. ಒಂದಷ್ಟು ಮಂದಿ ಕಾರಂತಾಭಿಮಾನಿಗಳು 'ಹೋ ಹೋ' ಎಂದರಾದರೂ ಪ್ರಯೋಜನವಾಗಲಿಲ್ಲ. ಉಡುಪಿ ಜಿಲ್ಲೆಯ ಪುಢಾರಿಗಳು ಮನೆಯನ್ನು ಉಳಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಇವತ್ತು ಕಾರಂತ ಮನೆ ಕೇವಲ ಫೊಟೋಗಳಲ್ಲಷ್ಟೇ ಜೀವಂತ!
ಬಣ್ಣದ ಮಾತು
ಮಾಜಿ ಸಚಿವ, ದಿವಂಗತ ಡಾ. ವಿ.ಎಸ್. ಆಚಾರ್ಯರು ಕಾರಂತರ ದೊಡ್ಡ ಅಭಿಮಾನಿ. ಅವರು ಮಣಿಪಾಲದಲ್ಲಿ ಕಾರಂತರ ಹೆಸರಿನಲ್ಲಿ 61 ಎಕರೆ ಜಾಗದಲ್ಲಿ 'ಕಾರಂತ ಕಲಾಗ್ರಾಮ' ನಿರ್ಮಿಸ ಹೊರಟರು. ಆದರೆ, ಅದು ಕೂಡ ಗುತ್ತಿಗೆದಾರರ ಜೋಳಿಗೆ ತುಂಬಿಸಿತೇ ಹೊರತು ಕಾರಂತರಿಗೆ ಗೌರವ ತಂದುಕೊಡಲಿಲ್ಲ. 'ಹತ್ತಾರು ಕೋಟಿ ವೆಚ್ಚದ ಈ ಕಲಾಗ್ರಾಮದಲ್ಲಿ ಬೃಹತ್ ಗ್ರಂಥಾಲಯ ತೆರೆಯುತ್ತೇವೆ, ಕಾರಂತರ ಯಕ್ಷಗಾನ ಬ್ಯಾಲೆಗಳ ತರಬೇತಿ ನೀಡುತ್ತೇವೆ, ಮಕ್ಕಳ ಶಿಬಿರ ನಡೆಸುತ್ತೇವೆ, ಸಮ್ಮೇಳನಗಳನ್ನು ಮಾಡುತ್ತೇವೆ, ಆರ್ಟ್ ಗ್ಯಾಲರಿ ಕಟ್ಟುತ್ತೇವೆ, ಕಲಾಗ್ರಾಮವನ್ನು ಪ್ರವಾಸಿ ತಾಣವಾಗಿಸುತ್ತೇವೆ, ವಿಜ್ಞಾನ ಕೇಂದ್ರ, ಪ್ರಕೃತಿ ಮಾಹಿತಿ ಕೇಂದ್ರ, ಜಿಂಕೆವನ, ಚಿಟ್ಟೆವನ, ಉದ್ಯಾವನ, ಸರೋವರಗಳನ್ನು ಮಾಡುತ್ತೇವೆ'- ಹೀಗೆ ಏನೆಲ್ಲಾ ಬಣ್ಣಬಣ್ಣದ ಮಾತುಗಳನ್ನು ಆಗ ಆಡಲಾಗಿತ್ತು. ಕಲಾಗ್ರಾಮಕ್ಕೆ ಶಂಕುಸ್ಥಾಪನೆಯಾಗಿ 9 ವರ್ಷ ಕಳೆದರೂ ಅದ್ಯಾವುದೂ ಆಗಿಲ್ಲ.
ಯಾರೂ ಬರಲಿಲ್ಲ!
ಉದ್ಘಾಟನೆ ನಂತರ ಈ ಕಲಾಗ್ರಾಮಕ್ಕೆ ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿಗಳೂ ಭೇಟಿ ನೀಡಲಿಲ್ಲ. ಕಾರಂತರಿಗೆ ಪ್ರಕೃತಿ ಬಹಳ ಪ್ರೀತಿ ಎಂಬ ಕಾರಣಕ್ಕೆ ಕಾಡಿನ ಮಧ್ಯ ಈ ಗ್ರಾಮ ಕಟ್ಟಿದ್ದಾರೆ. ಆದರೆ, ಹೋಗಿ ಬರುವುದಕ್ಕೆ ಯೋಗ್ಯ ರಸ್ತೆ ಇಲ್ಲ. ಇದು ಕಾರಂತರಿಗೆ ಮಾಡಿದ ಅವಮಾನ ಎಂಬ ಪಾಪಪ್ರಜ್ಞೆಯೂ ಸರ್ಕಾರಕ್ಕೆ ಇಲ್ಲ.ಟಿ
- ಸುಭಾಶ್ಚಂದ್ರ ಎಸ್. ವಾಗ್ಳೆ