ಕೊಂತಿ ಪೂಜೆ
ಮಹಾಭಾರತದ ಕುಂತಿಗೂ ದೀಪಾವಳಿಗೂ ಎಲ್ಲಿಲ್ಲದ ಸಂಬಂಧ. ದೀಪಾವಳಿ ಆಸುಪಾಸಿನಲ್ಲಿ ನಾಡಿನ ಬಹುತೇಕ ಕಡೆ ಕುಂತಿಪೂಜೆ ಮಾಡುವವರು ಸಿಗುತ್ತಾರೆ. ಗ್ರಾಮೀಣ ಭಾಷೆಯಲ್ಲಿ ಕುಂತಿಯನ್ನು ಕೊಂತಿ ಎಂದು ಕರೆಯುವ ವಾಡಿಕೆ ಇದೆ. ಸಾಮಾನ್ಯವಾಗಿ ಸುಗ್ಗಿಯ ಪ್ರಾರಂಭದ ದಿನಗಳಾದ ಕಾರ್ತೀಕ ಮಾಸದಲ್ಲಿ ಈ ಆಚರಣೆ ಒಂದು ತಿಂಗಳು ನಡೆಯುತ್ತದೆ.
ಸಾಮಾನ್ಯವಾಗಿ ಜೋಡಿ ಕಲ್ಲನ್ನು ಇಟ್ಟು ಪೂಜಿಸುವುದು ವಾಡಿಕೆ ಇದೆ. ಕುಂತಿ ತನ್ನ ಸವತಿಯಾದ ಮಾದ್ರಿಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಹೀಗಾಗಿಯೇ ಕುಂತಿಯ ಜತೆಗೆ ಮಾದ್ರಿಗೂ ಗೌರವ.
ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಈ ಕೊಂತಿ ಪೂಜೆಯನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಒಕ್ಕಲುತನ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಕೊಂತಿ ಪೂಜೆಯ ಸಂಪ್ರದಾಯ ಇದೆ.
ಕೆಲವರು ಮಣ್ಣಿನ ಮೂರ್ತಿಯನ್ನಿಟ್ಟು ಪೂಜಿಸಿದರೆ, ಮತ್ತೆ ಕೆಲವರು ಕಲ್ಲಿನ ಮೂರ್ತಿಯನ್ನಿಟ್ಟು ಪೂಜಿಸುವ ವಾಡಿಕೆ. ಕೊಂತಿಯನ್ನು ಸಾಮಾನ್ಯವಾಗಿ ವಿಸರ್ಜಿಸುವುದು ಊರಿಗೆ ಮೂಡಲ ದಿಕ್ಕಿನ ಹೊಲದಲ್ಲಿ ಅಥವಾ ಹುಚ್ಚೆಳ್ಳು ಬೆಳೆಯುವ ಹೊಲದಲ್ಲಿ. ಹುಚ್ಚೆಳ್ಳು ಹೂ ಕೊಂತ್ಯಮ್ಮನಿಗೆ ಬಲು ಪ್ರಿಯ. ಕನಿಷ್ಠ ಮೂರು ದಿನ ಹಾಗೂ ಗರಿಷ್ಠ ನಲವತ್ತೈದು ದಿನ ಪೂಜೆ ನಡೆಯುತ್ತದೆ.
10ರಿಂದ ಪೂಜೆ
ಮೈಸೂರು ತಾಲೂಕು ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳೆದ 12 ವರ್ಷಗಳಿಂದಲೂ ಕೊಂತಿ ಪೂಜೆ ಮಾಡಲಾಗುತ್ತಿದೆ. ಈ ಬಾರಿ ನ.10ರಿಂದ ಡಿ.1ರ ವರೆಗೆ ಕೊಂತಿ ಪೂಜೆ ನಡೆಸಲಾಗುತ್ತದೆ.
ಮಹಾಭಾರತದ ಗಾಂಧಾರಿ ಒಮ್ಮೆ ಕುಂತಿಯ ಹೊಟ್ಟೆ ಉರಿಸಲು ನೋಂಪಿ ಆಚರಿಸಿದಳು. ಕುಂತಿಯನ್ನು ಕರೆಯಲಿಲ್ಲ. ದುಃಖಿತ ಕುಂತಿಯನ್ನು ಕಂಡು ಅರ್ಜುನ ಬಾಣದ ಏಣಿ ನಿರ್ಮಿಸಿ ದೇವಲೋಕದಿಂದ ಕಾಮಧೇನು, ಐರಾವತ ತರಿಸಿದ. ಕುಂತಿ ಹಬ್ಬ ಆಚರಿಸಿದಳು. ಹೀಗೆ ಕುಂತಿ ಆಚರಿಸಿದ ಪೂಜೆಯೇ ಕೊಂತಿ ಪೂಜೆಯಾಯಿತು.
- ಡಿ.ಎನ್. ಮಹೇಂದ್ರ