ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೋ-ಕಾಪ್‌ನ ಬೀದಿಯ ಒಗ್ಗರಣೆ ಸದ್ದು

ಬೋ- ಕಾಪ್‌ನಲ್ಲಿರುವ ಅಮೀನಾ ಕರಿಯಮ್ ಅವರದು ಮಧ್ಯಮ ವರ್ಗದ ಕುಟುಂಬ...

Lingaraj Badiger
Updated On : 12 Nov 2013, 5:33 am

ಬೋ- ಕಾಪ್‌ನಲ್ಲಿರುವ ಅಮೀನಾ ಕರಿಯಮ್ ಅವರದು ಮಧ್ಯಮ ವರ್ಗದ ಕುಟುಂಬ. ಎಂಟು ವರ್ಷದ ಮಗ ಹಾಗೂ ಗಂಡನೊಂದಿಗೆ ಅಚ್ಚ ಹಳದಿ ಬಣ್ಣದ ಮನೆಯಲ್ಲಿ ವಾಸ. ಅಮೀನಾ ಕೂಡ ಡಿಗ್ರಿ ಓದಿದವಳು. ಇಂಗ್ಲಿಷ್ ಹಾಗೂ ಆಫ್ರಿಕನ್ಸ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡುತ್ತಾಳೆ. ಮೂರು ಕೋಣೆಗಳಿರುವ ಆ ಪುಟ್ಟ ಮನೆಯಲ್ಲಿ ಅದೇನೋ ಒಂದು homely ವಾತಾವರಣವಿದೆಯೆಂದು ಜಗುಲಿಯೊಳಗೆ ಕಾಲಿಡುತ್ತಿದ್ದಂತೆ ಅನಿಸಿತು.

ಅಂದಹಾಗೆ ಆ ದಿನದ ರಾತ್ರಿ ಊಟವನ್ನು ನಾವೇ ಸಿದ್ಧಪಡಿಸಿ, ಅಲ್ಲಿಯೇ ಊಟ ಮಾಡುವ ಅಪರೂಪದ ಕಾರ್ಯಕ್ರಮಕ್ಕೆ ಅಮೀನಾಳ ಮನೆ ತೆರೆದುಕೊಂಡಿತ್ತು. ಅಮೀನಾ ತನ್ನ ಆತ್ಮೀಯ ನಗು ಹಾಗೂ ಸಹಜ ನಡವಳಿಕೆಯಿಂದ ಎಲ್ಲರನ್ನೂ ಪರಿಚಯಿಸಿಕೊಂಡು 'ವೆಲ್‌ಕಮ್ ಡ್ರಿಂಕ್‌' (ಹಣ್ಣಿನ ರಸ) ನೀಡಿದಳು. ಅಡುಗೆ ಮನೆಗೆ ಲಗತ್ತಾಗಿರುವ ಜಗುಲಿಯಲ್ಲಿ ನಮ್ಮನೆಲ್ಲ ಕುಳ್ಳಿರಿಸಿಯೇ ಒಲೆಯ ಮೇಲಿಟ್ಟಿರುವ ಎಣ್ಣೆ ಬಂಡಿಯೊಳಗೆ ಬೋಂಡಾ ಮಾಡಲು ಹಿಟ್ಟನ್ನು ಹಾಕುತ್ತಾ ಆ ಎರಡೂ ಸಂವಾದಗಳನ್ನು ಏಕಕಾಲದಲ್ಲಿ ಜಾರಿಯಲ್ಲಿಟ್ಟಿದ್ದಳು. 'ನೀವು ಹೇಗೂ ಬಂದಿದ್ದೀರಲ್ಲ, ನನ್ನ ಕೆಲಸ ಇನ್ನು ಮುಗಿಯಿತು. ಇನ್ನೇನಿದ್ದರೂ ನೀವೇ ಅಡುಗೆಮನೆಯನ್ನು ಟೇಕ್‌ಓವರ್ ಮಾಡಿ' ಎಂದು ತಮಾಷೆಯಿಂದಲೇ ಯಾವ ಯಾವ ಸಾಮಾನು ಎಲ್ಲೆಲ್ಲಿ ಇವೆಯೆಂಬುದನ್ನು ವಿವರಿಸಲಾರಂಭಿಸಿದಳು.

ಅಷ್ಟರೊಳಗೆ ಅಮೀನಾ ನಮ್ಮಲ್ಲಿದ್ದ 'ಯಾರದೋ ಅಪರಿಚಿತರ ಮನೆಗೆ ಬಂದಿದ್ದೇವಾ?' ಎಂಬ ಭಾವನೆಯನ್ನು ಹೊಡೆದು ಹಾಕಿದ್ದಳು. ಅವಳ ಸಹಜ, ಆಪ್ತ, ಮುಕ್ತ, ಮುಗ್ಧ ನಡವಳಿಕೆಯಿಂದ ಆತ್ಮೀಯಳಾದಳು. ಏಳೆಂಟು ವರ್ಷಗಳ ಬಳಿಕ ನನ್ನ ಅಕ್ಕನ ಮನೆಗೆ ಹೋದ, ತೋಡಿಕೊಳ್ಳಲಾಗದ ಭಾವ ನನ್ನಲ್ಲಿ ತೊನಲಾಡುತ್ತಿತ್ತು. ಗುರುತು, ಪರಿಚಯ, ಒಡನಾಟ, ಸಂಪರ್ಕಗಳೇನೂ ಇಲ್ಲದ, ತೀರಾ ಅಪರಿಚಿತ ಕೇಪ್‌ಟೌನ್‌ನಲ್ಲಿ ಅಷ್ಟೇ ಅಪರಿಚಿತರಾದ ನಮ್ಮನ್ನು ಅಡುಗೆಮನೆಯೊಳಗೆ ಬಿಟ್ಟುಕೊಂಡ ಅಮೀನಾ ಆತಿಥ್ಯಕ್ಕೆ, ಆತ್ಮೀಯತೆಗೆ ಒಂದು ಕ್ಷಣ ಭಾವಗಳು ಉಮ್ಮಳಿಸಿ ಬಂದವು.

ಮುಂದಿನ ಎರಡು ತಾಸು, ಅಮೀನಾಳ ಮನೆ ನಮ್ಮ 'ಅಡುಗೆಮನೆ'ಯೇ ಆಗಿತ್ತು. ನಮ್ಮ ತಂಡದಲ್ಲಿದ್ದ ಹತ್ತು ಪತ್ರಕರ್ತರಿಗೆ ಬೇರೆ ಬೇರೆ ಕೆಲಸ. ಕೆಲವರು ತರಕಾರಿ ಹೆಚ್ಚಿದರು, ಇನ್ನು ಕೆಲವರು ಚಪಾತಿ ತಟ್ಟಿದರು. ಮತ್ತೆ ಕೆಲವರು ರೊಟ್ಟಿ ಬಡಿದರು. ದಾಲ್, ರೈಸ್ ಸಿದ್ಧವಾಯಿತು. ಬೋಂಡಾಗಳು ಹಬೆಯಾಡತೊಡಗಿದವು. ನನ್ನದು ಹಾಗೂ ರವಿ ಹೆಗಡೆಯದು ಪೂರ್ತಿ ದೇಖರೇಖು. ಎಲ್ಲರೂ ಅಡುಗೆ ಮಾಡುವವರೇ ಆದರೆ ರುಚಿ ನೋಡಿ ಸಮ್ಮತಿಸುವವರೂ ಬೇಕಲ್ಲ. ಆ ಜವಾಬ್ದಾರಿಯನ್ನು ನಾವು ಇಟ್ಟುಕೊಂಡೆವು. ಅಮೀನಾಳ ಮನೆಯಲ್ಲಿ ಭೋಜನ ಸಿದ್ಧವಾಗುವ ಹೊತ್ತಿಗೆ ಅಮೆರಿಕದಿಂದ ಬಂದ ಮೂವರು ವಿದ್ಯಾರ್ಥಿನಿಯರೂ ಡೈನಿಂಗ್ ಟೇಬಲ್‌ಗೆ ಬಂದು ಸೇರಿಕೊಂಡರು. ಅವರೆಲ್ಲ ಒಂದು ತಿಂಗಳ ತರಬೇತಿ ಅಧ್ಯಯನಕ್ಕಾಗಿ ಕೇಪ್‌ಟೌನ್‌ಗೆ ಬಂದು ಅಮೀನಾಳ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದರು. ಆ ವಿದ್ಯಾರ್ಥಿನಿಯರೂ ಅಡುಗೆ ಸಿದ್ಧತೆಯಲ್ಲಿ ಕೈಜೋಡಿಸಿದರು. ಭೇಟಿಯಾಗುವುದಕ್ಕಿಂತ ಮೊದಲು ಎಲ್ಲರೂ ಅಪರಿಚಿತರು ಎಂಬುದು ಎಷ್ಟು ಖರೆ ಅನಿಸಿತು.
ಬೋ-ಕಾಪ್ ಪೇಯಿಂಗ್ ಗೆಸ್ಟ್‌ಗಳ ತಾಣ. ಬಹಳ ಮಂದಿ ಪ್ರವಾಸಿಗರು ಹೋಟೆಲ್‌ನಲ್ಲಿ ಉಳಿಯದೇ ಇಲ್ಲಿನ ರಂಗು-ಬಿರಂಗಿ ಮನೆಗಳಲ್ಲಿ ವಾರ, ಹತ್ತುದಿನ, ತಿಂಗಳಗಟ್ಟಲೆ ಉಳಿಯುತ್ತಾರೆ. ಮನೆ ಮಂದಿಯೇ ಈ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಊರು ಸುತ್ತಿಸುತ್ತಾರೆ. ಬಹಳ ಮಂದಿ ಈ ಮನೆಗಳಲ್ಲಿ ಉಳಿಯುವುದನ್ನು ಇಷ್ಟಪಡುತ್ತಾರೆ. ಹೋಟೆಲ್‌ಗಿಂತ ಅರ್ಧ ಖರ್ಚಿನಲ್ಲಿ ವ್ಯವಹಾರ ಮುಗಿಯುತ್ತದೆ. ಅಲ್ಲದೇ ಮನೆಯ ವಾತಾವರಣ. ಅಮೆರಿಕದ ಮೂವರು ಹುಡುಗಿಯರು ಬಂದಿದ್ದು ಹಾಗೆಯೇ. ಬೋ-ಕಾಪ್‌ನಲ್ಲಿರುವ ಹಲವರಿಗೆ ಇದೇ ಮುಖ್ಯ ಕಸುಬು.

ವೆಬ್‌ಸೈಟ್‌ಗಳ ಮೂಲಕ ಬುಕ್ ಮಾಡಿ ಬರಬೇಕು. ತಿಂಗಳ ಮುಂಚೆಯೇ ಕಾದಿರಿಸಬೇಕು.
ಅಂದು ರಾತ್ರಿ ಊಟ ಮುಗಿಸಿ ಅಮೀನಾಳ ಮನೆಯಿಂದ ಹೊರಟು ನಿಂತಾಗ ಮನಸ್ಸು ತುಂಬಿ ಬಂದಿತ್ತು. ಹೊರಡುವಾಗ ನೆನಪಿನ ಕಾಣಿಕೆಯಾಗಿ ಅಮೀನಾ 'ಸಾಂಬಾರು ಪುಡಿ'ಯ ಚಿಕ್ಕ ಪೊಟ್ಟಣ ಕೊಟ್ಟಳು. 'ಮನೆಗೆ ಹೋಗಿ ನಿಮ್ಮ ಪತ್ನಿಗೆ ಕೊಡಿ. ಸಾಂಬಾರು ಮಾಡಿ ಊಟ ಮಾಡಿ, ನಾನು ನೆನಪಾದೇನು' ಎಂದಳು ನಗುನಗುತ್ತಾ. ಅವಳು ಬೇರಾವ ನೆನಪಿನ ಕಾಣಿಕೆ ಕೊಟ್ಟಿದ್ದರೂ ಇಷ್ಟೊಂದು ಆಪ್ತವಾಗುತ್ತಿರಲಿಲ್ಲ. ಅಲ್ಲಿಂದ ಬರುವಾಗ ಅಮೀನಾ, ಅವಳ ಗಂಡ ಹಾಗೂ ಮಗ ಕೈಬೀಸಿದ ದೃಶ್ಯ ನನ್ನಲ್ಲಿನ್ನೂ ಅಲೆ ಅಲೆಯಾಗಿಯೇ ತೇಲುತ್ತಿದೆ.
ಬೋ-ಕಾಪ್ ಪ್ರದೇಶದಲ್ಲಿ ಏನೋ ಒಂದು ವಿಶೇಷವಿದೆ. ನಗರದ ಮಧ್ಯಭಾಗದಿಂದ ಹತ್ತು ನಿಮಿಷದಷ್ಟು ದೂರ/ಹತ್ತಿರದಲ್ಲಿದ್ದರೂ ಗ್ರಾಮೀಣ, ಜಾನಪದ ಸೊಗಡು, ಮಣ್ಣಿನ ವಾಸನೆಯನ್ನು ಉಳಿಸಿಕೊಂಡಿದೆ. ಅಲ್ಲಿ ಓಡಾಡುವಾಗ ನೀವು ಪರದೇಶಿಯರಲ್ಲ. ಯಾವ ಮನೆ ಬಾಗಿಲು ಬಡಿದರೂ ತಂಬಿಗೆ ನೀರು ಸಿಗುತ್ತದೆ. ಆ ಮೂಲಕ ನಿಮಗೆ ಅಪರಿಚಿತರಾಗಿರುವುದೂ ಅಲ್ಲಿ ಸಾಧ್ಯವಿಲ್ಲ.

ಹಾಗಾದರೆ ಬೋ-ಕಾಪ್ ಮಣ್ಣಿನಲ್ಲಿ ಅದೆಂಥ ವೈಶಿಷ್ಟ್ಯವಿದೆ? ಕೇಪ್‌ಟೌನ್‌ಗಿಂತ ಭಿನ್ನವಾಗಿರಲು ಅದೇನು ಕಾರಣ? ಈ ಪ್ರಶ್ನೆಗೆ ಉತ್ತರ ಹುಡುಕಲು ಸ್ವಲ್ಪ ಇತಿಹಾಸವನ್ನು ಕೆದಕಬೇಕು. ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಡಚ್ಚರು ಕಠಿಣ ಕಾಮಗಾರಿಗಳನ್ನು ಮಾಡಿಸಲು ಮಲೇಷ್ಯಾ, ಭಾರತ, ಶ್ರೀಲಂಕಾ, ಇಂಡೋನೇಷ್ಯಾ ಮುಂತಾದ ದೇಶಗಳಿಂದ ಕಡಿಮೆ ಸಂಬಳಕ್ಕೆ ಕೂಲಿಕಾರರನ್ನು ಕರೆದುಕೊಂಡು ಬಂದರು. ಅಷ್ಟರೊಳಗೆ ಕೇಪ್‌ಟೌನ್‌ನಿಂದ ಭಾರತಕ್ಕೆ ಹಡಗು ಪ್ರಯಾಣ ಆರಂಭವಾಗಿತ್ತು. ಸಾಂಬಾರು ತುಂಬಿದ ಹಡಗುಗಳ ಜತೆ ಈ ಕೂಲಿಕಾರರು ಬರಲಾರಂಭಿಸಿದರು. ಹದಿನೇಳನೇ ಶತಮಾನದ ಆರಂಭದಲ್ಲಿ ಹೀಗೆ ಬರುವ ಕೂಲಿಕಾರರ ಸಂಖ್ಯೆ ಹೆಚ್ಚಲಾರಂಭಿಸಿತು. ಇವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಇವರನ್ನು ಡಚ್ಚರು ಅಕ್ಷರಶಃ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಇವರೆಲ್ಲರಿಗೂ ಬೋ-ಕಾಪ್ ಪ್ರದೇಶದಲ್ಲಿ ವಸತಿ ಕಲ್ಪಿಸಿಕೊಟ್ಟಿದ್ದರು. ಆಗ ಬೋ-ಕಾಪ್ ಊರ ಹೊರಗಿತ್ತು. ನಗರ ಬೆಳೆದಂತೆ ಈಗ ಅದು ಕೇಪ್‌ಟೌನ್‌ನ ಹೃದಯಭಾಗವೇ ಆಗಿಬಿಟ್ಟಿದೆ. ಇದನ್ನು ಕೊಳೆಗೇರಿಯಂತೆ ನೋಡಲಾಗುತ್ತಿತ್ತು. ಈ ಕಡೆ ಬರಲು ಜನ ಭಯಪಡುತ್ತಿದ್ದರು. ಗುಲಾಮರೊಂದಿಗೆ ಬೆರೆಯುವುದನ್ನು ಮೂಲನಿವಾಸಿಗಳು, ಬಿಳಿಯರು ಇಷ್ಟಪಡುತ್ತಿರಲಿಲ್ಲ.
1834ರಲ್ಲಿ ಗುಲಾಮಗಿರಿ ಸಂಪೂರ್ಣ ಅಳಿದ ಬಳಿಕ ಬೋ-ಕಾಪ್‌ನ ದೆಸೆ ಕ್ರಮೇಣ ಬದಲಾಗಲಾರಂಭಿಸಿತು. ಆಗ ಆ ಪ್ರದೇಶದಲ್ಲಿ ಮಸೀದಿ ಹಾಗೂ ಚರ್ಚು ತಲೆಯೆತ್ತಿದವು. ಕೇಪ್‌ಟೌನ್‌ನ ಅತ್ಯಂತ ಪುರಾತನ ಮಸೀದಿ ಸಹ ಈ ಪ್ರದೇಶದಲ್ಲಿರುವುದರಿಂದ, ನಗರದ ಬೇರೆ ಕಡೆಗಳಲ್ಲಿ ನೆಲೆಸಿದ್ದ ಮುಸ್ಲಿಮರು ಇಲ್ಲಿಗೆ ಬರಲಾರಂಭಿಸಿದರು. ಮೊದಲು ಈ ಪ್ರದೇಶವನ್ನು 'ಮಲಯ ಕ್ವಾರ್ಟರ್ಸ್‌' ಎಂದು ಕರೆಯಲಾಗುತ್ತಿತ್ತು. ಆನಂತರ ಇದು ಬೋ-ಕಾಪ್ (ಬಿಳಿಯರ ಫೋಟ್ಜ್- ಕ್ಲೂಫ್‌ನಂತರ ಬೋ-ಕಾಪ್) ಆಯಿತು.
1834ರ ನವೆಂಬರ್ 30ರಂದು ಗುಲಾಮಗಿರಿಯ ಅಳಿವಿನ ದ್ಯೋತಕವಾಗಿ ತೋಪನ್ನು ಹಾರಿಸಲಾಯಿತು. ಅಂದಿನಿಂದ ಇಂದಿನವರೆಗೂ ಮಧ್ಯಾಹ್ನ 12 ಗಂಟೆಗೆ ಗಾಳಿಯಲ್ಲಿ ತೋಪನ್ನು ಹಾರಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. 'ಕ್ರಮತ್‌' ಎಂದು ಕರೆಯಿಸಿಕೊಳ್ಳುವ ಮುಸ್ಲಿಮರ ಪ್ರಾರ್ಥನಾ ಮಂದಿರಗಳು ಅಲ್ಲಿನ ನಿವಾಸಿಗಳ ಸಾಮಾಜಿಕ ತಾಣ. ಎಲ್ಲರೂ ಇಲ್ಲಿ ಒಟ್ಟಾಗಿ ಕಲೆಯುತ್ತಾರೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಬೋ-ಕಾಪ್ ತನಗರಿವಿಲ್ಲದಂತೆ ಬದಲಾಗುತ್ತಿದೆ.
ಮುಸ್ಲಿಮರಲ್ಲದೇ ಕ್ರಿಶ್ಚಿಯನ್ನರು, ಬಿಳಿಯರು, ನಗರದ ಮೂಲನಿವಾಸಿಗಳು ಬೋ-ಕಾಪ್ ಕಡೆಗೆ ಮುಖ ಮಾಡಲಾರಂಭಿಸಿದ್ದಾರೆ. ಬೆಟ್ಟದ ಇಳಿಜಾರು, ಸುಂದರ ವಿಶಿಷ್ಟ ಮನೆ, ಆತ್ಮೀಯ ಸಂಬಂಧ, ಟೇಬಲ್ ಮೌಂಟನ್‌ನ ತಪ್ಪಲು ಹಾಗೂ ಗ್ರಾಮೀಣ ಸೊಗಡಿನ ಕಾರಣಗಳಿಂದ ಬೋ-ಕಾಪ್ ಮುಸ್ಲಿಮರಲ್ಲದೇ ಬೇರೆಯವರನ್ನೂ ತನ್ನತ್ತ ಸೆಳೆಯುತ್ತಿದೆ. ಒಂದು ಕಾಲಕ್ಕೆ ನೂರಕ್ಕೆ ನೂರರಷ್ಟಿದ್ದ ಮುಸ್ಲಿಮರ ಜನಸಂಖ್ಯೆ ಶೇ.70ಕ್ಕೆ ಇಳಿದಿದೆ. ಈ ಪ್ರದೇಶವನ್ನು ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿರುವುದರಿಂದ ಇದರ ಖದರು ಮತ್ತಷ್ಟು ಹೆಚ್ಚಿದೆ. ಇಲ್ಲಿ ಮನಸೋ ಇಚ್ಛೆ ಮನೆಗಳನ್ನು ಕಟ್ಟುವಂತಿಲ್ಲ. ಈಗಿರುವ ಮನೆಗಳ ವಾಸ್ತು, ವಿನ್ಯಾಸದಂತೆ ಕಟ್ಟಬಹುದು. ಬಹುಮಹಡಿಗೆ ಆಸ್ಪದವಿಲ್ಲ. ಗ್ಲಾಸು, ಕಟ್ಟಿಗೆ, ಸಿರಾಮಿಕ್ ಬಳಸುವಂತಿಲ್ಲ. ಅಚ್ಚ ರಬ್ಬಡಕು ಬಣ್ಣ ಬಳಿದರಾಯಿತು, ಅದು ಯಾವುದೇ ಬಣ್ಣವಾದರೂ ಆಗಬಹುದು. ಮುಸ್ಲಿಮರಲ್ಲದೇ ಅನ್ಯಧರ್ಮೀಯರು ಬೋ-ಕಾಪ್‌ನಲ್ಲಿ ಬಂದು ನೆಲೆಸುತ್ತಿದ್ದರೂ, ಇಲ್ಲಿನ ಮೂಲ ನಿಯಮಗಳಿಗೇನೂ ಧಕ್ಕೆಯಾಗಿಲ್ಲ. ಅದೇ ವಿಶ್ವಾಸ, ಬೆಸುಗೆ, ಆದರಾತಿಥ್ಯ, ಒಡನಾಟ ಹಾಸುಹೊಕ್ಕಾಗಿದೆ.

ಮೂರು ವರ್ಷಗಳ ಹಿಂದೆ ಬೋ-ಕಾಪ್‌ನಲ್ಲಿ ಬಾರ್ ರೆಸ್ಟೋರೆಂಟ್ ಓಪನ್ ಆದಾಗ, ತಮ್ಮ ಏರಿಯಾದಲ್ಲಿ ಇದು ಬೇಡವೇ ಬೇಡ ಎಂದು ಸಮಸ್ತ ನಿವಾಸಿಗರು ಪ್ರತಿಭಟನೆ ಮಾಡಿದರು. ಬಾರ್ ಮಾಲೀಕ ಅದಕ್ಕೆ ಜಗ್ಗದಿದ್ದಾಗ, ನಿವಾಸಿಗಳೆಲ್ಲ ಸೇರಿ ಕಾನೂನು ಹೋರಾಟಕ್ಕೆ ಕೋರ್ಟ್ ಮೆಟ್ಟಿಲೇರಿದರು. ಬೋ-ಕಾಪ್‌ನ ವೈಶಿಷ್ಟ್ಯ, ಪರಿಸರದ ಮಹತ್ವವನ್ನು ಪರಿಗಣಿಸಿ, ಬಾರ್ ಅನ್ನು ಅಲ್ಲಿಂದ ಎತ್ತಂಗಡಿ ಮಾಡುವಂತೆ ಕೋರ್ಟ್ ಸೂಚಿಸಿತು. ಬೋ-ಕಾಪ್ ನಿವಾಸಿಗಳ 'ಸ್ಪಿರಿಟ್‌' ಮುಂದೆ ಬಾರ್ ಕಾಲ್ಕಿತ್ತಿತ್ತು.

ರಿಯಲ್ ಎಸ್ಟೇಟ್ ಮಾನದಂಡದಂತೆ, ಬೋ-ಕಾಪ್ ಭಾರಿ ಬೇಡಿಕೆಯಲ್ಲಿರುವ ಪ್ರದೇಶ. ಇಲ್ಲಿ ಅಂಗುಲ ಜಾಗವಿಲ್ಲ. ಕಟ್ಟಿದ ಹಳೇ ಕಟ್ಟಡಗಳಿಗೆ ವಜ್ರದ ಬೆಲೆ. ಒಂದು ಕಾಲದ ಕೊಳೆಗೇರಿ ಇಂದು ಕೇಪ್‌ಟೌನ್‌ನ ಮುಡಿಗೇರಿ ಕುಳಿತಿದೆ.

ಬೋ-ಕಾಪ್‌ನ ನುಣುಪು ಕಲ್ಲಿನ ಬೀದಿಯಲ್ಲಿ ನಡೆಯುವಾಗ ಒಗ್ಗರಣೆಯ ಸದ್ದು, ಮಲಯ್ ಸಾಂಬಾರಿನ ಪರಿಮಳ ಘಮಘಮಿಸುತ್ತಿದ್ದರೆ ನಮ್ಮೂರಿನ ಕೇರಿಯಲ್ಲೋ, ವಠಾರದಲ್ಲೋ, ಛಾಳದಲ್ಲೋ ಹೆಜ್ಜೆ ಹಾಕಿದ ನೆನಪು.

(ಪ್ರದಕ್ಷಿಣೆ ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement