ಮಕ್ಕಳ ಕಿಲಕಿಲಾ
ಊರ ತುಂಬ ಕೋಟೆ(ಕಿಲಾ)ಗಳ ವೈಭವ. ಕೋಟೆಗಳ ಸುತ್ತ ಸೈನಿಕರ ಕಣ್ಗಾವಲು. ಯುದ್ಧಕ್ಕೆ ತಯಾರಾದ ಆನೆ ಕುದುರೆಗಳು. ಕೋಟೆಯ ಮೇಲೆ ರಾರಾಜಿಸುವ ಮಹಾರಾಜರು. ಈ ದೃಶ್ಯಗಳು ಕಂಡು ಬರುವುದು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದಲ್ಲಿ ದಸರಾ ಮತ್ತು ದೀಪಾವಳಿಗಳ ಮಧ್ಯೆ ಮಕ್ಕಳು ಕಟ್ಟುವ ಕೋಟೆಗಳಲ್ಲಿ.
ದಸರಾ ರಜೆಯಲ್ಲಿ ಮಕ್ಕಳ ಗುಂಪುಗಳು ನಿರ್ಮಿಸಿದ ಕೋಟೆಗಳು ಈಗ ಗಮನ ಸೆಳೆಯುತ್ತಿವೆ. ಕಲ್ಲು, ಮಣ್ಣು, ಇಟ್ಟಿಗೆ ಸಂಗ್ರಹಿಸಿ ಕೋಟೆ ಕಟ್ಟಲು ಬಳಸುತ್ತಾರೆ. ಕೋಟೆ ತಯಾರಾಗುತ್ತಿದ್ದಂತೆ ದೊಡ್ಡ ಹೆಬ್ಬಾಗಿಲು, ಸುತ್ತಲೂ ಗಿರಿಕಂದಕಗಳು, ಸುರಂಗ ಮಾರ್ಗಗಳನ್ನು ನಿರ್ಮಿಸಿ ಆಯಕಟ್ಟಿನ ಸ್ಥಳಗಳಲ್ಲಿ ಪ್ಲಾಸ್ಟರಿನಿಂದ ತಯಾರಿಸಿದ ಸೈನಿಕರನ್ನು, ಆನೆ, ಕುದುರೆ, ಹುಲಿ, ಚಿರತೆ ಮುಂತಾದ ಪ್ರಾಣಿಗಳನ್ನು ನಿಲ್ಲಿಸುತ್ತಾರೆ. ಕೋಟೆಯ ನೆತ್ತಿಯಲ್ಲಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಕೋಟೆಯ ಆವರಣದಲ್ಲಿ ಕಾರಂಜಿಗಳು, ಹೊಲಗದ್ದೆಗಳನ್ನು ಮಾಡಿ ಗೋಧಿ, ಜೋಳ, ಗೋವಿನ ಜೋಳ ಮುಂತಾದ ಸಸಿಗಳನ್ನು ಬೆಳೆಸಿ ರಾತ್ರಿಯಲ್ಲಿ ಕೋಟೆಗಳು ವಿದ್ಯುದ್ದೀಪಾಲಂಕಾರಗಳಿಂದ ಝಗಮಗಿಸುವಂತೆ ನೋಡಿಕೊಳ್ಳತ್ತಾರೆ. ಈ ಕೋಟೆಗಳಿಗೆ ಸುಣ್ಣ ಬಣ್ಣ, ಸಾಮಗ್ರಿಗಳು, ಮೂರ್ತಿಗಳನ್ನು ಖರೀದಿಸಲು ಮಕ್ಕಳು ತಂದೆ-ತಾಯಿಯರಿಂದ ಹಣ ಪಡೆದುಕೊಳ್ಳುತ್ತಾರೆ. ಕೆಲವರು ಚಂದಾ ವಸೂಲಿ ಮಾಡುತ್ತಾರೆ. ಸೈನಿಕ ಸಾಮಗ್ರಿ ಮತ್ತು ಮೂರ್ತಿ ಮಾರಾಟಗಾರರಿಗೆ ಈಗ ಸುಗ್ಗಿಯ ಕಾಲ. ಕೆಲವು ಕಡೆ ಉತ್ತಮ ಕೋಟೆ ನಿರ್ಮಿಸಿದ ಮಕ್ಕಳ ಗುಂಪಿಗೆ ಸ್ಥಳೀಯ ಸಂಘ ಸಂಸ್ಥೆಗಳು ಬಹುಮಾನ ನೀಡಿ ಗೌರವಿಸುತ್ತಿವೆ.
ಶಿವಾಜಿ ನೆನಪು
ಛತ್ರಪತಿ ಶಿವಾಜಿ ಮಗುವಾಗಿದ್ದಾಗ ಅವರ ತಾಯಿ ಕೋಟೆ ನಿರ್ಮಿಸಿ ಆಟವಾಡಲು ಕಲಿಸುತ್ತಿದ್ದರು. ಮಗು ರಾಜನಾಗಲು ಬೇಕಾದ ಎಲ್ಲ ಜ್ಞಾನವನ್ನು ನೀಡುವುದು ಉದ್ದೇಶವಾಗಿತ್ತು. ಅದೇ ಇಂದಿನ ಕೋಟೆಯಾಟಕ್ಕೆ ಪ್ರೇರಣೆ. ವಿಜಯದ ಸಂಕೇತವಾದ್ದರಿಂದ ವಿಜಯ ದಶಮಿಯ ವೇಳೆ ಆಚರಿಸುವುದುಂಟು.
- ಮಲ್ಲಿಕಾರ್ಜುನ ದಾನನ್ನವರ