ಅದೆಲ್ಲ ಬರೀ ನಾಯಿಗಾಗಿ ಅನ್ನಲು ಸಾಧ್ಯವಾ?
ಕೇಪ್ ಟೌನ್ನಿಂದ ಒಂದು ತಾಸು ರಸ್ತೆ ಪ್ರಯಾಣದಷ್ಟು ದೂರದಲ್ಲಿರುವ...
ಕೇಪ್ ಟೌನ್ನಿಂದ ಒಂದು ತಾಸು ರಸ್ತೆ ಪ್ರಯಾಣದಷ್ಟು ದೂರದಲ್ಲಿರುವ ಕಡಲ ತಡಿಯ ಮೇಲಿರುವ ಸೈಮನ್ ಟೌನ್ನಲ್ಲಿರುವ ಆ ಪ್ರತಿಮೆ ಮುಂದೆ ನಿಂತಾಗ, ನಾನು ನಾಲ್ಕು ವರ್ಷಗಳ ಹಿಂದೆ ರಿವರ್ಸ್ ಗಿಯರ್ನಲ್ಲಿ ಪಯಣಿಸುತ್ತಿದ್ದೆ.
ಅಮೆರಿಕದ ಲಾಸ್ವೆಗಾಸ್ಗೆ ಹೋಗಲು ಕಾರಿನಲ್ಲಿ ಅರಿಜೋನಾ ಹಾಗೂ ನೆವಡಾ ಸ್ಟೇಟ್ಸ್ ಮಧ್ಯದಲ್ಲಿರುವ ಕೊಲೊರಡೊ ನದಿಗೆ ಕಟ್ಟಿರುವ ಹೂವರ್ ಡ್ಯಾಮ್ ಮೇಲೆ ಪ್ರಯಾಣ ಮಾಡುತ್ತಿದ್ದೆವು. ಒಂದು ಅಣೆಕಟ್ಟನ್ನು ಸಹ ವರ್ಷಕ್ಕೆ ಹತ್ತಾರು ಲಕ್ಷ ಪ್ರವಾಸಿಗರು ಭೇಟಿ ನೀಡುವ ಪ್ರೇಕ್ಷಣೀಯ ತಾಣವನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಹೂವರ್ ಡ್ಯಾಮ್ ಒಂದು ಉತ್ತಮ ನಿದರ್ಶನ. ನಾನು ಹೂವರ್ ಡ್ಯಾಮಿನಿಂದ ಕೆಳಗೆ ಹೋಗಿ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರವನ್ನೂ ನೋಡಿ ಬಂದೆ. ಆ ಡ್ಯಾಮ್ ಸೈಟಿನ ಸುತ್ತಲೂ ಓಡಾಡುವಾಗ ಕಣ್ಣಿಗೆ ಬಿದ್ದಿದ್ದು ಒಂದು ನಾಯಿಯ ಪುಟ್ಟ ಸ್ಮಾರಕ. ಕುತೂಹಲದಿಂದ ಹತ್ತಿರ ಹೋದಾಗ ಅದರ ಕುಬಿ ಏನೆಂಬುದು ತಿಳಿಯಿತು.
1931ರ ಸುಮಾರಿಗೆ ಈ ಅಣೆಕಟ್ಟಿನ ನಿರ್ಮಾಣ ಕಾರ್ಯ ಆರಂಭವಾದಾಗ ನೆವಡಾದಲ್ಲಿನ ಕೂಲಿಕಾರ್ಮಿಕರಿಗೆ ಒಂದು ಬೀಡಾಡಿ ನಾಯಿ ಸಿಕ್ಕಿತು. ಅವರು ಟ್ರಕ್ಕಿನಲ್ಲಿ ಅಣೆಕಟ್ಟಿನ ಪ್ರದೇಶಕ್ಕೆ ಹೊರಟಾಗ ಆ ನಾಯಿಯೂ ಅವರೊಂದಿಗೆ ಹೊರಟಿತು. ಅವರು ಅಲ್ಲಿಂದ ವಾಪಸ್ ನೆವಡಾ ಕಡೆಗೆ ಬರುವಾಗ ಅದೇ ಟ್ರಕ್ಕಿನಲ್ಲಿ ಅವರೊಂದಿಗೆ ಬರುತ್ತಿತ್ತು. ಮರುದಿನ ಕೂಲಿಕಾರರು ಹೊರಟಾಗ ಆ ನಾಯಿ ಪುನಃ ಹಾಜರ್! ತಮ್ಮೊಂದಿಗೆ ವಾಹನದಲ್ಲಿ ಈ ನಾಯಿಯನ್ನು ಹೇರಿಕೊಂಡು ಹೊರಟರು. ಇದು ಹೀಗೇ ಮುಂದುವರಿದು ಆ ನಾಯಿ ಈ ಕೂಲಿಕಾರರ ತಂಡದ ಸದಸ್ಯನೇ ಆಗಿಬಿಟ್ಟಿತು. ಅಣೆಕಟ್ಟಿನ ನಿರ್ಮಾಣ ಪ್ರದೇಶದಲ್ಲೆಲ್ಲೆಡೆ ದಿನವಿಡೀ ಓಡಾಡುತ್ತಾ, ಎಲ್ಲರ ಅಚ್ಚುಮೆಚ್ಚಿನ ನಾಯಿಯಾಯಿತು. ಕಂಡವರೆಲ್ಲ ಅದನ್ನು ಮಾತಾಡಿಸುತ್ತಿದ್ದರು. ಹತ್ತಿರ ಕರೆದು ಬಿಸ್ಕತ್, ತಿಂಡಿ ಕೊಡುತ್ತಿದ್ದರು. ಪ್ರೀತಿಯಿಂದ ಮೈದಡವಿ ಮುದ್ದಾಡುತ್ತಿದ್ದರು. ಪ್ರತಿದಿನ ಇಡೀ ಪ್ರದೇಶದಲ್ಲಿ ಸುತ್ತು ಹಾಕಿ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿತ್ತು. ಒಂದು ದಿನ ಅದನ್ನು ನೋಡದಿದ್ದರೆ, ಕೂಲಿಕಾರರು ಅದರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ತಾವು ಕಟ್ಟಿಕೊಂಡು ಬಂದ ಲಂಚ್ ಬಾಕ್ಸ್ನಿಂದ ತಿಂಡಿಯನ್ನು ಅದಕ್ಕೆ ನೀಡುತ್ತಿದ್ದರು. ಕೆಲವೇ ದಿನಗಳಲ್ಲಿ ಯಾರದೋ ನಾಯಿಯಾಗಿದ್ದ ಅದು ಎಲ್ಲರ ನಾಯಿಯಾಗಿತ್ತು. ಕೆಲವರಂತೂ ತಾವು ಊಟ ಮಾಡುವುದಕ್ಕಿಂತ ಮೊದಲು ಅದಕ್ಕೆ ನಾಲ್ಕು ತುತ್ತು ತೆಗೆದಿಡುತ್ತಿದ್ದರು.
ಒಂದು ದಿನ ಆ ಅಣೆಕಟ್ಟಿನ ತಾಣಕ್ಕೆ ಬಂದವನೊಬ್ಬ (ಕೂಲಿಕಾರನಲ್ಲ) ಆ ನಾಯಿಯ ಕಾಲಿಗೆ ಜಾಡಿಸಿ ಒದ್ದುಬಿಟ್ಟ. ವಿಷಯ ತಿಳಿದ ಕೂಲಿಕಾರರು ತಕ್ಷಣ ದೌಡಾಯಿಸಿ ಆ ವ್ಯಕ್ತಿಗೆ ಚೆನ್ನಾಗಿ ಗೂಸಾ ಕೊಟ್ಟರು. ಅವನನ್ನು ಕಾಪಾಡಲು ಡ್ಯಾಮ್ ಸೈಟಿನ ಪೊಲೀಸರೇ ಬರಬೇಕಾಯಿತು. ಇಲ್ಲದಿದ್ದರೆ ಆತನಿಗೆ ಒಂದು ಗತಿ ಕಾಣಿಸಿರುತ್ತಿದ್ದರು.
ಅಂದು ರಣ ರಣ ಬಿಸಿಲು. ಆ ಮಟಮಟ ಮಧ್ಯಾಹ್ನ ನಾಯಿ ಟ್ರಕ್ಕಿನ ಹಿಂದಿನ ಚಕ್ರದ ನೆರಳಿನಲ್ಲಿ ಮಲಗಿತ್ತು. ಟ್ರಕ್ಕಿನ ಚಾಲಕ ರಿವರ್ಸ್ ತೆಗೆದುಕೊಳ್ಳುವಾಗ ಆ ನಾಯಿಯ ಮೇಲೆ ಹತ್ತಿಸಿಬಿಟ್ಟ. ನಾಯಿ ಅಲ್ಲಿಯೇ ಸತ್ತುಹೋಯಿತು. ಆ ದಿನ ಡ್ಯಾಮ್ ಸೈಟಿನಲ್ಲಿದ್ದ ಕೆಲಸಗಾರರೆಲ್ಲ ಅತೀವ ಸಂಕಟಪಟ್ಟುಕೊಂಡರು. ಕೆಲವರಂತೂ ಜೋರಾಗಿ ರೋದಿಸಿದರು. ಎಲ್ಲರ ಸಮ್ಮುಖದಲ್ಲಿ ಅಲ್ಲಿಯೇ ಅದಕ್ಕೆ ಅಂತ್ಯಸಂಸ್ಕಾರ ಮಾಡಲಾಯಿತು. ಕಲ್ಲಿನಲ್ಲಿ ಆ ನಾಯಿಯ ಚಿತ್ರವನ್ನು ಕೆತ್ತಿ ಅದರ ಸ್ಮರಣಾರ್ಥವಾಗಿ ಅದನ್ನು ಗೋಡೆಯಲ್ಲಿ ನೆಡಲು ನಿರ್ಧರಿಸಲಾಯಿತು.
ನಾಯಿ ಸತ್ತ ನಂತರ ಅಣೆಕಟ್ಟೆಯ ಸನಿಹದ ಗುಡ್ಡದ ಗೋಡೆಗೆ ಈ ಕಲ್ಲನ್ನು ಜೋಡಿಸಿ ಒಂದು ಸ್ಮಾರಕ ಕಲ್ಪಿಸಲಾಯಿತು. ನಾಯಿ ನಿಧನದ ಬಳಿಕ ಕೆಲಸಗಾರರು ಕೆಲವು ದಿನಗಳ ಕಾಲ ಶೋಕತಪ್ತರಾಗಿದ್ದರು. ನಾಲ್ಕು ಜನ ಸೇರಿದಾಗಲೆಲ್ಲ ನಾಯಿಯ ಗುಣಗಾನ, ತಮ್ಮ ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡ ಅನಾಥಭಾವ ಅವರನ್ನು ಕಿತ್ತು ತಿನ್ನುತ್ತಿತ್ತು.
ಅಂದಹಾಗೆ ಆ ನಾಯಿಯ ಹೆಸರು ನಿಗ್ಗಿ!
ಇಂದಿಗೂ ಕೂಡ ನಿಗ್ಗಿಯ ಸ್ಮಾರಕದ ಮುಂದೆ ಪ್ರವಾಸಿಗರು ಬಂದು ನಿಂತು ತಮ್ಮ 'ಭಾವಬಿಂದು'ಗಳನ್ನು ಚೆಲ್ಲಿ ಹೋಗುತ್ತಾರೆ. ನಾಯಿಯದ್ದಾದರೇನು, ಈ ಸ್ಮಾರಕ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಪ್ರತಿದಿನ ತನ್ನತ್ತ ಸೆಳೆಯುತ್ತಿದೆ. ಒಂದು ನಾಯಿಯ ಸಾವನ್ನೂ ಅಮೆರಿಕನ್ನರು ಅಮರವಾಗಿಸಿದ್ದಾರೆ. ನಮಗೆ ಇಂಥ ಸಂಗತಿಗಳ ಮಹತ್ವವೇ ಗೊತ್ತಿಲ್ಲ. ಮೈಸೂರಿನ ಮಹಾರಾಜರು ಸಹ ತಮ್ಮ ಸಾಕು ನಾಯಿಯ ನೆನಪಿನಲ್ಲಿ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಆದರೆ, ಆ ಪೈಕಿ ಕೆಲವು ಕಣ್ಮರೆಯಾಗಿವೆ, ಹುದುಗಿ ಹೋಗಿವೆ. ಅದರ ಮಹತ್ವ ಗೊತ್ತಿಲ್ಲದವರು ಕಲ್ಲನ್ನೇ ಕದ್ದು ಲಪಟಾಯಿಸಿದ್ದಾರೆ. ಅಂದು ಸೈಮನ್ಸ್ ಟೌನ್ನಲ್ಲಿ ನಾಯಿಯೊಂದರ ಪ್ರತಿಮೆ ಮುಂದೆ ನಿಂತಾಗ ಇವೆಲ್ಲ ನೆನಪಾಯಿತು. ಥೇಟಾನುಥೇಟು ನಾಯಿಯೇ ನಿಂತಿದೆಯೇನೋ ಎಂದು ಭಾಸವಾಗುವ ಆ ಕಂಚಿನ ಪುತ್ಥಳಿಯ ವೀಕ್ಷಣೆಗೆ ನೂರಾರು ಪ್ರವಾಸಿಗರು ಸುತ್ತಲೂ ಜಮಾಯಿಸಿದ್ದರು. ಅದರ ಜತೆಗೆ ನಿಂತು ಫೋಟೊ ತೆಗೆದುಕೊಳ್ಳಲು ನೂಕುನುಗ್ಗಲು. ನಾಯಿಗೂ ಒಂದು ಸ್ಮಾರಕವಾ ಎಂದು ಮೂಗು ಮುರಿಯುವವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸುಂದರ ಪರಿಸರದಲ್ಲಿ ಅದಕ್ಕೆ ಸ್ಮಾರಕ! ಇಂಥದ್ದೊಂದು ಸ್ಮಾರಕವನ್ನೇನಾದರೂ, ಅದೂ ನಾಯಿಗೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರೇನಾದರೂ ನಿರ್ಮಿಸಲು ಮುಂದಾಗಿದ್ದರೆ, ನಾಯಿಗೆ ಸ್ಮಾರಕ ಕಟ್ಟಲು ಹೊರಟಿದ್ದಾರೆ. ಜನರನ್ನು ನಾಯಿಪಾಡು ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯವರು ಪತ್ರಿಕಾಗೋಷ್ಠಿ ಕರೆದು ಜರೆಯದೇ ಬಿಡುತ್ತಿರಲಿಲ್ಲ. 'ನಾಯಿಗೆ ಸ್ಮಾರಕ ಮಾಡಿ ಮನುಷ್ಯರನ್ನು ಅವಮಾನಿಸುತ್ತಿದ್ದಾರೆ' ಎಂದು ವಾಟಾಳ್ ಪ್ರತಿಭಟಿಸದೇ ಇರುತ್ತಿರಲಿಲ್ಲ.
ಆದರೆ, ಸೈಮನ್ಸ್ ಟೌನ್ನಲ್ಲಿ ಸಮುದ್ರಕ್ಕೆ ಮುಖ ಮಾಡಿದ ಎರಡು ಎಕರೆ ಜಾಗದಲ್ಲಿ ಆ ನಾಯಿ ನೆನಪು ಚಿರಸ್ಥಾಯಿಯಾಗಿರಿಸಲು ಪುತ್ಥಳಿ ಮಾಡಿ ನಿಲ್ಲಿಸಿರುವುದು ವಿಶೇಷವೇ. ಅಂದ ಹಾಗೆ ಆ ನಾಯಿ ಹೆಸರನ್ನು ಕೇಳಿದರೆ ನಗುತ್ತೀರಿ. ಅದರ ಹೆಸರು ಜಸ್ಟ್ ನ್ಯೂಸನ್ಸ್!
ದಕ್ಷಿಣ ಆಫ್ರಿಕಾದ ರಾಯಲ್ ನೇವಿ (ನೌಕಾಪಡೆ)ಯ ಸೈನಿಕನ ಸ್ಥಾನಮಾನ ಪಡೆದ ಹಾಗೂ ಅಂಥ ಸ್ಥಾನಮಾನ ಪಡೆದ ವಿಶ್ವದ ಮೊದಲ ಮತ್ತು ಏಕೈಕ ಶ್ವಾನ. 1939ರಿಂದ 1944ರವರೆಗೆ ಅದು ನೌಕಾಪಡೆಯಲ್ಲಿ 'ಸೇವೆ' ಸಲ್ಲಿಸಿತ್ತು. ಅದರ ಬಯೋಡಾಟ ಹಾಗೂ ಸರ್ವೀಸ್ ರೆಕಾರ್ಡ್ನಲ್ಲಿ ಅದರ ಸರ್ನೇಮ್ (ಅಡ್ಡ ಹೆಸರು)ನ್ನು 'ನ್ಯೂ ಸನ್ಸ್' ಎಂದೇ ದಾಖಲಿಸಲಾಗಿದೆ. ಇದರ ಜನ್ಮದಿನಾಂಕ ನಿರ್ದಿಷ್ಟವಾಗಿ ಯಾರಿಗೂ ಗೊತ್ತಿಲ್ಲದಿದ್ದರೂ ಏಪ್ರಿಲ್ 1, 1937 ಎಂದು ಅಧಿಕೃತವಾಗಿ ವಿಶೇಷ ಸರ್ಟಿಫಿಕೇಟ್ ಮಾಡಿಸಿ ನಮೂದಿಸಿರುವುದು ಗಮನಾರ್ಹ. ಗ್ರೇಟ್ಡೇನ್ ತಳಿಗೆ ಸೇರಿದ ಈ ಬೀಡಾಡಿ ನಾಯಿಯನ್ನು ಯಾರೋ ಬೆಂಜಮಿನ್ ಚೆನಯ್ ಎಂಬಾತನಿಗೆ ಮಾರಿದರು. ಬಹಳ ವರ್ಷಗಳ ಕಾಲ ಚೆನಯ್ ನೌಕಾಪಡೆಯಲ್ಲಿದ್ದ. ಆತನಿಗೆ ಹಿರಿಯ ಅಧಿಕಾರಿಗಳೆಲ್ಲ ಸ್ನೇಹಿತರೇ. ಚೆನಯ್ ಕಾಲಕಾಲಕ್ಕೆ ನೇವಲ್ ಬೇಸ್ಗೆ ಹೋಗಿ ಬರುತ್ತಿದ್ದ. ಆ ಸಂದರ್ಭದಲ್ಲಿ ಜಸ್ಟ್ನ್ಯೂಸನ್ಸ್ ಕೂಡ ಅವನ ಜತೆ ಹೋಗುತ್ತಿತ್ತು. ಸುಮಾರು ನಾಲ್ಕು ಅಡಿ ಎತ್ತರದ ನಾಯಿಯನ್ನು ಕಂಡು ಬೆಚ್ಚಿ ಬೀಳುತ್ತಿದ್ದವರು ಅದರ ತುಂಟಾಟ ಕಂಡು ಅದರ ಜತೆ ಚೇಷ್ಟೆ ಮಾಡುತ್ತಿದ್ದರು.
ಜಸ್ಟ್ನ್ಯೂಸನ್ಸ್ ಬಹುಬೇಗ ಎಲ್ಲರ ಕಣ್ಮಣಿಯಾಯಿತು. ನೇವಲ್ ಬೇಸ್ಗೆ ಬರುತ್ತಿದ್ದಂತೆ ವಿಚಿತ್ರವಾಗಿ ಕೂಗಿ ತನ್ನ ಆಗಮನವನ್ನು ಸಾರಿ ಹೇಳುತ್ತಿತ್ತು. ಅಲ್ಲಿನ ಸೈನಿಕರು ಬಿಸ್ಕತ್, ಹುರಿದ ಚಿಕನ್ನು ಕೊಡುತ್ತಿದ್ದರು. ಕ್ರಮೇಣ ನೌಕಾಪಡೆಯ ಹಡಗುಗಳನ್ನು ಏರಿ ಅಲ್ಲಲ್ಲಿ ಓಡಾಡಲು ಆರಂಭಿಸಿದ ಜಸ್ಟ್ನ್ಯೂಸನ್ಸ್ ಅವರೊಂದಿಗೆ ಪ್ರಯಾಣಿಸಲೂ ಶುರುಮಾಡಿತು. ದೀರ್ಘ ಪ್ರಯಾಣದ ಸಂದರ್ಭದಲ್ಲಿ ಜಸ್ಟ್ನ್ಯೂಸನ್ಸ್ಗೆ ಎಲ್ಲಿಲ್ಲದ ಬೇಡಿಕೆ. ಎಲ್ಲರೂ ಹಡಗಿನಲ್ಲಿ ಅದನ್ನು ನೇವರಿಸಿ ಮುದ್ದು ಮಾಡುತ್ತಿದ್ದರು. ಜಸ್ಟ್ನ್ಯೂಸನ್ಸ್ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಕೆಲವರಂತೂ ತಮ್ಮ ಜತೆಯಲ್ಲೇ ಅದನ್ನು ಮಲಗಿಸಿಕೊಳ್ಳುತ್ತಿದ್ದರು. ಹಡಗಿನಲ್ಲಿ ಪಯಣಿಸುವಾಗ ಸೈನಿಕನೊಬ್ಬ ತಮಾಷೆಗಾಗಿ ತನ್ನ ರಾಯಲ್ ಕ್ಯಾಪನ್ನು ಜಸ್ಟ್ನ್ಯೂಸನ್ಸ್ಗೆ ತೊಡಿಸಿದ. ಅದನ್ನು ನೋಡಿದ ಕ್ಯಾಪ್ಟನ್ ಖುಷಿಪಟ್ಟ. ಅವನಿಗೆ ಏನೆನಿಸಿತೋ ಏನೋ? ಸಾವಿರಾರು ಸೈನಿಕರ ಅಚ್ಚುಮೆಚ್ಚಿನ 'ಸಂಗಾತಿ'ಯಾದ, ಅವರನ್ನು ವಿಶಿಷ್ಟ ರೀತಿಯಲ್ಲಿ ಪ್ರೇರೇಪಿಸುತ್ತಿರುವ ಈ ನಾಯಿಗೇಕೆ ತನ್ನ ನೌಕಾಪಡೆಯಲ್ಲಿ ಒಂದು 'ಸ್ಥಾನಮಾನ' ಕಲ್ಪಿಸಬಾರದೆಂದು ಅನಿಸಿತು. ಆಗ ಎರಡನೆ ಮಹಾಯುದ್ಧದ ಸಮಯ. ಸೈನಿಕರಿಗೆ ವರ್ಷಗಟ್ಟಲೆ ರಜಾ ಸಿಗುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ಜಸ್ಟ್ನ್ಯೂಸನ್ಸ್ ಸಾಮೀಪ್ಯ ಸೈನಿಕರಿಗೆ ಸ್ಫೂರ್ತಿ ನೀಡುತ್ತಿತ್ತು.
ಜಸ್ಟ್ನ್ಯೂಸನ್ಸ್ಗೆ ನಮ್ಮ ಗೈಡ್ ಅಬ್ದುಲ್ ಭಾವನಾತ್ಮಕ ಸ್ಪರ್ಶ ನೀಡಿ ವಿವರಿಸುತ್ತಿದ್ದ.
ಒಮ್ಮೆ ಕಾರು ಅಪಘಾತದಲ್ಲಿ ಜಸ್ಟ್ನ್ಯೂಸನ್ಸ್ ತೀವ್ರವಾಗಿ ಗಾಯಗೊಂಡ. ಅವನಿಗೆ ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದರೂ ಚೇತರಿಸಿಕೊಳ್ಳಲಿಲ್ಲ. ಸೈಮನ್ಸ್ ಟೌನ್ನಲ್ಲಿರುವ ನೌಕಾಪಡೆಯ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. 1944ರಲ್ಲಿ ತನ್ನ ಏಳನೇ ವಯಸ್ಸಿನಲ್ಲಿ ಜಸ್ಟ್ನ್ಯೂಸನ್ಸ್ ತೀರಿಕೊಂಡ. ಸಕಲ ಮಿಲಿಟರಿ ಗೌರವಗಳೊಂದಿಗೆ ಆ 'ನಾಯಿ'ಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಸೈಮನ್ಸ್ ಟೌನ್ನಲ್ಲಿ ನಿಲ್ಲಿಸಿರುವ ಪುತ್ಥಳಿಯ ಕೆಳಗಡೆ "1 April 1937 - 1 April 1944' ಎಂದು ಬರೆಯಲಾಗಿದೆ. ಅದೇ ಫಲಕದಲ್ಲಿ This famous great dane was guardian and friend to Naval ratings during World War II. He is remembered with affection'' ಎಂದು ಕೆತ್ತಲಾಗಿದೆ. ಈ ನಾಯಿಯ ಹೆಸರಿನಲ್ಲಿ ಸಿನಿಮಾ ಬಂದಿದೆ ಹಾಗೂ ಪುಸ್ತಕ ಪ್ರಕಟವಾಗಿದೆ. ಪ್ರತಿವರ್ಷ ಸೈಮನ್ಸ್ ಟೌನ್ನಲ್ಲಿ ಜಸ್ಟ್ ನ್ಯೂಸನ್ಸ್ ನೆನಪಿಗಾಗಿ ಗ್ರೇಟ್ಡೇನ್ ನಾಯಿಗಳ ಮೆರವಣಿಗೆ ಸಹ ನಡೆಯುತ್ತದೆ.
ಇವೆಲ್ಲ ಒಂದು ನಾಯಿಗಾಗಿ, ಅದರ ಪ್ರೀತಿಗಾಗಿ, ಅದರ ನೆನಪಿಗಾಗಿ, ಇದೂ ಸಹ ಎಷ್ಟು ಮುಖ್ಯ ಅಲ್ಲವಾ?
(ಪ್ರದಕ್ಷಿಣೆ ಮುಂದುವರಿಯುವುದು)
- ವಿಶ್ವೇಶ್ವರ ಭಟ್