ನೇಣಿನಡಿಯ ಹಾಡು
ಬಿಲ್ಹಣ ಮತ್ತು ದಕ್ಷಿಣದ ರಾಜಕುಮಾರಿಯ ಮುಖಾಮುಖಿಯ ಕಥೆಯನ್ನು ನಿನ್ನೆ ಓದಿದಿರಷ್ಟೆ? ಇಬ್ಬರು ಪ್ರಣಯಾವಿಷ್ಟ ತರುಣ- ತರುಣಿ ಜತೆ ಸೇರಿದರೆ ...
ಬಿಲ್ಹಣ ಮತ್ತು ದಕ್ಷಿಣದ ರಾಜಕುಮಾರಿಯ ಮುಖಾಮುಖಿಯ ಕಥೆಯನ್ನು ನಿನ್ನೆ ಓದಿದಿರಷ್ಟೆ? ಇಬ್ಬರು ಪ್ರಣಯಾವಿಷ್ಟ ತರುಣ- ತರುಣಿ ಜತೆ ಸೇರಿದರೆ ಏನಾಗುತ್ತದೆ? ಇಲ್ಲೂ ಅದೇ ಆಯಿತು. ಇಬ್ಬರೂ ಪರದೆ ಸರಿಸಿ ಸಂಸ್ಕೃತ ಪಾಠದಲ್ಲೂ ಅದನ್ನೂ ಮೀರಿದ ಪ್ರಣಯಪಾಠದಲ್ಲೂ ನಿರತರಾದರು. ಇದರ ಸುಳಿವು ಹೇಗೋ ರಾಜನಿಗೆ ಗೊತ್ತಾಯಿತು. ಆತ ಕೋಪಾವಿಷ್ಟಗೊಂಡ. ಬಿಲ್ಹಣನನ್ನು ನೇಣಿಗೆ ಹಾಕಲು ಆಜ್ಞಾಪಿಸಿದ. ಎಂಥ ಕವಿಯಾದರೇನು? ರಾಜನ ಆಜ್ಞೆಗೆ ಎದುರುಂಟೆ?
ಬಿಲ್ಹಣನನ್ನು ಗಲ್ಲುಗಂಬದ ಬಳಿಗೆ ತರಲಾಯಿತು. ರಾಜ, ಕವಿಯ ಕೊನೆಯಾಸೆ ಏನೆಂದು ಕೇಳಿದ. ತನಗೆ ರಾಜಕುಮಾರಿಯೇ ಬೇಕೆಂಬುದು ಕವಿಯ ಉತ್ತರವಾಗಿತ್ತು. ರಾಜಕುಮಾರಿಯ ಜತೆ ತಾನು ಕಳೆದ ಮಧುರ ರಸನಿಮಿಷಗಳನ್ನು ಪದ ಕಟ್ಟಿ ಹಾಡತೊಡಗಿದ. ಅದರಲ್ಲೊಂದು ಹೀಗಿತ್ತು.
ಅದ್ಯಾಪ್ಯಹಂ ವರವಧೂಸುರತೋಪಭೋಗಂ
ಜೀವಾಮಿ ನಾನ್ಯವಿಧಿನಾ ಕ್ಷಣಮಂತರೇಣ
ತದ್ಭ್ರಾತರೋ ಮರಣಮೇವ ಹಿ ದುಃಖಶಾಂತ್ಯೈ
ವಿಜ್ಞಾಪಯಾಮಿ ಭವತಸ್ತ್ವರಿತಂ ಲುನೀಧ್ವಮ್
'ಆಕೆಯ ಜತೆಗೆ ಸುರತಸುಖ ಲಭ್ಯವೆಂದಾದರೆ ಮಾತ್ರ ನಾನು ಮುಂದಿನ ಜೀವನ ಬಾಳಲಿಚ್ಛಿಸಿಯೇನು. ಇಲ್ಲವಾದರೆ ನನಗೆ ಮರಣವೇ ಬರಲಿ, ಚಿಂತಿಲ್ಲ. ನನ್ನ ದುಃಖದ ಶಮನಕ್ಕೆ ಮರಣವೇ ದಾರಿ. ನನ್ನನ್ನು ಕೊಂದುಬಿಡಿ.'
ಇಂಥ 50 ಶ್ಲೋಕಗಳನ್ನು ಬಿಲ್ಹಣ ನಿಂತಲ್ಲೇ ಕಟ್ಟಿ ಹಾಡಿದ. ಬಿಲ್ಹಣನ ಪ್ರೇಮದ ತೀವ್ರತೆಗೂ ನಿಷ್ಠೆಗೂ ಮನಸೋತ ರಾಜ, ಆತನಿಗೆ ಮಗಳನ್ನು ಧಾರೆಯೆರೆದನಂತೆ. ಬಿಲ್ಹಣನ ಈ ಕಾವ್ಯವೇ 'ಚೋರಸುರತ ಪಂಚಾಶಿಕಾ' ಎಂದು ಹೆಸರಾಗಿದೆ. ಕಳ್ಳ ಪ್ರಣಯವಾದ್ದರಿಂದ ಇದು ಚೋರಸುರತ!
- ಹರಿಹರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.