ಮರಿ ಚಿರತೆ
ಮುಸ್ಸಂಜೆಯ ಹೊತ್ತು. ಗ್ರಾಮದ ಹೆದ್ದಾರಿಯ ಪಕ್ಕದಲ್ಲಿ ಮೂರ್ನಾಲ್ಕು ಶ್ವಾನಗಳು ಒಂದೇ ಸಮನೆ ನೋಟ ಬೀರಿ ಅರಚುತ್ತಿದ್ದವು. ಗದ್ದಲ ಕೇಳಿ ಸಮೀಪವಿದ್ದ ದ್ಯಾವಪ್ಪ...
ಮುಸ್ಸಂಜೆಯ ಹೊತ್ತು. ಗ್ರಾಮದ ಹೆದ್ದಾರಿಯ ಪಕ್ಕದಲ್ಲಿ ಮೂರ್ನಾಲ್ಕು ಶ್ವಾನಗಳು ಒಂದೇ ಸಮನೆ ನೋಟ ಬೀರಿ ಅರಚುತ್ತಿದ್ದವು. ಗದ್ದಲ ಕೇಳಿ ಸಮೀಪವಿದ್ದ ದ್ಯಾವಪ್ಪ ಪೂಜಾರಿ ಅತ್ತ ಹೋದಾಗ ಪುಟ್ಟ ಬೆಕ್ಕಿನ ಮರಿಯೊಂದು ಕಂಡಿತು. ಈ ನಾಯಿಗಳು ಮರಿಯನ್ನು ಬಿಡಲಾರವು ಎಂದು ಭಾವಿಸಿ ಅವುಗಳನ್ನು ಓಡಿಸಿ ಮನೆಗೊಂದು ಚೆಂದದ ಬೆಕ್ಕಿನ ಮರಿ ಬೇಕಿತ್ತು ಅಂದುಕೊಂಡು ಹಿಡಿದು ನಡೆದರು. ರಾತ್ರಿಯಾಗಿತ್ತು. ಮನೆಗೆ ತಂದ ಬೆಕ್ಕಿನಮರಿಗೆ ಹಾಲು ಹಾಕಿ ಆರೈಕೆ ಮಾಡಿದರು. ಬೆಳಕು ಹರಿದ ಮೇಲೆ ಬೆಕ್ಕಿನ ಮರಿಯತ್ತ ನೋಟ ಹರಿಸಿದ ಅವರಿಗೆ ಅದೇಕೋ ಅನುಮಾನ ಆವರಿಸಿತು. ಆ ಮರಿಯ ಚಲನವಲನ, ಅದರ ಪುಟ್ಟ ಘರ್ಜನೆ ಕೇಳಿ, ಅಂದುಕೊಂಡಂತೆ ಬೆಕ್ಕಿನಮರಿ ಅಲ್ಲ ಎಂಬುದು ಖಾತ್ರಿಯಾಯ್ತು. ತಡಮಾಡದೆ ಅರಣ್ಯ ಇಲಾಖೆಗೆ ಫೋನಾಯಿಸಿದರು.
ಹೊಸನಗರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕಂಡುಬಂದಿದ್ದು ಬೆಕ್ಕಿನ ಮರಿಯಾಗಿರಲಿಲ್ಲ. ಸುಮಾರು ಹತ್ತು ಹದಿನೈದು ದಿನಗಳ ಹಿಂದೆ ಜನಿಸಿರಬಹುದಾದ ಚಿರತೆ ಮರಿಯಾಗಿತ್ತು. ಸುದ್ದಿ ತಿಳಿದು ಬಂದ ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ ಚಿರತೆ ಮರಿಯನ್ನು ವಶಕ್ಕೆ ತೆಗೆದುಕೊಂಡರು. ನಂತರ ತಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ರವಾನಿಸಿದರು.
ಪಶ್ಚಿಮಘಟ್ಟದಲ್ಲಿರುವ ಚಿರತೆ ತಳಿಗಳಲ್ಲಿ ದೊಡ್ಡ ಪಟ್ಟೆ ಹೊಂದಿದ ಇದು ಬಲು ಅಪರೂಪದ್ದು. ನಾಯಿಗಳ ಬಾಯಿಗೆ ತುತ್ತಾಗುವ ಮುನ್ನ ಮರಿಯನ್ನು ಸಂರಕ್ಷಿಸಿದ ದಾವಪ್ಪಗೆ ಕೃತಜ್ಞತೆ ಸಲ್ಲಿಸುವುದು ಮರೆಯಲಿಲ್ಲ.
- ರವಿ ಬಿದನೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.