ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶಂ. ಗು ಸ್ಮಾರಕ ಎಂದು?

ನಾವು ಎಳೆಯರು, ನಾವು ಗೆಳೆಯರು, ಹೃದಯ ಹೂವಿನ ಹಂದರ,ನಾಳೆ ನಾವೇ ನಾಡ ಹಿರಿಯರುನಮ್ಮ ಕನಸದು ಸುಂದರ...

Rashmi Kasaragodu
Updated On : 13 Nov 2013, 7:14 am

ನಾವು ಎಳೆಯರು,
ನಾವು ಗೆಳೆಯರು,
ಹೃದಯ ಹೂವಿನ ಹಂದರ
ನಾಳೆ ನಾವೇ         
ನಾಡ ಹಿರಿಯರು
ನಮ್ಮ ಕನಸದು ಸುಂದರ...

ಈ ಹಾಡು ಕನ್ನಡಿಗರಿಗೆ ಚಿರಪರಿತ. ಆದರೆ, ಇಂದಿನ ಪೀಳಿಗೆಯ ಕಿವಿಗೆ ಬಿದ್ದಿದೆಯಾ ಇಲ್ಲವಾ ಗೊತ್ತಿಲ್ಲ. ಇದನ್ನು ಬರೆದಿದ್ದು ಖ್ಯಾತ ಮಕ್ಕಳ ಸಾಹಿತಿ, ಬಿಜಾಪುರದ ಶಂ.ಗು. ಬಿರಾದಾರ. ಎಲೆಮರೆಯ ಕಾಯಿಯಂತೆ ಬಾಳಿದ ಕವಿ. ಈ ಕನ್ನಡ ಗೀತೆಯನ್ನು ಆಂಧ್ರಪ್ರದೇಶದ ಕವಿ ದಾಶರಥಿ ಅವರು ಇದನ್ನು ತೆಲುಗು ಭಾಷೆಗೆ 'ಪಿಲ್ಲಲಾರ ಪಾಪಲಾರ ಭಾವೀ ಭಾರತ ಪೌರುಲಾರ' ಎಂದು ಅನುವಾದಿಸಿ ಪ್ರಸಿದ್ಧಿ ಪಡೆದರು. ಅದು ಆಂಧ್ರದಲ್ಲಿ ನಾಡಗೀತೆಯಾಗಿದ್ದಲ್ಲದೆ, ಶಾಲಾ ಪಠ್ಯವೂ ಆಗಿ ಜನಪ್ರಿಯವಾಯಿತು.
ದುರದೃಷ್ಟವೆಂದರೆ, ಕನ್ನಡದ ಈ ಗೀತೆಯನ್ನು ಕೇವಲ ಬಿಜಾಪುರ ಜಿಲ್ಲೆಯ ಜನರಷ್ಟೇ ಹಾಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಕ್ಕಳ ಸಾಹಿತ್ಯಕ್ಕೆ ಬಿರಾದಾರರು ನೀಡಿದ ಕೊಡುಗೆಯನ್ನು ಸರ್ಕಾರ ಗುರುತಿಸದೆ ಹೋಯಿತು. 'ರಾಜ್ಯೋತ್ಸವ' ಗೌರವ ನೀಡಿ ತನ್ನ ಕರ್ತವ್ಯ ಮುಗಿಯಿತು ಎಂದುಕೊಂಡಿತು.

ಕೃತಿಗಳು ಮೂಲೆಗುಂಪು

ಶಂ.ಗು. ಅವರ ನಿಧನದ ಬಳಿಕವೂ ಸರ್ಕಾರ ಅವರು ರಚಿಸಿದ ಮಕ್ಕಳ ಸಾಹಿತ್ಯದ ಅಮೂಲ್ಯ ಕೃತಿಗಳನ್ನು ಸಂರಕ್ಷಿಸಲಿಲ್ಲ. ಅವರ ಹೆಸರಿನಲ್ಲಿ ಸ್ಮಾರಕ ಭವನವನ್ನೂ ನಿರ್ಮಿಸಲಿಲ್ಲ. ಬಿಜಾಪುರದ ಶಾಸ್ತ್ರಿನಗರ ಬಡಾವಣೆಯಲ್ಲಿ ಕವಿ ಶಂ.ಗು. ವಾಸವಿದ್ದರು. ಆ ಮನೆ ಶಂ.ಗು. ಅವರ ಸಾಹಿತ್ಯ ರಚನೆಗೆ ಕರ್ಮಭೂಮಿ. ಈಗ ಈ ಮನೆಯಲ್ಲಿ ಶಂ.ಗು. ಅವರ ಸೊಸೆ ಹಾಗೂ ಮೊಮ್ಮಕ್ಕಳು ವಾಸವಿದ್ದಾರೆ. ಕವಿಯ ಮಕ್ಕಳ ಸಾಹಿತ್ಯದ ಎಲ್ಲ ರಚನೆಗಳೂ ಇಲ್ಲಿ ಮೂಲೆಗುಂಪಾಗಿವೆ. ಕೆಲವು ಪುಸ್ತಕಗಳಿಗೆ ಗೆದ್ದಲು ಹಿಡಿದಿದೆ. ಶಂ.ಗು. ಅವರ ನಿಧನದ ನಂತರ ಕುಟುಂಬದ ಸದಸ್ಯರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ತೆರಳಿ ಸ್ಮಾರಕ ಭವನ ನಿರ್ಮಿಸಲು ಮನವಿ ಸಲ್ಲಿಸಿದ್ದರು. ಆದರೆ, ಸರ್ಕಾರ ಆ ಬಗ್ಗೆ ಗಮನವನ್ನೇ ಹರಿಸಲಿಲ್ಲ.

ನಮ್ಮ ತಂದೆಯವರು ಬರೆದ ಕೃತಿಯನ್ನು ಆಂಧ್ರದ ಕವಿ ದಾಶರಥಿ ತೆಲುಗಿಗೆ ಅನುವಾದಿಸಿ ಮೆಚ್ಚುಗೆ ಪಡೆದರು. ಶಂ.ಗು. ಅವರಿಗೆ ಜೀವಿತಾವಧಿಯಲ್ಲಿ 'ರಾಷ್ಟ್ರಕವಿ' ಪಟ್ಟವಂತೂ ಸಿಗಲಿಲ್ಲ. ಅವರ ಅಮೂಲ್ಯವಾದ ಸಾಹಿತ್ಯ ಕೃತಿಗಳನ್ನಾದರೂ ರಕ್ಷಿಸುವ ಹೊಣೆಯನ್ನು ಸರ್ಕಾರ ಹೊರಬೇಕಿತ್ತು. ಬಿಜಾಪುರದಲ್ಲಿ ಶಂ.ಗು. ಬಿರಾದಾರ ಅವರ ಹೆಸರಿನಲ್ಲಿ ಕೂಡಲೇ ಸ್ಮಾರಕ ಭವನ ನಿರ್ಮಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕನಿಷ್ಠ ಕಾಳಜಿ ತೋರಬೇಕು.
- ನಾಗರಾಜ ಬಿರಾದಾರ, ಶಂ.ಗು. ಅವರ ಪುತ್ರ

- ರುದ್ರಪ್ಪ ಆಸಂಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement