ಸಾರ್ವಜನಿಕ ಸೇವೆಯ ಕಠಿಣ ಹಾದಿಯಲ್ಲಿ..
'ಒಬ್ಬರೇ ಕುಳಿತು ಧ್ಯಾನ ಮಾಡಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸುಲಭ. ಆದರೆ ಸಾರ್ವಜನಿಕ ಸೇವೆಮಾಡಿ ಯಶಸ್ವಿಯಾಗುವುದು ಬಹಳ ಕಷ್ಟ'...
'ಒಬ್ಬರೇ ಕುಳಿತು ಧ್ಯಾನ ಮಾಡಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸುಲಭ. ಆದರೆ ಸಾರ್ವಜನಿಕ ಸೇವೆಮಾಡಿ ಯಶಸ್ವಿಯಾಗುವುದು ಬಹಳ ಕಷ್ಟ'. ಶಕ್ತಿಶಾಲಿಗಳೂ, ಸ್ಥಿರಶಾಂತಬುದ್ಧಿಯುಳ್ಳವರೂ ಆದ ವಿವೇಕಾನಂದರು ಸನ್ಯಾಸಿಯಾಗಿ ಸಾರ್ವಜನಿಕ ಬದುಕಿನಲ್ಲಿ ಪರಿಸ್ಥಿತಿಗಳನ್ನು ಎದುರಿಸಿ ದ ಪರಿ ಕಂಡು ಹುಬ್ಬೇರುತ್ತವೆ, ಅವರ ಸಾಹಸಕ್ಕೆ ತಲೆಬಾಗುತ್ತದೆ.
ಸರ್ವಧರ್ಮ ಸಮ್ಮೇಳನದ ನಂತರ ಅಮೆರಿಕದಲ್ಲಿ ಸ್ವಾಮೀಜಿ ಗಳಿಸಿದ ಅಭೂತಪೂರ್ವ ಯಶಸ್ಸು ಅನೇಕ ವೈರಿಗಳನ್ನು ಹುಟ್ಟುಹಾಕಿದವು. ಸ್ವಾಮೀಜಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಅವರ ವ್ಯಕ್ತಿತ್ವವನ್ನು ನಾಶಗೊಳಿಸುವುದರಲ್ಲಿ ನಿರತವಾದರು. ಆರಂಭದಲ್ಲಿ ಸ್ವಾಮೀಜಿಯೊಡನೆ ಸ್ನೇಹದಿಂದಲೇ ಇದ್ದವರೂ ಸಮ್ಮೇಳನದ ನಂತರ ಅಪಪ್ರಚಾರಕ್ಕೆ ತೊಡಗಿದರು. 'ಸ್ವಾಮೀಜಿಯು ಹಿಂದೂ ಧರ್ಮದ ಪ್ರತಿನಿಧಿಯೇ ಅಲ್ಲ, ಭಾರತದ ಹಿಂದೂಗಳು ತಮ್ಮ ಪ್ರತಿನಿಧಿಯಾಗಿ ಅವರನ್ನು ಕಳುಹಿಸಿಯೇ ಇಲ್ಲ' ಎಂಬಂತಹ ಆಪಾದನೆಗಳನ್ನು ಮಾಡುವ ಕೀಳುಮಟ್ಟಕ್ಕೆ ಇಳಿದುದು ನಾಚಿಕೆಗೇಡಿತನ.
ಆದರೆ ಸ್ವಾಮೀಜಿ ಮಾತ್ರ ಅವುಗಳಿಗೆಲ್ಲ ಸ್ವಲ್ಪವೂ ಗಮನಕೊಡದೆ ತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದರು. ಅವರಿಗೆ ತೀವ್ರ ಆಘಾತ ತಂದ ಸಂಗತಿಯೆಂದರೆ, 'ವಿವೇಕಾನಂದರೂ ನಮ್ಮ ಪ್ರತಿನಿಧಿಯೇ ಹೌದು. ಅವರ ಸಂದೇಶವು ಹಿಂದೂ ತತ್ತ್ವಶಾಸ್ತ್ರದ ತಿರುಳಲ್ಲದೆ ಬೇರೆಯಲ್ಲ' ಎಂಬ ಒಂದೇ ಒಂದು ಪತ್ರ ಭಾರತದಿಂದ ಬಾರದಿದ್ದುದು. ಇವೆಲ್ಲದರ ನಡುವೆಯೂ ಅಮೆರಿಕದಲ್ಲಿ ಸ್ವಾಮೀಜಿ ವಿರೋಧಿಗಳ ಚಕ್ರವ್ಯೂಹವನ್ನು ಭೇದಿಸಿ ಮುನ್ನುಗ್ಗಿ ನಡೆದುದು ತಮ್ಮ ಸತ್ಯಶೀಲ ವ್ಯಕ್ತಿತ್ವದಿಂದ!
- ಆನಂದ ಎಸ್.ಎನ್.
anandsn193@gmail.com