ಅಭಿನಂದನೆಯ ಗಂಗೆ ಅಮೆರಿಕದಲ್ಲಿ ಹರಿದಳು!
'ಸ್ವಾಮಿ ವಿವೇಕಾನಂದರು ಭಾರತದ ಹಿಂದೂಗಳ ಪ್ರತಿನಿಧಿಯೇ ಅಲ್ಲ' ಎಂಬ ಅಪಪ್ರಚಾರದಿಂದ ಮನನೊಂದ ಸ್ವಾಮೀಜಿ ಮದ್ರಾಸಿನ ಶಿಷ್ಯರೊಬ್ಬರಿಗೆ ಪತ್ರ ಬರೆದು...
'ಸ್ವಾಮಿ ವಿವೇಕಾನಂದರು ಭಾರತದ ಹಿಂದೂಗಳ ಪ್ರತಿನಿಧಿಯೇ ಅಲ್ಲ' ಎಂಬ ಅಪಪ್ರಚಾರದಿಂದ ಮನನೊಂದ ಸ್ವಾಮೀಜಿ ಮದ್ರಾಸಿನ ಶಿಷ್ಯರೊಬ್ಬರಿಗೆ ಪತ್ರ ಬರೆದು, ಮದ್ರಾಸ್‌ನಲ್ಲಿ ಸಭೆಯನ್ನು ಏರ್ಪಡಿಸಿ 'ಸ್ವಾಮೀಜಿಯನ್ನು ಹಿಂದೂ ಪ್ರತಿನಿಧಿಯಾಗಿ ಅಮೆರಿಕದ ಸಮ್ಮೇಳನಕ್ಕೆ ಕಳುಹಿಸಿರುವುದಾಗಿ' ಸಂಪೂರ್ಣ ಅನುಮೋದನೆ ವ್ಯಕ್ತಪಡಿಸುವಂಥ ಒಂದು ಗೊತ್ತುವಳಿಯನ್ನು ಹೊರಡಿಸಿ ಸಮ್ಮೇಳನಾಧ್ಯಕ್ಷರಿಗೂ, ಅಮೆರಿಕದ ಪತ್ರಿಕೆಗಳಿಗೂ ಕಳುಹಿಸುವಂತೆ ತಿಳಿಸಿದರು. ಆದರೆ ಎರಡು ತಿಂಗಳಾದರೂ ಭಾರತದಿಂದ ಒಂದೇಒಂದು ಪತ್ರವೂ ಬಾರದಿದ್ದುದು ಅವರಿಗೆ ನಿರಾಸೆಯನ್ನುಂಟುಮಾಡಿತು.
ಸತ್ಯಸಂಗತಿಯೆಂದರೆ, ಭಾರತದಲ್ಲಿ ಸ್ವಾಮೀಜಿಯ ಪತ್ರ ತಲುಪಿದ ಮರುದಿನದಿಂದಲೇ ಪತ್ರಿಕೆಗಳಲ್ಲಿ ಧನ್ಯತಾ ಸಭೆಗಳನ್ನು ನಡೆಸಿ, ಠರಾವನ್ನು ಅಂಗೀ ಕರಿಸಿ ಅಮೆರಿಕಕ್ಕೆ ಕಳುಹಿಸಲಾಗಿತ್ತು. ಆದರೆ ಇದು ಸ್ವಾಮೀಜಿಯ ಕೈಸೇರಿದ್ದು ಮಾತ್ರ ಎರಡು ತಿಂಗಳ ನಂತರ! ಸ್ವಾಮೀಜಿಗೆ ರಾಶಿರಾಶಿ ಬಿನ್ನವತ್ತಳೆಗಳು, ಅಭಿನಂದನಾ ಪತ್ರಗಳ ಗಂಗೆಯೇ ಮಹಾಪೂರವಾಗಿ ಹರಿಯತೊಡಗಿತು. ಇದನ್ನು ನೋಡಿ ಸ್ವಾಮೀಜಿ ಹೇಳುತ್ತಾರೆ, 'ಭಾರತದಲ್ಲಿ ನಾನು ಭಯಂಕರವಾಗಿ ಸಾರ್ವಜನಿಕವಾಗಿಬಿಟ್ಟಿದ್ದೇನೆ. ಒಂದು ಚಟಾಕು ಕೀರ್ತಿಯನ್ನು ಒಂದು ಸೇರು ಶಾಂತಿ-ಪಾವಿತ್ರ್ಯಗಳ ಬೆಲೆಯನ್ನು ತೆರುವುದರಿಂದ ಮಾತ್ರವೇ ಕೊಳ್ಳಲು ಸಾಧ್ಯ. ಈ ಪ್ರಶಂಸೆಯನ್ನು ಕೇಳಿಕೇಳಿ ನನಗೆ ಜುಗುಪ್ಸೆಯಾಗಿದೆ. ಭಗವಂತ ನನಗೆ ಶಾಂತಿ, ಪಾವಿತ್ರ್ಯಗಳ ದಾರಿಯನ್ನು ತೋರಲಿ.' ಹೀಗೆ ಅಮೆರಿಕದಲ್ಲಿ ಸ್ವಾಮೀಜಿಗೆ ಎದುರಾದ ಅಪಪ್ರಚಾರದ ಕೆಸರು ಭಾರತದಿಂದ ಒಮ್ಮೆಲೇ ನುಗ್ಗಿಬಂದ ಅಭಿನಂದನಾ ಗಂಗೆಯ ಮಹಾಪೂರಕ್ಕೆ ಸಿಕ್ಕು ಕೊಚ್ಚಿಹೋಗಿ, ಸ್ವಾಮೀಜಿಯ ಸತ್ಯಶೀಲ ವ್ಯಕ್ತಿತ್ವವನ್ನು ಮತ್ತೊಮ್ಮೆ ಅಮೆರಿಕನ್ನರಿಗೆ ಋಜುವಾತುಗೊಳಿಸಿತು!
- ಆನಂದ ಎಸ್.ಎನ್.
anandsn193@gmail.com