ಕಾಣೆಯಾದ ಆನಂದ!
ಕೊಪ್ಪಳ ಜಿಲ್ಲೆಯ ದ್ಯಾಂಪುರ ಗ್ರಾಮದಲ್ಲಿನ ಪುರಾಣಿಕರ ಮನೆ 20ನೇ ಶತಮಾನದ ಪ್ರಾರಂಭದ ಕತೆ ಹೇಳುತ್ತದೆ. ಅದರ ವಿನ್ಯಾಸಗಳೆಲ್ಲ ಹಿಂದಿನ ...
ಕೊಪ್ಪಳ ಜಿಲ್ಲೆಯ ದ್ಯಾಂಪುರ ಗ್ರಾಮದಲ್ಲಿನ ಪುರಾಣಿಕರ ಮನೆ 20ನೇ ಶತಮಾನದ ಪ್ರಾರಂಭದ ಕತೆ ಹೇಳುತ್ತದೆ. ಅದರ ವಿನ್ಯಾಸಗಳೆಲ್ಲ ಹಿಂದಿನ ಕಲಾಸಂಸ್ಕಾರ ಹೊಂದಿವೆ. ಆದರೆ, ಇದೀಗ ಅವಸಾನದ ಅಂಚಿಗೆ ತಲುಪಿದೆ...
'ಏನಾದರೂ ಆಗು, ನೀ ಮೊದಲು ಮಾನವನಾಗು'- ಕನ್ನಡಕ್ಕೆ ದಕ್ಕಿದ ಎರಡನೇ 'ವಿಶ್ವಮಾನವ ಸಂದೇಶ' ಇದು. ಈ ಕಾವ್ಯದ ಹಿರಿಮೆ ಪಸರಿಸಿದ್ದು ಕವಿ ಸಿದ್ದಯ್ಯ ಪುರಾಣಿಕರ ಲೇಖನಿ. ಕನ್ನಡದ 'ಕಾವ್ಯಾನಂದ'ರು. ಈ ಕಾವ್ಯಾನಂದರ ಮನೆಯಲ್ಲಿ ಇಂದು ಆನಂದವೇ ಇಲ್ಲ. ಅದು ಪಾಳು ಬಿದ್ದಿದೆ.
ಕೊಪ್ಪಳ ಜಿಲ್ಲೆಯ ದ್ಯಾಂಪುರ ಗ್ರಾಮದಲ್ಲಿನ ಪುರಾಣಿಕರ ಮನೆ 20ನೇ ಶತಮಾನದ ಪ್ರಾರಂಭದ ಕತೆ ಹೇಳುತ್ತದೆ. ಅದರ ವಿನ್ಯಾಸಗಳೆಲ್ಲ ಹಿಂದಿನ ಕಲಾಸಂಸ್ಕಾರ ಹೊಂದಿವೆ. ಆದರೆ, ಇದೀಗ ಅವಸಾನದ ಅಂಚಿಗೆ ತಲುಪಿದ್ದು, ಇನ್ನೇನು ಕೆಲವೇ ವರುಷಗಳಲ್ಲಿ ನೆನಪಿನ ಲೋಕ ಸೇರಲಿದೆ.
ಸಂಬಂಧಿಕರ ನೆಲೆ
ಪುರಾಣಿಕರು ತಹಸೀಲ್ದಾರ್ ಆಗಿ, ನಂತರ ಐಎಎಸ್ ಪದವಿ ಸಂಪಾದಿಸುವ ಮೂಲಕ ಉನ್ನತ ಹುದ್ದೆಗೇರಿ ಬೆಂಗಳೂರಿಗರಾದರು. ಹೀಗಾಗಿ, ತಮ್ಮ ಮನೆಯನ್ನು ಆಗಲೇ ಅವರು ತಮ್ಮ ಸಹೋದರಿ ಶರಣಾಂಬಿಕೆ ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಅವರು ಹಲವು ವರ್ಷಗಳ ಕಾಲ ಇಲ್ಲಿಯೇ ವಾಸವಾಗಿದ್ದರೂ ನಂತರ ಮಕ್ಕಳು ಉದ್ಯೋಗವಂತರಾದ ಮೇಲೆ ರಾಯಚೂರಿನಲ್ಲಿ ನೆಲೆಸಿದ್ದರು. ಈಗ ಶರಣಾಂಬಿಕೆಯವರೂ ಇಲ್ಲ. ಹೀಗಾಗಿ ಆ ಮನೆಯಲ್ಲಿ ಅವರ ಸಹೋದರಿಯರ ಸಂಬಂಧಿಕರು ಆಶ್ರಯ ಪಡೆದಿದ್ದಾರೆ.
ಮಣ್ಣಿನಮನೆ
ಅಂದಹಾಗೆ, ಈ ಮನೆ ಮಣ್ಣಿನಿಂದ ನಿರ್ಮಿತವಾದದ್ದು. ನೆಲಹಾಸು ಕಡಪಕಲ್ಲು. ಅದೂ ತನ್ನ ತಾಜಾತನ ಕಳೆದುಕೊಂಡು ಎಷ್ಟೋ ವರುಷಗಳಾಗಿವೆ. ಮನೆಯ ಗಳಗಳು ದುರ್ಬಲವಾಗಿವೆ. ಒಟ್ಟಿನಲ್ಲಿ ಮನೆ ಹೇಳಿಕೊಳ್ಳುವಷ್ಟು ಗಟ್ಟಿಯಿಲ್ಲ. ಇಲ್ಲಿನ ಯಾವ ರಾಜಕಾರಣಿಗಳಿಗೂ ಈ ಕವಿ ಮನೆಯನ್ನು ಸಂರಕ್ಷಿಸುವ ಆಸಕ್ತಿ ಇಲ್ಲ. ಕೊನೆ ಪಕ್ಷ ಕವಿ ಮನೆಯ ಅಳು ಕೂಡ ಅವರ ಕಿವಿಗೆ ಬೀಳುತ್ತಿಲ್ಲ. ದುರ್ದೈವ.
ಪುರಾಣಿಕರ ಈ ಮನೆಯ ಅಧಿಕಾರ ಅವರ ಸಹೋದರಿ ಶರಣಾಂಬಿಕೆಯ ಪುತ್ರರಿಗೆ ಇದೆ. ಅದನ್ನು ಸರ್ಕಾರ ಸಂರಕ್ಷಣೆ ಮಾಡುವುದಾದರೆ ನಮಗೆ ಸಂತೋಷವಾಗುತ್ತದೆ.
- ವಿಜಯಾನಂದೀಶ್ವರಿ ಪುರಾಣಿಕ
ಸಿದ್ದಯ್ಯ ಪುರಾಣಿಕರ ಮಗಳು
ಪುರಾಣಿಕರು ತಮ್ಮ ಸಹೋದರಿ ಶರಣಾಂಬಿಕೆಗೆ ಮನೆ ನೀಡಿದ್ದರು. ಅವರೀಗಿಲ್ಲ. ನಮ್ಮ ಚಿಕ್ಕಮ್ಮನ ಮಕ್ಕಳು ಅಲ್ಲಿ ವಾಸಿಸುತ್ತಿದ್ದಾರೆ. ಮನೆ ತೀರಾ ದುಸ್ಥಿತಿಯಲ್ಲಿದೆ. ಸರ್ಕಾರ ಇತ್ತ ಗಮನ ಹರಿಸಬೇಕು.
- ಶರಣಯ್ಯ ಪುರಾಣಿಕ
ಸಿದ್ದಯ್ಯ ಪುರಾಣಿಕ ಅವರ ಸಂಬಂಧಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.