ಬೇಕೆಂದಾಗ ಬರುವ ಅತಿಥಿ!
'ನಾನು ಬೇಕು ಅನ್ನಿಸಿದಾಗ ಎದೆ ಉರಿ ತರಿಸಿಕೊಳ್ಳಬಲ್ಲೆ' ನಿಮಗೆ ಚೋದ್ಯ ಅನ್ನಿಸಬಹುದು. ಆದರೆ, ನನಗೆ ಇದರಲ್ಲಿ ಯಾವುದೇ ಕ್ಲೀಷೆ ಕಾಣಿಸಲಿಲ್ಲ...
'ನಾನು ಬೇಕು ಅನ್ನಿಸಿದಾಗ ಎದೆ ಉರಿ ತರಿಸಿಕೊಳ್ಳಬಲ್ಲೆ'
ನಿಮಗೆ ಚೋದ್ಯ ಅನ್ನಿಸಬಹುದು. ಆದರೆ, ನನಗೆ ಇದರಲ್ಲಿ ಯಾವುದೇ ಕ್ಲೀಷೆ ಕಾಣಿಸಲಿಲ್ಲ. ಏಕೆಂದರೆ ಈ ಮಾತು ಹೇಳಿದ್ದು ಯೂನಿವರ್ಸಿಟಿ ಆಫ್ ಪೆನಿಸುವೆಲಾ ಸ್ಕೂಲ್ ಆಫ್ ಮೆಡಿಸಿನ್ನ ಪ್ರೊಫೆಸರ್ ಡಾ.ಡೊನಾಲ್ಡ್ ಕ್ಯಾಸ್ಟಲ್. ಅವರು ಎದೆ ಉರಿ ಕುರಿತಾಗಿ ಸಾಕಷ್ಟು ಸಂಶೋಧನೆಗಳನ್ನು ಮಾಡಿದವರು. ಅವರ ಪ್ರಕಾರ ಎದೆ ಉರಿಯಿಂದ ಮುಕ್ತಿ ಪಡೆಯಬೇಕು ಅಂತಾದರೆ ನಮ್ಮ ಆಹಾರ ಪದ್ಧತಿಯಲ್ಲಿ, ಡಯಟ್ನಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದೊಂದೇ ದಾರಿ. ಕೆಲವು ಆಹಾರಗಳು 'ಸ್ಪಿಂಕ್ಟರ್' ರಿಂಗ್ ಸಡಿಲಗೊಂಡು ಆಮ್ಲ ಹಿನ್ಸರಿತ ಉಂಟಾಗಲು ಪ್ರಚೋದನೆ ನೀಡುತ್ತವೆ.
ಚಾಕೊಲೆಟ್, ಪೆಪ್ಪರ್ಮಿಂಟ್, ಕೊಬ್ಬಿನ ಕೆಲವು ಆಹಾರಗಳು, ಕೆಲವೊಮ್ಮೆ ಈರುಳ್ಳಿ ಇವು ಎದೆ ಉರಿ ಹೆಚ್ಚಿಸುತ್ತವೆ ಎಂದು ಗುರುತಿಸಲಾಗಿದೆ. ಇವು ನೇರವಾಗಿ 'ಸ್ಪಿಂಕ್ಟರ್' ಸಡಿಲತೆಗೆ ಕಾರಣವಾಗುತ್ತವೆ. ಇನ್ನು ಕೆಲವು ಆಹಾರಗಳಿರುತ್ತವೆ. ಅವು ಹೊಟ್ಟೆಯಲ್ಲಿ ಆ್ಯಸಿಡಿಟಿಯನ್ನು ಉತ್ತೇಜಿಸುತ್ತವೆ. ಆಗಲೂ ಜಠರದಲ್ಲಿ ಉಂಟಾಗುವ ರಾಸಾಯನಿಕ ಪ್ರಕ್ರಿಯೆಗಳಿಂದ ನೋವು ಉಂಟಾಗುತ್ತದೆ. ಕಾಫಿ, ಕೋಲಾ, ಹಾಲು ಮತ್ತು ಬಿಯರ್ ಆ್ಯಸಿಡಿಟಿ ಹೆಚ್ಚಿಸುವ ಆಹಾರ ಪದಾರ್ಥಗಳು. ಸಿಟ್ರಸ್, ಟೊಮೇಟೊ ಅಂಥ ಕೆಲವು ಆಹಾರಗಳು; ಮಸಾಲೆ ಪದಾರ್ಥಗಳು ಈಗಾಗಲೇ ಹಾನಿಗೆ ಒಳಗಾಗಿರುವ ಜಠರವನ್ನು ಮತ್ತಷ್ಟು ಹಾಳು ಮಾಡಬಲ್ಲವು. ಇಂಥ ಆಹಾರವನ್ನು ನಾವು ಸೇವಿಸಿದಾಗಲೂ ಎದೆ ಉರಿಯ ಅನುಭವ ಆಗುತ್ತವೆ.
ಇದೆಲ್ಲಕ್ಕಿಂತ ಹೆಚ್ಚಾಗಿ ನಾವು ಆಹಾರ ಸೇವಿಸುವ ವಿಧಾನ ಕೂಡ ಎದೆ ಉರಿ ಉಂಟು ಮಾಡುವ ಸಂಗತಿಗಳಲ್ಲಿ ಒಂದು ಎನ್ನುವುದು ನಮಗೆ ಗೊತ್ತಿಲ್ಲ. ಅವಸರದಲ್ಲಿ ತಿನ್ನುವುದು ಉದರ ತೊಂದರೆಗಳನ್ನು ಹುಟ್ಟುಹಾಕುವಂತೆ ಎದೆ ಉರಿಯನ್ನೂ ತರಬಲ್ಲದು. ಹೊಟ್ಟೆಗೆ ಅದರ ಸಾಮರ್ಥ್ಯ ಮೀರಿ ಆಹಾರ ರವಾನಿಸಿದರೆ ಅಂದರೆ ಹೊಟ್ಟೆ ಬಿರಿಯುವಷ್ಟು ತಿಂದರೆ ಆಗಲೂ ಸಹ ಅದರ ಒತ್ತಡಕ್ಕೆ 'ಸ್ಪಿಂಕ್ಟರ್' ತೆರೆದುಕೊಳ್ಳುತ್ತದೆ, ಆಮ್ಲ ಗಳು ಮತ್ತು ಜೀರ್ಣವಾಗದೇ ಉಳಿದ ಆಹಾರಗಳು ಹೊಟ್ಟೆಯಿಂದ ಜಠರದೊಳಕ್ಕೆ ಪ್ರವೇಶಿಸುತ್ತವೆ. ಒಮ್ಮೊಮ್ಮೆ ಗುರುತ್ವಾಕರ್ಷಣ ತತ್ವವೂ ಇಲ್ಲಿ ಕೆಲಸ ಮಾಡುವುದುಂಟು. ಸ್ವಲ್ಪ ಹೆಚ್ಚು ತಿಂದಾಗ ಹೊಟ್ಟೆ ಬಲಭಾಗದಲ್ಲಿ ಗುರುತ್ವಾಕರ್ಷಣೆ ಕಾರಣದಿಂದ ಆಹಾರ ಮಾಂಸಖಂಡಗಳ ಶಕ್ತಿಗೆ ವಿರುದ್ಧವಾಗಿ ನೂಕಲ್ಪಡುತ್ತದೆ. ಪರಿಣಾಮ ಒಂದೇ, 'ಸ್ಪಿಂಕ್ಟರ್' ತೆರೆದುಕೊಳ್ಳುವುದು. ಕೆಲವು ಸಲ ನಮಗೆ ಅರಿವಿರುವುದಿಲ್ಲ, ಆದರೆ ಕಿಬ್ಬೊಟ್ಟೆ ಸುತ್ತಮುತ್ತ ಸಾಮರ್ಥ್ಯ ಮೀರಿದ 'ಭಾರ' ಶೇಖರಗೊಂಡಿರುತ್ತದೆ. ಅಂಥ ಸಂದರ್ಭದಲ್ಲೂ 'ಸ್ಪಿಂಕ್ಟರ್' ದುರ್ಬಲವಾಗುತ್ತದೆ.
ಡಾ.ಕ್ಯಾಸ್ಟಲ್ ಮಾತಿನ ಕುರಿತು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)