ಚಾಕೊಲೆಟ್ ಬಲೆಗೆ ಸಿಲುಕೀರಿ ಜೋಕೆ!
ಡಾ.ಕ್ಯಾಸ್ಟೆಲ್ ಅವರ ಕಥೆ ಹೇಳುತ್ತಿದ್ದೆ. 'ನಾನು ಇಚ್ಛಿಸಿದಾಗಲೆಲ್ಲ ಎದೆ ಉರಿ ತಂದುಕೊಳ್ಳಬಲ್ಲೆ' ಎಂದು ಅವರು ಹೇಳಿದ್ದರ ಹಿಂದೆ ಸತತ 20 ವರ್ಷಗಳ ಸಂಶೋಧನೆ ಇದೆ. ಯಾವೆಲ್ಲ ಆಹಾರ ಎದೆ ಉರಿಗೆ ಕಾರಣವಾಗಬಹುದು ಎನ್ನುವುದನ್ನು ಪತ್ತೆ ಮಾಡಲು ಅವರು ಈ ಸುದೀರ್ಘ ಅವಧಿಯನ್ನು ಸವೆಸಿದ್ದಾರೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಅವರು ಕಂಡುಕೊಂಡಿರುವ ಸಂಗತಿಗಳಲ್ಲಿ ಪ್ರಮುಖವಾದದ್ದು ಚಾಕೊಲೆಟ್. ಅತಿ ಹೆಚ್ಚು ಹೊತ್ತು ಇರುವ ಮತ್ತು ಅತಿ ಕಡಿಮೆ ಅವಧಿಯಲ್ಲಿ ಎದೆ ನೋವು ತರುವ ಸಾಮರ್ಥ್ಯ ಚಾಕೊಲೆಟ್ಗೆ ಇದೆ ಎನ್ನುವುದು ಅವರ ಅನುಭವಜನ್ಯ ಮಾತು. ಚಾಕೊಲೆಟ್ ಅನ್ನು ನೇರವಾಗಿ, ಪಾನೀಯಗಳ ಮೂಲಕ ಅಥವಾ ಕುಕ್ಕೀಸ್ಗಳ ಜತೆಗೆ ಸೇವಿಸಿದರೂ ಎದೆ ಉರಿ ಆರಂಭವಾಗುವುದು ನಿಶ್ಚಿತ ಎನ್ನುತ್ತಾರೆ ಅವರು. ಅಪರೂಪಕ್ಕೊಮ್ಮೆ ಚಾಕೊಲೆಟ್ ಕುಕ್ಕೀಸ್ ತಿನ್ನುವ ಅಭ್ಯಾಸವಿದ್ದ ಅವರಿಗೆ, ಅದನ್ನು ತಿಂದ ದಿನ ರಾತ್ರಿ ಇಡೀ ಎದೆ ಉರಿ ಆಗುತ್ತಿತ್ತಂತೆ. ಇನ್ನು ಅವರ ಬಳಿ ಬರುವ ರೋಗಿಗಳಲ್ಲೂ ಹೆಚ್ಚಿನವರು ಚಾಕೊಲೆಟ್ ತಿಂದಾಗ ಎದೆ ಉರಿ ಜಾಸ್ತಿಯಾಗುತ್ತದೆ ಎಂದು ಹೇಳಿಕೊಳ್ಳುತ್ತಿದ್ದರಂತೆ. 'ಅದರಲ್ಲೇನಿದೆ ನೋಡಿಯೇ ಬಿಡೋಣ' ಎಂದು ಸಂಶೋಧನೆಗೆ ತೊಡಗಿದಾಗ ಗೊತ್ತಾದದ್ದು ಎಂದರೆ ಚಾಕೊಲೆಟ್ನ ರಾಸಾಯನಿಕ ಸಂಯೋಜನೆಯೇ ಎದೆ ಉರಿಗೆ ಕಾರಣ ಎನ್ನುವ ಸಂಗತಿ.
ನಾವೆಲ್ಲರೂ ಚಾಕೊಲೆಟ್ ಪ್ರಿಯರೇ. ಊಟಿ ಅಥವಾ ನಮ್ಮ ಮಡಿಕೇರಿಗೆ ಹೋದವರು ಅಲ್ಲಿನ ಚಾಕೊಲೆಟ್ ಸವಿಗಹೆ ಮಾರು ಹೋಗದವರೇ ಇಲ್ಲ. ಅಂದಮೇಲೆ ಬರಿಗೈಯ್ಯಲ್ಲಿ ಬರುವ ಪ್ರಶ್ನೆಯೂ ಇಲ್ಲವಲ್ಲ. ವಯೋವಾನದ ಭೇದವಿಲ್ಲದೆ ಎಲ್ಲರನ್ನೂ ಸೆಳೆಯುವ ಚಾಕೊಲೆಟ್, 'ಸ್ಪಿಂಕ್ಟರ್'ನ ಆಪ್ರಮಿತ್ರನಂತೆ ವರ್ತಿಸಿ ಕೆಲವು ಆಮಿಷಗಳನ್ನು ಒಡ್ಡುತ್ತದೆ. ಸ್ಪಿಂಕ್ಟರ್ನ ಹೊಣೆ ಏನು? ಹೊಟ್ಟೆಯಲ್ಲಿನ ಆ್ಯಸಿಡ್ಗಳು ಜಠರ ಪ್ರವೇಶಿಸದಂತೆ ತಡೆಯುವುದು. ಆದರೆ ಚಾಕೊಲೆಟ್ನಲ್ಲಿನ ಮಿಥಿಲ್ಯಾಂಥಿನ್ ಎನ್ನುವ ರಾಸಾಯನಿಕಗಳು ಈ ಕೆಲಸ ಮಾಡದಂತೆ ಸ್ಪಿಂಕ್ಟರ್ ಅನ್ನು ತಡೆಯುತ್ತವೆ. ಅದರಲ್ಲೂ ವಿಶೇಷವಾಗಿ ಮಿಥಿಲ್ಯಾಂಥಿನ್ನಲ್ಲಿರುವ ಕೆಫೀನ್, ಥಿಯೊಫಿಲೀನ್, ಥಿಯೊಬ್ರೊವೈನ್ಗಳು ಸ್ಪಿಂಕ್ಟರ್ ಸಡಿಲವಾಗಲು ಮುಖ್ಯ ಕಾರಣ. ಮಾಂಸಖಂಡಗಳು ಸಡಿಲವಾಗುವಂತೆ ಮಾಡುವುದರಲ್ಲಿ ಥಿಯೊಬ್ರೊವೈನ್ ಗಟ್ಟಿಶಾಲಿ. ಈ ರಾಸಾಯನಿಕ ಇರುವ ಬೇರೆ ಯಾವುದೇ ಆಹಾರ ಸೇವಿಸಿದರೂ ಎದೆ ಉರಿ ಅನುಭವ ಆಗಬಹುದು ಎನ್ನುತ್ತಾರೆ ಡಾ.ಕ್ಯಾಸ್ಟೆಲ್.
ಅಪರೂಪಕ್ಕೆ ಎದೆ ಉರಿಗೆ ತುತ್ತಾಗುವವರಲ್ಲಿ ಚಾಕೊಲೆಟ್ ಆಮ್ಲ ಹಿನ್ಸರಿತಕ್ಕೆ ಕಾರಣವಾಗುವುದಿಲ್ಲ. ಪದೇಪದೆ ಎದೆ ಉರಿ ಅನುಭವಿಸುವವರು ಚಾಕೊಲೆಟ್ ಮೇಲಿನ ಆಸೆ ಹತ್ತಿಕ್ಕಿಕೊಳ್ಳುವುದು ಅಗತ್ಯ ಎನ್ನುವುದು ಡಾ.ಕ್ಯಾಸ್ಟೆಲ್ ಸಲಹೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com