ನಿಂತಲ್ಲೇ ನ್ಯಾಯ
ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಬೇಕಿಲ್ಲ. ವರ್ಷಗಟ್ಟಲೇ ಅಲೆದಾಡಬೇಕಿಲ್ಲ. ಸಾವಿರಾರು ರುಪಾಯಿ ವೃಥಾ...
ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಬೇಕಿಲ್ಲ. ವರ್ಷಗಟ್ಟಲೇ ಅಲೆದಾಡಬೇಕಿಲ್ಲ. ಸಾವಿರಾರು ರುಪಾಯಿ ವೃಥಾ ಖರ್ಚು ಮಾಡಿಕೊಳ್ಳಬೇಕಿಲ್ಲ. ಒಮ್ಮೊಮ್ಮೆ ಮನೆ ಬಾಗಿಲಿಗೇ ಬಂದು ವ್ಯಾಜ್ಯ ಬಗೆಹರಿಸುವುದೂ ಉಂಟು. ಎಂಥದ್ದೇ ಪ್ರಕರಣ ಇರಲಿ, ಫಟಾಫಟ್ ಇತ್ಯರ್ಥ. ಆ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು.
ಇದು ಯಾವುದೋ ಹಳ್ಳಿಯ ಪಂಚಾಯಿತಿ ಕಟ್ಟೆಯ ಮಾತಲ್ಲ. ಐತಿಹಾಸಿಕ ಬಿಜಾಪುರ ನಗರ ಬಿಜಾಪುರದಲ್ಲಿ ಒಂದು ದಶಕದಿಂದ ಸಮರ್ಥವಾಗಿ ಕೆಲಸ ಮಾಡುತ್ತಿರುವ 'ಮಹಾ ನ್ಯಾಯ ಚಾವಡಿ'! ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಮಹಿಳೆಯರೇ ಸ್ಥಾಪನೆ ಮಾಡಿಕೊಂಡಿರುವ 'ಮಹಾ ನ್ಯಾಯ ಚಾವಡಿ' ಹತ್ತು ವರ್ಷಗಳಲ್ಲಿ 400ಕ್ಕೂ ಹೆಚ್ಚು ಕೌಟುಂಬಿಕ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿದೆ ಎನ್ನುವುದು ಸಣ್ಣ ಮಾತಲ್ಲ.
ಬಿಜಾಪುರದಲ್ಲಿ 1998- 99ರಲ್ಲಿ ಇನ್ಸಾಫ್ ಸ್ವಯಂ ಸೇವಾ ಸಂಸ್ಥೆ ಕಾರ್ಯಾರಂಭ ಮಾಡಿತು. ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಮನಗಂಡು ಇದೇ ಸಂಸ್ಥೆ 2000ನೇ ಇಸ್ವಿಯಲ್ಲಿ ನಗರದ ಕೊಳಚೆ ಪ್ರದೇಶಗಳಲ್ಲಿ 5 ಕಡೆಗೆ ನ್ಯಾಯ ಚಾವಡಿಗಳನ್ನು ಸ್ಥಾಪಿಸಿತು.
ಈ ನ್ಯಾಯ ಚಾವಡಿಗಳು ಮಹಿಳೆಯರ ಕೌಟುಂಬಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವಲ್ಲಿ ಉತ್ತಮ ಫಲಿತಾಂಶ ನೀಡಿದ್ದರಿಂದ ವಿವಿಧ ಕೊಳಗೇರಿಗಳಲ್ಲ್ಲಿ ಸದ್ಯಕ್ಕೆ 12 ನ್ಯಾಯ ಚಾವಡಿಗಳು ಕಾರ್ಯ ನಿರ್ವಹಿಸುತ್ತಿವೆ. ಈ 12 ನ್ಯಾಯ ಚಾವಡಿಗಳಲ್ಲಿನ ಸದಸ್ಯರಲ್ಲಿ 15 ಮಂದಿ ಮಹಿಳೆಯರು ಹಾಗೂ 10 ಮಂದಿ ಪುರುಷರು ಸೇರಿ 25 ಸದಸ್ಯರುಳ್ಳ ಮಹಾ ನ್ಯಾಯ ಚಾವಡಿಯನ್ನು 2003ರಲ್ಲಿ ಸ್ಥಾಪಿಸಲಾಗಿದೆ.
ಆಯಾ ಬಡಾವಣೆಯಲ್ಲಿನ ನ್ಯಾಯ ಚಾವಡಿಗಳಲ್ಲಿ ಇತ್ಯರ್ಥವಾಗದ ಸಮಸ್ಯೆಗಳನ್ನು ಮಹಾ ನ್ಯಾಯ ಚಾವಡಿ ಇತ್ಯರ್ಥಪಡಿಸುತ್ತದೆ. ಇಲ್ಲಿ ಪುರುಷ ಸದಸ್ಯರು ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಅಂತಿಮವಾಗಿ ಮಹಿಳೆಯರೇ ಕೌಟುಂಬಿಕ ವ್ಯಾಜ್ಯಗಳ ಇತ್ಯರ್ಥಕ್ಕೆ ತೀರ್ಮಾನ ಕೈಗೊಳ್ಳುತ್ತಾರೆ.
ವರದಕ್ಷಿಣೆ ಕಿರುಕುಳ, ಕುಟುಂಬದಲ್ಲಿ ಗಂಡನ ಮನೆಯವರು ಮಹಿಳೆಯರನ್ನು ಸಂಶಯದಿಂದ ಕಾಣುವುದು, ದೈಹಿಕ ಹಾಗೂ ಮಾನಸಿಕವಾಗಿ ಮಹಿಳೆಯನ್ನು ಹಿಂಸಿಸುವುದು, ಮಹಿಳೆಯನ್ನು ಮನೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯಿಸುವುದು, ಅನೈತಿಕ ಸಂಬಂಧದ ಸಂಶಯ, ಮಹಿಳೆಯರ ಅಪಹರಣ, ಲೈಂಗಿಕ ದೌರ್ಜನ್ಯ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಮಹಾ ನ್ಯಾಯಚಾವಡಿಯಲ್ಲಿ ಖರ್ಚಿಲ್ಲದೆ ಸೌಹಾರ್ದಯುತವಾಗಿ ಬಗೆಹರಿಸಲಾಗುತ್ತಿದೆ. ನ್ಯಾಯದಾನ ತಕ್ಷಣ ಸಿಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದರೆ ನೊಂದವರ ಜೇಬಿನಲ್ಲಿ ಕಾಸಿಲ್ಲದಿದ್ದರೂ ನ್ಯಾಯಚಾವಡಿಯ ಸದಸ್ಯರು ಹಣ ಹಾಕಿ ಕೋರ್ಟ್ ಖರ್ಚು, ವೆಚ್ಚ ಭರಿಸುತ್ತಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಮುಸ್ಲಿಂ ಜಮಾತ್ ಮುಂತಾದವರ ಸಹಕಾರವಿದೆ. ಪ್ರತಿಫಲಾಪೇಕ್ಷೆ ಇಲ್ಲದೇ ಉಚಿತವಾಗಿ ಸೇವೆ ಮಾಡುವ ವಕೀಲರೂ ಈ ಮಹಾ ನ್ಯಾಯ ಚಾವಡಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ನಿಂದಿಸಿದರೂ ಸಿಟ್ಟು ಬರಲ್ಲ
ನೊಂದ ಮಹಿಳೆಯರ ಪರವಾಗಿ ನ್ಯಾಯ ಮಾಡಲು ಹೋದ ಸಂದರ್ಭದಲ್ಲಿ ಮಹಿಳೆಯರ ಗಂಡನ ಮನೆಯವರಿಂದ ಬೈಗುಳ, ಅಪವಾದದ ಮಾತುಕೇಳಬೇಕಾಗುತ್ತದೆ. ಅದಕ್ಕೆ ಸಿಟ್ಟು ಮಾಡಿಕೊಳ್ಳದೆ ನೊಂದ ಮಹಿಳೆಗೆ ನ್ಯಾಯ ಒದಗಿಸಿ ಕೊಡುವ ಕಡೆಗೆ ಗಮನ ಹರಿಸಲಾಗುತ್ತದೆ. ನಮ್ಮ ಪ್ರಯತ್ನದಿಂದ ನೊಂದ ಮಹಿಳೆಯರಿಗೆ ನ್ಯಾಯ ಸಿಗುವುದರಿಂದ ಚಾವಡಿ ಕೆಲಸದಲ್ಲಿ ಹೆಚ್ಚಿನ ಉತ್ಸಾಹ ಮೂಡುತ್ತದೆ ಎಂದು ದಾವಲಬಿ ಟಕ್ಕಳಕಿ ಅಭಿಪ್ರಾಯಪಟ್ಟಿದ್ದಾರೆ.
ಆತ್ಮಸ್ಥೈರ್ಯ ಹೆಚ್ಚಳ
ನೊಂದ ಮಹಿಳೆಯರಿಗೆ ಮಾನಸಿಕ ಮತ್ತು ಭಾವನಾತ್ಮಕವಾಗಿ ಬೆಂಬಲ ನೀಡುವುದು, ಮಹಿಳೆಯರಿಗೆ ಉಚಿತ ಕಾನೂನು ಸಲಹೆ ಒದಗಿಸುವುದು, ಮಹಿಳೆಯರಲ್ಲಿ ಆತ್ಮ ವಿಶ್ವಾಸ, ಘನತೆ- ಗೌರವ ಹೆಚ್ಚಿಸುವ ಕೆಲಸವನ್ನು ಮಹಾ ನ್ಯಾಯ ಚಾವಡಿ ಮಾಡುತ್ತಿದೆ.
- ಪೀಟರ್ ಅಲೆಕ್ಸಾಂಡರ್, ಇನ್ಸಾಫ್ ಸಂಸ್ಥೆ ಅಧ್ಯಕ್ಷ
- ರುದ್ರಪ್ಪ ಆಸಂಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.