ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಾತೇ ಬಲ

Mainashree
Updated On : 18 Nov 2013, 12:14 pm

'ನುಡಿದಂತೆ ನಡೆ' ಎಂದವರು ನಮ್ಮ ಹಿರಿಯರು. ಅವರು ಹಾಗೆಯೇ ಜೀವಿಸಿದವರೂ ಕೂಡ. ನಮ್ಮ ನಡೆಯ ವಿಚಾರ ಅಂತಿರಲಿ, ನುಡಿಯ ಬಗ್ಗೆ ಮಾತನಾಡೋಣ. ನಮ್ಮ ಮಾತೇ ನಾವೇನೆಂಬುದನ್ನು ನಿರ್ಧರಿಸುವ ಪ್ರಮುಖ ಅಂಗ. ಬರಿಯ ನೋಟದಲ್ಲಿ ಯಾರೂ ಒಬ್ಬ ವ್ಯಕ್ತಿ ಇಂಥವನೇ ಎಂದು ತೀರ್ಮಾನಿಸುವುದಿಲ್ಲ. ಆತನ ಬಾಯಿಯಿಂದ ಹೊರಡುವ ಮಾತಿಗಾಗಿ ಕಾಯುತ್ತಿರುತ್ತಾರೆ. ಶಬ್ದಗಳು ಆತನ ಸಂಸ್ಕೃತಿಯನ್ನು ಹೊರಹಾಕುತ್ತವೆ.
'ನಾಳೆ ನೋಡೋಣ' ಎನ್ನುವವನು ವಿಳಂಬವಾದಿ. 'ಆಗಲಿ, ಮಾಡ್ತೀನಿ' ಎನ್ನುವವನಿಂದ ಏನಾದರೂ ಕೆಲಸ ಆಗುತ್ತದೆಯೆಂದು ನಿರೀಕ್ಷಿಸಬಹುದು. ವಿನಯಪೂರ್ವಕ ಮಾತಾಡುವವನು ಸುಸಂಸ್ಕೃತ ವಾತಾವರಣದಲ್ಲಿ ಬೆಳೆದಿದ್ದಾನೆ ಎಂದು ಊಹಿಸಬಹುದು. ಅತಿಯಾಗಿ ಮಾತಾಡುವವನಿಂದ ಯಾವುದೇ ಲಾಭವಿಲ್ಲ. ಸ್ಪಷ್ಟವಾಗಿ ಕೆಲವೇ ಮಾತಾಡುವವನು ಕಾಯಕದಲ್ಲಿ ಶ್ರದ್ಧೆ ಉಳ್ಳವನಾಗಿರಬಹುದು. ಇವೆಲ್ಲ ಒಬ್ಬನ ಗುಣಗಳನ್ನು ಅಳೆಯಲು ನಾವು ಬಳಸಬಹುದಾದ ಮಾತಿನ ಮಾಪಕಗಳು.
ಮೊದಲ ಬಾರಿಗೆ ಹನುಮಂತನನ್ನು ಕಂಡು, ಅವನನ್ನು ಮಾತಾಡಿಸಿದ ಶ್ರೀರಾಮ ಸೋಜಿಗಕ್ಕೊಳಗಾಗುತ್ತಾನೆ. ತಮ್ಮನೊಂದಿಗೆ ಹೇಳುತ್ತಾನೆ- 'ಸೋದರ, ನೋಡು. ಈತನ ಉಚ್ಛಾರ ಎಷ್ಟು ಸ್ಪಷ್ಟ ಹಾಗೂ ಶುಭ್ರವಾಗಿದೆ. ಎಲ್ಲಿ ಎಷ್ಟು ಬೇಕೋ ಅಷ್ಟು ಮಾತಾಡುತ್ತಾನೆ. ಒಂದೇ ಒಂದು ಅಪಶಬ್ದವೂ ಈತನ ಬಾಯಿಯಿಂದ ಬಾರದು. ವ್ಯಾಕರಣವನ್ನು ಚೆನ್ನಾಗಿ ಅರಿತವನಂತೆ ಕಾಣುತ್ತಾನೆ. ವಿನಯವನ್ನು ಈತನ ಮಾತುಗಳೇ ಸೂಚಿಸುತ್ತವೆ. ಕುಲೀನನೇ ಇರಬೇಕು'. ರಾಮನ ಅಭಿಪ್ರಾಯ ಸರಿಯಾಗಿತ್ತು. ಹನುಮಂತ ವ್ಯಾಕರಣ ಪಂಡಿತನಾಗಿದ್ದ. ಹನುಮಂತನ ಕುರಿತು ರಾಮ ಹೇಳಿದ ಮಾತುಗಳು ಇಂದಿಗೂ ಉತ್ತಮ ವಾಗ್ಮಿಗೆ ಇರಬೇಕಾದ ಗುಣಗಳನ್ನೇ ಸೂಚಿಸುತ್ತವೆ. 'ಕುಲವಂ ನಾಲಿಗೆ ಹೇಳಿತು' ಎಂಬ ಮಾತೇ ಇದೆ. ಆದರೆ ಇದು ಪೂರ್ತಾ ನಿಜವಲ್ಲ. ಸಮಾಜದ ತೀರಾ ಕೆಳಸ್ತರದಿಂದ ಬಂದವರೂ ಪರಿಶ್ರಮದಿಂದ ಉತ್ತಮ ವಾಗ್‌ವೈಖರಿಯನ್ನು ರೂಪಿಸಿಕೊಳ್ಳಬಲ್ಲರು. ಅದು ಅವರನ್ನು ಸಾಮಾಜಿಕವಾಗಿ ಮತ್ತಷ್ಟು ಮೇಲೆತ್ತಲೂ ಸಹಾಯಕವಾಗುತ್ತದೆ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments