ಚಾಕೊಲೆಟ್ಗಿಂತಲೂ ಅಪಾಯಕಾರಿ ಕೊಬ್ಬು!
ಎಲ್ಲೋ ಅಪರೂಪಕ್ಕೆ ಚಾಕೊಲೆಟ್ ತಿನ್ನುವವರಾದರೆ ಅಂಥ ಸಮಸ್ಯೆ ಬಾಧಿಸದು. ಆದರೆ ಅತಿಯಾಗಿ ಚಾಕೊಲೆಟ್ ತಿನ್ನುವ ಅಭ್ಯಾಸವುಳ್ಳವರಲ್ಲಿ ಇದು ಎದೆ ಉರಿಯಂಥ ಸಮಸ್ಯೆಯನ್ನು ಹುಟ್ಟುಹಾಕುವುದು ಗ್ಯಾರಂಟಿ. ಕೆಲವು ಬಗೆಯ ಚಾಕೊಲೆಟ್ಗಳನ್ನು ಹಾಲಿನಿಂದಲೂ ಮಾಡುತ್ತಾರೆ. ಎದೆ ಉರಿ ತೊಂದರೆ ಇರುವವರು ಅದನ್ನು ಸೇವಿಸಲೇಕೂಡದು. ಚಾಕೊಲೆಟ್ಗಿಂತ ಅಪಾಯಕಾರಿಯಾಗಿರುವ ಆಹಾರ ಪದಾರ್ಥಗಳೂ ಇವೆ ಎನ್ನುವುದು ಚಾಕೊಲೆಟ್ ಪ್ರಿಯರಲ್ಲಿ ಕೊಂಚ ನೆಮ್ಮದಿ ಮೂಡಿಸಬಹುದು. ಕೊಬ್ಬು ಮತ್ತು ಮಸಾಲೆ ಪದಾರ್ಥಗಳು ಚಾಕೊಲೆಟ್ಗಿಂತ ಬಹಳ ಅಪಾಯಕಾರಿ. ಹುರಿದ ಮತ್ತು ಕರಿದ ಪದಾರ್ಥಗಳು, ಬೇಯಿಸದ ಬರ್ಗರ್ಗಳು, ಚೀಸ್, ಕೊಬ್ಬಿನ ಅಂಶವಿರುವ ಯಾವುದೇ ಪದಾರ್ಥ ಎದೆ ಉರಿಯನ್ನು ಬಹುಬೇಗ ಉಲ್ಬಣಗೊಳಿಸುತ್ತದೆ. ಚಾಕೊಲೆಟ್ಗಿಂತ ಕೊಬ್ಬು ಎದೆ ಉರಿಯನ್ನು ಎರಡು ಪಟ್ಟು ಹೆಚ್ಚಿಸುತ್ತದೆ. ಮಸಾಲೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಆಗಾಗ ಸೇವಿಸುತ್ತಿರುವವರು ಶಾಶ್ವತವಾಗಿ ಶಮನಪಡಿಸಲಾಗದ ಅಂದರೆ ನಿರಂತರವಾಗಿ ಕಾಡುವ ಎದೆ ಉರಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ತಜ್ಞರು.
ಹಾಗೆ ನೋಡಿದರೆ ನಮ್ಮಲ್ಲಿಗಿಂತ ಅಮೆರಿಕದಲ್ಲಿ ಆಹಾರ ಮತ್ತು ಆರೋಗ್ಯದ ಕುರಿತು ನಡೆಯುವ ಸಂಶೋಧನೆಗಳು ಅಧಿಕ. ಅಧಿಕ ಸಂಖ್ಯೆಯ ಭಾರತೀಯರು ಈಗಲೂ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನೇ ಉಳಿಸಿಕೊಂಡಿರುವುದು ಮತ್ತು ನಮ್ಮ ಸಾಂಪ್ರಾದಾಯಿಕ ಆಹಾರ ಪದ್ಧತಿ ಆರೋಗ್ಯದ ಕಾಳಜಿಯನ್ನು ಹೊಂದಿರುವುದು- ಇವು ಭಾರತದಲ್ಲಿ ಆಹಾರ ಮತ್ತು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯದೇ ಇರಲು ಕಾರಣವಾಗಿರಬಹುದು. ಅದೇ ಅಮೆರಿಕದ ಆಹಾರ ಪದ್ಧತಿ ನೋಡಿ. ಅಲ್ಲಿ ಎಲ್ಲವೂ ಕೃತಕ. ಜೀವನಶೈಲಿಯೂ ನಮಗಿಂತ ಭಿನ್ನ. ಹೀಗಾಗಿ ಆರೋಗ್ಯ ಸಂಬಂಧಿ ತೊಂದರೆಗಳೂ ಅಧಿಕ. ದಿನಕ್ಕೊಂದು ಬಗೆಯ ಆರೋಗ್ಯ ಸಮಸ್ಯಗಳು ಅಲ್ಲಿ ಹುಟ್ಟಿಕೊಳ್ಳುತ್ತಿವೆ. ಆದ್ದರಿಂದ ಆಹಾರ-ಆರೋಗ್ಯ-ಜೀವನಶೈಲಿ ಕುರಿತು ಸಂಶೋಧನೆ ನಡೆಸುವುದು ಅವರಿಗೆ ಅನಿವಾರ್ಯವೂ ಹೌದು.
ಎಷ್ಟೇ ಸಂಶೋಧನೆ ನಡೆಸಿದರೂ, ಏನೇ ಹೊಸ ವಿಚಾರ ಕಂಡುಹಿಡಿದರೂ ಬದಲಾವಣೆ ಏನೇನೂ ಆಗಿಲ್ಲ ಎನ್ನುವುದೂ ಅಷ್ಟೇ ನಿಜ. ಅಮೆರಿಕದ ಆಹಾರ ತಜ್ಞರು ಮತ್ತು ವೈದ್ಯರು ಕೊಬ್ಬಿನ ಬಗ್ಗೆ ಆಗಾಗ ಎಚ್ಚರಿಸುತ್ತಲೇ ಇದ್ದಾರೆ. ಆದರೂ ಅಲ್ಲಿ ಎದೆ ಉರಿಗೆ ತುತ್ತಾಗುವವರಲ್ಲಿ ಶೇ 76ರಷ್ಟು ಮಂದಿಗೆ ತೊಂದರೆ ಉಂಟಾಗಿರುವುದು ಕೊಬ್ಬಿನ ಆಹಾರದ ಅತಿಯಾದ ಸೇವನೆಯಿಂದ!
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com