ಸಚಿನ್ ಇಲ್ಲದೆ ಬೋರೋ ಬೋರು...
ಮಹಾರಾಷ್ಟ್ರದಲ್ಲಿ ಜನಿಸಿದ ಪುಟ್ಟ ಪೋರ
ಬಾಲ್ಯದಲ್ಲಿ ತುಂಟನಂತೆ ಈ ಪೋರ
ಮನೆಯಲ್ಲಿ ಸಿಕ್ಕಿತು ಕ್ರಿಕೆಟ್‌ಗೆ ಪ್ರೋತ್ಸಾಹ
ಅಣ್ಣನಿಂದ ಕಲಿತ ಈ ಕ್ರಿಕೆಟ್ ಪಾಠ,
ಶಾಲಾದಿನಗಳಲ್ಲೇ ಆದ ಅದ್ಭುತ ವೀರ
ದೇಸಿಯ ಪಂದ್ಯಗಳಲ್ಲಿ ಮಿಂಚಿದ ವೀರ,
ಭಾರತದ ಗೆಲುವಿಗೆ ಇವನೇ ಆಧಾರ
ಸಾಧನೆಯ ಶಿಖರವೇರಿದ ಈ ಮೋಡಿಗಾರ
ಬೆಳೆಯುತ್ತಾ ಹೋಯಿತು ದಾಖಲೆಯ ನಂಟು
ಬಿಡದಿರಲಿ ನನ್ನ-ನಿನ್ನ ಕ್ರೀಡಾನಂಟು.
-ಎಂ.ಎಸ್.ಉಷಾ ಪ್ರಕಾಶ್, ಮೈಸೂರು.
ಸಚಿನ್ ಮಾದರಿ
ಕ್ರೀಡಾ ಪ್ರೇಮಿಗಳಲ್ಲಿ ಕ್ರಿಕೆಟ್ ಆಟವೆಂದರೆ ಸಚಿನ್ ಎಂಬಂತಹ ವಾತಾವರಣ ಸೃಷ್ಟಿಸಿದ ಕೀರ್ತಿ ತೆಂಡೂಲ್ಕರ್‌ಗೆ ಸಲ್ಲುತ್ತದೆ. ಸಚಿನ್ ಸ್ಟೇಡಿಯಂಗೆ ಬರುತ್ತಿದ್ದಂತೆ ಜನರ ಉತ್ಸಾಹ ಹೆಚ್ಚುತ್ತಿತ್ತು. ಜನರನ್ನು ಸೆಳೆಯುವ ಆಯಸ್ಕಾಂತ ಶಕ್ತಿ ಅವರಲ್ಲಿದೆ. ಅವಿರತ ಅಭ್ಯಾಸ, ಆತ್ಮವಿಶ್ವಾಸ, ಸಾಧಿಸಬೇಕೆಂಬ ಛಲ ಕಂಡರೆ ಯಾರಿಗಾದರೂ ಸ್ಫೂರ್ತಿ ಬಂದೇ ಬರುತ್ತದೆ. ಕೇವಲ ಕ್ರೀಡಾ ಪ್ರೇಮಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಸಚಿನ್ ಮಾದರಿಯಾಗಿದ್ದಾರೆ. ಇವರ ಕೀರ್ತಿ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿದೇಶಗಳಿಗೂ ಹರಡಿರುವುದು ಹೆಮ್ಮೆಯ ಸಂಗತಿ. ಇವರು ಯಾವ ಕ್ಷೇತ್ರದಲ್ಲಿ ಉಳಿಯುತ್ತಾರೋ ಅಲ್ಲಿಯೂ ಯಶಸ್ಸು ಸಿಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
-ಎಂ.ಆರ್.ಸುಬ್ರಮಣ್ಯ ಶಾಸ್ತ್ರಿ, ಬೆಂಗಳೂರು
ಮಿನುಗಿದ ಧ್ರುವತಾರೆ
ಪ್ರತಿಭೆಯೆಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಡಕವಾಗಿರುತ್ತದೆ. ಆದರೆ, ವ್ಯಕ್ತಿಯ ಪ್ರತಿಭಾ ಕ್ಷೇತ್ರವನ್ನು ಗುರುತಿಸಿ ಅವಕಾಶಗಳ ಮುಖಾಂತರ ಪ್ರೋತ್ಸಾಹಿಸಬೇಕು. ಆಗ ಯಶಸ್ಸು ಎಂಬ ಮೈಲುಗಲ್ಲು ತುಂಬಾ ಹತ್ತಿರವಾಗುತ್ತ ಹೋಗುತ್ತದೆ. ಹೀಗೆ ಹದಿನಾರರ ಹರೆಯದಲ್ಲೇ ಕ್ರೀಡಾ ಲೋಕಕ್ಕೆ ಧುಮುಕಿ ದೇಶ ವಿದೇಶಗಳ ಕ್ರೀಡಾಭಿಮಾನಿಗಳ ಮನಗೆದ್ದ ಚತುರ. ಇವರ ಸಹನೆಯೇ ಸಾಧನೆಗೆ ಪೂರಕವೆಂಬಂತೆ ಪ್ರತಿಯೊಂದು ಹಂತದಲ್ಲಿಯೂ ಸಹಭಾಗಿತ್ವದಿಂದ ಆಟವಾಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಸಾಧಕರಲ್ಲೊಬ್ಬರು. ತಮ್ಮ ಸತತ ಪರಿಶ್ರಮದಿಂದ ಯಶಸ್ಸು ಕಂಡು ಕ್ರೀಡಾರಂಗದಲ್ಲಿ ಧ್ರುವತಾರೆಯಾಗಿ ಮಿನುಗಿದರು.
-ಪ್ರದೀಪ.ಬಿ, ಕೆ.ಆರ್.ಪೇಟೆ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಸುರಕ್ಷಿತವೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com