ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಈ ಮನೆಯಲ್ಲಿ ಚುಟುಕು ನೆನಪು

ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ 'ಚುಟುಕುಬ್ರಹ್ಮ'ನೆಂದೆ ಹೆಸರಾದ ದಿನಕರ ದೇಸಾಯಿ ತಮ್ಮ ಚುಟುಕುಗಳ ಮೂಲಕ ಮುಲಾಜಿಲ್ಲದೆ ಪ್ರಭಾವಿ ವ್ಯಕ್ತಿಗಳನ್ನೂ ...

Rashmi Kasaragodu
Updated On : 20 Nov 2013, 12:27 pm

ಕನ್ನಡಾಂಬೆಗೆ ಇವರು ಹಾಕುವರು ಹಾರ
ಆಂಗ್ಲನುಡಿಯಲ್ಲಿ ನಡೆಸುವರು ಸರ್ಕಾರ
ಕೇಳಿದರೆ ಹೇಳುವರು ಒಂದು ದಿನ ತಾಳಿ
ಆಮೇಲೆ ಕೂಗಲಿದೆ ಕನ್ನಡದ ಕೋಳಿ...


ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ 'ಚುಟುಕುಬ್ರಹ್ಮ'ನೆಂದೆ ಹೆಸರಾದ ದಿನಕರ ದೇಸಾಯಿ ತಮ್ಮ ಚುಟುಕುಗಳ ಮೂಲಕ ಮುಲಾಜಿಲ್ಲದೆ ಪ್ರಭಾವಿ ವ್ಯಕ್ತಿಗಳನ್ನೂ ಕುಟುಕುತ್ತಿದ್ದರು. ಕಾವ್ಯ, ರಾಜಕೀಯ, ಸಮಾಜಸೇವೆ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೆ ಆದ ಛಾಪು ಒತ್ತಿದ ದಿನಕರ ದೇಸಾಯಿ ಅವರು ವಾಸಿಸುತ್ತಿದ್ದ ಮನೆಯಲ್ಲಿ ದಿನಕರರ ಫೋಟೋ ಒಂದನ್ನು ಬಿಟ್ಟರೆ ಬೇರೇನೂ ಇಲ್ಲ. ಅವರ ಸಂಬಂಧಿಗಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ದಿನಕರರು ಇದ್ದಾಗಿನ ಸಡಗರ, ಸಂಭ್ರಮ ಎಲ್ಲವೂ ಮರೆಯಾಗಿದೆ.

ದಾಸವಾಳ ಎಂದರೆ ಪ್ರಾಣ
ದಿನಕರ ದೇಸಾಯಿ ಅವರ ಹಿರಿಯ ಸಹೋದರನ ಸೊಸೆ ಶಾರದಾ ದೇಸಾಯಿ, ಈಕೆಯ ಮಗ ವಿನಯ, ಸೊಸೆ ಜಯಾ ಹಾಗೂ ಮೊಮ್ಮಗ ಚೈತಾಲಿ ಈ ಪುಟ್ಟ ಸಂಸಾರ ಆ ಮನೆಯಲ್ಲಿ ವಾಸಿಸುತ್ತಿದೆ. ಬತ್ತದ ಗದ್ದೆಯೇ ಇವರ ಜೀವನಾಧಾರ. ಶಾರದಾ ದೇಸಾಯಿ 67ರ ಹರೆಯದಲ್ಲೂ ದಿನಕರ ದೇಸಾಯಿ ಅವರ ಕುರಿತು ಅರಳು ಹುರಿದಂತೆ ಹೇಳುವ ಮಾತುಗಳು ಹಾಗೂ ಒಂದು ಫೋಟೋ ಬಿಟ್ಟರೆ ದಿನಕರ ದೇಸಾಯಿ ಅವರ ಯಾವ ವಸ್ತು, ಪುಸ್ತಕ, ಪ್ರಶಸ್ತಿ, ಫಲಕ ಏನೂ ಇಲ್ಲ. ದಿನಕರರು ಬರೆಯಲು ಬಳಸುತ್ತಿದ್ದ ಕುರ್ಚಿ, ಟೇಬಲ್, ಸೀಮೆಎಣ್ಣೆ ದೀಪ, ಪುಸ್ತಕಗಳ ಸಂಗ್ರಹ ಎಲ್ಲವೂ ಮರೆಯಾಗಿವೆ. ದಿನಕರ ದೇಸಾಯಿ ಮುಂಬಯಿ ಸೇರಿದ ಮೇಲೂ ಆಗಾಗ ಈ ಮನೆಗೆ ಬರುತ್ತಿದ್ದರು. ಬರುವ ಮುನ್ನ ಯಾರಾದರೂ ಊರಿಗೆ ಹೋಗುವವರು ಸಿಕ್ಕರೆ ಅವರ ಕೈಲಿ ಒಂದು ಚೀಟಿ ಅಥವಾ ಅಂಚೆಯ ಮೂಲಕ ಪತ್ರ ಬರೆಯುತ್ತಿದ್ದರು. ಯಾವಾಗ ಎಷ್ಟು ಗಂಟೆಗೆ ಬರುತ್ತೇನೆ ಎಂಬ ಮಾಹಿತಿ ಈ ಚೀಟಿಯಲ್ಲಿ ಇರುತ್ತಿತ್ತು. ಕರಾರುವಾಕ್ಕಾಗಿ ಅದೇ ಸಮಯಕ್ಕೆ ಹಾಜರಾಗುತ್ತಿದ್ದರು. ಬಂದವರೇ ತಾವು ಪ್ರೀತಿಯಿಂದ ಬೆಳೆಸಿದ ದಾಸವಾಳ ಸಸಿಗಳನ್ನು ಮುಟ್ಟಿ ನೋಡುತ್ತಿದ್ದರು. ಒಮ್ಮೆ ಬಂದಾಗ ದಾಸವಾಳ ಸಸಿ ಇಲ್ಲದೆ ಇರುವುದರನ್ನು ಕಂಡು ಬೇಸರಪಟ್ಟಿದ್ದರು.

ಕೆಲ ಘಟನೆಗಳ ಪ್ರಭಾವ
ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿದೆ ದಿನಕರ ದೇಸಾಯಿ ಅವರ ಈ ಮನೆ. ದಿನಕರ ದೇಸಾಯಿ ತಂದೆ ದತ್ತಾತ್ರೇಯ ದೇಸಾಯಿ ಅವರ ಜೊತೆ ಇದ್ದಾಗ ಭಿಕ್ಷುಕನೊಬ್ಬ ಬಂದು ಭಿಕ್ಷೆ ಕೇಳುತ್ತಾನೆ. ಗಟ್ಟುಮುಟ್ಟಾಗಿದ್ದು ಭಿಕ್ಷೆ ಯಾಕೆ ಕೇಳುತ್ತೀ? ನಿನಗೆ ಯಾವ ಕೆಲಸ ಬರುತ್ತದೆ ಎಂದು ದತ್ತಾತ್ರೇಯ ದೇಸಾಯಿ ಕೇಳುತ್ತಾರೆ. ಆಗ ಗೌಂಡಿ ಕೆಲಸ ಎಂದು ಆತ ಉತ್ತರಿಸುತ್ತಾನೆ. ಸರಿ ನಾನು ಹಣ ಕೊಡುತ್ತೇನೆ. ನಮ್ಮ ಮನೆ ನಿರ್ಮಿಸು ಎಂದು ಹೇಳಿದಾಗ ಆ ಭಿಕ್ಷುಕನಿಂದ ಮನೆ ನಿರ್ಮಾಣವಾಗುತ್ತದೆ. ಕಾಯಕದ ಮಹತ್ವ ಬಿಂಬಿಸುವ ಇಂತಹ ಕೆಲ ಘಟನೆಗಳ ಪ್ರಭಾವ ದಿನಕರರ ಮೇಲಾಗುತ್ತದೆ. ಇದು ದಿನಕರರ ವ್ಯಕ್ತಿತ್ವವನ್ನೂ ಗಟ್ಟಿಗೊಳಿಸುತ್ತದೆ. ದಿನಕರ ದೇಸಾಯಿ ಅವರಿಗೆ ದಾಸವಾಳದ ಗಿಡಗಳೆಂದರೆ ಅಚ್ಚುಮೆಚ್ಚು. ಈ ಮನೆ ಎದುರು ಹತ್ತಾರು ಬಗೆಯ ದಾಸವಾಳ ಸಸಿಗಳನ್ನು ತಂದು ನೆಟ್ಟಿದ್ದರು. ಮುಂದೆ ತಮ್ಮ ಕವನ ಸಂಕಲನವೊಂದಕ್ಕೆ ದಾಸಾಳ ಅಂತಲೆ ಹೆಸರಿಟ್ಟಿದ್ದರು. ದಿನಕರ ದೇಸಾಯಿ ಮಧ್ಯರಾತ್ರಿಯೂ ಎದ್ದು ಕುಳಿತು ಕವನ ಬರೆಯುತ್ತಿದ್ದರು. ಸೀಮೆಎಣ್ಣೆಯ ತೂಗುದೀಪ ದಿನದ 24 ಗಂಟೆಯೂ ಉರಿಯುತ್ತಿತ್ತು. ರಾತ್ರಿ 3 ಗಂಟೆಗೆ ಕವನದ ಸಾಲುಗಳು ಹೊಳೆದಾಗ ಎದ್ದು ಕುರ್ಚಿಯ ಮೇಲೆ ಕುಳಿತು ದೀಪವನ್ನು ದೊಡ್ಡದಾಗಿಸಿಕೊಂಡು ಬರೆಯುತ್ತಿದ್ದರು.
ಆಗೆಲ್ಲ ಈ ಮನೆಯಲ್ಲಿ ಬಿಡುವಿಲ್ಲದ ಚಟುವಟಿಕೆ, ಸಾಹಿತಿಗಳು, ರಾಜಕೀಯ ಮುಖಂಡರು, ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು, ರೈತರು, ಸಾಮಾಜಿಕ ಮುಖಂಡರು ಹೀಗೆ ಎಲ್ಲ ವರ್ಗದ ಜನರು ದೇಸಾಯಿ ಅವರಲ್ಲಿ ಬಂದು ತಮಗೆ ಬೇಕಾದ ವಿಷಯ ಚರ್ಚಿಸುತ್ತಿದ್ದರು. ದೇಸಾಯಿ ಎಲ್ಲರಿಗೂ, ಎಲ್ಲದಕ್ಕೂ ಪರಿಹಾರ ಹೇಳುತ್ತಿದ್ದರು. ಸ್ವತಃ ಕೆನರಾ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸುವ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಪ್ರೌಢಶಿಕ್ಷಣಕ್ಕೆ ಹೈಸ್ಕೂಲುಗಳನ್ನು ತೆರೆದರು, ಜನಪ್ರತಿನಿಧಿಯಾಗಿ ಬಡವರ ಕಷ್ಟಗಳಿಗೆ ಸ್ಪಂದಿಸಿದರು.

ಪ್ರತಿದಿನವೂ ಹಬ್ಬ
ದಿನಕರ ದೇಸಾಯಿ ಈ ಮನೆಯಲ್ಲಿ ಇದ್ದಾಗ ಪ್ರತಿದಿನವೂ ಹಬ್ಬವಾಗಿತ್ತು. ಅವರು ಮುಂಬಯಿಯಲ್ಲಿ ವಾಸ್ತವ್ಯ ಮಾಡಿದ ಮೇಲೂ ಇಲ್ಲಿಗೆ ಬಂದಾಗಲೆಲ್ಲ ಜನರ ಜಾತ್ರೆಯೇ ಸೇರುತ್ತಿತ್ತು. ದಿನಕರ ದೇಸಾಯಿ ಅವರ ಮನೆಯಲ್ಲಿ ನಾವಿದ್ದೇವೆ ಎನ್ನುವುದೇ ನಮಗೊಂದು ಹೆಮ್ಮೆ. ಅವರ ನೆನಪಿಗಾಗಿ ಯಾವ ವಸ್ತುಗಳೂ ಈಗ ಇಲ್ಲ. ಈ ಮನೆಯ ಸೊಸೆಯಾಗಿ ನಾನು ಬಂದಾಗ ದಿನಕರರು ಇದೇ ಮನೆಯಲ್ಲಿದ್ದರು. ಈಗ ಅದೆಲ್ಲ ನೆನಪು ಮಾತ್ರ. ನಮಗೀಗ ಕೃಷಿಯಿಂದಲೆ ಜೀವನವಾಗಬೇಕು. ಅದು ಬಿಟ್ಟರೆ ಬೇರೇನೂ ಇಲ್ಲ.
- ಶಾರದಾ ದೇಸಾಯಿ (ದಿನಕರರ ಸಂಬಂಧಿ)

- ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement