ಕೊಬ್ಬು ತಿಂದರೆ ಹೊಟ್ಟೆ ಖಾಲಿ ಆಗುವುದಿಲ್ಲ!
ಕೆಲ ವರ್ಷಗಳ ಹಿಂದೆ ಅಮೆರಿಕದಲ್ಲಿ ಕೊಬ್ಬು ಹೇಗೆ ಎದೆ ಉರಿ ಹೆಚ್ಚಿಸಬಲ್ಲದು ಎನ್ನುವ ಚರ್ಚೆ ಶುರುವಾಯಿತು. ಕೊಬ್ಬೇ ತೊಂದರೆಯ ಮೂಲ...
ಕೆಲ ವರ್ಷಗಳ ಹಿಂದೆ ಅಮೆರಿಕದಲ್ಲಿ ಕೊಬ್ಬು ಹೇಗೆ ಎದೆ ಉರಿ ಹೆಚ್ಚಿಸಬಲ್ಲದು ಎನ್ನುವ ಚರ್ಚೆ ಶುರುವಾಯಿತು. ಕೊಬ್ಬೇ ತೊಂದರೆಯ ಮೂಲ ಎಂದು ಪ್ರತಿಪಾದಿಸುವವರು ಅದನ್ನು ಆಧಾರಸಮೇತ ನಿರೂಪಿಸಲು ಮುಂದಾದರು. ತೀವ್ರ ಎದೆ ಉರಿಯಿಂದ ಬಳಲುವವರು ಮತ್ತು ಅಪರೂಪಕ್ಕೆ ಎದೆ ಉರಿಗೆ ತುತ್ತಾಗುವ ತಲಾ 10 ಜನರನ್ನು ಹೋಟೆಲ್ಗೆ ಕರೆದೊಯ್ಯಲಾಯಿತು. ಅಂದು ಎಲ್ಲರಿಗೂ ಕೊಬ್ಬಿನ ಅಂಶ ಕಡಿಮೆ ಇರುವ ಹಾಟ್ ಕೇಕ್ ಮತ್ತು ಒಂದು ಗ್ಲಾಸ್ ಕೆನೆ ತೆಗೆದ ಹಾಲು ನೀಡಲಾಯಿತು. ಮರುದಿನ ಎಲ್ಲರಿಗೂ ಎಗ್ ಬಿಸ್ಕತ್ ಸೇರಿದಂತೆ ಅಧಿಕ ಕೊಬ್ಬು ಇರುವ ತಿನಿಸುಗಳನ್ನು ನೀಡಲಾಯಿತು. ಎರಡೂ ದಿನದ ಆಹಾರದಲ್ಲಿ ಕ್ಯಾಲೊರಿ ಪ್ರಮಾಣ ಒಂದೇ ಇತ್ತು, ಆದರೆ ಕೊಬ್ಬಿನ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿತ್ತು. ಆದರೆ ಕಡಿಮೆ ಕೊಬ್ಬಿನ ಆಹಾರದಲ್ಲಿ ಶೇ 16ರಷ್ಟು ಕ್ಯಾಲೊರಿ ಕೊಬ್ಬಿನಿಂದ ಬಂದಿದ್ದರೆ, ಅಧಿಕ ಕೊಬ್ಬಿನ ಆಹಾರದಲ್ಲಿನ ಕ್ಯಾಲೋರಿಯಲ್ಲಿ ಶೇ 61ರಷ್ಟು ಕೊಬ್ಬಿನಿಂದ ಬಂದಿತ್ತು.
ಎದೆ ಉರಿಯ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದವರು ಅಧಿಕ ಕೊಬ್ಬಿನ ಆಹಾರ ಸೇವಿಸಿದಾಗ ತೊಂದರೆ ಇನ್ನಷ್ಟು ಹೆಚ್ಚುತ್ತದೆ ಎನ್ನುವುದು ನಿರೀಕ್ಷಿತವೇ ಆಗಿತ್ತು. ಅನಿರೀಕ್ಷಿತ ಸಂಗತಿ ಎಂದರೆ ಅವರು ಕಡಿಮೆ ಕೊಬ್ಬಿನ ಆಹಾರ ಸೇವಿಸಿದಾಗಲೂ ತ್ವರಿತ ಗತಿಯಲ್ಲಿ ಆಮ್ಲ ಹಿನ್ಸರಿತ ಉಂಟಾದದ್ದು. ಕೊಬ್ಬಿನ ಆಹಾರ ಸೇವಿಸಿದ ಮೂರು ಗಂಟೆಗಳವರೆಗೂ ಈ ಪ್ರಕ್ರಿಯೆ ನಡೆದೇ ಇತ್ತು.
ಈ ಪ್ರಯೋಗ ಕೊಬ್ಬು ಎದೆ ಉರಿಯನ್ನು ಹೆಚ್ಚಿಸುತ್ತದೆ ಎನ್ನುವುದನ್ನಷ್ಟೇ ಸಾಬೀತುಪಡಿಸಲಿಲ್ಲ. ಅಪರೂಪಕ್ಕೆ ಎದೆ ಉರಿ ಅನುಭವಿಸುವವರಿಗೆ ಎಚ್ಚರಿಕೆಯನ್ನೂ ನೀಡಿತ್ತು. 'ನಿಮ್ಮಲ್ಲಿ ಕೊಬ್ಬಿನ ಪದಾರ್ಥ ತಿನ್ನುವ ಚಪಲ ಇದ್ದರೆ ಆದಷ್ಟೂ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು' ಎನ್ನುವ ಸಂದೇಶವನ್ನು ಇದು ರವಾನಿಸಿತ್ತು. ಅಧಿಕ ಕೊಬ್ಬು 'ಸ್ಪಿಂಕ್ಟರ್'ನ ಕೆಳಭಾಗದ ಮೇಲೆ ಹೆಚ್ಚು ಒತ್ತಡ ಹೇರುತ್ತದೆ. ಇದರಿಂದ ಆಮ್ಲ ಹಿನ್ಸರಿತ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಜಠರವು ಕೆಲವು ಬಗೆಯ ಹಾರ್ಮೋನುಗಳನ್ನೂ ಸ್ರವಿಸುವ ಸಾಧ್ಯತೆ ಇರುತ್ತದೆ. ಸಾಲದೆಂಬಂತೆ ಕೊಬ್ಬಿನ ಆಹಾರ ಜೀರ್ಣವಾಗಲು ಬಹಳ ಸಮಯ ಬೇಕು. ಅಂದರೆ ದೀರ್ಘ ಕಾಲ ಹೊಟ್ಟೆ ಭರ್ತಿಯಾಗಿಯೇ ಇರುತ್ತದೆ. ಇವೆಲ್ಲವೂ ಸೇರಿ ಎದೆ ಉರಿ ತೀವ್ರವಾಗುತ್ತದೆ.
ಮೊ.9900113699 (ಎಸ್ಎಂಎಸ್ಗೆ ಮಾತ್ರ)
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com