ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಝುಲು ಲ್ಯಾಂಡಿನಲ್ಲೊಬ್ಬ ಕಿಂಗ್ ಶಾಕಾ!

ಡರ್ಬನ್ ವಿಮಾನ ನಿಲ್ದಾಣದಿಂದ ಹೊರಟು ಅರ್ಧ ಗಂಟೆ ಆಗುತ್ತಲೇ ನಾವು...

Rashmi Kasaragodu
Updated On : 20 Nov 2013, 1:21 am

ಡರ್ಬನ್ ವಿಮಾನ ನಿಲ್ದಾಣದಿಂದ ಹೊರಟು ಅರ್ಧ ಗಂಟೆ ಆಗುತ್ತಲೇ ನಾವು ಕೇಪ್ಟೌನ್ಗಿಂತ ಸಂಪೂರ್ಣವಾಗಿ ಭಿನ್ನವಾದ ಪರಿಸರದಲ್ಲಿ ಪ್ರಯಾಣಿ ಸುತ್ತಿದ್ದೇವೆಂಬುದು ಮನವರಿಕೆ ಆಯಿತು. ಬೆಂಗಳೂರಿನಿಂದ ತುಮಕೂರು ದಾಟಿ ಅರಸೀಕೆರೆ, ಕಡೂರು ಮಾರ್ಗವಾಗಿ ಶಿವಮೊಗ್ಗದತ್ತ ಹೋಗುವಾಗ ಕಾಣುವ ಬೆಟ್ಟ, ಗುಡ್ಡಗಳಂಥ ಪ್ರದೇಶದಲ್ಲಿ ನಾವು ಸಾಗುತ್ತಿದ್ದೆವು. ಆದರೆ, ಅಲ್ಲಿನ ರಸ್ತೆಗಳು ನಮ್ಮ ರಸ್ತೆಗಿಂತ ವಿಶಾಲವಾಗಿದ್ದವು, ಮಜಬೂತಾಗಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡ ಕಬ್ಬಿನ ಗದ್ದೆ, ಅನಾನಸು ತೋಟ, ನದಿ, ಕೊಳ್ಳಗಳನ್ನು ನೋಡುವುದೇ ಒಂದು ಅನುಪಮ ಅನುಭವ. ಹಸುರಿನ ಚಾದರ ಹೊದ್ದ ಪ್ರಕೃತಿಯ ನಡುವೆ ನಮ್ಮ ವಾಹನ ಹಾದುಹೋಗುತ್ತಿದ್ದರೆ, ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದು ಸಹ ಗೊತ್ತಾಗುತ್ತಿರಲಿಲ್ಲ. ಸಮಯ ಕೆಲ ಹೊತ್ತು ನಿಂತುಕೊಂಡಿರಬಹುದಾ ಎಂಬ ಗುಮಾನಿ. ಆದರೆ, ನಮ್ಮ ವಾಹನ ಹೋಗುತ್ತಿದ್ದ ವೇಗದಲ್ಲೂ ಹಸುರಿನ ವಾಸನೆ ಮೂಗಿಗೆ ಅಡರುತ್ತಿತ್ತು.
ಈಗ ನೀವು ಝುಲು ಲ್ಯಾಂಡಿನಲ್ಲಿದ್ದೀರಿ ಎಂದ ಡ್ರೈವರ್ ಕಮ್ ಗೈಡ್! ನಾವು ಬೇರೆಯದೇ ಜಗತ್ತಿನಲ್ಲಿದ್ದೇವೆ ಎಂಬುದು ಖಾತ್ರಿಯಾಗಿತ್ತು.
ಝುಲು ಎಂದರೆ ಸ್ವರ್ಗ ಎಂದರ್ಥ. ದಕ್ಷಿಣ ಆಫ್ರಿಕಾದಲ್ಲಿಯೇ ಕ್ವಾಝುಲು ನಟಾಲ್ ಅತ್ಯಂತ ರಮಣೀಯ, ನೈಸಗರ್ಿಕ ಸೌಂದರ್ಯ ವನ್ನು ಬಾಚಿಕೊಂಡು ಮೈದಳೆದ ಪ್ರದೇಶ. ಇದನ್ನು ಸಂಕ್ಷಿಪ್ತವಾಗಿ ಝುಲು ಲ್ಯಾಂಡ್ ಅಂತಾನೂ ಕರೆಯುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಮಲೆನಾಡು ಇದ್ದಂತೆ ಈ ಝುಲು ಲ್ಯಾಂಡ್. ಆದರೆ, ಹೆಚ್ಚುವರಿಯಾಗಿ ಇಲ್ಲಿ ಸಮುದ್ರವಿದೆ. ಮೋಡ ಮುಸುಕಿದ ಅರಣ್ಯದ ಪಕ್ಕದಲ್ಲಿಯೇ ಬೆಳ್ನೊರೆಯ ಕಡಲ ತೀರವೂ ಇದೆ. ಝುಲು ಲ್ಯಾಂಡ್ ಆಧುನಿಕತೆಯ ಸ್ಪರ್ಶ ಪಡೆದು ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ. ಇಂದಿಗೂ ಇಲ್ಲಿ ಝುಲು ಬುಡಕಟ್ಟು ಜನರೇ ಹೆಚ್ಚಾಗಿ ಕಾಣುತ್ತಾರೆ. ಅವರು ಸಹ ಆಧುನಿಕ ಜೀವನಕ್ಕೆ ಮುಂದಡಿ ಇಡುತ್ತಿದ್ದರೂ ಅವರ ವೇಷ ಭೂಷಣಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಝುಲು ಸಂಸ್ಕೃತಿ ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಪುರಾತನ ಹಾಗೂ ಶ್ರೀಮಂತವಾದುದು. ಈ ಬುಡಕಟ್ಟು ಜನಾಂಗದಿಂದಾಗಿಯೇ ಈ ಸಂಸ್ಕೃತಿ ಉಳಿದಿದೆ. ಪ್ರಜ್ಞಾಪೂರ್ವಕವಾಗಿಯೇ ಇವರು ಇಂದಿಗೂ ತಮ್ಮ ಆಚರಣೆಗಳನ್ನು ಕಾಪಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ.
ಅರಣ್ಯ, ನದಿ, ಗುಡ್ಡ, ಬೆಟ್ಟಗಳೇ ಹೆಚ್ಚಾಗಿರುವ ಝುಲು ಲ್ಯಾಂಡಿನಲ್ಲಿ ಕೈಗಾರಿಕೆಗಳು ಇನ್ನೂ ಕಾಲಿಟ್ಟಿಲ್ಲ. ಹಿಂದುಳಿದ ಪ್ರದೇಶವಾಗಿರು ವುದರಿಂದಲೇ ಆ ನೆಲದ ಭಾಷೆ, ಸೊಗಡು, ಸಂಸ್ಕೃತಿ, ಸಂಪ್ರದಾಯ, ಉಡುಗೆ-ತೊಡುಗೆ, ಆಚರಣೆ, ಜೀವನಪದ್ಧತಿ ಉಳಿದುಕೊಂಡಿದೆ. ಈ ಕಾರಣದಿಂದ ಇಲ್ಲಿನ ಜನರಲ್ಲಿ ಬಡತನವಿದೆ. ಕೃಷಿಯೇ ಮುಖ್ಯ ಕಸುಬು ಆಗಿರುವುದರಿಂದ ಗ್ರಾಮೀಣ ವಾಡಿಕೆಗಳೆಲ್ಲ ಬೆಚ್ಚಗೆ ಉಳಿದಿವೆ. ಇಲ್ಲಿನ ಮುಖ್ಯ ಲಕ್ಷಣವೆಂದರೆ ಹಳ್ಳಿಗಳು. ಪ್ರತಿ ಐದು ಕಿ.ಮೀ.ಗೆ ಬೇರೆ ಬೇರೆ ಹಳ್ಳಿಗಳು ಸಿಗುತ್ತವೆ. ಹತ್ತಾರು ಹಳ್ಳಿಗಳೇ ಸಾಂದ್ರವಾಗಿ ರಸ್ತೆಯ ಪಕ್ಕದಲ್ಲಿ ವಿಸ್ತರಿಸಿಕೊಂಡಿರುವ ದೃಶ್ಯ ಸಾಮಾನ್ಯ. ಎಲ್ಲ ಹಳ್ಳಿಗಳು ಒಂದೇ ನಮೂನೆ. ದಕ್ಷಿಣ ಆಫ್ರಿಕಾದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದ್ದರೂ ಈ ಝುಲು ಲ್ಯಾಂಡನ್ನು ಗುಡ್ವಿಲ್ ಜ್ವೆಲಿಥಿನಿ ಕಬೇಕು ಝುಲು ಎಂಬಾತ 1971ರಿಂದ ಆಳುತ್ತಿದ್ದಾನೆ. ಇಂದಿಗೂ ಅಲ್ಲಿನ ಬುಡಕಟ್ಟು ಜನರ ಪಾಲಿಗೆ ಆತನೇ ರಾಜ, ಆತನೇ ದೇವರು. ಆತನ ಮಾತುಗಳೇ ಆದೇಶ.
ನಮ್ಮ ಟೂರ್ ಗೈಡ್ ಝುಲು ಲ್ಯಾಂಡಿನ ಪರಿಚಯಕ್ಕೆ ಬುನಾದಿ ಹಾಕುತ್ತಿದ್ದ.
ಹೆಬ್ಬಾವಿನಂತೆ ಉದ್ದಕ್ಕೆ ಬಿದ್ದುಕೊಂಡಿದ್ದ ಆ ಹೆದ್ದಾರಿಯಲ್ಲಿ ಪಯಣಿಸುವಾಗ ಅಲ್ಲಲ್ಲಿ ಕಿಂಗ್ ಶಾಕಾ ಹೆಸರಿನ ಶಾಲೆಗಳು, ಸಂಘ ಸಂಸ್ಥೆಗಳು ಕಾಣಿಸುತ್ತಿದ್ದವು. ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮಾತ್ರ ಅಲ್ಲ, ಪ್ರತಿ ಊರಿನಲ್ಲೂ ಸಣ್ಣಪುಟ್ಟ ಕಟ್ಟಡ, ಸೇತುವೆಗಳ ಮೇಲೆಲ್ಲ ಕಿಂಗ್ ಶಾಕಾನ ಹೆಸರು ರಾರಾಜಿಸುತ್ತಿರುವುದನ್ನು ನೋಡಿ ಅಚ್ಚರಿಯಾಯಿತು. ಎಲ್ಲ ಊರುಗಳಲ್ಲೂ ಒಂದೇ ರೀತಿಯ ಪುತ್ಥಳಿ. `ಪ್ರಾಯಶಃ ಇದು ಕಿಂಗ್ ಶಾಕಾನ ಪುತ್ಥಳಿಯೇ ಇರಬೇಕು ಅಲ್ಲವಾ? ಎಂದು ಸಂದೇಹದಿಂದ ಕೇಳಿದೆ. ನಮ್ಮ ಟೂರ್ ಗೈಡ್ `ನಿಸ್ಸಂದೇಹವಾಗಿ ಅವನದೇ. ಇಡೀ ಪ್ರದೇಶಕ್ಕೆ ಕ್ವಾಝುಲು ನಟಾಲ್ ಎಂದು ಕರೆಯುವ ಬದಲು ಕಿಂಗ್ ಶಾಕಾ ಲ್ಯಾಂಡ್ ಎಂದು ಕರೆದರೆ ಒಳ್ಳೆಯದಿತ್ತು. ಮುಂದೊಂದು ದಿನ ಆ ಹೆಸರನ್ನಿಟ್ಟರೂ ಆಶ್ಚರ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ಕಿಂಗ್ ಶಾಕಾ ಮಯ ಎಂದ.
ಕಿಂಗ್ ಶಾಕಾ ಬಗ್ಗೆ ನಿಮಗೆ ಸಂಕ್ಷಿಪ್ತವಾಗಿ ಹೇಳಿದ್ದೆ. ಈತ ಝುಲು ಲ್ಯಾಂಡಿನ ಅತ್ಯಂತ ಪ್ರಭಾವಿ, ನಿಗೂಢ, ವಿವಾದಾತ್ಮಕ ನಾಯಕ. ಅವನ ಬಗ್ಗೆ ಇರುವ ಕತೆಗಳಿಗಿಂತ ಕಟ್ಟು ಕತೆಗಳೇ ಹೆಚ್ಚು. ಅವನ ಕುರಿತು ಇರುವ ದಂತ ಕತೆಗಳಿಗೆ ಕೊರತೆ ಇಲ್ಲ. ಶಾಕಾ ಮಹಾ ಕ್ರೂರಿಯಾಗಿದ್ದ. ತನ್ನ ವಿರೋಧಿಗಳಿಗೆ ನಿರ್ದಯವಾಗಿ ಹಿಂಸೆ ಕೊಡುತ್ತಿದ್ದ. ಅವರು ಹಿಂಸೆಯಿಂದ ನರಳುವುದನ್ನು ನೋಡಿ ಸಂತಸ ಪಡುತ್ತಿದ್ದ. ಕೆಲವೊಮ್ಮೆ ಹತ್ಯೆಗೈಯುವ ಕೆಲಸವನ್ನು ಬೇರೆಯವರಿಗೆ ನೀಡದೆ, ಅದನ್ನು ತಾನೇ ಸ್ವತಃ ಮಾಡುತ್ತಿದ್ದ. ಆದರೆ, ಅವನಲ್ಲೊಂದು ಅಸಾಧಾರಣ ಜಾಣ್ಮೆ ಇತ್ತು. ಯುದ್ಧ ಕಲೆ ಅವನಿಗೆ ಕರಗತವಾಗಿತ್ತು. ಅವನ ಪಟ್ಟುಗಳೇನು ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಅವನನ್ನು ಸೋಲಿಸುವುದು ಸಾಧ್ಯವೇ ಇರಲಿಲ್ಲ. ಈ ಕಾರಣದಿಂದ ಯಾರೂ ಅವನ ಉಸಾಬರಿಗೆ ಹೋಗುತ್ತಿರಲಿಲ್ಲ. ಅವನೇ ಎಲ್ಲರ ವಿರುದ್ಧ ಕಾಲು ಕೆರೆದು ಜಗಳಕ್ಕೆ ಹೋಗುತ್ತಿದ್ದ.
ನಂದಿ ಎಂಬ ಮಹಾರಾಣಿ ಇದ್ದಳು. ಅವಳು ತನ್ನ ಅರಮನೆಯ ಲ್ಲಿನ ಸೇವಕನೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು. ಈ ಸಂಬಂಧದಿಂದ ಹುಟ್ಟಿದವನೇ ಶಾಕಾ. ನಂದಿಗೆ ರಾಜನಿಂದ ಹುಟ್ಟಿದ ಮಕ್ಕಳಿದ್ದರೂ ಶಾಕಾನ ಮೇಲೆ ಅತಿಯಾದ ಪ್ರೀತಿ. ಶಾಕಾನಿಗೆ ಮೂವತ್ತೈದು ವರ್ಷ ತುಂಬುವುದರೊಳಗೆ ಆತ ಉಪಖಂಡದಲ್ಲಿಯೇ ಅತ್ಯಂತ ಬಲಿಷ್ಠ ಸಾಮ್ರಾಜ್ಯವನ್ನು ಕಟ್ಟಿದ್ದ. ತನ್ನ ಜನರು ಸದಾ ಸುಖಜೀವಿಗಳಾಗಿರಬೇಕು ಎಂದು ಬಯಸುತ್ತಿದ್ದ. ಈ ಕಾರಣದಿಂದ ಆತನ ಗುಣದೋಷಗಳನ್ನು ಸಹಿಸಿಕೊಂಡು ಜನ ಅವನನ್ನು ಮೆಚ್ಚುತ್ತಿದ್ದರು. ಕ್ರೂರಿಯಾದರೇನು, ಆತ ಮಹಾನ್ ಸಾಹಸಿ ಎಂದು ಹೊಗಳುತ್ತಿದ್ದರು. ಶಾಕಾನ ತಾಯಿ ನಂದಿ ಸತ್ತಾಗ ಕಂಬನಿಗರೆಯ ದವರನ್ನು ಗುರುತಿಸಿ ಅವರನ್ನು ಕರೆದು ಹಿಂಸಿಸಿದ್ದ. ಕೆಲವರನ್ನು ಸಾಯಿಸಿದ್ದ. ಅಂತಹ ಪರಮ ತಿಕ್ಕಲು ಮನುಷ್ಯ.
ಸದಾ ಚೂಪಾದ ಸಲಾಕೆಯನ್ನು ಹಿಡಿದಿರುತ್ತಿದ್ದ ಶಾಕಾ, ಅದನ್ನು ಎಸೆಯುವುದರಲ್ಲಿ ನಿಷ್ಣಾತನಾಗಿದ್ದ. ನೂರಾರು ಮೀಟರ್ ದೂರದಲ್ಲಿದ್ದವರ ಮೇಲೆ ಗುರಿಯಿಟ್ಟು ಈ ಉದ್ದನೆಯ ಸಲಾಕೆಯನ್ನು ಎಸೆದರೆ ಎದುರಿಗಿದ್ದವನು ಖತಂ!  ಅವನ ಗುರಿ ತಪ್ಪಿದ್ದನ್ನು ಕಂಡವರಿಲ್ಲ. ಹಣೆ ಹಾಗೂ ಎದೆ ಗಟ್ಟಿ ಇರುವ ಹತ್ತಾರು ಸಾವಿರ ಸೈನಿಕರನ್ನು ನಿಶಸ್ತ್ರ ಯುದ್ಧಗಳಿಗೆ ತರಬೇತಿಗೊಳಿಸಿದ್ದ ಶಾಕಾ, ಎಂತಹ ಸಂದರ್ಭದಲ್ಲಾದರೂ ಯುದ್ಧ ಕರೆಗೆ ಸ್ಪಂದಿಸುವಂತೆ ಅವರನ್ನೆಲ್ಲ ಪ್ರೇರೇ ಪಿಸಿದ್ದ. ಈ ಸೈನಿಕರು ತಮ್ಮ ಹಣೆಯಿಂದ ಎದುರಿಗಿನ ಶತ್ರುವಿನ ತಲೆಗೆ ಬಲವಾಗಿ ಹೊಡೆದು ಸಾಯಿಸುತ್ತಿದ್ದರು. ಅವರೇನಾದರೂ ಎಗರಿ ಬಂದರೆ ಎದೆಕೊಟ್ಟು ರಕ್ಷಣಾತ್ಮಕವಾಗಿ ಸೆಣೆಸಿ ಬಚಾವಾಗುತ್ತಿದ್ದರು.
ಇಂಥ ಶಾಕಾ ತನ್ನ ತಾಯಿಯ ನಿಜವಾದ ಗಂಡನಿಂದ ಹುಟ್ಟಿದ, ಅಂದರೆ ತನ್ನ ಕಿರಿಯ ಸಹೋದರರಾದ ದಿಂಗಾನ್ ಹಾಗೂ ಮಲಂಗಾನೆ ಅವರಿಂದ ಹತ್ಯೆಯಾದ. ಅವನ ಅಂತ್ಯ ಇಷ್ಟು ದಾರುಣವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಶಾಕಾನ ಕಗ್ಗೊಲೆಯಾದ ಬಳಿಕ ಮಲಂಗಾನೆ ರಾಜನಾದ. ಇದಾಗಿ ಕೆಲವು ತಿಂಗಳಲ್ಲಿ ಅಣ್ಣತಮ್ಮಂದಿರಲ್ಲಿ ಅಧಿಕಾರಕ್ಕೆ ಕಿತ್ತಾಟ ಶುರುವಾಯಿತು. ಮಲಂಗಾನೆಯನ್ನು ಕಿತ್ತೊಗೆದು ದಿಂಗಾನ್ ಪಟ್ಟವನ್ನೇರಿದ.
ಈಗಲೂ ಝುಲುಗಳಿಗೆ ಶಾಕಾನೇ ಆರಾಧ್ಯ ದೈವ. ದೇವರ ಫೋಟೊ ಪಕ್ಕದಲ್ಲಿ ಶಾಕಾನ ಫೋಟೊವನ್ನಿಟ್ಟು ಪೂಜಿಸುತ್ತಾರೆ. ತಮಗೊಂದು ಅಸ್ತಿತ್ವ, ಐಡೆಂಟಿಟಿ ಕೊಟ್ಟವನು ಶಾಕಾ ಎಂಬ ಭಾವನೆ ಝುಲುಗಳಲ್ಲಿ ಇಂದಿಗೂ ನೆಲೆಸಿದೆ. ಈ ಕಾರಣಕ್ಕಾಗಿ ಪ್ರತಿವರ್ಷ ಸೆಪ್ಟೆಂಬರ್ 24ರಂದು `ಶಾಕಾ ದಿನ' ಎಂದು ಆಚರಿಸುತ್ತಾರೆ. ಲಕ್ಷಾಂತರ ಝುಲುಗಳು ಸಾಂಪ್ರದಾಯಿಕ ಉಡುಗೆಗಳಲ್ಲಿ, ಚೂಪಾದ ಉದ್ದನೆಯ ಸಲಾಕೆ ಹಿಡಿದು ತಮ್ಮ ಊರೊಳಗೆ ಮೆರವಣಿಗೆ ಹೋಗಿ ಶಾಕಾನಿಗೆ ಗೌರವ ಸಲ್ಲಿಸುತ್ತಾರೆ. ಇಂದಿಗೂ ಶಾಕಾ, ಪ್ರಸ್ತುತ ಅಧಿಕಾರದಲ್ಲಿರುವ ಮಂತ್ರಿ, ರಾಷ್ಟ್ರಾಧ್ಯಕ್ಷನಷ್ಟೇ ಪರಿಚಿತ. ಝುಲು ಲ್ಯಾಂಡ್ ಹಾಗೂ ಶಾಕಾ ಒಂದೇ ನಾಣ್ಯದ ಎರಡು ಮುಖಗಳು. ಒಂದು ಪ್ರಸ್ತಾಪವಾದಾಗ ಇನ್ನೊಂದು ನೆನಪಾಗಲೇಬೇಕು. ಅಂತಹ ಅನ್ಯೋನ್ಯ ಸಂಬಂಧ. ಶಾಕಾನ ಬಗ್ಗೆ ಹೇಳದೆ ಝುಲು ಲ್ಯಾಂಡ್ ಬಗ್ಗೆ ಎಷ್ಟೇ ಹೇಳಿದರೂ ಅಪೂರ್ಣವೇ. ಅಂದಹಾಗೆ ಶಾಕಾ ಸತ್ತು 185 ವರ್ಷಗಳಾದವು. ಆದರೂ ಆತ ಝುಲು ಲ್ಯಾಂಡಿನಲ್ಲಿ ಬದುಕಿದ್ದಾನೆ! ದಕ್ಷಿಣ ಆಫ್ರಿಕಾದ ನೋಟಿನ ಮೇಲೂ ಇಂದಿಗೂ ಚಲಾವಣೆಯಲ್ಲಿದ್ದಾನೆ!
ನಮ್ಮ ಟೂರ್ ಗೈಡ್ ಶಾಕಾನ ಬಗ್ಗೆ ವಿವರಿಸುತ್ತಿದ್ದರೆ, ದಾರಿ ಕ್ರಮಿಸಿದ್ದೇ ಗೊತ್ತಾಗಲಿಲ್ಲ. ಅಲ್ಲಿ ಇಲ್ಲಿ ಶಾಕಾನ ಪುತ್ಥಳಿಗಳು, ಚಿತ್ರಗಳು ಗೋಚರಿಸಿ ಅವನ ನೆನಪಿಗೆ ವಿಶೇಷ ಮೆರುಗನ್ನು ನೀಡುತ್ತಿತ್ತು. ಆಧುನಿಕತೆಯೊಂದಿಗೆ ನಿತ್ಯ ಸೆಣಸಿಗೆ ಬಿದ್ದು ಹೋರಾಡುತ್ತಿರುವ ಝುಲು ಲ್ಯಾಂಡ್, ಇನ್ನೂ ಒಂದಷ್ಟು ವರ್ಷಗಳ ಕಾಲ ಈ ಹೋರಾಟದ ಕಾವನ್ನು ಕಾಪಾಡಿಕೊಳ್ಳಬಹುದು. ಆದರೆ, ಮುಂದೇನು ಎಂಬ ಪ್ರಶ್ನೆಗೆ ಉತ್ತರವನ್ನು ಕಾಲವೇ ಹೇಳಬೇಕು. ಆದರೂ ಝುಲುಗಳಲ್ಲಿ ತಮ್ಮತನ, ಸಂಸ್ಕೃತಿ ಬಗೆಗಿರುವ ಅಪಾರ ಕಾಳಜಿಯನ್ನು ಮೆಚ್ಚಲೇ ಬೇಕು. ಇಂದಿಗೂ ಸಹ ಸೊಂಟಕ್ಕಿಂತ ಮೇಲ್ಭಾಗದಲ್ಲಿ ಬಟ್ಟೆಯನ್ನೇ ತೊಡದ, ಗ್ರಾಮೀಣ ಆಭರಣಗಳಿಂದ ಮೈಮುಚ್ಚಿಕೊಳ್ಳುವ ಮಹಿಳೆಯರನ್ನು ಕಾಣಬಹುದು. ಹಾಗೆಂದು ಇವರನ್ನು ಆಧುನಿಕತೆಯ ಗಂಧಗಾಳಿ ಇಲ್ಲದವರು, ಹಿಂದುಳಿದವರು ಎಂದು ಭಾವಿಸಬೇಕಿಲ್ಲ. ಬಟ್ಟೆ ತೊಡಲಾಗದಷ್ಟು ಬಡವರೆಂದೂ ಕನಿಕರಪಡಬೇಕಿಲ್ಲ. ಆದರೆ, ಇವರಿಗೆ ಇವೆಲ್ಲಕ್ಕಿಂತ ತಮ್ಮ ಐಡೆಂಟಿಟಿ ಮುಖ್ಯ, ತಮ್ಮತನ ಮುಖ್ಯ. ಕಾಲನ ಹೊಡೆತಕ್ಕೆ ತಮ್ಮ ಸಂಸ್ಕೃತಿಯೇ ಅಳಿಸಿ ಹೋಗಬಹುದೆಂಬ ಆತಂಕ ಇವರನ್ನು ಸದಾ ಕಾಡುತ್ತಿದೆ. ಹೀಗಾಗಿ ತಮ್ಮ ಬುಡಕಟ್ಟು ಜೀವನ ವಿಧಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಶಾಕಾನ ಮೇಲಾಣೆ, ಝುಲು ಲ್ಯಾಂಡ್ ಇರುವತನಕ ಝುಲುಗಳು ಹೀಗೆಯೇ ಇರುತ್ತಾರೆ.
ನಮ್ಮ ವಾಹನ ಹೆದ್ದಾರಿಯ ಪಕ್ಕದಲ್ಲಿರುವ ಹಳ್ಳಿಯನ್ನು ದಾಟಿ ಮುಂದಕ್ಕೆ ಹೋಗುತ್ತಿತ್ತು. ತೆರೆದೆದೆಯ ಹೆಂಗಸರು ತಲೆಮೇಲೆ ಹೊರೆಹೊತ್ತು ತಮ್ಮ ಮನೆಗೆ ಮರಳುತ್ತಿದ್ದರು

(ಪ್ರದಕ್ಷಿಣೆ ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement