ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆರ್.ಕೆ. ಮನೆ ಆರಕ್ಕೇರಲಿಲ್ಲ!

Mainashree
Updated On : 20 Nov 2013, 6:46 am

ಕನ್ನಡ ಸಾಹಿತಿಗಳನ್ನು ಕಡೆಗಣಿಸಿದ ಸರ್ಕಾರ ಕಡೇಪಕ್ಷ ಈ ನೆಲದಲ್ಲಿ ಹುಟ್ಟಿದ ಇಂಗ್ಲಿಷ್ ಸಾಹಿತಿಗಳನ್ನಾದರೂ ಸ್ಮರಿಸುವ ಕೆಲಸ ಮಾಡಿದೆಯಾ? ಮೈಸೂರಿನಲ್ಲಿನ ಆರ್.ಕೆ. ನಾರಾಯಣ್ ಅವರ ಮನೆ ನೋಡಿದರೆ ಸರ್ಕಾರದ ನಿರ್ಲಕ್ಷ್ಯಕ್ಕೊಂದು ನಿದರ್ಶನ ಲಭ್ಯವಾಗುತ್ತದೆ.
ದೇಶದ ಆಂಗ್ಲ ಸಾಹಿತ್ಯದಲ್ಲಿ ಆರ್.ಕೆ. ನಾರಾಯಣ್ ಹೆಸರು ಅಗ್ರಗಣ್ಯ. ಆರ್.ಕೆ. ನಾರಾಯಣ್ ಅವರ ಪೂರ್ಣ ಹೆಸರು ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ನಾರಾಯಣಸ್ವಾಮಿ. ಹುಟ್ಟಿದ್ದು ಮದ್ರಾಸ್. ನಂತರ ಓದಿದ್ದು, ನೆಲೆನಿಂತಿದ್ದು, ಸಾಹಿತ್ಯ ಕೃಷಿ ನಡೆಸಿದ್ದೆಲ್ಲ ಮೈಸೂರಿನಲ್ಲೇ. ರಾಷ್ಟ್ರಕವಿ ಕುವೆಂಪು ಅವರಂತೆಯೇ ಆರ್.ಕೆ. ನಾರಾಯಣ್ ಅವರಿಗೂ ಕುಕ್ಕರಹಳ್ಳಿ ಕೆರೆ ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡಿದ ತಾಣ. 'ಮಾಲ್ಗುಡಿ', 'ಸ್ವಾಮಿ ಆ್ಯಂಡ್ ಫ್ರೆಂಡ್ಸ್‌', 'ದಿ ಬ್ಯಾಚುಲರ್ ಆಫ್ ಆರ್ಟ್ಸ್‌', 'ದಿ ಇಂಗ್ಲಿಷ್ ಟೀಚರ್‌', 'ದಿ ಫೈನಾನ್ಷಿಯಲ್ ಎಕ್ಸ್‌ಪರ್ಟ್‌', 'ದಿ ಗೈಡ್‌'- ಪ್ರಮುಖ ಕೃತಿಗಳು. ಪದ್ಮವಿಭೂಷಣ, ಸಾಹಿತ್ಯ ಅಕಾಡೆಮಿ, ಎ.ಸಿ. ಬೆನ್ಸನ್ ಪ್ರಶಸ್ತಿಗಳಿಗೆ ಪಾತ್ರರಾದವರು. ಅವರ ಬಹುತೇಕ ಕಥೆಗಳಲ್ಲಿ ಮಾಲ್ಗುಡಿಯ ಪ್ರಸ್ತಾಪವಾಗುತ್ತದೆ.
ಮೈಸೂರಿನಲ್ಲಿನ ಆರ್.ಕೆ. ನಾರಾಯಣ್‌ರ ಮನೆಯನ್ನು ಸ್ಮಾರಕ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿ ಎರಡು ವರ್ಷಗಳೇ ಕಳೆದಿವೆ. ಇನ್ನೂ ಕಾಮಗಾರಿ ಆರಂಭವಾಗಿಲ್ಲ. 1953ರಲ್ಲಿ ಯಾದವಗಿರಿಯಲ್ಲಿ ಆರ್.ಕೆ. ನಾರಾಯಣ್ ಮನೆ ನಿರ್ಮಿಸಿದರು. ಈ ಮನೆಯನ್ನು ನೆಲಸಮ ಮಾಡಿ, ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸುವ ಯತ್ನ ಆರಂಭವಾಯ್ತು. ಮಾಧ್ಯಮ ವರದಿಗಳಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು. ಆರ್.ಕೆ. ಸಂಬಂಧಿಕರು ಮನೆಯನ್ನು ಮಾರಾಟ ಮಾಡಿದ್ದರು. ಸರ್ಕಾರವೇ ಖರೀದಿಸಿ ಸ್ಮಾರಕವಾಗಿಸಲು ಮುಂದಾಯಿತು. ಇದಕ್ಕೆ ಅಂದಿನ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್‌ರ ಸಕಾಲಿಕ ಮಧ್ಯಪ್ರವೇಶ ಕಾರಣ.
'ಆರ್.ಕೆ. ನಾರಾಯಣ್ ಕನ್ನಡಿಗರೇ ಅಲ್ಲ. ಕನ್ನಡದ ಬಗ್ಗೆ ಕಾಳಜಿ ಇರಲಿಲ್ಲ. ಆದ್ದರಿಂದ ಅವರ ಸ್ಮಾರಕ ಯಾಕೆ?' ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದರು. ಈ ವಿಷಯ ತಣ್ಣಗಾಯಿತು. ನಗರಾಭಿವೃದ್ಧಿ ಪ್ರಾಧಿಕಾರ ಈ ಕಟ್ಟಡವನ್ನು ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನ್ ಆಕ್ಟ್- 1961ರ ಪ್ರಕಾರ ವಶಕ್ಕೆ ಪಡೆದು, ಪಾರಂಪರಿಕ ಕಟ್ಟಡವೆಂದು ಘೋಷಿಸಿದೆ. ಇದಾಗಿದ್ದು 2011ರ ಸೆಪ್ಟಂಬರ್‌ನಲ್ಲಿ. ಎರಡು ವರ್ಷವಾಯಿತು. ಆದರೆ, ಯಾರೂ ಕಾಮಗಾರಿಯ ಮಾತೆತ್ತುತ್ತಿಲ್ಲ.
ಪಾಲಿಕೆ- ಎಂಡಿಎ ಜಗಳದಲ್ಲಿ ಆರ್.ಕೆ. ನಾರಾಯಣ್ ನಿವಾಸದ ಸ್ಮಾರಕ ಕೆಲಸ ಆರಂಭವಾಗಿಲ್ಲ. ನಗರಪಾಲಿಕೆ 2.33 ಕೋಟಿ ರು. ನೀಡುವುದಾಗಿ ಹೇಳಿತ್ತು. ಹಣ ಬಂದಿಲ್ಲ. ಹೀಗಾಗಿ ಕೆಲಸ ಆರಂಭವಾಗಿಲ್ಲ ಎಂಬುದು ಎಂಡಿಎ ಆಯುಕ್ತ ಎಸ್. ಪಾಲಯ್ಯ ಅವರ ಹೇಳಿಕೆ. ಈ ಬಗ್ಗೆ ಪರಿಶೀಲಿಸುವುದಾಗಿ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಸ್ಪಷ್ಟನೆ.

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement